Sunday, November 24, 2024
Homeಯಕ್ಷಗಾನಅನುಭವೀ ಕಲಾವಿದ - ಶ್ರೀ ಬಿ. ಮೋಹನ್ ಕುಮಾರ್ ಅಮ್ಮುಂಜೆ 

ಅನುಭವೀ ಕಲಾವಿದ – ಶ್ರೀ ಬಿ. ಮೋಹನ್ ಕುಮಾರ್ ಅಮ್ಮುಂಜೆ 

ಶ್ರೀ ಬಿ. ಮೋಹನ್ ಕುಮಾರ್ ಅಮ್ಮುಂಜೆ ಅವರು ಕಟೀಲು ಶ್ರೀ ದುರ್ಗಾಪರಮೇಶ್ವರೀ ದಶಾವತಾರ ಮಂಡಳಿಯ ಅನುಭವೀ ಕಲಾವಿದರು. 1991ರಿಂದ ತೊಡಗಿ ಕಳೆದ ಮೂವತ್ತೊಂದು ವರ್ಷಗಳಿಂದ ವೃತ್ತಿ ಕಲಾವಿದನಾಗಿ ಯಕ್ಷಗಾನ ಕ್ಷೇತ್ರದಲ್ಲಿ ವ್ಯವಸಾಯ ಮಾಡುತ್ತಿದ್ದಾರೆ. ಕೋಡಂಗಿ ವೇಷದಿಂದ ತೊಡಗಿ, ಸಾಧಕನಾಗಿ, ಹಂತ ಹಂತವಾಗಿ ಬೆಳೆಯುತ್ತಾ ಸಾಗಿ ಬಂದಿರುತ್ತಾರೆ.

ಮೇಳದಲ್ಲಿ ಇವರ ಸ್ಥಾನವು ಒಂದನೇ ಪುಂಡುವೇಷ. ಪುಂಡುವೇಷಧಾರಿಯಾದರೂ ಎಲ್ಲಾ ರೀತಿಯ ಪಾತ್ರಗಳನ್ನೂ ನಿರ್ವಹಿಸಬಲ್ಲ ಕಲಾವಿದರಿವರು. ಕಿರೀಟ ವೇಷ, ಕಸೆ ಸ್ತ್ರೀವೇಷ, ಹೆಣ್ಣು ಬಣ್ಣಕ್ಕೆ ಸಂಬಂಧಿಸಿದ ಪಾತ್ರಗಳನ್ನೂ ಮಾಡಿ ಸೈ ಎನಿಸಿಕೊಂಡಿದ್ದಾರೆ. ರಂಗನಾಯಕ ಕುರಿಯ ಶ್ರೀ ಗಣಪತಿ ಶಾಸ್ತ್ರಿಗಳ ಗರಡಿಯಲ್ಲಿ ಕಲಿತು ಬೆಳೆಯುತ್ತಾ ಸಾಗಿ ಬಂದ ಇವರು ಸದಾ ಅಧ್ಯಯನಶೀಲರು. 

ಶ್ರೀ ಬಿ. ಮೋಹನ್ ಕುಮಾರರ ಹುಟ್ಟೂರು ಬಂಟ್ವಾಳ ತಾಲೂಕು ಅಮ್ಮುಂಜೆ ಗ್ರಾಮದ ಬಟ್ಲಬೆಟ್ಟು. ದಿ| ಶ್ರೀ ವೆಂಕಪ್ಪ ಬೆಳ್ಚಡ ಮತ್ತು ಶ್ರೀಮತಿ ಸುಶೀಲ ದಂಪತಿಗಳ ಪುತ್ರನಾಗಿ 1973ನೇ ಇಸವಿ ಜುಲೈ 4 ರಂದು ಜನನ. ಶ್ರೀ ವೆಂಕಪ್ಪ ಬೆಳ್ಚಡರಿಗೆ ಐದು ಮಂದಿ ಮಕ್ಕಳು. (ಇಬ್ಬರು ಪುತ್ರಿಯರು, ಮೂವರು ಪುತ್ರರು) ಮೋಹನ ಕುಮಾರರ ಹಿರಿಯ ಅಕ್ಕ ಶ್ರೀಮತಿ ಶಾಂಭವಿ. ಗೃಹಣಿ. ಇವರ ಪತಿ ಕಲಾಯಿ ಶ್ರೀ ಶೀನ ಬೆಳ್ಚಡ ಅವರು ಯಕ್ಷಗಾನ ಕಲಾಸಕ್ತರು. ಅವರಿಗೆ ಕೆಲವು ಪ್ರಸಂಗಗಳ ಹಾಡುಗಳು ಕಂಠಪಾಠವಾಗಿತ್ತು. ಬಿಡುವಿನ ಸಮಯದಲ್ಲಿ ಯಕ್ಷಗಾನದ ಹಾಡುಗಳನ್ನು ಗುನುಗುನಿಸುವ ಹವ್ಯಾಸವೂ ಇತ್ತು.

ಕಿರಿಯ ಅಕ್ಕ ಶ್ರೀಮತಿ ಭವಾನಿ. ಇವರು ಗೃಹಣಿ. ಮೋಹನ ಕುಮಾರರ ದೊಡ್ಡ ಅಣ್ಣ ಶ್ರೀ ಸುರೇಶ ಬೆಳ್ಚಡ ಶುಭ ಬೀಡಿ ಕಂಪೆನಿಯಲ್ಲಿ ಉದ್ಯೋಗಿ. ಕಲಾಸಕ್ತರು. ಮಾತು ಕಡಿಮೆ ದುಡಿಮೆ ಹೆಚ್ಚು ಎಂಬಂತೆ ಇವರ ವ್ಯವಹಾರ. ಸದಾ ಮುಚ್ಚಿಕೊಳ್ಳುವ ಸ್ವಭಾವವಾದರೂ ಸಹೋದರಿಯರ ವಿವಾಹ, ಸಹೋದರರ ವಿದ್ಯಾಭ್ಯಾಸದ ಹೊಣೆಯನ್ನು ಹೊತ್ತು ತೆರೆದು ಕಾಣಿಸಿಕೊಂಡವರು. ಕಿರಿಯ ಅಣ್ಣ ಶ್ರೀ ಜನಾರ್ದನ ಅಮ್ಮುಂಜೆ ಬೆಂಜನಪದವು ಕೆನರಾ ಇಂಜಿನಿಯರಿಂಗ್ ಕಾಲೇಜಿನಲ್ಲಿ ಉದ್ಯೋಗಿ. ಇವರು ಯಕ್ಷಗಾನ ಸಂಘಟಕರಾಗಿ, ನಿರೂಪಕರಾಗಿ ಕಲಾಭಿಮಾನಿಗಳಿಗೆ ಪರಿಚಿತರು. ಮೋಹನ ಕುಮಾರರ ತಂದೆತಾಯಿಯರು ಯಕ್ಷಗಾನಾಸಕ್ತರು. ತಾಯಿಯವರಿಗೆ ಭಜನೆ ಹೇಳುವುದು, ಮಕ್ಕಳಿಗೆ ಪುರಾಣ ಕಥೆಗಳನ್ನು ಹೇಳುವ ಹವ್ಯಾಸವಿತ್ತು. ಹಗಲಿಡೀ ದುಡಿಮೆ ಮಾಡಿ ರಾತ್ರಿ ಮಕ್ಕಳನ್ನು ಆಟಕ್ಕೆ ಕರೆದೊಯ್ಯುತ್ತಿದ್ದರು.

ಮೋಹನಕುಮಾರರ ಮಾವ ಬಿಕರ್ನಕಟ್ಟೆ ಲಕ್ಷ್ಮಣ ಬೆಳ್ಚಡ. ಇವರೂ ಯಕ್ಷಗಾನ ಕಲೆಯನ್ನು ಅತ್ಯಂತ ಪ್ರೀತಿಸುತ್ತಿದ್ದರು. ಹಾಗಾಗಿ ಮೋಹನರಿಗೆ ಯಕ್ಷಗಾನ ಕಲಾಸಕ್ತಿಯು ಹಿರಿಯರಿಂದಲೇ ಬಂದ ಬಳುವಳಿಯಾಗಿತ್ತು. ಅಮ್ಮ ಶ್ರೀಮತಿ  ಸುಶೀಲ ಅವರು ರಾತ್ರಿ 9 ಘಂಟೆಯವರೆಗೂ ಬೀಡಿ ಕಟ್ಟಿ (ಮನೆಕೆಲಸಗಳನ್ನೂ ಮಾಡಿ) ಮಕ್ಕಳನ್ನು ಆಟಕ್ಕೆ ಕರೆದುಕೊಂಡು ಹೋಗುತ್ತಿದ್ದರು. ಪ್ರದರ್ಶನಗಳನ್ನು ನೋಡಿ ಮತ್ತು ಭಾವನಾದ ಶ್ರೀ ಕಲಾಯಿ ಶೀನ ಬೆಳ್ಚಡ ಅವರು ಹಾಡುತ್ತಿದ್ದ ಯಕ್ಷಗಾನ ಪದ್ಯಗಳನ್ನು ಕೇಳಿ ಮೋಹನ ಕುಮಾರರಿಗೆ ಕಲಾವಿದನಾಗಬೇಕೆಂಬ ಆಸೆಯೂ ಹುಟ್ಟಿತ್ತು. ಇವರ ಆಸಕ್ತಿಯನ್ನು ಗಮನಿಸಿದ ಅಕ್ಕ, ಭಾವ ಮತ್ತು ಅಣ್ಣ ಜನಾರ್ದನ ಅಮ್ಮುಂಜೆ ಯಕ್ಷಗಾನ ಹೆಜ್ಜೆಗಾರಿಕೆ ಕಲಿಯಲು ವ್ಯವಸ್ಥೆ ಮಾಡಿದ್ದರು. 

ಶ್ರೀ ಬಿ. ಮೋಹನ ಕುಮಾರರಿಗೆ ಹೆಜ್ಜೆಗಾರಿಕೆಯ ಪ್ರಾಥಮಿಕ ಪಾಠ ಮಾಡಿದವರು ಕಲಾಯಿಗುತ್ತು ಶ್ರೀ ಜಿ. ಶಂಕರ ಶೆಟ್ರು. ಅವರು ಮಂಗಳೂರಿನ ಕೆನರಾ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿದ್ದರು. ಅವರು ವಾರಕ್ಕೊಮ್ಮೆ ಕಲಾಯಿಗುತ್ತು ಮನೆಗೆ ಬರುತ್ತಿದ್ದರು. ಹವ್ಯಾಸಿ ಉತ್ತಮ ಕಲಾವಿದರಾಗಿದ್ದ ಶ್ರೀ ಜಿ.ಶಂಕರ ಶೆಟ್ಟರಿಂದ ಮೋಹನ್ ಅವರು ನಾಟ್ಯ ಕಲಿತರು. ಕಲಾಪೋಷಕರಾದ ಪಂಜಿಕಲ್ಲು ಶ್ರೀ ಶ್ಯಾಮರಾಯ ಆಚಾರ್ಯರು ಪ್ರತಿವರ್ಷವೂ ತಮ್ಮ ಮನೆಯಲ್ಲಿ ಒಂದು ತಿಂಗಳಿನ ತರಬೇತಿಯನ್ನು ನಡೆಸಿ ಯಕ್ಷಗಾನ ನಾಟ್ಯ ಮತ್ತು ಹಿಮ್ಮೇಳ ಕಲಿಯುವ ಅವಕಾಶ ಮಾಡಿ ಕೊಡುತ್ತಿದ್ದರು. ಇದು ಗುರುಕುಲ ಪದ್ಧತಿಯ ಕೇಂದ್ರವಾಗಿತ್ತು. ಅಲ್ಲಿ ಪಡ್ರೆ ಚಂದು ಅವರು ನಾಟ್ಯ ಗುರುಗಳಾಗಿದ್ದರು. ಬಲಿಪ ನಾರಾಯಣ ಭಾಗವತರು ಮತ್ತು ಪುಂಡಿಕಾಯಿ ಶ್ರೀ ಕೃಷ್ಣ ಭಟ್ಟರು ಹಿಮ್ಮೇಳ ಗುರುಗಳಾಗಿದ್ದರು. ಈ ಮೂವರ ಜತೆ ಒಂದು ತಿಂಗಳು ಕಳೆಯುವ ಭಾಗ್ಯವು ಮೋಹನ ಕುಮಾರರಿಗೆ ದೊರಕಿತ್ತು.

ತರಬೇತಿ ಕೇಂದ್ರದಲ್ಲಿ ಇದ್ದುಕೊಂಡು ಪಡ್ರೆ ಚಂದು ಅವರಿಂದ ನಾಟ್ಯಾಭ್ಯಾಸ. ತರಬೇತಿ ಮುಗಿದು ನಡೆದ ಪ್ರದರ್ಶನ, ಶ್ರೀಕೃಷ್ಣ ಸಂಧಾನ ಪ್ರಸಂಗದಲ್ಲಿ ಮೋಹನ್ ಕುಮಾರರು ಸಂಜಯನಾಗಿ ಅಭಿನಯಿಸಿದ್ದರು. (ಇದು ಎಂಟನೇ ಕ್ಲಾಸಿನ ವಿದ್ಯಾರ್ಥಿಯಾಗಿದ್ದಾಗ) ಮುಂದಿನ ವರ್ಷ ಪೊಳಲಿ ಯಕ್ಷಗಾನ ಸಂಘ ಮತ್ತು ಮಲ್ಲೂರಿನ ಯಕ್ಷಗಾನ ಸಂಘಗಳ ಪ್ರದರ್ಶನಗಳಲ್ಲಿ ವೇಷ ಮಾಡುವ ಅವಕಾಶವಾಗಿತ್ತು. ಎಸ್ಸೆಸ್ಸೆಲ್ಸಿ ಓದಿನ ಬಳಿಕ ಶ್ರೀ ಧರ್ಮಸ್ಥಳದ ಲಲಿತಕಲಾ ತರಬೇತಿ ಕೇಂದ್ರಕ್ಕೆ.

ಶ್ರೀ ಕೋಳ್ಯೂರು ರಾಮಚಂದ್ರ ರಾವ್ ಅವರಿಂದ ನಾಟ್ಯಾಭ್ಯಾಸ. ಆಗ ಬೈಪಾಡಿತ್ತಾಯ ದಂಪತಿಗಳು ಕೇಂದ್ರದ ಹಿಮ್ಮೇಳ ಗುರುಗಳಾಗಿದ್ದರು. ತರಬೇತಿ ಕೇಂದ್ರದಲ್ಲಿ ಪೆರ್ಮುದೆ ಜಯಪ್ರಕಾಶ್ ಶೆಟ್ಟಿ, ಪಡುಮಲೆ ನಾರಾಯಣ ಪಾಟಾಳಿ, ಪದ್ಮನಾಭ ಎಕ್ಕಾರು, ಪ್ರವೀಣ ದೊಡ್ಡತೋಟ ಸಹಪಾಠಿಗಳಾಗಿದ್ದರು. ತರಬೇತಿ ಕೇಂದ್ರದ ಪ್ರದರ್ಶನಗಳಲ್ಲಿ ಬಬ್ರುವಾಹನ ಮತ್ತು ಮನ್ಮಥನಾಗಿ ಅಭಿನಯಿಸುವ ಅವಕಾಶವು ಸಿಕ್ಕಿತ್ತು. ಬೈಪಾಡಿತ್ತಾಯ ದಂಪತಿಗಳು ಮೇಳಕ್ಕೆ  ಸೇರಲು ಸಲಹೆ ನೀಡಿದ್ದರು. ಅಣ್ಣಂದಿರೂ, ಭಾವಂದಿರೂ ಸೇರಿ ಕಟೀಲು ಮೇಳಕ್ಕೆ ಸೇರಿಸಿದ್ದರು. 

ಶ್ರೀ ಮೋಹನ್ ಕುಮಾರರು ತಿರುಗಾಟ  ಆರಂಭಿಸಿದ್ದು ಕಟೀಲು ಮೂರನೇ ಮೇಳದಲ್ಲಿ. (1991) ಕುರಿಯ ಶ್ರೀ ಗಣಪತಿ ಶಾಸ್ತ್ರಿ ಮತ್ತು ಶ್ರೀ  ಬಿ. ಪುರುಷೋತ್ತಮ ಪೂಂಜರ ಭಾಗವತಿಕೆ. ಮುಂದಿನ ವರ್ಷಗಳಲ್ಲಿ ಶ್ರೀ ಪೂಂಜರು ಕಟೀಲಿನ ಬೇರೊಂದು ತಂಡಕ್ಕೆ ಭಾಗವತರಾಗಿ ತೆರಳಿದ್ದರು. ಕಟೀಲು ಮೇಳದಲ್ಲಿ ಮೊಟ್ಟಮೊದಲು ಕೋಡಂಗಿಯಾಗಿ ವೇಷ. ಒಂದು ತಿಂಗಳ ಬಳಿಕ ಬಾಲಗೋಪಾಲನಾಗಿ ಅಭಿನಯಿಸುವ ಅವಕಾಶವು  ಸಿಕ್ಕಿತ್ತು. ಖ್ಯಾತ ಕಲಾವಿದ ಬೆಳ್ಳಾರೆ ಶ್ರೀ ಮಂಜುನಾಥ ಭಟ್ಟರು ಪೂರ್ವರಂಗದ ಎಲ್ಲಾ ಪಾತ್ರಗಳನ್ನೂ ಗಮನಿಸುವ ಗುಣವನ್ನು ಹೊಂದಿದ್ದರು. ಮೋಹನರ ಕುಣಿತ ಮತ್ತು ಅಭಿನಯವನ್ನು ನೋಡಿ, ಇವನನ್ನು ತಯಾರು ಮಾಡಬಹುದು ಎಂದು ಭಾಗವತರಲ್ಲಿ ಹೇಳಿದ್ದರಂತೆ. ಈ ವಿಚಾರವನ್ನು ಹಲವು ವರ್ಷಗಳ ಬಳಿಕ ಭಾಗವತರು ತಿಳಿಸಿದಾಗಲೇ ಮೋಹನ ಕುಮಾರರಿಗೆ ಗೊತ್ತಾದದ್ದು!

ಪ್ರಥಮ ವರುಷದ ತಿರುಗಾಟದ ಸಮಯದಲ್ಲಿ ಪಡ್ರೆ ಚಂದು ಅವರ ಒಡನಾಟವೂ ಸಿಕ್ಕಿತ್ತು. ನೆಡ್ಲೆ ನರಸಿಂಹ ಭಟ್ಟರೂ ಆಗಾಗ ಬಂದು ಹೋಗುತ್ತಿದ್ದರು. ಕಟೀಲು ಮೇಳದಲ್ಲಿ ಕುರಿಯ ಗಣಪತಿ ಶಾಸ್ತ್ರಿಗಳ ಭಾಗವತಿಕೆಯಡಿ ಹತ್ತೊಂಭತ್ತು ವರ್ಷಗಳ ಕಾಲ ವ್ಯವಸಾಯ. “ನಾನು ವೇಷಧಾರಿಯಾಗಿ ಕಾಣಿಸಿಕೊಳ್ಳಲು ಕುರಿಯ ಶ್ರೀ ಗಣಪತಿ ಶಾಸ್ತ್ರಿಗಳೇ ಕಾರಣರು. ಅವಕಾಶಗಳನ್ನಿತ್ತು ವೇಷಗಳನ್ನು ಮೆರೆಸಿದ್ದಾರೆ. ನನ್ನನ್ನು ತಿದ್ದಿ ತೀಡಿ ಕಲಾವಿದನನ್ನಾಗಿ ರೂಪಿಸಿದ್ದಾರೆ. ಅವರ ಜತೆಯಲ್ಲಿದ್ದೇ ಬೆಳೆದವನು ನಾನು. ಆಟ ಮುಗಿದು ದಿನಾ ಅವರ ಜತೆಗೆ ಮನೆಗೆ ಹೋಗುತಿದ್ದೆ. ಅವರ ಪತ್ನಿ ಶ್ರೀಮತಿ ಶ್ಯಾಮಲಾ ಗಣಪತಿ ಶಾಸ್ತ್ರಿಗಳು ನನ್ನನ್ನು ಮಗನಂತೆಯೇ ಕಂಡಿದ್ದಾರೆ. ಅವರ ಮನೆಯವರೆಲ್ಲಾ ನನ್ನನ್ನು ಅವರ ಮನೆಯ ಸದಸ್ಯನೆಂದೇ ಭಾವಿಸಿ ಪ್ರೀತಿಸಿದ್ದಾರೆ”. ಇದು ಅಮ್ಮುಂಜೆ ಮೋಹನರ ಮನದಾಳದ ಮಾತುಗಳು.

ಈ 19 ವರ್ಷಗಳಲ್ಲಿ ಕೋಡಂಗಿ, ಬಾಲಗೋಪಾಲ, ಮುಖ್ಯ ಸ್ತ್ರೀವೇಷ, ಪೀಠಿಕಾ ಸ್ತ್ರೀ ವೇಷಗಳನ್ನು ಮಾಡುತ್ತಾ ಬೆಳೆದರು. ಕುರಿಯ ಗಣಪತಿ ಶಾಸ್ತ್ರಿಗಳು ಎಲ್ಲಾ ರೀತಿಯ ವೇಷಗಳನ್ನು ಮಾಡಿಸಿ ಧೈರ್ಯ ತುಂಬಿದ್ದರು. ಪುಂಡು ವೇಷಗಳಲ್ಲದೆ, ಕಿರೀಟ ವೇಷ, ಕಸೆ ಸ್ತ್ರೀವೇಷ, ಹೆಣ್ಣು ಬಣ್ಣದ ವೇಷಗಳನ್ನೂ ಮಾಡಲು ಅವಕಾಶವಾಗಿತ್ತು. ಮೂರನೇ ಮೇಳದಲ್ಲಿ ಹೆಸರಾಂತ ಕಲಾವಿದರ ಒಡನಾಟವು ಇವರಿಗೆ ದೊರಕಿತ್ತು. ಅರ್ಥಗಾರಿಕೆ ಬಗೆಗೆ ಶ್ರೀ ಪೂಂಜರ  ಮತ್ತು ಬೆಳ್ಳಾರೆ ಮಂಜುನಾಥ ಭಟ್ಟರ ನಿರ್ದೇಶನವು ದೊರೆತಿತ್ತು. ಇವರಿಗೆ ಗುಂಡಿಮಜಲು ಶ್ರೀ ಗೋಪಾಲ ಭಟ್ಟರ ವೇಷಗಳೆಂದರೆ ಅಚ್ಚುಮೆಚ್ಚು. ಅವರ ಪಾತ್ರ ನಿರ್ವಹಣೆಯನ್ನು ನೋಡುತ್ತಾ ಬೆಳೆದವರು. ಅವರ ಜತೆಯೂ ವೇಷ ಮಾಡುವ ಭಾಗ್ಯವು ಸಿಕ್ಕಿತ್ತು. ಇವರಿಬ್ಬರೂ ಚಂಡಮುಂಡರು, ಚಂದ ಪ್ರಚಂಡರು, ಹುಂಡ ಪುಂಡರು ಮೊದಲಾದ ಜತೆ ವೇಷಗಳಲ್ಲಿ ಕಾಣಿಸಿಕೊಂಡಿದ್ದರು.

ಮೂರನೇ ಮೇಳದಲ್ಲಿ ಪದ್ಯಾಣ ಶಂಕರನಾರಾಯಣ ಭಟ್, ಅಡೂರು ಗಣೇಶ್ ರಾವ್, ಮರಿಯಯ್ಯ ಬಲ್ಲಾಳ್, ಅಡೂರು ಲಕ್ಷ್ಮೀನಾರಾಯಣ ರಾವ್, ಶೇಷಪ್ಪ ನಾಯ್ಕ, ಗೋಪಾಲಕೃಷ್ಣ ಮಯ್ಯ, ಶ್ರೀನಿವಾಸ ಬಳ್ಳಮಂಜ, ಗಿರೀಶ್ ರೈ, ಕೇದಗಡಿ ಗುಡ್ಡಪ್ಪ ಗೌಡ, ಗೇರುಕಟ್ಟೆ ಗಂಗಯ್ಯ ಶೆಟ್ಟಿ, ಬೆಳ್ಳಾರೆ ಮಂಜುನಾಥ ಭಟ್, ಪುತ್ತೂರು ಕೃಷ್ಣ ಭಟ್, ಮುದುಕುಂಜ ವಾಸುದೇವ ಪ್ರಭು, ಸಂಜೀವ ಚೌಟ, ಪುಂಡರೀಕಾಕ್ಷ ಉಪಾಧ್ಯಾಯ, ಜನಾರ್ದನ ಜೋಗಿ, ಮುಂಡ್ಕೂರು ಜಯರಾಮ ಶೆಟ್ಟಿ, ದಾಸನಡ್ಕ ರಾಮ ಕುಲಾಲ್, ಸೋಣಂದೂರು ಶ್ರೀಧರ ಶೆಟ್ಟಿ, ಕೈರಂಗಳ ಕೃಷ್ಣ ಮೂಲ್ಯ, ಗುಂಡಿಮಜಲು ಗೋಪಾಲ ಭಟ್, ಕೃಷ್ಣಮೂರ್ತಿ ಭಟ್, ಕಲ್ಮಡ್ಕ ಸುಬ್ಬಣ್ಣ ಭಟ್, ಸಂಜೀವ ಬಳೆಗಾರ, ಕಲ್ಲಗುಡ್ಡೆ ಲಕ್ಷ್ಮಣ, ನಗ್ರಿ ಮಹಾಬಲ ರೈ, ಸುರೇಶ್ ಕುಪ್ಪೆಪದವು, ಜಗದಾಭಿರಾಮ, ರಾಧಾಕೃಷ್ಣ ಕಲ್ಲುಗುಂಡಿ, ವೆಂಕಟೇಶ್ ಕಲ್ಲುಗುಂಡಿ ಮೊದಲಾದ ಕಲಾವಿದರ ಒಡನಾಟವು ದೊರಕಿತ್ತು.

ಈ ಹತ್ತೊಂಭತ್ತು ವರ್ಷಗಳಲ್ಲಿ ಪುಂಡುವೇಷ ಮತ್ತು ಕಿರೀಟವೇಷಕ್ಕೆ ಸಂಬಂಧಿಸಿದ ಹೆಚ್ಚಿನ ಎಲ್ಲಾ ಪಾತ್ರಗಳನ್ನೂ ನಿರ್ವಹಿಸಲು ಅವಕಾಶವಾಗಿತ್ತು. ಎರಡನೇ ಪುಂಡುವೇಷಧಾರಿಯಾದರೂ 1ನೇ ಪುಂಡುವೇಷಗಳನ್ನು ಮಾಡುವ ಅವಕಾಶ ಸಿಕ್ಕಿತ್ತು. ಬಳಿಕ 5ನೇ ಮೇಳ ಆರಂಭವಾದಾಗ ಸದ್ರಿ ಮೇಳದಲ್ಲಿ ಶ್ರೀ ಪಟ್ಲ ಸತೀಶ್ ಶೆಟ್ರ ಜತೆ 7 ವರ್ಷಗಳ ವ್ಯವಸಾಯ ಮಾಡಿದ್ದರು. ಪಟ್ಲ ಸತೀಶ್ ಶೆಟ್ರ ಹಾಡಿಗೆ ಇವರ ವೇಷಗಳೂ ರಂಜಿಸಿದ್ದುವು. 5ನೇ ಮೇಳಕ್ಕೆ ಇವರು ಸೇರಿದ್ದು 1ನೇ ಪುಂಡುವೇಷಧಾರಿಯಾಗಿ. ಅಲ್ಲಿ ಅಮ್ಮುಂಜೆ ಮೋಹನ್ ಮತ್ತು ಬೆಳ್ಳಿಪ್ಪಾಡಿ ಮೋಹನ ಅವರ ಚಂಡ ಮುಂಡರ ಜೋಡಿಯು ಯಶಸ್ವಿಯಾಗಿತ್ತು. 

ಶ್ರೀ ಬಿ. ಮೋಹನ್ ಕುಮಾರ್ ಅಮ್ಮುಂಜೆಯವರು ಯಕ್ಷಗಾನ ಕಲಾವಿದನಾಗಿ 25 ತಿರುಗಾಟಗಳನ್ನು ಪೂರೈಸಿದಾಗ ಆ ಪ್ರಯುಕ್ತ “ಅಮ್ಮುಂಜೆ ರಜತ ಪರ್ವ” ಕಾರ್ಯಕ್ರಮ ಕಟೀಲು ಶ್ರೀ ದುರ್ಗಾಪರಮೇಶ್ವರೀ ಪದವಿ ಪೂರ್ವ ಕಾಲೇಜಿನ ಬಯಲು ರಂಗಮಂದಿರದಲ್ಲಿ ನಡೆದಿತ್ತು. ಶ್ರೀಹರಿನಾರಾಯಣದಾಸ ಆಸ್ರಣ್ಣರು ಅಮ್ಮುಂಜೆ ರಜತಪರ್ವ ಸಮಿತಿಯ ಗೌರವಾಧ್ಯಕ್ಷರಾಗಿದ್ದರು. ಶ್ರೀ ಕ್ಷೇತ್ರ ಕಟೀಲಿನ ಆಸ್ರಣ್ಣ ಬಂಧುಗಳ, ಕಟೀಲು ಮೇಳದ ಸಂಚಾಲಕ ಶ್ರೀ ಕಲ್ಲಾಡಿ ದೇವಿಪ್ರಸಾದ ಶೆಟ್ರು, ಊರ ಪರವೂರ ಕಲಾಭಿಮಾನಿಗಳ ಸಹಕಾರದಿಂದ ಈ ರಜತ ಸಂಭ್ರಮ ಕಾರ್ಯಕ್ರಮವು ನಡೆದಿತ್ತು. 2016 ರ ಜೂನ್ 25ರ ಮಧ್ಯಾಹ್ನ 1ರಿಂದ ಆರಂಭವಾಗಿ ಮರುದಿನ ಮಧ್ಯಾಹ್ನದ ವರೆಗೆ ಈ ಕಾರ್ಯಕ್ರಮವು ವಿವಿಧ ಕಾರ್ಯಕ್ರಮಗಳೊಂದಿಗೆ ನಡೆದಿತ್ತು. ಈ ಸಂದರ್ಭದಲ್ಲಿ  ಶ್ರೀ ಅಮ್ಮುಂಜೆ ಮೋಹನ್ ಕುಮಾರರು ತಮ್ಮನ್ನು ರಂಗದಲ್ಲಿ ಬೆಳೆಸಿದ ಹಿರಿಯ ಕಲಾವಿದರನ್ನು, ತಮ್ಮ ಕಲಾ ಬದುಕಿನ ಶಿಲ್ಪಿಗಳನ್ನು, ವೈಯುಕ್ತಿಕ ಬದುಕಿಗೆ ಬೆಳಕಾದ ಮಹನೀಯರುಗಳನ್ನು, ಕಲಾ ಬದುಕಿನುದ್ದಕ್ಕೂ ಪ್ರೋತ್ಸಾಹಿಸಿದ ಕೌಟುಂಬಿಕ ಬಂಧುಗಳನ್ನು  ಗೌರವಿಸಿದ್ದರು. ಅಮ್ಮುಂಜೆ ರಜತಪರ್ವ ಸಮಿತಿಯು ‘ಅಮ್ಮುಂಜೆ ರಜತಾಭಿನಂದನೆ’ ಕಾರ್ಯಕ್ರಮದಡಿಯಲ್ಲಿ ಶ್ರೀ ಮೋಹನ ಕುಮಾರರನ್ನು ಸನ್ಮಾನಿಸಿ ‘ಯಕ್ಷದ್ಯುಮಣಿ’ ಎಂಬ ಬಿರುದನ್ನು ನೀಡಿ ಗೌರವಿಸಿತ್ತು. ಶ್ರೀ ಜನಾರ್ದನ ಅಮ್ಮುಂಜೆ ಇವರ ಸಂಚಾಲಕತ್ವದಲ್ಲಿ ನಡೆದ ಈ ಕಾರ್ಯಕ್ರಮಕ್ಕೆ ಅಮ್ಮುಂಜೆ ಅಭಿಮಾನಿಗಳ ಪರಿಪೂರ್ಣ ಶ್ರಮವಿತ್ತು. 

26 ವರ್ಷಗಳ ಕಾಲ ಕಟೀಲು ಮೇಳದಲ್ಲಿ ತಿರುಗಾಟ. ಬಳಿಕ ಎರಡು ವರ್ಷಗಳ ಕಾಲ ಎಡನೀರು ಮೇಳದಲ್ಲಿ ವ್ಯವಸಾಯ ಮಾಡಿದ್ದರು. ಈ ಸಂದರ್ಭದಲ್ಲಿ ಶ್ರೀಮಡೆದನೀರು ಮಠದ ಪೀಠಾಧಿಪತಿಗಳಾಗಿದ್ದ ಶ್ರೀ ಶ್ರೀ ಶ್ರೀ ಕೇಶವಾನಂದ ಭಾರತೀ ಸ್ವಾಮಿಗಳ ಮತ್ತು ಪ್ರಸ್ತುತ ಪೀಠಾಧಿಪತಿಗಳಾಗಿರುವ ಶ್ರೀ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮಿಗಳ ಆಶೀರ್ವಾದ ಮತ್ತು ಸಹಕಾರವು ದೊರೆತಿತ್ತು. ಶ್ರೀ ಸ್ವಾಮೀಜಿಯವರು ಅಮ್ಮುಂಜೆ ಮೋಹನ ಕುಮಾರರು ನೂತನವಾಗಿ ನಿರ್ಮಿಸಿದ ಮನೆಯ ಪ್ರವೇಶೋತ್ಸವಕ್ಕೆ ಬಂದು ಮಂತ್ರಾಕ್ಷತೆ ನೀಡಿ ಆಶೀರ್ವದಿಸಿದ್ದರು. ಎಡನೀರು ಮೇಳದಲ್ಲಿ ಶ್ರೀ ದಿನೇಶ ಅಮ್ಮಣ್ಣಾಯರ ಭಾಗವತಿಕೆಯಡಿ ವೇಷ ಮಾಡುವ ಭಾಗ್ಯವು ಸಿಕ್ಕಿತ್ತ್ತು. ದೇಲಂತಮಜಲು ಸುಬ್ರಹ್ಮಣ್ಯ ಭಟ್, ಪುತ್ತೂರು ಶ್ರೀಧರ ಭಂಡಾರಿ ಮೊದಲಾದ ಹಿರಿಯ ಕಲಾವಿದರ ಸಹಕಾರವೂ ದೊರೆತಿತ್ತು. ಬಳಿಕ ಒಂದು ವರ್ಷ ಶ್ರೀ ವಿನೋದ್ ಕುಮಾರ್ ಬಜಪೆ ಅವರ ಬಪ್ಪನಾಡು ಮೇಳದಲ್ಲಿ ವ್ಯವಸಾಯ. ಇಲ್ಲಿ ತುಳು ಪ್ರಸಂಗಗಳಲ್ಲೂ ಪಾತ್ರಗಳನ್ನು ನಿರ್ವಹಿಸಿದ್ದರು. ಕಳೆದ 2 ವರ್ಷಗಳಿಂದ ಮತ್ತೆ ಕಟೀಲು ಮೇಳದಲ್ಲಿ ವ್ಯವಸಾಯ ಮಾಡುತ್ತಿದ್ದಾರೆ.

ಶ್ರೀ ಬಿ. ಮೋಹನ್ ಕುಮಾರರು ಐದು ಬಾರಿ ವಿದೇಶಯಾತ್ರೆ ಕೈಗೊಂಡಿರುತ್ತಾರೆ. ಕಟೀಲು ಮೇಳದ ತಂಡದಲ್ಲಿ ಸಿಂಗಾಪುರದಲ್ಲಿ ನಡೆದ ಪ್ರದರ್ಶನಗಳಲ್ಲಿ ಭಾಗವಹಿಸಿದ್ದಾರೆ. ಮಸ್ಕತ್, ಬಹರೈನ್, (ದೀಪಕ್ ರಾವ್ ಪೇಜಾವರ ಅವರ ಅಪೇಕ್ಷೆಯಂತೆ) ದುಬೈ (ಯಕ್ಷಮಿತ್ರರು ದುಬೈ) ಮತ್ತು ಅಬುದಾಭಿಯಲ್ಲಿ ನಡೆದ ಪ್ರದರ್ಶನಗಳಲ್ಲೂ ಭಾಗಿಯಾಗಿದ್ದಾರೆ. ಇವರು ವೇಷಭೂಷಣ ತಯಾರಿಕೆಯನ್ನೂ ಬಲ್ಲವರು. ಹತ್ತು ವರ್ಷಗಳ ಕಾಲ ಕಟೀಲು ಮೇಳಗಳ ವೇಷಭೂಷಣ ತಯಾರಿಸುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದರು. ಮಳೆಗಾಲದಲ್ಲಿ ನಿಡ್ಲೆ ಗೋವಿಂದ ಭಟ್ ಸಂಚಾಲಕತ್ವದ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿಯ ಪ್ರದರ್ಶನಗಳಲ್ಲಿ 15 ವರ್ಷ ವೇಷ ಮಾಡಿದ್ದರು. ಪುತ್ತೂರು ಶ್ರೀಧರ ಭಂಡಾರಿಗಳ ನೇತೃತ್ವದ ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಮಂಡಳಿಯಲ್ಲಿ ಒಂದು ತಿಂಗಳು ಭಾಗವಹಿಸಿದ್ದರು.

ಶ್ರೀಮತಿ ವಿದ್ಯಾ ಕೋಳ್ಯೂರು ನೇತೃತ್ವದ ‘ಯಕ್ಷ ಮಂಜೂಷ’ ತಂಡದ ಸದಸ್ಯನಾಗಿ ಅಯೋಧ್ಯೆ ಮತ್ತು ಕಾಶಿಯಲ್ಲಿ ಹಿಂದಿ ಭಾಷೆಯಲ್ಲಿ ನಡೆದ ನಾಲ್ಕು ಪ್ರದರ್ಶನಗಳಲ್ಲಿ ವೇಷ ಮಾಡಿದ್ದರು. ಇಲ್ಲಿ ಪಂಚವಟಿ ಪ್ರಸಂಗದಲ್ಲಿ ಲಕ್ಷ್ಮಣನಾಗಿ ಅಭಿನಯಿಸಿದ್ದರು. ಯಕ್ಷಗಾನ ಸಂಘಟಕ ಶ್ರೀ ಎಚ್.ಬಿ.ಎಲ್ ರಾವ್ ಅವರ ಮುಂಬಯಿ ಪದವೀಧರ ಯಕ್ಷಗಾನ ಸಂಸ್ಥೆಯ ಪ್ರದರ್ಶನಗಳಲ್ಲೂ ಪಾತ್ರಗಳನ್ನು ನಿರ್ವಹಿಸಿದ್ದರು. ಇವರಿಗೆ ಯಕ್ಷಗಾನವೇ ಬದುಕು. ಕಲಾವಿದನಾಗಿ ದುಡಿದೇ ಜೀವನ ಮಾಡುವ ಅನಿವಾರ್ಯತೆ. ಈ ನಿಟ್ಟಿನಲ್ಲಿ ಪತ್ನಿಯ ಪೂರ್ಣ ಸಹಕಾರ ದೊರೆತಿತ್ತು. ಮನೆವಾರ್ತೆಯ ಸಂಪೂರ್ಣ ಹೊಣೆಯನ್ನು ಹೊತ್ತು ಪತಿಗೆ ಪ್ರೋತ್ಸಾಹವನ್ನು ನೀಡುತ್ತಾ ಬಂದಿರುತ್ತಾರೆ.

“ಅಮ್ಮುಂಜೆ ರಜತ ಪರ್ವ” ಸಂದರ್ಭದಲ್ಲಿ ಮೇಳಗಳ ಸಂಚಾಲಕರಾದ ಶ್ರೀ ಕಿಶನ್ ಕುಮಾರ್ ಹೆಗ್ಡೆಯವರು ಭಾಷಣ ಮಾಡುತ್ತಾ ಉತ್ತಮವಾದ ಸಲಹೆಯೊಂದನ್ನು ಅಮ್ಮುಂಜೆ ಮೋಹನ್ ಕುಮಾರರಿಗೆ ನೀಡಿದ್ದರು. “ನೀವು ಕಲಿತು ಕಲಾವಿದರಾಗಿ ಇಪ್ಪತ್ತೈದು ವರ್ಷಗಳ ಅನುಭವವನ್ನು ಹೊಂದಿದಿರಿ. ನೀವು ಕಲಿತ ವಿದ್ಯೆಯನ್ನು ಕಲಿಕಾಸಕ್ತರಿಗೆ ಹೇಳಿಕೊಡಿ” ಎಂಬ ಮಾತನ್ನು ಕಿಶನ್ ಹೆಗ್ಡೆಯವರು ಹೇಳಿದ್ದರು. ಈ ಸಲಹೆಯನ್ನು ಸ್ವೀಕರಿಸಿದ ಇವರು ಪ್ರಸ್ತುತ ನಾಲ್ಕು ಕಡೆ ತರಬೇತಿ ನೀಡುತ್ತಿದ್ದಾರೆ. ಶ್ರೀ ರಾಮಕೃಷ್ಣ ತಪೋವನದಲ್ಲಿ (60 ವಿದ್ಯಾರ್ಥಿಗಳು), ಬೊಂಡಾಲ ಶ್ರೀ ಮಹಾಗಣಪತಿ ದೇವಸ್ಥಾನ (25 ವಿದ್ಯಾರ್ಥಿಗಳು), ಓಂ ಜನಹಿತಾಯ ಆಂಗ್ಲಮಾಧ್ಯಮ ಶಾಲೆ ಗುಡ್ಡೆಯಂಗಡಿ (100 ವಿದ್ಯಾರ್ಥಿಗಳು) ಮತ್ತು ಶ್ರೀರಾಮ ವಿದ್ಯಾ ಕೇಂದ್ರ ಕಲ್ಲಡ್ಕ (45 ವಿದ್ಯಾರ್ಥಿಗಳು)ದಲ್ಲಿ ಕಲಿಕಾಸಕ್ತರಿಗೆ ನಾಟ್ಯ ಹೇಳಿ ಕೊಡುತ್ತಿದ್ದು, ಇನ್ನೂ ಹೆಚ್ಚಿನ ಕಡೆಗಳಲ್ಲಿ ತರಬೇತಿ ನೀಡುವ ಯೋಚನೆಯೂ ಇದೆ.

ಇವರು ಕಲಾಬದುಕಿನಲ್ಲಿಯೂ ಸಾಂಸಾರಿಕವಾಗಿಯೂ ತೃಪ್ತರು. ಶ್ರೀ ಬಿ. ಮೋಹನ ಕುಮಾರ್ ಅಮ್ಮುಂಜೆಅವರ ಪತ್ನಿ ಶ್ರೀಮತಿ ಶಶಿಕಲಾ (2003ರಲ್ಲಿ ವಿವಾಹ) ಇವರು ಗೃಹಣಿ. ಶ್ರೀ ಮೋಹನ ಕುಮಾರ್, ಶಶಿಕಲಾ ದಂಪತಿಗಳಿಗೆ ಇಬ್ಬರು ಮಕ್ಕಳು. ಪುತ್ರ ಮಾ| ವೈಶಾಖ್ ಪಿಯುಸಿ ಶಿಕ್ಷಣ ಪೂರೈಸಿ ಮಂಗಳೂರು ಐಟಿಐ ಕಾಲೇಜಿನಲ್ಲಿ ಎಸಿ ಮೆಕ್ಯಾನಿಕ್ ಕಲಿಯುತ್ತಿದ್ದಾರೆ. ಪುತ್ರಿ ಕು| ವೈಷ್ಣವಿ ಓಂ ಜನ ಹಿತಾಯ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ. ಎಂಟನೇ ಕ್ಲಾಸಿನಲ್ಲಿ ಓದುತ್ತಿದ್ದಾಳೆ. ಮಕ್ಕಳಿಗೆ ಉಜ್ವಲವಾದ ಭವಿಷ್ಯವು ಸಿದ್ಧಿಸಲಿ. ಶ್ರೀ ಮೋಹನ್ ಕುಮಾರ್ ಅಮ್ಮುಂಜೆ ಅವರಿಂದ ಕಲಾ ಸೇವೆಯು ನಿರಂತರವಾಗಿ ನಡೆಯುತ್ತಿರಲಿ. ಶ್ರೀ ದೇವರು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂಬ ಹಾರೈಕೆಗಳು. 

ಶ್ರೀ ಬಿ. ಮೋಹನ್ ಕುಮಾರ್ ಅಮ್ಮುಂಜೆ, ಮೊಬೈಲ್: 9980257881

ಲೇಖಕ: ಶ್ರೀ ರವಿಶಂಕರ್ ವಳಕ್ಕುಂಜ

ಲೇಖಕ: ಶ್ರೀ ರವಿಶಂಕರ್ ವಳಕ್ಕುಂಜ 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments