Friday, November 22, 2024
Homeಯಕ್ಷಗಾನಅನುಭವಿ ಮದ್ದಳೆವಾದಕ ಶ್ರೀ ಗಣಪತಿ ನಾಯಕ್ ನೇರೋಳು 

ಅನುಭವಿ ಮದ್ದಳೆವಾದಕ ಶ್ರೀ ಗಣಪತಿ ನಾಯಕ್ ನೇರೋಳು 

ನೇರೋಳು  ಶ್ರೀ ಗಣಪತಿ ನಾಯಕ್ ಅವರು ತೆಂಕುತಿಟ್ಟಿನ ಅನುಭವಿ ಮದ್ದಳೆವಾದಕರು. ಯಕ್ಷಗಾನ ಕ್ಷೇತ್ರದಲ್ಲಿ ಇವರು ಸುಮಾರು ಮೂವತ್ತಾರು ವರ್ಷಗಳ ಅನುಭವಿ. ತೆಂಕುತಿಟ್ಟಿನ ಹೆಚ್ಚಿನ ಎಲ್ಲಾ ಹಿರಿಯ, ಕಿರಿಯ ಭಾಗವತರುಗಳ ಹಾಡುಗಾರಿಕೆಗೆ ಮದ್ದಳೆಯನ್ನು ನುಡಿಸಿರುತ್ತಾರೆ. ಕಟೀಲು, ಧರ್ಮಸ್ಥಳ ಸುಂಕದಕಟ್ಟೆ ಮೇಳಗಳಲ್ಲಿ ವ್ಯವಸಾಯ ಮಾಡಿರುತ್ತಾರೆ. ಕಳೆದ ಐದು ವರ್ಷಗಳಿಂದ ಸಸಿಹಿತ್ಲು ಮೇಳದಲ್ಲಿ ಮದ್ದಳೆ ವಾದಕರಾಗಿ ತಿರುಗಾಟ ನಡೆಸುತ್ತಿದ್ದಾರೆ. 

ತೆಂಕುತಿಟ್ಟಿನ ಅನುಭವಿ ಮದ್ದಳೆವಾದಕರಾದ  ಶ್ರೀ ಗಣಪತಿ ನಾಯಕ್ ಅವರ ಹುಟ್ಟೂರು ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲೂಕಿನ ಎಣ್ಮಕಜೆ ಗ್ರಾಮದ ನೇರೋಳು ಎಂಬಲ್ಲಿ. 1969ನೇ ಇಸವಿ ಆಗಸ್ಟ್ 12 ರಂದು ಶ್ರೀ ಲಿಂಗಣ್ಣ ನಾಯಕ್ ಮತ್ತು ಶ್ರೀಮತಿ ಸುಂದರಿ ನಾಯಕ್ ದಂಪತಿಗಳಿಗೆ ಪುತ್ರನಾಗಿ ಜನನ. ಕೃಷಿ ಕುಟುಂಬದಲ್ಲಿ ಇವರ ಜನನ. ಓದಿದ್ದು 6ನೇ ತರಗತಿ ವರೆಗೆ. ಪೆರ್ಲ ಶ್ರೀ ಸತ್ಯನಾರಾಯಣ ಹಿರಿಯ ಪ್ರಾಥಮಿಕ ಶಾಲೆಯಲ್ಲಿ.

ಇವರಿಗೆ ವಿದ್ಯಾರ್ಥಿಯಾಗಿರುವಾಗಲೇ ಯಕ್ಷಗಾನಾಸಕ್ತಿ ಇತ್ತು. ಮನೆಯವರೂ ಕಲಾಸಕ್ತರಾಗಿದ್ದರು. ಮನೆಯ ಹಿರಿಯರ ಜತೆ ತೆರಳಿ ಯಕ್ಷಗಾನ ಪ್ರದರ್ಶನಗಳನ್ನು ನೋಡುತ್ತಿದ್ದರು.  ಶ್ರೀ ಗಣಪತಿ ನಾಯಕ್ ಅವರಿಗೆ ಹಿಮ್ಮೇಳದಲ್ಲಿ ಆಸಕ್ತಿ. ಮದ್ದಳೆ ವಾದನ ಕಲಿಯಬೇಕೆಂಬ ಆಸೆಯಾಗಿತ್ತು. ಚೇವಾರು ಶ್ರೀ ರಾಮಕೃಷ್ಣ ಕಾಮತ್ ಅವರಿಂದ ಅವರ ಮನೆಯಲ್ಲಿಯೇ ತರಬೇತಿ ಪಡೆದಿದ್ದರು. ಚೇವಾರು ಕಾಮತ್ ಮನೆಯವರು ಗಣಪತಿ ನಾಯಕ್ ಅವರಿಗೆ ಬಂಧುಗಳು. ಚೇವಾರು ರಾಮಕೃಷ್ಣ ಕಾಮತರ ತಾಯಿ ನೇರೋಳು  ಶ್ರೀ ಗಣಪತಿ ನಾಯಕ್ ಅವರ ಸಣ್ಣಜ್ಜಿ.  ಶ್ರೀ ಗಣಪತಿ ನಾಯಕ್ ಅವರ ಅಜ್ಜಿಯೂ (ತಂದೆಯ ತಾಯಿ) ಚೇವಾರು ರಾಮಕೃಷ್ಣ ಕಾಮತರ  ತಾಯಿಯೂ ಅಕ್ಕ ತಂಗಿಯರು. ಕಾಮತ್ ಮನೆಯವರೆಲ್ಲರೂ ಕಲಾಸಕ್ತರು.

ಚೇವಾರು ಕಾಮತ್ ಅವರ ಮನೆಯು ಒಂದು ಯಕ್ಷಗಾನ ಕಲಾಶಾಲೆಯೇ ಆಗಿತ್ತು. ಅನೇಕ ಕಲಾವಿದರೂ, ಕಲಿಕಾಸಕ್ತರೂ ಅಲ್ಲಿಗೆ ಬರುತ್ತಿದ್ದರು. ಚೇವಾರು ಶ್ರೀ ರಾಮಕೃಷ್ಣ ಕಾಮತರಿಂದ ತರಬೇತಿ ಪಡೆದ  ಶ್ರೀ ಗಣಪತಿ ನಾಯಕ್ ನೇರೋಳು ಅವರು ಹೆಚ್ಚಿನ ಕಲಿಕೆಗಾಗಿ ಶ್ರೀ ಧರ್ಮಸ್ಥಳದ ಲಲಿತಕಲಾ ಕೇಂದ್ರಕ್ಕೆ ತೆರಳಿದರು. 1986ರಲ್ಲಿ ಧರ್ಮಸ್ಥಳ ಕ್ಷೇತ್ರದ ತರಬೇತಿ ಕೇಂದ್ರದಲ್ಲಿ ನೆಡ್ಲೆ ಶ್ರೀ ನರಸಿಂಹ ಭಟ್ಟರಿಂದ ತರಬೇತಿ. ತರಬೇತಿ ಕೇಂದ್ರದಲ್ಲಿ ಪದ್ಮನಾಭ ಉಪಾಧ್ಯಾಯ, ಕೆದಿಲ ಜಯರಾಮ ಭಟ್, ಜಗದಾಭಿರಾಮ, ಪಂಜ ಕಿರಣ್ ಕುಮಾರ್, ಮೊದಲಾದವರು ಸಹಪಾಠಿಗಳಾಗಿದ್ದರು. ತರಬೇತಿ ಕೇಂದ್ರದಲ್ಲಿ ನಡೆದ ಐದು ಪ್ರದರ್ಶನಗಳಲ್ಲಿ ಮದ್ದಳೆ ಬಾರಿಸಲು ಅವಕಾಶ ಸಿಕ್ಕಿತ್ತು. 

ಶ್ರೀ ಗಣಪತಿ ನಾಯಕ್ ಅವರು ಮೊದಲು ತಿರುಗಾಟ ನಡೆಸಿದ್ದು ಕಟೀಲು ಮೇಳದಲ್ಲಿ. ಕಟೀಲು ಮೇಳದ ಹಿರಿಯ ಕಲಾವಿದ ಮುದುಕುಂಜ ಶ್ರೀ ವಾಸುದೇವ ಪ್ರಭುಗಳು ಇವರ ಬಂಧುಗಳಾಗಿದ್ದರು. (ಮಾವ- ಸೋದರತ್ತೆಯ ಗಂಡ) ಅವರೇ  ಶ್ರೀ ಗಣಪತಿ ನಾಯಕ್ ಅವರನ್ನು ಕಟೀಲು ಮೇಳಕ್ಕೆ ಸೇರಿಸಿದ್ದರು. ಕಟೀಲು ಎರಡನೇ ಮೇಳದ ಒಂದು ವರ್ಷ ತಿರುಗಾಟ. ಬಲಿಪ ನಾರಾಯಣ ಭಾಗವತ, ಪೆರುವಾಯಿ ನಾರಾಯಣ ಭಟ್, ರಾಘವ ಜೋಡುಕಲ್ಲು ಇವರ ಒಡನಾಟವು ಸಿಕ್ಕಿತ್ತು. ಮುಮ್ಮೇಳದ ಅನೇಕ ಹಿರಿಯ ಕಲಾವಿದರ ಒಡನಾಟವೂ ಸಿಕ್ಕಿತ್ತು.

ಬಳಿಕ ಎರಡು ವರ್ಷ ಸುಂಕದಕಟ್ಟೆ ಮೇಳದಲ್ಲಿ ತಿರುಗಾಟ. ಇಲ್ಲಿ ಪುತ್ತಿಗೆ ತಿಮ್ಮಪ್ಪ ರೈ, ಪದ್ಯಾಣ ಶಂಕರನಾರಾಯಣ ಭಟ್, ಸುಕುಮಾರ ಬಲ್ಲಾಳರ ಒಡನಾಟವು ಸಿಕ್ಕಿತ್ತು. ಬಳಿಕ ಇಪ್ಪತ್ತು ವರ್ಷಗಳ ಕಾಲ ಶ್ರೀ ಧರ್ಮಸ್ಥಳ ಮೇಳದಲ್ಲಿ ವ್ಯವಸಾಯ. ಈ ಸಂದರ್ಭದಲ್ಲಿ ಕಡತೋಕಾ ಮಂಜುನಾಥ ಭಾಗವತ, ಪುತ್ತಿಗೆ ರಘುರಾಮ ಹೊಳ್ಳ, ರಾಮಕೃಷ್ಣ ಮಯ್ಯ, ಚಿಪ್ಪಾರು ಕೃಷ್ಣಯ್ಯ ಬಲ್ಲಾಳ್, ಅಡೂರು ಗಣೇಶ್ ರಾವ್, ಮಣಿಮುಂಡ ಸುಬ್ರಹ್ಮಣ್ಯ ಶಾಸ್ತ್ರಿ ಅಲ್ಲದೆ ಮುಮ್ಮೇಳದಲ್ಲಿ ಅನೇಕ ಖ್ಯಾತ ಕಲಾವಿದರ ಒಡನಾಟವು ದೊರೆತಿತ್ತು. 

ಶ್ರೀ ಗಣಪತಿ ನಾಯಕ್ ನೇರೋಳು ಅವರು ಕಳೆದ ಐದು ವರ್ಷಗಳಿಂದ ಶ್ರೀ ದಯಾನಂದ ಗುಜರನ್ ಮತ್ತು ಶ್ರೀ ರಾಜೇಶ್ ಗುಜರನ್ ಅವರ ಸಸಿಹಿತ್ಲು ಮೇಳದಲ್ಲಿ ವ್ಯವಸಾಯ ಮಾಡುತ್ತಿದ್ದಾರೆ. ಇಲ್ಲಿ ಸತ್ಯನಾರಾಯಣ ಪುಣಿಂಚತ್ತಾಯ, ಚಂದ್ರಶೇಖರ ಕಕ್ಕೆಪದವು, ಶಿವಪ್ರಸಾದ ಎಡಪದವು ಇವರ ಹಾಡುಗಾರಿಕೆಗೆ ಮದ್ದಳೆ ನುಡಿಸಲು ಅವಕಾಶವಾಗಿತ್ತು. ಮಳೆಗಾಲದ ಪ್ರದರ್ಶನಗಳಲ್ಲಿ ಬಲಿಪ ಶ್ರೀ ನಾರಾಯಣ ಭಾಗವತ, ಪದ್ಯಾಣ ಗಣಪತಿ ಭಟ್, ದಿನೇಶ ಅಮ್ಮಣ್ಣಾಯ, ಪ್ರಸಾದ ಬಲಿಪ, ಪಟ್ಲ ಸತೀಶ ಶೆಟ್ಟಿ ಅವರ ಹಾಡುಗಾರಿಕೆಗೆ ಮದ್ದಳೆ ನುಡಿಸುವ ಅವಕಾಶವೂ ಇವರಿಗೆ ಸಿಕ್ಕಿದೆ.

