Sunday, November 24, 2024
Homeಸುದ್ದಿ'ಮಾನಸೋಲ್ಲಾಸ'- 2022-23 ಪ್ರತಿಭಾ ದಿನಾಚರಣೆ

‘ಮಾನಸೋಲ್ಲಾಸ’- 2022-23 ಪ್ರತಿಭಾ ದಿನಾಚರಣೆ

ಪುತ್ತೂರು: ರಾಷ್ಟ್ರಭಕ್ತಿ ಹಾಗೂ ಚಿಂತನೆಯ ಮೂಲಕ ರಾಷ್ಟ್ರಭಕ್ತರಾಗುವ ಸಂಕಲ್ಪ ಮಾಡಬೇಕಾದ ಅವಶ್ಯಕತೆಯಿದೆ. ಬದಲಾವಣೆ ನಮ್ಮಿಂದ ಆದಾಗ ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯ. ಭಾರತೀಯ ಸನಾತನ ಧರ್ಮವು ಸಂಸ್ಕೃತಿ ಹಾಗೂ ಜ್ಞಾನ ಪರಂಪರೆಯನ್ನು ಅರಿತು, ಅಳವಡಿಕೊಳ್ಳಬೇಕಾದ ಅಗತ್ಯತೆ ಇಂದಿನ ದಿನದಲ್ಲಿ ಅವಶ್ಯಕ ಎಂದು ಪತ್ರಕರ್ತ, ವಾಗ್ಮಿ ಉಡುಪಿಯ ಶ್ರೀಕಾಂತ್ ಶೆಟ್ಟಿ ಹೇಳಿದರು.


ಅವರು ನಟ್ಟೋಜ ಫೌಂಡೇಶನ್ ಟ್ರಸ್ಟ್ ನಡೆಸುತ್ತಿರುವ ನೆಲ್ಲಿಕಟ್ಟೆ, ಬಪ್ಪಳಿಗೆ ಅಂಬಿಕಾ ಪದವಿಪೂರ್ವ ವಿದ್ಯಾಲಯ ಆವರಣದಲ್ಲಿರುವ ಶ್ರೀ ಶಂಕರ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ‘ಮಾನಸೋಲ್ಲಾಸ’- 2022-23 ಪ್ರತಿಭಾ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.


ಭಾರತೀಯ ಸಂಸ್ಕೃತಿಯಲ್ಲಿ ಪ್ರತಿಯೊಂದು ವಿಚಾರಗಳೂ ಅರ್ಥ ಗರ್ಭಿತವಾಗಿದೆ. ಹಿರಿಯರಿಗೆ ಅಥವಾ ಮತ್ತೊಬ್ಬರ ಕಾಲಿಗೆ ನಮಸ್ಕರಿಸುವುದು ಮತ್ತೊಬ್ಬ ವ್ಯಕ್ತಿಯಲ್ಲಿರುವ ಚೈತನ್ಯಕ್ಕೆ ನಮಿಸುವುದಾಗಿದೆ. ಗುರುಕುಲ, ಶಾಲೆ, ವಿದ್ಯಾಲಯಯಗಳು ಪ್ರತಿಯೊಂದು ವಿಚಾರವನ್ನೂ ತಿಳಿಸುವ ಮೂಲಕ ವ್ಯಕ್ತಿಯಲ್ಲಿ ಸಂಸ್ಕಾರ ಮೂಡಿಸುವ ಕಾರ್ಯ ಮಾಡುತ್ತಿತ್ತು. ಆದರೆ ಪಾಶ್ಚಾತ್ಯ ದಾಳಿಯಿಂದ ಬಲಿಷ್ಠವಾದ ಭಾರತೀಯ ಸಂಸ್ಕೃತಿಯ ಮಹತ್ವ ಮರೆತು ಗುಲಾಮರಂತೆ ಬದುಕುತ್ತಿರುವುದು ಬೇಸರದ ಸಂಗತಿ ಎಂದರು.


ಪಾಶ್ಚಾತ್ಯ ಸಂಸ್ಕೃತಿಯಿ0ದ ಮಾನಸಿಕ ಗುಲಾಮರಾಗಿದ್ದು, ನಮ್ಮ ಶಕ್ತಿಯನ್ನು ಕೀಳಾಗಿ ಅಂದಾಜಿಸುತ್ತಿದ್ದೇವೆ. ಒಂದರ್ಥದಲ್ಲಿ ಸರ್ಕಸ್ ನಲ್ಲಿರುವ ಸಿಂಹಗಳ0ತೆ ಅಥವಾ ಕಟ್ಟಿ ಹಾಕಿದ ಆನೆಗಳಂತೆ ಆಗಿದ್ದೇವೆ. ದೇಶದ ಅಂತಃ ಸತ್ವವೇ ಅಡಗಿಹೋಗಿದೆ. ಇದನ್ನು ದೂರಗೊಳಿಸಿ ಜಗತ್ತಿನಲ್ಲೇ ಶಕ್ತಿ ಶಾಲಿಯಾಗಿ ಹೊರ ಹೊಮ್ಮಬೇಕಿದೆ ಎಂದರು.


ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರವನ್ನು ಅಂಬಿಕಾ ವಿದ್ಯಾಲಯ ನೀಡುತ್ತಿರುವುದು ವಿದ್ಯರ್ಥಿಗಳಲ್ಲಿ ದೇಶಭಕ್ತಿಯ ಮೂಲಕ ದೇಶದ ಶಕ್ತಿಯಾಗಿ ರೂಪಿಸುತ್ತಿರುವುದು ಹೆಮ್ಮೆಯ ವಿಚಾರ. ಇಂದಿನ ದಿನಗಳಲ್ಲಿ ರಷ್ಯಾದಂತಹಾ ರಾಷ್ಟ್ರದಲ್ಲಿ ಭಗವದ್ಗೀತೆಯ ವಿಚಾರಗಳನ್ನು ಅರಿತುಕೊಳ್ಳುವ ಪ್ರಯತ್ನ ನಡೆಸುತ್ತಿರುವುದು ಭಾರತಕ್ಕೆ ಹೆಮ್ಮೆಯ ವಿಚಾರ ಎಂದು ತಿಳಿಸಿದರು.


ಸಮಾಜದಲ್ಲಿ ಹಲವಾರು ಸಮಸ್ಯೆಗಳು ತಾಂಡವವಾಡುತ್ತಿದ್ದು ನಾವು ದೇಶಕ್ಕಾಗಿ ಏನು ನೀಡಬಹುದು ಎಂಬ ಚಿಂತನ ಯುವ ಮನಸ್ಸುಗಳಲ್ಲಿ ಮೂಡಬೇಕು. ಭಗತ್ ಸಿಂಗ್‌ರ0ತಹಾ ಹೋರಾಟಗಾರರು ದೇಶಕ್ಕಾಗಿ ಬಲಿದಾನ ಮಾಡಿದ ಉದ್ದೇಶ ತಮ್ಮ ಬಲಿದಾನ ಇತರ ದೇಶಪ್ರೇಮಿಗಳ ಹೋರಾಟಕ್ಕೆ ಪ್ರೇರೇಪಣೆ ನೀಡುವುದಾಗಿತ್ತು. ಇಂದು ರಾಷ್ಟ್ರಭಕ್ತಿಯನ್ನು ಸಮಾಜ ಸೇವೆ, ರಾಷ್ಟ್ರಸೇವೆ ಮಾಡುವ ಮೂಲಕ ನಮ್ಮ ಕೊಡುಗೆ ನೀಡಬಹುದಾಗಿದೆ ಎಂದು ಶ್ರೀಕಾಂತ್ ಶೆಟ್ಟಿ ಹೇಳಿದರು.


ನಟ್ಟೋಜ ಫೌಂಡೇಶನ್ ಟ್ರಸ್ಟ್ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಮಾತನಾಡಿ, ರಾಷ್ಟ್ರದಲ್ಲಿ ವ್ಯಕ್ತಿಯನ್ನು ರೂಪಿಸುವ ಶಿಕ್ಷಣ ಬರಬೇಕಿದೆ. ಮಕ್ಕಳಲ್ಲಿ ಅಡಗಿರುವ ಕಲೆ, ಸಾಹಿತ್ಯ, ಸಂಸ್ಕೃತಿಯನ್ನು ಹೊರತರುವ ನಿಟ್ಟಿನಲ್ಲಿ ಶಿಕ್ಷಣ ಪೂರಕವಾಗಿ ಕಾರ್ಯನಿರ್ವಹಿಸಬೇಕಾಗಿದೆ. ಮಕ್ಕಳಲ್ಲಿರುವ ಮಹಾನ್ ಕಲಾವಿದರನ್ನು, ಸಂಗೀತಗಾರರನ್ನು, ಸಾಧಕರನ್ನು ಗುರುತಿಸಿ ಅವರು ಶ್ರೇಷ್ಠರಾಗುವಂತೆ ಪ್ರೋತ್ಸಾಹಿಸಬೇಕಾದ ಅಗತ್ಯತೆಯಿದೆ ಎಂದರು.


ಶಿಕ್ಷಣ ಎಂದರೆ ಆತ್ಮ ಸಾಕ್ಷಾತ್ಕಾರವನ್ನು ಪಡೆಯುವುದು ಎಂಬುದಾಗಿದೆ. ಇಂದಿನ ದಿನಗಳಲ್ಲಿ ನೈತಿಕ ಶಿಕ್ಷಣದ ಮೂಲಕ ವಿದ್ಯಾರ್ಥಿಗಳನ್ನು ಬಲಿಷ್ಠಗೊಳಿಸಬೇಕಾಗಿದೆ. ವಿದ್ಯಾರ್ಥಿಗಳು ಶಿಕ್ಷಣದಲ್ಲಿ ಮಾತ್ರ ತೊಡಗಿಕೊಳ್ಳದೆ, ಪಠ್ಯೇತರ ಚಟುವಟಿಕೆಗಳಲ್ಲೂ ತೊಡಗುವಂತೆ ಪೋಷಕರು ಪ್ರೋತ್ಸಾಹಿಸಬೇಕಾದ ಅವಶ್ಯಕತೆಯಿದೆ ಎಂದು ಅವರು ಹೇಳಿದರು.


ಕೆ.ಸಿ.ಇ.ಟಿ.ಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವರುಣ್ ಎಸ್., ಜೆ.ಇ.ಇ. ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ವಿಶ್ವಜಿತ್ ಕೆ., ನೀಟ್ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿದ ಕೌಶಿಕ್ ರಾವ್, ಶ್ರೀವತ್ಸ ಎಂ.ಕೆ., ಅನುಷಾ ಎ.ಎಲ್. ಅವರನ್ನು ಗೌರವಿಸಲಾಯಿತು.
ಸ್ಪರ್ಧೆಗಳಲ್ಲಿ ವಯಕ್ತಿಕ ವಿಭಾಗದಲ್ಲಿ ಬಪ್ಪಳಿಗೆ ಪಿಯು ಕಾಲೇಜಿನ ಶ್ರಾವ್ಯ, ನೆಲ್ಲಿಕಟ್ಟೆ ಪಿ.ಯು. ಕಾಲೇಜಿನ ವಿಧಾತ್ರಿ ಭಟ್, ಗುಂಪು ವಿಭಾಗದಲ್ಲಿ ಬಪ್ಪಳಿಗೆ ದ್ವಿತೀಯ ಬಿ.ಕಾಂ., ನೆಲ್ಲಿಕಟ್ಟೆ ಚರಕ ಪ್ರಥಮ ಪಿಯು ವಿದ್ಯಾರ್ಥಿಗಳು ಪಡೆದರು. ಶೈಕ್ಷಣಿಕ ಚಟುವಟಿಕೆಗಳಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ವಿವಿಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಗಣ್ಯರು ಬಹುಮಾನ ವಿತರಿಸಿದರು.


ನಟ್ಟೋಜ ಫೌಂಡೇಶನ್ ಟ್ರಸ್ಟ್ ಕೋಶಾಧಿಕಾರಿ ರಾಜಶ್ರೀ ಎಸ್ ನಟ್ಟೋಜ, ಆಡಳಿತ ಮಂಡಳಿ ಸದಸ್ಯರಾದ ಮಾಧವ ಭಟ್, ಸುರೇಶ್ ಶೆಟ್ಟಿ, ಡಾ.ಎಂ.ಎಸ್. ಶೆಣೈ, ಪ್ರಸನ್ನ ಭಟ್, ರಕ್ಷಕ- ಶಿಕ್ಷಕ ಸಂಘದ ಅಧ್ಯಕ್ಷ ಶೈಲೇಶ್ ಎಂ., ಅಂಬಿಕಾ ಮಹಾವಿದ್ಯಾಲಯದ ಆಡಳಿತಾಧಿಕಾರಿ ಗಣೇಶ್ ಪ್ರಸಾದ್, ಸಾರ್ವಜನಿಕ ಸಂಪರ್ಕಾಧಿಕಾರಿ ಹಾಗೂ ಅಂಬಿಕಾ ಮಹಾವಿದ್ಯಾಲಯದ ಪ್ರಾಂಶುಪಾಲ ರಾಕೇಶ ಕುಮಾರ್ ಕಮ್ಮಜೆ, ಉಭಯ ಕಾಲೇಜುಗಳ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಆಕಾಶ್ ಜೆ.ರಾವ್, ಅರ್ಜುನ್ ಕುಡ್ವ, ಯಶು ಬಿ.ಕೆ., ಚಿದಂಬರ್ ಕೆ.ಜೆ. ಉಪಸ್ಥಿತರಿದ್ದರು.

ಶೈಕ್ಷಣಿಕ ಚಟುವಟಿಕೆಗಳಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳ ಪಟ್ಟಿಯನ್ನು ಕೇಶವ ಕಿಶೋರ್ ವಾಚಿಸಿಸಿದರು. ಉಪನ್ಯಾಸಕರಾದ ಸತೀಶ್ ಹಾಗೂ ರಾಧಿಕಾ ಪ್ರಶಸ್ತಿ ವಿಜೇತರ ಪಟ್ಟಿ ವಾಚಿಸಿದರು.

ನೆಲ್ಲಿಕಟ್ಟೆ ಅಂಬಿಕಾ ಪದವಿಪೂರ್ವ ವಿದ್ಯಾಲಯದ ಪ್ರಾಂಶುಪಾಲ ಸತ್ಯಜಿತ್ ಉಪಾಧ್ಯಾಯ ಎಂ. ಪ್ರಾಸ್ತಾವಿಕ ನುಡಿಗಳೊಂದಿಗೆ ಸ್ವಾಗತಿಸಿದರು. ಬಪ್ಪಳಿಗೆ ಅಂಬಿಕಾ ಪದವಿಪೂರ್ವ ವಿದ್ಯಾಲಯ ಸುಚಿತ್ರಾ ಪ್ರಭು ವಂದಿಸಿದರು. ವಿಷ್ಣು ಪ್ರಸಾದ್, ವಿನುತಾ ನಿರೂಪಿಸಿದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments