ಖ್ಯಾತ ಯಕ್ಷಗಾನ ಕಲಾವಿದ, ತಾಳಮದ್ದಳೆ ಕೂಟದ ವಾಗ್ಮಿ, ಮಾಜಿ ಶಾಸಕ ಕುಂಬಳೆ ಸುಂದರ ರಾವ್ ನಿಧನರಾಗಿದ್ದಾರೆ. ಮಂಗಳೂರಿನ ಪಂಪ್ ವೆಲ್ ಸಮೀಪ ವಾಸವಾಗಿದ್ದ ಕುಂಬಳೆ ಸುಂದರ ರಾವ್ (88) ಅವರು ಇಂದು (ಬುಧವಾರ) ಮುಂಜಾನೆ ತಮ್ಮ ಸ್ವಗೃಹದಲ್ಲಿ ನಿಧನರಾದರು. ತಾಳಮದ್ದಳೆ ಮತ್ತು ಬಯಲಾಟ ಎಂಬ ಯಕ್ಷಗಾನದ ಎರಡೂ ವಿಭಾಗಗಳಲ್ಲಿ ಪ್ರಸಿದ್ಧಿಯನ್ನು ಪಡೆದಿದ್ದ ಅವರು 1994 ರಿಂದ 1999 ರವರೆಗೆ ಸುರತ್ಕಲ್ ಕ್ಷೇತ್ರದಿಂದ ಶಾಸಕರಾಗಿ ಗೆದ್ದು ಕರ್ನಾಟಕ ವಿಧಾನಸಭೆಯ ಸದಸ್ಯರಾಗಿದ್ದರು. ಒಂದು ಅವಧಿಗೆ ಅವರು ಕರ್ನಾಟಕ ರಾಜ್ಯ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.
ಕುಂಬಳೆ ಸುಂದರ ರಾವ್ ನಡೆದು ಬಂದ ದಾರಿ:
ಕೂರ್ಮಾವತಾರದಲ್ಲಿ ಇವನಾಗಿದ್ದ ನನ್ನ ಚಿಪ್ಪು. ನೀನು ಇದನ್ನು ಒಪ್ಪು. ನರಸಿಂಹಾವತಾರದಲ್ಲಿ ಅವನು ನನ್ನ ನಖ, ಈಗ ನನ್ನ ಸಖ, ಒಪ್ಪದಿದ್ದರೆ ನಿನಗಿಲ್ಲ ಸುಖ. ಇಂತಹಾ ಪ್ರಾಸಬದ್ಧ ಮಾತುಗಳನ್ನು ಕೇಳಿದ ಯಕ್ಷರಸಿಕರು ಎಲ್ಲರೂ ಅವರು ಯಾರೆಂದು ಖಂಡಿತಾ ಊಹಿಸಬಹುದು.
ಯಾವುದೇ ಒಬ್ಬ ಪಾತ್ರಧಾರಿಯು ಪಾತ್ರವೊಂದರಲ್ಲಿ ಆತನು ಮೂಡಿಸಿದ ಶೈಲಿ ಚಿತ್ರಣಗಳನ್ನು ಆತನ ನಿವೃತ್ತಿಯ ನಂತರವೂ ಇತರ ಪಾತ್ರಧಾರಿಗಳು ಅನುಸರಿಸಿಕೊಂಡು ಹೋಗುತ್ತಾರೆ ಎಂದಾದರೆ ಅದು ಆ ಪಾತ್ರಧಾರಿಯ ದೊಡ್ಡ ಗೆಲುವು ಎಂದೇ ಅರ್ಥ. ಉದಾಹರಣೆಯಾಗಿ ಸುದರ್ಶನ ವಿಜಯ ಪ್ರಸಂಗದ ವಿಷ್ಣುವಿನ ಪಾತ್ರವೇ ಜ್ವಲಂತ ಸಾಕ್ಷಿ. ವಿಷ್ಣುವಾಗಿ ಕುಂಬಳೆ ಸುಂದರ ರಾಯರು ಕಟ್ಟಿದ ಪಾತ್ರಚಿತ್ರಣ ಈಗಲೂ ಹಾಗೆಯೇ ಇದೆ. ಅಲ್ಲಿ ಕುಂಬಳೆ ಸುಂದರ ರಾಯರು ಹೇಳುತ್ತಿದ್ದ ಪ್ರಾಸಬದ್ಧ ಮಾತುಗಳನ್ನು ಬೇರೆ ಕಲಾವಿದರು ಈಗಲೂ ಉಪಯೋಗಿಸುತ್ತಿದ್ದಾರೆ. ಇದು ಕುಂಬಳೆಯವರ ದೊಡ್ಡ ಗೆಲುವು.
ಕುಂಬಳೆ ಸುಂದರ ರಾವ್ ಅವರ ಭರತಾಗಮನದ ಭರತ, ವಿರಾಟ ಪರ್ವದ ಉತ್ತರ ಕುಮಾರ ಮೊದಲಾದುವುಗಳೆಲ್ಲಾ ಅವರಿಗೇ ಹೇಳಿ ಮಾಡಿಸಿದ ಪಾತ್ರಗಳು. ಕೃಷ್ಣ ಸಂಧಾನದ ಕರ್ಣ, ಕರ್ಣಪರ್ವದ ಕರ್ಣ, ಮಹಾಬ್ರಾಹ್ಮಣದಲ್ಲಿ ವಿಶ್ವಾಮಿತ್ರ (ವಿಶ್ವಾಮಿತ್ರ-ಮೇನಕೆ) ಸಮುದ್ರಮಥನದ ವಿಷ್ಣು, ದಕ್ಷಯಜ್ಞದ ಈಶ್ವರ ವಿವಿಧ ಪ್ರಸಂಗಗಳಲ್ಲಿ, ಭೀಷ್ಮ, ಕೃಷ್ಣ, ರಾಮ, ವಿಷ್ಣು, ಚ್ಯವನ, ಪರೀಕ್ಷಿತ, ಧರ್ಮಸ್ಥಳ ಕ್ಷೇತ್ರ ಮಹಾತ್ಮ್ಯೆಯ ಗೋವಿಂದ ದೀಕ್ಷಿತರ ಪಾತ್ರ ಇವರಿಗೆ ಬಹಳಷ್ಟು ಪ್ರಸಿದ್ಧಿಯನ್ನು ತಂದುಕೊಟ್ಟಿದೆ. ತ್ರಿಪುರ ಮಥನದ ‘ಚಾರ್ವಾಕ’ ಪಾತ್ರ ನಿರ್ವಹಣೆಯಂತೂ ಅದ್ಭುತ.
ಕುಂಬಳೆ ಸುಂದರ ರಾವ್ ಅವರ ಕುಟುಂಬದ ವೃತ್ತಿ ಮಗ್ಗ ನೇಯುವುದು ಮತ್ತು ಬಟ್ಟೆಯ ವ್ಯಾಪಾರ. ಮನೆಮಾತು ಮಲೆಯಾಳ. ಎಳವೆಯಲ್ಲೇ ವಿದ್ಯಾಭ್ಯಾಸಕ್ಕೆ ತಿಲಾಂಜಲಿ, ಯಕ್ಷಗಾನದ ಆಸಕ್ತಿ ಸೆಳೆಯಿತು. ಕೆಲಸಕ್ಕೆ ಬಾರದವನೆಂಬ ಭಾವನೆ ಅಪ್ಪನಲ್ಲಿದ್ದರೂ ಅಮ್ಮನ ಪ್ರೀತಿಯಿತ್ತು. ಶಾಲೆಯಲ್ಲಿ ಓದಿದ್ದು ಕಡಿಮೆಯಾದರೂ ಕುಂಬಳೆ ಸುಂದರ ರಾಯರು ಕನ್ನಡ, ಮಲಯಾಳ, ತುಳು, ಸಂಸ್ಕೃತ, ಹವ್ಯಕ, ತಮಿಳು ಭಾಷೆಗಳಲ್ಲಿ ಪಾಂಡಿತ್ಯವನ್ನು ಹೊಂದಿದ್ದರು.
ತಂದೆಯ ಬಟ್ಟೆ ಮಿಲ್ ಇರುವ ಕುಂಬಳೆ ಸಮೀಪದ ನಾಯ್ಕಾಪು ಎಂಬಲ್ಲಿ ನಡೆಯುತ್ತಿದ್ದ ತಾಳಮದ್ದಲೆಯನ್ನು ನೋಡಿ ಅರ್ಥ ಹೇಳುತ್ತಾ ಆಸಕ್ತಿ ಬೆಳೆಸಿಕೊಂಡ ಕುಂಬಳೆಯವರಿಗೆ ಚಿಕ್ಕಂದಿನಲ್ಲಿಯೇ ಯಕ್ಷಗಾನದ ಆಸಕ್ತಿ ಅತೀವವಾಗಿತ್ತು. ಕುಂಬಳೆ ಸುಂದರ ರಾಯರ ತಂದೆಯ ಮಗ್ಗದ ಕೆಲಸ ಅಲ್ಲಿ ನಡೆಯುತ್ತಿತ್ತು. ಅಲ್ಲಿ ಪ್ರತಿ ವಾರವೂ ತಾಳಮದ್ದಳೆ ನಡೆಯುತ್ತಿತ್ತು. ಅವರು ಶಾಲೆ ಬಿಟ್ಟ ನಂತರ ಅಲ್ಲಿ ಹೋಗಿ ಕುಳಿತುಕೊಳ್ಳುತ್ತಿದ್ದರು. ಒಂದು ದಿನ ಅಲ್ಲಿದ್ದ ಬೋನಂತಾಯ ಶಂಭಟ್ಟರು ಎನ್ನುವವರು ‘‘ಒಂದು ಅರ್ಥ ಹೇಳೋ ಸುಂದರಾ’’ ಎಂದು ಕುಂಬಳೆಯವರಲ್ಲಿ ದೂತನ ಅರ್ಥ ಹೇಳಿಸಿದರು.
ಆಮೇಲೆ ಸಂಬಂಧಿಕರೂ ನೆರೆಯವರೂ ಆದ ಬಣ್ಣದ ಕುಟ್ಯಪ್ಪು ಅವರ ಕಾಳಜಿಯಿಂದ ಮೇಳದಲ್ಲಿ ವೇಷ ಮಾಡತೊಡಗಿದರು. ಆಟಕ್ಕಿಂತ ತಾಳಮದ್ದಳೆಗೇ ಹೆಚ್ಚು ಒಗ್ಗುವವನು ಎಂದು ಭಾವಿಸಿದ ಸುಂದರ ರಾಯರು ಮಳೆಗಾಲದಲ್ಲಿ ನಡೆಯುತ್ತಿದ್ದ ತಾಳಮದ್ದಳೆಗಳಲ್ಲಿ ಶೇಣಿಯವರು, ವೆಂಕಪ್ಪ ಶೆಟ್ಟಿಯವರು, ಸಾಮಗರೇ ಮೊದಲಾದವರಿದ್ದ ಕೂಟಗಳಲ್ಲಿ ಸಣ್ಣ ಸಣ್ಣ ಪಾತ್ರಗಳಲ್ಲಿ ಅರ್ಥ ಹೇಳಲು ಪ್ರಾರಂಭಿಸಿ ತಾಳಮದ್ದಳೆ ಕೂಟಗಳಿಗೆ ಅನಿವಾರ್ಯ ಸದಸ್ಯರಾದರು.
ರಾಜಕೀಯದಲ್ಲಿ ಕುಂಬಳೆಯವರಿಗೆ ಯಾವುದೇ ಆಕಾಂಕ್ಷೆಯಿರಲಿಲ್ಲ. ಕೇವಲ ಭಾಷಣಗಾರನಾಗಿ ರಾಜಕೀಯದಲ್ಲಿದ್ದರು. ಪ್ರಚಾರ ಭಾಷಣಕ್ಕಾಗಿ ಕರೆಯುತ್ತಿದ್ದರು. ಆದರೆ ಒಂದು ಅನಿರೀಕ್ಷಿತ ಸಂದರ್ಭದಲ್ಲಿ ಚುನಾವಣೆಗೆ ಸ್ಪರ್ಧಿಸಲು ಒತ್ತಾಯದ ಕರೆಬಂತು. ಸ್ಪರ್ಧಿಸಿ ಗೆದ್ದು ಶಾಸಕರಾದರು. ಶಾಸಕನಾದ ಮೇಲೆಯೂ ಯಕ್ಷಗಾನದ ವೇಷ ಮಾಡಿದ್ದಾರೆ. ತಾಳಮದ್ದಳೆಯಲ್ಲೂ ಭಾಗವಹಿಸಿದ್ದಾರೆ. ಧರ್ಮಸ್ಥಳ ಮೇಳದಲ್ಲಿ ಚೌಕಿಯಲ್ಲಿ ಅವರ ವೇಷದ ಪೆಟ್ಟಿಗೆ ಶಾಸಕನಾದ ಮೇಲೂ ಹಾಗೆಯೇ ಇತ್ತಂತೆ.
ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಯಕ್ಷಗಾನ ಪ್ರೇಕ್ಷಕರಿಂದ ಸ್ವಚ್ಛತೆಗೆ ತೊಂದರೆಯಾಗುತ್ತದೆ ಎಂಬ ನೆಪವೊಡ್ಡಿ ಪ್ರದರ್ಶನಕ್ಕೆ ಅನುಮತಿ ನಿರಾಕರಿಸಿದ್ದರು.ಇದರಿಂದ ಕೆರಳಿದ ಕುಂಬಳೆಯವರು ಸದನದ ಬಾವಿಗಿಳಿದು ಧರಣಿ ನಡೆಸಿ ಅನಂತರ ಮುಖ್ಯಮಂತ್ರಿ ಜೆ. ಎಚ್. ಪಟೇಲ್ ಮಧ್ಯಸ್ಥಿಕೆಯಲ್ಲಿ ಪುನಃ ರವೀಂದ್ರ ಕಲಾಕ್ಷೇತ್ರದಲ್ಲಿ ಯಕ್ಷಗಾನ ಪ್ರದರ್ಶನಕ್ಕೆ ಅನುಮತಿ ದೊರಕಿಸಿಕೊಟ್ಟಿದ್ದರು.
“ಅವರಿಗೆ ಪ್ರಾಸ ಬಿಟ್ಟು ಏನು ಗೊತ್ತಿದೆ” ಎಂಬ ಟೀಕೆಗಳಿಗೆ ಉತ್ತರವಾಗಿಯೋ ಎಂಬಂತೆ ಹಠಕ್ಕೆ ಬಿದ್ದ ಅವರು ಒಂದು ಕೂಡಾ ಪ್ರಾಸವನ್ನು ಹೇಳದೆ ಎರಡು ವರ್ಷ ತಿರುಗಾಟ ಮಾಡಿದ್ದರು.
ಇದು ಕುಂಬಳೆಯವರ ವೈಶಿಷ್ಟ್ಯ. ಹಲವಾರು ಪ್ರಶಸ್ತಿ ಸನ್ಮಾನಗಳನ್ನು ಪಡೆದು ಯಕ್ಷಗಾನದಲ್ಲಿ ತನ್ನದೇ ಆದ ಪ್ರಸಿದ್ಧಿ, ಅಭಿಮಾನಿಗಳನ್ನು ಸಂಪಾದಿಸಿದ ಕುಂಬಳೆ ಸುಂದರ ರಾವ್ ಇಂದು ನಮ್ಮೊಡನಿಲ್ಲ ಎಂಬುದು ದುಃಖಕರ ಮತ್ತು ವಿಷಾದನೀಯ. ಆದರೆ ಯಕ್ಷಗಾನ ಕ್ಷೇತ್ರಕ್ಕೆ ಅವರು ಕೊಟ್ಟ ಕೊಡುಗೆ ಸದಾ ಜೀವಂತವಾಗಿರುತ್ತದೆ. ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ.
- ಮಕ್ಕಳನ್ನು ಕೊಂದ ನಂತರ ಆತ್ಮಹತ್ಯೆಗೆ ಯತ್ನಿಸಿದ ತಾಯಿ
- ಕಾಸರಗೋಡು ಮಹಿಳಾ ಪೊಲೀಸ್ ಅಧಿಕಾರಿಯನ್ನು ಕಡಿದು ಕೊಂದ ಆಕೆಯ ಪತಿ
- ನವವಿವಾಹಿತೆ ಆತ್ಮಹತ್ಯೆ – ಆಕೆ ಬರೆದಿಟ್ಟ ಡೆತ್ ನೋಟಿನಲ್ಲಿ ಏನಿದೆ?
- ತಾನು ಮದುವೆಯಾಗುವ ಹುಡುಗಿಗೆ ಮೂರು ಷರತ್ತುಗಳನ್ನು ವಿಧಿಸಿದ್ದ ಎ.ಆರ್. ರೆಹಮಾನ್: ಮದುವೆಯ ಮೂವತ್ತನೆಯ ವಾರ್ಷಿಕೋತ್ಸವ (ಗ್ರ್ಯಾಂಡ್ ಥರ್ಟಿ) ತಲುಪುವ ಭರವಸೆ ಹುಸಿಯಾಯಿತು ಎಂದ ಸಂಗೀತ ನಿರ್ದೇಶಕ
- ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ರಕ್ಷಕ-ಶಿಕ್ಷಕ ಸಂಘದ ಪದಾಧಿಕಾರಿಗಳ ಆಯ್ಕೆ