ಕೊಣಾಜೆ: ‘ಯಕ್ಷಗಾನ ಸಮೂಹ ಕಲೆಯಾಗಿ, ಆರಾಧನೆ ಕಲೆಯಾಗಿ ಜಗತ್ತಿಗೆ ವಿಸ್ಮಯ ಹುಟ್ಟಿಸುವ ಶ್ರೇಷ್ಠ ಕಲಾ ಮಾಧ್ಯಮ. ಯಕ್ಷಗಾನ ಇರುವವರೆಗೂ ಕನ್ನಡ ಭಾಷೆ, ಸಂಸ್ಕೃತಿಗೆ ಯಾವುದೇ ಅಪಾಯವಿಲ್ಲ ‘ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ. ಜಿ.ಎಲ್.ಹೆಗಡೆ ಕುಮಟಾ ಅಭಿಪ್ರಾಯಪಟ್ಟರು.
ಮಂಗಳೂರು ವಿಶ್ವವಿದ್ಯಾಲಯದ ಮಂಗಳಾ ಸಭಾಂಗಣದಲ್ಲಿ ಅಂಬುರುಹ ಯಕ್ಷ ಸದನ ಪ್ರತಿಷ್ಠಾನ ಹಾಗೂ ಮಂಗಳೂರು ವಿಶ್ವವಿದ್ಯಾನಿಲಯದ ಡಾ. ಪಿ ದಯಾನಂದ ಪೈ ಮತ್ತು ಪಿ.ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರಗಳ ಸಹಯೋಗದೊಂದಿಗೆ ಶನಿವಾರ ನಡೆದ ಬೊಟ್ಟಿಕೆರೆ ಪುರುಷೋತ್ತಮ ಪೂಂಜ ಅವರ ಸಂಸ್ಮರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಪೂಂಜರಿಗೆ ಭಾಗವತನಿಗೆ ಇರಬೇಕಾದ ಸಾಹಿತ್ಯ ಪರಿಜ್ಞಾನ ಮತ್ತು ಹಿಡಿತ ಅದ್ಭುತವಾಗಿತ್ತು. ಅವರು ಶಿಷ್ಯರ ಮೂಲಕ ಯಕ್ಷ ಪರಂಪರೆಯನ್ನು ಮುಂದುವರಿಸಿದ್ದಾರೆ’ ಎಂದರು. ಇದೇ ಸಂದರ್ಭದಲ್ಲಿ ಪೂಂಜರ ಸ್ಮರಣಾರ್ಥ ಅವರ ಶಿಷ್ಯರು ಮತ್ತು ಅಭಿಮಾನಿಗಳು ನೂತನವಾಗಿ ಸ್ಥಾಪಿಸಿದ ಅಂಬುರುಹ ಯಕ್ಷ ಸದನ ಪ್ರತಿಷ್ಠಾನ ಬೊಟ್ಟಿಕೆರೆ ಇದರ ಲೋಗೋವನ್ನು ಅನಾವರಣಗೊಳಿಸಲಾಯಿತು.
ಯಕ್ಷಗಾನದ ದಶಾವತಾರಿ:
ಹಿರಿಯ ಅರ್ಥಧಾರಿ ಮತ್ತು ವಿದ್ವಾಂಸ ಡಾ. ಎಂ. ಪ್ರಭಾಕರ ಜೋಶಿ ಮಾತನಾಡಿ, ಪುರುಷೋತ್ತಮ ಪೂಂಜರ ಸರ್ವಾಂಗ ಪ್ರತಿಭೆಗೆ ಮಾರುಹೋದ ರಸಿಕ ನಾನು. ಅವರು ಯಕ್ಷಗಾನದ ದಶಾವತಾರಿ, ಶ್ರೇಷ್ಠ ಯಕ್ಷ ಕವಿಗಳಲ್ಲಿ ಒಬ್ಬರು, ಅಸಾಧಾರಣ ಕಲಾವಿದ ಮತ್ತು ಯಕ್ಷಗಾನ ಗುರು. ಯಕ್ಷಗಾನದ ತುಳು ಪ್ರಸಂಗಗಳಲ್ಲೂ ಗಾಂಭೀರ್ಯತೆ ಉಳಿಸಿಕೊಂಡ ವಿರಳರಲ್ಲಿ ಒಬ್ಬರು’ ಎಂದು ಶ್ಲಾಘಿಸಿದರು.
ಸಂಸ್ಮರಣಾ ಭಾಷಣ ಮಾಡಿದ ಕಲಾವಿದ ವಿಶ್ವೇಶ್ವರ ಭಟ್ ಸುಣ್ಣಂಬಳ ಅವರು ‘ಪೂಂಜರು ಅಪಾರ ಜ್ಞಾನಿ. ಕಲಾವಿದನ ಸಾಮರ್ಥ್ಯಕ್ಕೆ ಅನುಗುಣವಾಗಿ ಅವರ ಹಾಡು, ಅರ್ಥಗಾರಿಕೆ ಇರುತ್ತಿತ್ತು. ಹೊಸ ಪದ್ಯಗಳನ್ನು ಹೊಸೆದು ಹಾಡುತ್ತಿದ್ದರು. ಅವರ ಸಾಹಿತ್ಯಪೂರ್ಣ ಪ್ರಸಂಗಗಳು ಹಿರಿಯ ಭಾಗವತರ ಮೆಚ್ಚುಗೆ ಗಳಿಸಿಕೊಂಡಿವೆ’ ಎಂದು ಸ್ಮರಿಸಿದರು.
‘ಯಕ್ಷ ಪುರುಷೋತ್ತಮ’ ಬಿಡುಗಡೆ – ಸಮ್ಮಾನ:
ಬೊಟ್ಟಿಕೆರೆ ಪುರುಷೋತ್ತಮ ಪೂಂಜರ ಸ್ಮೃತಿ ಸಂಪುಟ ‘ಯಕ್ಷ ಪುರುಷೋತ್ತಮ’ ಕೃತಿಯನ್ನು ಈ ಸಂದರ್ಭದಲ್ಲಿ ಬಿಡುಗಡೆಗೊಳಿಸಲಾಯ್ತು. ಗ್ರಂಥದ ಸಂಪಾದಕರಾಗಿ ಕಾರ್ಯನಿರ್ವಹಿಸಿದ ಯಕ್ಷಗಾನ ವಿದ್ವಾಂಸ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ, ಮತ್ತು ಪ್ರಕಾಶಕ ಅಜೆಕಾರು ಕಲಾಭಿಮಾನಿ ಬಳಗದ ಅಧ್ಯಕ್ಷ ಅಜೆಕಾರು ಬಾಲಕೃಷ್ಣ ಶೆಟ್ಟಿ, ಅವರನ್ನು ಸನ್ಮಾನಿಸಲಾಯಿತು.
ಗ್ರಂಥದ ಬಗ್ಗೆ ಮಾತನಾಡಿದ ಸಂಪಾದಕ ಭಾಸ್ಕರ ರೈ ಕುಕ್ಕುವಳ್ಳಿ ‘ಪುರುಷೋತ್ತಮ ಪೂಂಜಾರ ಸಂಸ್ಮರಣಾ ಗ್ರಂಥ ಬರಿಯ ವ್ಯಕ್ತಿ ಪೂಜೆಯಲ್ಲ; ಯಕ್ಷ ಕಲೆಯ ಬಗ್ಗೆ ಆಸಕ್ತರು ಓದಲು ಒಂದು ಆಕರ ಗ್ರಂಥ. ಇದರಲ್ಲಿ ಪೂಂಜ ಅವರೇ ಬರೆದ ಲೇಖನಗಳೂ ಸೇರಿವೆ. ಸಾರ್ವಜನಿಕ ಸಮ್ಮಾನದೊಂದಿಗೆ ಅಭಿನಂದನಾ ಗ್ರಂಥವಾಗಿ ಪೂಂಜರಿಗೆ ಸಮರ್ಪಣೆಯಾಗಬೇಕಾಗಿದ್ದ ಕೃತಿ ಸಂಸ್ಮರಣಾ ಗ್ರಂಥವಾಗಿರುವುದು ವಿಪರ್ಯಾಸ’ ಎಂದರು. ಅಜೆಕಾರು ಬಾಲಕೃಷ್ಣ ಶೆಟ್ಟಿ, ಗ್ರಂಥವನ್ನು ಸಿದ್ಧಪಡಿಸುವಲ್ಲಿ ಸಹಕರಿಸಿದ ಪೂಂಜರ ಕುಟುಂಬ, ಅಭಿಮಾನಿಗಳು ಮತ್ತು ಶಿಷ್ಯರನ್ನು ನೆನೆದರು. ಸೆ.17 ರಂದು ಮುಂಬಯಿಯಲ್ಲಿ ವಿಧ್ಯುಕ್ತವಾಗಿ ಗ್ರಂಥ ಅನಾವರಣಗೊಳಿಸುವುದಾಗಿ ಅವರು ತಿಳಿಸಿದರು.
ಇದೇ ಸಂದರ್ಭದಲ್ಲಿ ಮಂಗಳೂರು ವಿವಿಯ ಪ್ರಸಾರಾಂಗ, ಕಲಾಗಂಗೋತ್ರಿ ಹಾಗೂ ಗೋಪಾಲಕೃಷ್ಣ ಯಕ್ಷಗಾನ ಸಂಘದ ಪ್ರತಿನಿಧಿಗಳಾದ ಡಾ. ಧನಂಜಯ ಕುಂಬ್ಳೆ, ಕೃಷ್ಣಮೂಲ್ಯ ಕೈರಂಗಳ, ಸದಾಶಿವ ಮಾಸ್ಟರ್ ಹಾಗೂ ʼಆಕೃತಿ ಪ್ರಕಾಶನʼದ ಕಲ್ಲೂರು ನಾಗೇಶ್, ಕಟೀಲು ಆರು ಮೇಳಗಳ ಸಂಚಾಲಕ ಕಲ್ಲಾಡಿ ದೇವಿಪ್ರಸಾದ್ ಶೆಟ್ಟಿ ಅವರನ್ನು ಸನ್ಮಾನಿಸಲಾಯ್ತು.
ಕರ್ನಾಟಕ ಯಕ್ಷಗಾನ ಅಕಾಡೆಮಿಯ ಸದಸ್ಯ ಕದ್ರಿ ನವನೀತ ಶೆಟ್ಟಿ, ಮಂಗಳೂರು ವಿವಿಯ ಯಕ್ಷಗಾನ ಅಧ್ಯಯನ ಕೇಂದ್ರದ ನಿರ್ದೇಶಕ ಡಾ. ಶ್ರೀಪತಿ ಕಲ್ಲೂರಾಯ, ಶ್ರೀ ವಿಷ್ಣುಮೂರ್ತಿ ಜನಾರ್ದನ ದೇವಸ್ಥಾನದ ಅರ್ಚಕ ಟಿ. ಸುಬ್ರಹ್ಮಣ್ಯ ಭಟ್, ಅಂಬುರುಹ ಯಕ್ಷ ಸದನ ಪ್ರತಿಷ್ಠಾನದ ಅಧ್ಯಕ್ಷೆ ಶೋಭಾ ಪುರುಷೋತ್ತಮ ಪೂಂಜ ಉಪಸ್ಥಿತರಿದ್ದರು.
ಪ್ರತಿಷ್ಠಾನದ ಉಪಾಧ್ಯಕ್ಷ ರಾಜಾರಾಂ ಹೊಳ್ಳ ಸ್ವಾಗತಿಸಿದರು. ಸುನಿಲ್ ಪಲ್ಲಮಜಲು ಹಾಗೂ ಸದಾಶಿವ ಆಳ್ವ ತಲಪಾಡಿ ಕಾರ್ಯಕ್ರಮ ನಿರೂಪಿಸಿದರು. ದೀವಿತ್ ಎಸ್. ಕೋಟ್ಯಾನ್ ವಂದಿಸಿದರು. ಬೊಟ್ಟಿಕೆರೆ ಪುರುಷೋತ್ತಮ ಪೂಂಜ ವಿರಚಿತ ಯಕ್ಷಗಾನ ಪ್ರಸಂಗ ʼಮಾನಿಷಾದʼ ವನ್ನು ಕಟೀಲು ಮೆಳದ ಕಲಾವಿದರು ಮತ್ತು ಪೂಂಜರ ಶಿಷ್ಯರು ಪ್ರದರ್ಶಿಸಿದರು.
- ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರೋತ್ಸವ – ಚಂಪಾಷಷ್ಠಿ ಮಹೋತ್ಸವ 27-11-2024ರಿಂದ 12-12-2024ರ ವರೆಗೆ
- ಮಕ್ಕಳನ್ನು ಕೊಂದ ನಂತರ ಆತ್ಮಹತ್ಯೆಗೆ ಯತ್ನಿಸಿದ ತಾಯಿ
- ಕಾಸರಗೋಡು ಮಹಿಳಾ ಪೊಲೀಸ್ ಅಧಿಕಾರಿಯನ್ನು ಕಡಿದು ಕೊಂದ ಆಕೆಯ ಪತಿ
- ನವವಿವಾಹಿತೆ ಆತ್ಮಹತ್ಯೆ – ಆಕೆ ಬರೆದಿಟ್ಟ ಡೆತ್ ನೋಟಿನಲ್ಲಿ ಏನಿದೆ?
- ತಾನು ಮದುವೆಯಾಗುವ ಹುಡುಗಿಗೆ ಮೂರು ಷರತ್ತುಗಳನ್ನು ವಿಧಿಸಿದ್ದ ಎ.ಆರ್. ರೆಹಮಾನ್: ಮದುವೆಯ ಮೂವತ್ತನೆಯ ವಾರ್ಷಿಕೋತ್ಸವ (ಗ್ರ್ಯಾಂಡ್ ಥರ್ಟಿ) ತಲುಪುವ ಭರವಸೆ ಹುಸಿಯಾಯಿತು ಎಂದ ಸಂಗೀತ ನಿರ್ದೇಶಕ