ಕಾಲೇಜು ಯುವತಿಯೊಬ್ಬಳು ಕೆರೆಗೆ ಜಾರಿಬಿದ್ದು ಮೃತಪಟ್ಟ ಹೃದಯವಿದ್ರಾವಕ ಘಟನೆ ನಡೆದಿದೆ. ಯುವತಿಯೊಬ್ಬಳು ನಡೆದುಕೊಂಡು ಹೋಗುತ್ತಿರುವಾಗ ಆಕಸ್ಮಿಕವಾಗಿ ಕಾಲು ಜಾರಿ ಕೆರೆಗೆ ಬಿದ್ದು ಮೃತಪಟ್ಟಿರುವ ಘಟನೆ ನಡೆದಿದೆ.
ಆಕಸ್ಮಿಕ ಘಟನೆ ನಡೆದದ್ದು ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಕೊಣಂಜಗೇರಿ ಪಾರಾಣೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಿರುಂದಾಡು ಗ್ರಾಮದಲ್ಲಿ.
ಮೃತಳು ಪಾರಾಣೆ ಗ್ರಾ.ಪಂ ಸದಸ್ಯೆ ದಾಕ್ಷಾಯಿಣಿ ಹಾಗೂ ಕುಶಾಲಪ್ಪ ಅವರ ಪುತ್ರಿ. ಮೃತ ದುರ್ದೈವಿ ಚಸ್ಮಿಕಾ (20) ಮೂರ್ನಾಡು ಸರಕಾರೀ ಕಾಲೇಜಿನಲ್ಲಿ ಬಿಕಾಂ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಳು.
ಇಂದು ರಜಾದಿನವಾದ್ದರಿಂದ ಬೆಳಗ್ಗೆ ದನಕಟ್ಟಲೆಂದು ಗದ್ದೆಯ ಬದಿಗೆ ಬಂದಿರುವಾಗ ಅಕಸ್ಮಾತ್ ಅಲ್ಲೇ ಇದ್ದ ಕೆರೆಗೆ ಆಯ ತಪ್ಪಿ ಬಿದ್ದಿದ್ದಳು ಎನ್ನಲಾಗಿದೆ. ಕೂಡಲೇ ಸ್ಥಳಕ್ಕೆ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ ಭೇಟಿ ನೀಡಿ ಕುಟುಂಬಸ್ಥರಿಗೆ ಸಮಾಧಾನ, ಸಾಂತ್ವನ ಹೇಳಿದ್ದಾರೆ.
ನಾಪೋಕ್ಲು ಠಾಣೆಯ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

