ಮೊನ್ನೆ ಕಲ್ಮಡ್ಕದ ತಾಳಮದ್ದಳೆ ಹರೀಶ್ ಕೊಳ್ತಿಗೆಯವರ ಯೂಟ್ಯೂಬ್ ಚಾನೆಲಿನಲ್ಲಿ ನೋಡಿದೆ. ಬಹಳಷ್ಟು ವಿಮರ್ಶೆಗಳನ್ನು ಪಡೆಯುತ್ತಿರುವ ತಾಳಮದ್ದಳೆ. ಇತ್ತೀಚೆಗಿನ ತಾಳಮದ್ದಳೆ ಕ್ಷೇತ್ರ ಹೀಗೆ ಸುದ್ದಿಮಾಡಿದ್ದು ಅಪರೂಪ. ಹಾಗೆಂದು ಈಗ ನಡೆಯುತ್ತಿರುವ ತಾಳಮದ್ದಳೆಗಳ ಆಕರ್ಷಣೀಯತೆಗೇನೂ ಕೊರತೆಯಾಗಿರಲಿಲ್ಲ.
ಆದರೂ ಮೊನ್ನೆಯ ಕಲ್ಮಡ್ಕದ ‘ವೀರಮಣಿ ಕಾಳಗ’ ಬಹಳಷ್ಟು ಸದ್ದುಮಾಡಿದೆ. ಸುದ್ದಿಯೂ ಮಾಡಿದೆ. ತಾಳಮದ್ದಳೆಯ ಕುರಿತು ಬಹಳಷ್ಟು ಋಣಾತ್ಮಕ ಪ್ರತಿಕ್ರೆಯೆಗಳು ಬಂದುವು. ಕೆಲವರು ಧನಾತ್ಮಕವಾಗಿಯೂ ಯೋಚಿಸಿರಬಹುದು. ಕೇವಲ ಋಣಾತ್ಮಕ ಅಂಶಗಳನ್ನು ಯೋಚನೆ ಮಾಡದೆ ಅಲ್ಲಿರುವ ಧನಾತ್ಮಕ ವಿಚಾರಗಳತ್ತಲೂ ನಮ್ಮ ವಿಚಾರಗಳನ್ನು ಹರಿಯಗೊಡೋಣ.
‘ವೀರಮಣಿ ಕಾಳಗ’ ಎಲ್ಲೆಡೆಯಲ್ಲೂ ನಡೆಯುತ್ತದೆ. ಆದರೆ ಇಷ್ಟು ಸುದ್ದಿಮಾಡಿದ್ದೇ ಇಲ್ಲ. ಕಲ್ಮಡ್ಕದ ವೀರಮಣಿಯ ಕಾಳಗ ರಮಣೀಯವಾಗಿದೆ ಎಂದು ಹೇಳಿದರೆ ಯಾರೂ ಆಶ್ಚರ್ಯಪಡಲಾರರು ಎಂದು ಭಾವಿಸುತ್ತೇನೆ. ತುಂಬಾ ಕಡೆಗಳಲ್ಲಿ ನಡೆದ ವೀರಮಣಿ ಕಾಳಗದ ವಿಷಯ ಮಾತಾಡುವುದನ್ನು ಎಲ್ಲರೂ ಕೇಳಿರಬಹುದು. ವೀರಮಣಿ, ಶತ್ರುಘ್ನ, ಹನುಮಂತನ ಪಾತ್ರಗಳು ಭಾರೀ ಒಳ್ಳೆಯದಾಗಿದೆ ಎಂದು ಮಾತಾಡಿಕೊಳ್ಳುವುದನ್ನು ಕೇಳಿರುತ್ತೇವೆ.
ವೀರಮಣಿ ಕಾಳಗದ ವಿಮರ್ಶೆ ಬಾಯ್ಮಾತಿನಲ್ಲಿ ಇಷ್ಟಕ್ಕೆ ಮುಗಿದುಹೋಗುತ್ತದೆ. ಅದರೆ ಕಲ್ಮಡ್ಕದ ವೀರಮಣಿ ಕಾಳಗದ ವಿಚಾರ ವಿಮರ್ಶಕರಿಗೆ ಸಡ್ಡುಹೊಡೆದಂತೆ ಸದ್ದುಮಾಡಿತ್ತು. ಈಗ ಎಲ್ಲವೂ ವಾಟ್ಸಾಪಿನಲ್ಲಿ, ವಾಟ್ಸಾಪ್ ಗ್ರೂಪುಗಳಲ್ಲಿ ಮಾತಾಡಿದರೆ ಮುಗಿಯಿತು. ಅದು ಅಷ್ಟಕ್ಕೇ ಸೀಮಿತ. ಮಾತ್ರವಲ್ಲ ಅದು ಸಾಮಾಜಿಕ ಜಾಲತಾಣದ ಪ್ರಭಾವವೂ ಹೌದು.
ಈ ತಾಳಮದ್ದಳೆ ಯಾಕೆ ಸುದ್ದಿಮಾಡಿತು ಎಂಬುದು ಇಲ್ಲಿ ಮುಖ್ಯವಲ್ಲ. ಆದರೆ ಇಲ್ಲಿರುವ ಧನಾತ್ಮಕ ಅಂಶವೊಂದನ್ನು ಪರಿಗಣಿಸೋಣ. ಶೇಣಿ, ಸಾಮಗ ಯುಗದ ನಂತರ ಹೀಗೊಂದು ತಾಳಮದ್ದಳೆಗಳು ಸುದ್ದಿಯಾದದ್ದು ಕಡಿಮೆ. ಅಥವಾ ತಾಳಮದ್ದಳೆ ಕೂಟಗಳು ಅರ್ಧದಲ್ಲಿ ನಿಂತುಹೋದದ್ದು ಕಡಿಮೆ. ಅಥವಾ ನಿಂತುಹೋದದ್ದು ಇಲ್ಲವೆಂದೇ ಹೇಳಬಹುದು.
ಕಲಾವಿದರು ಸ್ವಪ್ರತಿಷ್ಟೆಗೆ ಒಳಗಾಗದೆ ರಂಗಪ್ರದರ್ಶನದ ಕಡೆಗೆ ಒಲವು ತೋರಿಸಿದ್ದು ಇದಕ್ಕೆ ಕಾರಣವಿರಬಹುದು. ಆದರೆ ಮೊನ್ನೆಯ ತಾಳಮದ್ದಳೆ ಅರ್ಧದಲ್ಲಿ ನಿಂತುಹೋಗದಿದ್ದರೂ ಒಂದೊಮ್ಮೆಗೆ ನಿಂತುಹೋದಂತೆಯೇ ಭಾಸವಾಗುತ್ತಿತ್ತು.
ಇದೇ ತಾಳಮದ್ದಳೆಯ ಸ್ವಾರಸ್ಯ. ಎಲ್ಲವೂ ಹೊಂದಾಣಿಕೆಯಲ್ಲಿ ಹೋದರೆ ಅಲ್ಲೇನು ಸ್ವಾರಸ್ಯವಿರುತ್ತದೆ? ತಾಳಮದ್ದಳೆಯ ಮುಖ್ಯ ಭವನವೇ ವಾದ ಅಥವಾ ವಿವಾದವೆಂಬ ಅಡಿಪಾಯ,ಕಂಬಗಳಲ್ಲಿ ನಿಂತಿದೆ.
ಅಂತಹಾ ವಾದ, ಸ್ವಾರಸ್ಯಗಳನ್ನು ಮಾತಿನ ರೂಪದಲ್ಲಿ ಹೊಸೆದು ರಾತ್ರಿಯನ್ನು ಒಂದೇ ಅರ್ಥದಲ್ಲಿ ಬೆಳಗು ಮಾಡುವವರ ವೈಭವಯುತ ಕಲಾಘಟ್ಟ ಮತ್ತು ಕಾಲಘಟ್ಟ ಮುಗಿದುಹೋಯಿತೆಂದು ಭಾವಿಸುತ್ತಿರುವಾಗಲೇ ಮೊನ್ನೆಯ ಈಶ್ವರನ ಮತ್ತು ಹನುಮಂತನ ಪಾತ್ರಧಾರಿಯ ಮಾತಿನ ಚಕಮಕಿ ಕಾಣಿಸಿಕೊಂಡಿದೆ.
ರಂಗದಲ್ಲಿ ಕೇವಲ ಹೊಂದಾಣಿಕೆಯಿಂದ ಹೋದರೆ ತಾಳಮದ್ದಳೆಯಲ್ಲಿ ಸ್ವಾರಸ್ಯವೆಲ್ಲಿದೆ? ತಾಳಮದ್ದಳೆ ಕೂಟದ ಮುಖ್ಯ ಆಕರ್ಷಣೆಯೇ ಮಾತು,ಚರ್ಚೆ ಮತ್ತು ವಾದವಿವಾದ. ಇದಿಲ್ಲದೆ ಹೋದರೆ ಯಕ್ಷಗಾನ ಪ್ರದರ್ಶನವೇ ಸಾಕಲ್ಲವೇ? ತಾಳಮದ್ದಳೆ ಯಾಕೆ?
ಕಲ್ಮಡ್ಕದ ವೀರಮಣಿ ಕಾಳಗದ ಹಿನ್ನೆಲೆಯಲ್ಲಿ ಇದನ್ನೊಂದು ಧನಾತ್ಮಕ ಅಂಶವೆಂದು ಪರಿಗಣಿಸಿ ಹಿಂದಿನ ತಾಳಮದ್ದಳೆಯ ಯುಗ ಮತ್ತೆ ಮರುಕಳಿಸೀತೆಂಬ ಆಶಾಭಾವನೆಯಲ್ಲಿರೋಣವೇ?!
ಬರಹ – ಯಕ್ಷಕಿಂಕರ
- ಮಕ್ಕಳನ್ನು ಕೊಂದ ನಂತರ ಆತ್ಮಹತ್ಯೆಗೆ ಯತ್ನಿಸಿದ ತಾಯಿ
- ಕಾಸರಗೋಡು ಮಹಿಳಾ ಪೊಲೀಸ್ ಅಧಿಕಾರಿಯನ್ನು ಕಡಿದು ಕೊಂದ ಆಕೆಯ ಪತಿ
- ನವವಿವಾಹಿತೆ ಆತ್ಮಹತ್ಯೆ – ಆಕೆ ಬರೆದಿಟ್ಟ ಡೆತ್ ನೋಟಿನಲ್ಲಿ ಏನಿದೆ?
- ತಾನು ಮದುವೆಯಾಗುವ ಹುಡುಗಿಗೆ ಮೂರು ಷರತ್ತುಗಳನ್ನು ವಿಧಿಸಿದ್ದ ಎ.ಆರ್. ರೆಹಮಾನ್: ಮದುವೆಯ ಮೂವತ್ತನೆಯ ವಾರ್ಷಿಕೋತ್ಸವ (ಗ್ರ್ಯಾಂಡ್ ಥರ್ಟಿ) ತಲುಪುವ ಭರವಸೆ ಹುಸಿಯಾಯಿತು ಎಂದ ಸಂಗೀತ ನಿರ್ದೇಶಕ
- ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ರಕ್ಷಕ-ಶಿಕ್ಷಕ ಸಂಘದ ಪದಾಧಿಕಾರಿಗಳ ಆಯ್ಕೆ