ಮಳೆಗಾಲದಲ್ಲಿ ಹಾಸ್ಯರತ್ನ ಶ್ರೀ ನಯನಕುಮಾರರು ಸಂಯೋಜಿಸಿದ ಪ್ರದರ್ಶನಗಳಲ್ಲಿ ಭಾಗವಹಿಸಿದ್ದರು. ಮುಂಬಯಿ, ದೆಹಲಿ, ಬೆಂಗಳೂರು ಮೊದಲಾದ ನಗರಗಳಲ್ಲಿ ನಡೆದ ಪ್ರದರ್ಶನಗಳಲ್ಲಿ ಭಾಗವಹಿಸಿರುತ್ತಾರೆ. ಶ್ರೀ ನಿಡ್ಲೆ ಗೋವಿಂದ ಭಟ್ಟರ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿಯ ಪ್ರದರ್ಶನಗಳಲ್ಲಿ 15 ವರ್ಷ ಭಾಗವಹಿಸಿರುತ್ತಾರೆ. ಶ್ರೀ ಗಣಪತಿ ನಾಯಕ್ ಅವರು ನಗುಮೊಗದ ಸಹೃದಯೀ ಮದ್ದಳೆವಾದಕರು. ಇವರು ವಿನೋದಪ್ರಿಯರೂ ಹೌದು. ಯಾವುದೇ ಸಮಸ್ಯೆಗಳಿಗೆ ಸಿಲುಕದೆ ಅರ್ಪಣಾ ಭಾವದಿಂದ ಕಲಾ ವ್ಯವಸಾಯವನ್ನು ಮಾಡುತ್ತಾರೆ.

ಶ್ರೀಯುತರು ಕಲಾಬದುಕಿನಲ್ಲೂ ಸಾಂಸಾರಿಕವಾಗಿಯೂ ತೃಪ್ತರು. ಇವರ ಪತ್ನಿ ಶ್ರೀಮತಿ ಜ್ಯೋತಿ ನಾಯಕ್. ಇವರು ಗೃಹಣಿ. ಜ್ಯೋತಿ, ಗಣಪತಿ ನಾಯಕ್ ದಂಪತಿಗಳಿಗೆ ಮೂರು ಮಂದಿ ಮಕ್ಕಳು. ಹಿರಿಯ ಪುತ್ರಿ ಕುಮಾರಿ ಅಪೂರ್ವ, ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ ಪದವಿ ಓದುತ್ತಿದ್ದಾಳೆ. ಕಿರಿಯ ಪುತ್ರಿ ಕುಮಾರಿ ಅಪೇಕ್ಷ. ಅಡ್ಯನಡ್ಕ ಶ್ರೀ ಜನತಾ ಕಾಲೇಜಿನಲ್ಲಿ ಪಿಯುಸಿ ಓದುತ್ತಿದ್ದಾಳೆ. ಪುತ್ರ ಮಾಸ್ಟರ್ ಆಯುಷ್ ನಾಲ್ಕನೆಯ ತರಗತಿ ವಿದ್ಯಾರ್ಥಿ.

ಮಕ್ಕಳೆಲ್ಲರಿಗೂ ಉಜ್ವಲವಾದ ಭವಿಷ್ಯವು ಸಿದ್ಧಿಸಲಿ.  ಶ್ರೀ ಗಣಪತಿ ನಾಯಕ್ ನೇರೋಳು ಅವರಿಗೆ ಸಕಲ ಭಾಗ್ಯಗಳನ್ನೂ ಶ್ರೀ ದೇವರು ಅನುಗ್ರಹಿಸಲಿ. ಕಲಾ ಸೇವೆಯನ್ನು ನಿರಂತರವಾಗಿ ಮಾಡಲು ಕಲಾಮಾತೆಯ ಅನುಗ್ರಹವು ಇರಲಿ ಎಂಬ ಹಾರೈಕೆಗಳು. 

ಶ್ರೀ ಗಣಪತಿ ನಾಯಕ್ ನೇರೋಳು, ಅಂಚೆ ಪೆರ್ಲ, ಕಾಸರಗೋಡು ಜಿಲ್ಲೆ. 

ಲೇಖಕ: ಶ್ರೀ ರವಿಶಂಕರ್ ವಳಕ್ಕುಂಜ

ಲೇಖಕ: ಶ್ರೀ ರವಿಶಂಕರ್ ವಳಕ್ಕುಂಜ 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments