Friday, November 22, 2024
Homeಸುದ್ದಿಅಂಬಿಕಾ ಪದವಿಪೂರ್ವ ವಿದ್ಯಾಲಯದಲ್ಲಿ ಹಿರಿಯ ವಿದ್ಯಾರ್ಥಿಗಳ ಸಮ್ಮಿಲನ - "ಸಂಸ್ಕೃತಿ, ಸಂಸ್ಕಾರ ತಿಳಿಯದೆ ನಡೆಸುವ ಬದುಕು...

ಅಂಬಿಕಾ ಪದವಿಪೂರ್ವ ವಿದ್ಯಾಲಯದಲ್ಲಿ ಹಿರಿಯ ವಿದ್ಯಾರ್ಥಿಗಳ ಸಮ್ಮಿಲನ – “ಸಂಸ್ಕೃತಿ, ಸಂಸ್ಕಾರ ತಿಳಿಯದೆ ನಡೆಸುವ ಬದುಕು ಅರ್ಥಹೀನ” : ಸುಬ್ರಹ್ಮಣ್ಯ ನಟ್ಟೋಜ


ಪುತ್ತೂರು: ಹೆತ್ತವರನ್ನು ಚೆನ್ನಾಗಿ ನೋಡಿಕೊಳ್ಳುವ ಜವಾಬ್ದಾರಿ ಯುವಸಮುದಾಯದ ಮೇಲಿದೆ. ಇಂಜಿನಿಯರ್, ಡಾಕ್ಟರ್ ಆಗುವುದು, ವಿದೇಶದ ಉದ್ಯೋಗ ಹಿಡಿಯುವುದಷ್ಟೇ ಜೀವನವಲ್ಲ. ಯಾರೂ ಕೂಡ ತನ್ನ ಸ್ವಂತ ತಂದೆ ತಾಯಿಗೆ ಸ್ಪಂದಿಸದ ಮಕ್ಕಳಾಗಬಾರದು. ಹೆತ್ತವರ ಮಹತ್ವವನ್ನು ಅರಿಯದೆ, ಸಂಸ್ಕೃತಿ ಸಂಸ್ಕಾರ ತಿಳಿಯದೆ ನಡೆಸುವ ಬದುಕು ಅರ್ಥಹೀನ ಎಂದು ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಹೇಳಿದರು.
ಅವರು ನಗರದ ನೆಲ್ಲಿಕಟ್ಟೆಯಲ್ಲಿರುವ ಅಂಬಿಕಾ ಪದವಿಪೂರ್ವ ವಿದ್ಯಾಲಯದಲ್ಲಿ ಶನಿವಾರ ಹಿರಿಯ ವಿದ್ಯಾರ್ಥಿಗಳ ಸಮ್ಮಿಲನ ಸಭೆಯನ್ನುದ್ದೇಶಿಸಿ ಮಾತನಾಡಿದರು.

ಇಂದು ಹೆಣ್ಣುಮಕ್ಕಳ ಮೇಲೆ ದೌರ್ಜನ್ಯಗಳಾಗುತ್ತಿವೆ. ಇಂತಹ ಘಟನೆಗಳಾದಾಗ ಹುಡುಗರನ್ನು ಖಂಡಿಸಬೇಕಾದದ್ದು, ಶಿಕ್ಷಿಸಬೇಕಾದದ್ದು ಅತ್ಯಂತ ಅಗತ್ಯ. ಆದರೆ ಹುಡುಗಿಯರೂ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಮೈಮುಚ್ಚಬೇಕಾದ ಅರಿವೆಯ ಮಹತ್ವವನ್ನು ಅರಿಯದೆ ಮೈಕಾಣಿಸುವಂತಹ ಉಡುಗೆಗಳನ್ನು ತೊಟ್ಟು ಸಮಾಜದ ಕೆಟ್ಟ ಕಣ್ಣು ತಮ್ಮ ಮೇಲೆ ಬೀಳುವುದಕ್ಕೆ ತಾವೇ ಕಾರಣರಾಗುತ್ತಿದ್ದಾರೆ. ನಮ್ಮ ಮನೆಯಲ್ಲಿ ಅಮ್ಮ ಇಂತಹ ಬಟ್ಟೆಯನ್ನುಟ್ಟು ತಿರುಗಾಡಿದರೆ ನಮಗೆ ಸಹ್ಯವಾದೀತಾ ಅಂತ ಪ್ರಶ್ನೆ ಮಾಡಿಕೊಳ್ಳಬೇಕಿದೆ ಎಂದರು.


ಕಾಲೇಜಿನ ಪ್ರಾಚಾರ್ಯ ಸತ್ಯಜಿತ್ ಉಪಾಧ್ಯಾಯ ಮಾತನಾಡಿ ಹಿರಿಯ ವಿದ್ಯಾರ್ಥಿಗಳು ಸಂಸ್ಥೆಯೊಂದಿಗೆ ನಿರಂತರ ಸಂಪರ್ಕವನ್ನು ಹೊಂದಿರಬೇಕು. ವರ್ಷಕ್ಕೊಮ್ಮೆಯಾದರೂ ಹಿರಿಯ ವಿದ್ಯಾರ್ಥಿಗಳು ಸಂಸ್ಥೆಯ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ಜೋಡಿಸಿಕೊಳ್ಳಬೇಕು. ತನ್ಮೂಲಕ ಭಾವಬಂಧವನ್ನು ಮತ್ತಷ್ಟು ದೃಢಗೊಳಿಸಬೇಕು ಎಂದು ಕರೆ ನೀಡಿದರು.


ಅಧ್ಯಕ್ಷತೆ ವಹಿಸಿದ್ದ ಹಿರಿಯ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಅಜಯ್ ರಾಮ್ ಮಾತನಾಡಿ ಅಂಬಿಕಾ ಸಂಸ್ಥೆ ತನ್ನ ವಿದ್ಯಾರ್ಥಿಗಳಿಗೆ ಕೇವಲ ಪಾಠವನ್ನಷ್ಟೇ ಹೇಳಿದ್ದಲ್ಲ. ಬದಲಾಗಿ ಸಂಸ್ಕಾರ, ಸಂಸ್ಕೃತಿಗಳನ್ನೂ ತಿಳಿಸಿಕೊಟ್ಟಿದೆ. ನಮ್ಮ ಮೂಲವನ್ನು ಮರೆತು ವ್ಯವಹರಿಸಿದರೆ ಅದು ಶ್ಲಾಘನಾರ್ಹವೆನಿಸುವುದಿಲ್ಲ. ನಾವೆಷ್ಟೇ ಬೆಳೆದರೂ ನಮ್ಮತನವನ್ನು ಮರೆಯಬಾರದು. ದೇಶಕ್ಕೆ ನಾನೇನು ಮಾಡಬಹುದೆಂಬ ಕಲ್ಪನೆ ಸದಾ ಜಾಗೃತವಾಗಿರಬೇಕು ಎಂದು ಹೇಳಿದರು.


ಕಾರ್ಯಕ್ರಮದಲ್ಲಿ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕೋಶಾಧಿಕಾರಿ ರಾಜಶ್ರೀ ಎಸ್ ನಟ್ಟೋಜ, ಆಡಳಿತಾಧಿಕಾರಿ ಗಣೇಶ್ ಪ್ರಸಾದ್ ಎ, ಸಾರ್ವಜನಿಕ ಸಂಪರ್ಕಾಧಿಕಾರಿ ಹಾಗೂ ಅಂಬಿಕಾ ಮಹಾವಿದ್ಯಾಲಯದ ಪ್ರಾಚಾರ್ಯ ರಾಕೇಶ ಕುಮಾರ್ ಕಮ್ಮಜೆ, ಬಪ್ಪಳಿಗೆಯ ಅಂಬಿಕಾ ಪದವಿಪೂರ್ವ ವಿದ್ಯಾಲಯದ ಪ್ರಾಚಾರ್ಯೆ ಸುಚಿತ್ರಾ ಪ್ರಭು, ಉಪನ್ಯಾಸಕ, ಉಪನ್ಯಾಸಕೇತರ ವೃಂದ, ಹಿರಿಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಪುತ್ತೂರಿನಲ್ಲಿ ಸ್ವಂತ ಉದ್ದಿಮೆ ನಡೆಸುತ್ತಿರುವ ಹಿರಿಯ ವಿದ್ಯಾರ್ಥಿಗಳಾದ ಅಜಯ್ ರಾಮ್ ಹಾಗೂ ಚೈತ್ರಿಕಾ ದಂಪತಿಗಳನ್ನು ಮತ್ತು ಇತ್ತೀಚೆಗಷ್ಟೆ ನಡೆದ ಜನರಲ್ ನೀಟ್ ಫಾರ್ ಸರ್ಜಿಕಲ್ ಸೂಪರ್ ಸ್ಪೆಷಾಲಿಟಿ ಪರೀಕ್ಷೆಯಲ್ಲಿ ರಾಷ್ಟ್ರಮಟ್ಟದಲ್ಲಿ 277ನೆಯ ರ‍್ಯಾಂಕ್ ಪಡೆದ ಸಂಸ್ಥೆಯ ಹಿರಿಯ ವಿದ್ಯಾರ್ಥಿ ಡಾ.ನಿತಿನ್ ಬಂಗಾರಡ್ಕ ಅವರನ್ನು ಅಭಿನಂದಿಸಲಾಯಿತು.  ಹಿರಿಯ ವಿದ್ಯಾರ್ಥಿಗಳು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಹಂಚಿಕೊಂಡರು. 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments