ಎರಡು ದಿನಗಳ ಹಿಂದೆ ವಿಟ್ಲದಿಂದ ನಾಪತ್ತೆಯಾಗಿ ಎಲ್ಲರಲ್ಲೂ ಆತಂಕ ಸೃಷ್ಟಿಸಿದ್ದ ಯುವತಿ ಇದೀಗ ನಿನ್ನೆ ಪತ್ತೆಯಾಗಿದ್ದಾಳೆ ಎಂದು ತಿಳಿದುಬಂದಿದೆ. ವಿಟ್ಲ ಕಡಂಬು ನಿವಾಸಿಯಾಗಿದ್ದ ನಾಗೇಶ್ ಎಂಬವರ ಪತ್ನಿ ಕವಿತಾ (29) ನಾಪತ್ತೆಯಾಗಿದ್ದ ಯುವತಿ.

ನಿನ್ನೆ ಸಂಜೆ ಮುಡಿಪು ಎಂಬಲ್ಲಿ ಈ ಯುವತಿಯನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. ವಿಟ್ಲ – ಮಂಗಳೂರು ರಸ್ತೆಯಲ್ಲಿರುವ ಬೇಕರಿಯಲ್ಲಿ ಕೆಲಸ ಮಾಡುತ್ತಿದ್ದ ಕವಿತಾ ಅಕ್ಟೊಬರ್ 29ರಂದು ಸಂಜೆ ತಾನು ಕೆಲಸ ಮಾಡುತ್ತಿದ್ದ ಬೇಕರಿಯಿಂದ ಕೆಲಸ ಬಿಟ್ಟು ತೆರಳುವಾಗ ತಾನು ಇಂದು ತಾಯಿ ಮನೆಗೆ ಹೋಗುತ್ತಿದ್ದೇನೆಂದು ಸಹೋದ್ಯೋಗಿಗಳಲ್ಲಿ ಹೇಳಿಕೊಂಡಿದ್ದರು.
ತನ್ನ ಪತಿಗೂ ಕರೆ ಮಾಡಿ ತಾನು ತಾಯಿ ಮನೆಗೆ ಹೋಗುತ್ತಿರುವ ವಿಚಾರವನ್ನು ತಿಳಿಸಿದ್ದಳು ಎನ್ನಲಾಗಿದೆ. ಆದರೆ ಮೀರಿದರೂ ತಾಯಿ ಮನೆಗೆ ತಲುಪಿಲ್ಲದಿದ್ದುದರಿಂದ ಆಕೆಯ ಸಹೋದರ ಗಿರೀಶ್ ಈ ವಿಚಾರವನ್ನು ಆಕೆಯ ಪತಿಗೆ ತಿಳಿಸಿದ್ದರು.
ಆಕೆಯ ಮೊಬೈಲ್ ಗೆ ಮೇಲಿಂದ ಮೇಲೆ ಕರೆಗಳನ್ನು ಮಾಡಿದಾಗ ಮೊಬೈಲ್ ಸ್ವಿಟ್ಚ್ ಆಫ್ ಬರುತ್ತಿತ್ತು. ಇದರಿಂದ ಆತಂಕಗೊಂಡ ಕವಿತಾ ಅವರ ಪತಿ ನಾಗೇಶ್ ಎಲ್ಲೆಡೆ ಹುಡುಕಾಡಿ ಕೊನೆಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಅದರಂತೆ ದೂರು ದಾಖಲಿಸಿದ ಪೊಲೀಸರು ನಿನ್ನೆ ಕವಿತಾ ಅವರನ್ನು ಮುಡಿಪು ಎಂಬಲ್ಲಿ ಪತ್ತೆಹಚ್ಚಿದ್ದಾರೆ. ಕವಿತಾ ಅವರು ಅಲ್ಲಿಗೆ ಯಾಕೆ ಹೋಗಿದ್ದರು ಯಾರಾದರೂ ಸಂಬಂಧಿಕರ ಮನೆಯಲ್ಲಿದ್ದರೇ ಮೊದಲಾದ ಮಾಹಿತಿಗಳೆಲ್ಲಾ ಇನ್ನಷ್ಟೇ ತಿಳಿದುಬರಬೇಕಾಗಿದೆ.
