ಹಿಂದಿನ ಕಾಲದಲ್ಲಿ ಯಕ್ಷಗಾನ ಪ್ರದರ್ಶನಗಳ ಪ್ರಚಾರಕ್ಕೆ ಈಗಿನಂತೆ ಮಾಧ್ಯಮಗಳಿರಲಿಲ್ಲ. ದಿನಪತ್ರಿಕೆ ಮತ್ತು ಕರಪತ್ರಗಳ ಮೂಲಕ ಪ್ರಚಾರವು ನಡೆಯುತ್ತಿತ್ತು. ಪ್ರದರ್ಶನದ ದಿನವೋ ಮುನ್ನಾದಿನವೋ ವಾಹನಕ್ಕೆ ಧ್ವನಿವರ್ಧಕವನ್ನು ಕಟ್ಟಿ ಪ್ರಚಾರ ಮಾಡುವ ಕ್ರಮವೂ ಇತ್ತು. ಇದು ವೇಗದ ಯುಗ. ಸಾಮಾಜಿಕ ಜಾಲತಾಣದ ಮೂಲಕ ವಿಚಾರಗಳನ್ನು ವಿದೇಶದಲ್ಲಿರುವವರಿಗೂ ಬಹು ಸುಲಭವಾಗಿ ವೇಗವಾಗಿ ತಿಳಿಸಲು ಅವಕಾಶವಾಗಿದೆ. ಯಕ್ಷಗಾನ ಪ್ರದರ್ಶನಗಳನ್ನು ಚಿತ್ರೀಕರಿಸಿ ಜಾಲತಾಣಗಳ ಮೂಲಕ ಪ್ರಪಂಚದ ಯಾವ ಮೂಲೆಯಲ್ಲಿರುವವರಿಗೂ ತಲುಪಿಸುವ ಕ್ರಿಯೆಯು ಸಾಗಿತ್ತು.
ಪ್ರದರ್ಶನದ ತುಣುಕುಗಳನ್ನು ಫೇಸ್ ಬುಕ್, ಯೂಟ್ಯೂಬ್ ಗಳಿಗೆ ಅಪ್ಲೋಡ್ ಮಾಡಿ ಪ್ರೇಕ್ಷಕರಿಗೆ ರವಾನಿಸುವ ಕ್ರಿಯೆಯು ಆರಂಭವಾಗಿತ್ತು. ಹಲವಾರು ಮಹನೀಯರುಗಳು ಪ್ರದರ್ಶನಗಳನ್ನು ಚಿತ್ರೀಕರಿಸಿ ಜಾಲತಾಣಗಳಲ್ಲಿ ಹರಿಯಬಿಟ್ಟು ಯಕ್ಷಗಾನದ ಕಲಾಮಾತೆಯ ಸೇವೆಯನ್ನು ಮಾಡಿ ಧನ್ಯರಾಗಿದ್ದಾರೆ. ಕೋಂಗೋಟು ರಾಧಾಕೃಷ್ಣ ಭಟ್ಟರಿಂದ (RK Kongot) ತೊಡಗಿ ಅನೇಕ ಕಲಾಭಿಮಾನಿಗಳು ಈ ಸತ್ಕಾರ್ಯವನ್ನು ಕೈಗೊಂಡಿರುತ್ತಾರೆ. ಕಟೀಲು ಸಿತ್ಲ ರಂಗನಾಥ ರಾಯರು ಹಲವಾರು ಹಿರಿಯ ಅನುಭವೀ ಕಲಾವಿದರ, ವಿದ್ವಾಂಸರ ಸಂದರ್ಶನವನ್ನು ನಡೆಸಿ ಅದನ್ನು ದಾಖಲೀಕರಿಸಿದ್ದಾರೆ. ಇದು ಕಲಾಭಿಮಾನಿಗಳಿಗೆಲ್ಲಾ ಸಂತೋಷವನ್ನು ಕೊಡುವ ವಿಚಾರ.
ಪ್ರಸ್ತುತ ಹಲವಾರು ಮಂದಿಗಳು ಪ್ರದರ್ಶನಗಳನ್ನು ಚಿತ್ರೀಕರಿಸುತ್ತಾ ಫೇಸ್ ಬುಕ್ ನಲ್ಲಿ ನೇರಪ್ರಸಾರವನ್ನು ಮಾಡುತ್ತಿದ್ದಾರೆ. ದೂರದ ಊರಿನಲ್ಲಿ ನೆಲೆಸಿರುವ ಕಲಾಭಿಮಾನಿಗಳು ನೇರಪ್ರಸಾರದ ಮೂಲಕ ಪ್ರದರ್ಶನಗಳನ್ನು ನೋಡಿ ಆಸ್ವಾದಿಸುವಂತಾಗಿದೆ. ಈ ಸತ್ಕಾರ್ಯವನ್ನು ಕೈಗೊಂಡ, ಪ್ರಸ್ತುತ ಈ ಸತ್ಕಾರ್ಯಗಳಲ್ಲಿ ತೊಡಗಿಸಿಕೊಳ್ಳುತ್ತಿರುವ ಮಹನೀಯರುಗಳು ನಿಜಕ್ಕೂ ಅಭಿನಂದನೀಯರು. ಅವರಿಗೆಲ್ಲಾ ಕಲಾಮಾತೆಯ ಅನುಗ್ರಹವು ಸದಾ ಇರಲಿ. ಜಾಲತಾಣದಲ್ಲಿ ಯಕ್ಷಗಾನ ಪ್ರದರ್ಶನಗಳನ್ನು ನೇರ ಪ್ರಸಾರ ಮಾಡುತ್ತಿರುವ ಅನೇಕರಲ್ಲಿ ಶ್ರೀ ಸುಕುಮಾರ್ ಜೈನ್ ಅವರೂ ಒಬ್ಬರು.
ಶ್ರೀ ಸುಕುಮಾರ್ ಜೈನ್ ಅವರ ಹುಟ್ಟೂರು ಕಾರ್ಕಳ ತಾಲೂಕಿನ ನಲ್ಲೂರು ಗ್ರಾಮದ ಬೀರಾಯಿಪೇಟೆ. ಶ್ರೀ ನೇಮಿರಾಜ ಪೂಂಜ ಮತ್ತು ಶ್ರೀಮತಿ ರತ್ನಾವತಿ ದಂಪತಿಗಳ ಪುತ್ರನಾಗಿ 1980 ರಲ್ಲಿ ಜನನ. ಶ್ರೀ ನೇಮಿರಾಜ ಪೂಂಜರು ಕೃಷಿಕರು. ಸುಕುಮಾರ್ ಜೈನ್ ಅವರು ಓದಿದ್ದು 5ನೇ ತರಗತಿ ವರೆಗೆ. 7ನೇ ತರಗತಿ ವರೆಗೆ ನಲ್ಲೂರು ಶಾಲೆಯಲ್ಲಿ. 8ನೇ ತರಗತಿ ಬಜಗೋಳಿ ಶಾಲೆಯಲ್ಲಿ. ಮನೆಯಲ್ಲಿ ಬಡತನವಿತ್ತು. ಅನಿವಾರ್ಯವಾಗಿ ವಿದ್ಯಾರ್ಜನೆಯನ್ನು ನಿಲ್ಲಿಸಬೇಕಾಗಿ ಬಂದಿತ್ತು. ಜೀವನೋಪಾಯಕ್ಕಾಗಿ ಶ್ರೀ ಶಾಂತರಾಜ್ ಜೈನ್ ಅವರ ಬೀಡಿ ಬ್ರಾಂಚಿನಲ್ಲಿ ಎರಡು ವರ್ಷ ಕೆಲಸ ಮಾಡಿದ್ದರು.
ಶ್ರೀ ಸುಕುಮಾರ್ ಜೈನ್ ಅವರಿಗೆ ಎಳವೆಯಲ್ಲೇ ಯಕ್ಷಗಾನಾಸಕ್ತಿ ಇತ್ತು. ಪ್ರದರ್ಶನಗಳನ್ನು ನೋಡಿ ಸಂತೋಷಪಡುತ್ತಿದ್ದರು. ಬಳಿಕ ಕಾರ್ಕಳದ ಫರ್ನಿಚರ್ ಅಂಗಡಿಯಲ್ಲಿ 7 ವರ್ಷಗಳ ಕಾಲ ಕೆಲಸ ಮಾಡಿದ್ದರು. (ಕಾಲಭೈರವ ಫರ್ನಿಚರ್ಸ್) ಆ ಸಮಯದಲ್ಲಿ ಕೆಲಸ ಮುಗಿಸಿ ಕಾರ್ಕಳ, ಮೂಡಬಿದಿರೆ ಪರಿಸರದಲ್ಲಿ ನಡೆಯುತ್ತಿದ್ದ ಆಟಗಳನ್ನು ನೋಡುತ್ತಿದ್ದರು. ಕದ್ರಿ, ಕರ್ನಾಟಕ, ಮಂಗಳಾದೇವಿ, ಸುಂಕದಕಟ್ಟೆ, ಪೆರ್ಡೂರು, ಸಾಲಿಗ್ರಾಮ ಮೊದಲಾದ ಮೇಳಗಳ ಪ್ರದರ್ಶನಗಳನ್ನು ನೋಡುತ್ತಿದ್ದರು. ಬೆಳಗಿನ ವರೆಗೂ ಆಟ ನೋಡಿ ನಿದ್ದೆ ಮಾಡದೆ ಹಗಲು ಫರ್ನಿಚರ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು.
ಬಳಿಕ ಬಜಗೋಳಿಯ ಶ್ರೀ ಭುವನೇಶ್ವರಿ ಹೋಟೆಲಿನಲ್ಲಿ ಕೆಲಸಕ್ಕೆ ಸೇರಿದ್ದರು (2001ರಲ್ಲಿ). ಇದು ಶ್ರೀ ನಿತ್ಯಾನಂದ ಪ್ರಭುಗಳ ಮಾಲಕತ್ವದ ಹೋಟೆಲ್. ಹೋಟೆಲ್ ಕೆಲಸಕ್ಕೆ ತೊಂದರೆಯಾಗದಂತೆ ಹೊಂದಿಸಿಕೊಂಡು ಆಟ ನೋಡುತ್ತಿದ್ದರು. ಈ ಸಂದರ್ಭದಲ್ಲಿ ಸುಕುಮಾರ್ ಜೈನ್ ಅವರಿಗೆ ಸಮಸ್ಯೆಯೊಂದು ಎದುರಾಗಿತ್ತು. ಮಾನಸಿಕವಾಗಿ ಕುಗ್ಗಿ ಹೋಗಿದ್ದ ಇವರು ಬದುಕೇ ಬೇಡ ಎಂಬ ಸ್ಥಿತಿಗೆ ಒಳಗಾಗಿದ್ದರು. ಮನಸು ನೆಮ್ಮದಿ ಸಿಗುವ ತಾಣವನ್ನು ಅರಸುತ್ತಿತ್ತು.
ಆಗ ಮಳೆಗಾಲದ ಸಮಯ. ಸಿಂಹ ಮಾಸ. ವಗೆನಾಡು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವರ್ಷಂಪ್ರತಿ ನಡೆಯುವ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿತ್ತು. ಇದು ಪಟ್ಲಗುತ್ತು ಮನೆಯವರ ನೇತೃತ್ವದಲ್ಲಿ ನಡೆಯುವ ಕಾರ್ಯಕ್ರಮ. ಶ್ರೀ ಸುಕುಮಾರ್ ಅವರು ಪಟ್ಲ ಸತೀಶ್ ಶೆಟ್ಟರ ಅಭಿಮಾನಿಯೂ ಆಗಿದ್ದರು. ಹಿಂದು ಮುಂದು ಯೋಚಿಸದೆ ಪಟ್ಲ ಸತೀಶ ಶೆಟ್ಟರ ಮನೆಗೆ ತೆರಳಿದರು. ಅವರ ಮನೆಯಲ್ಲಿದ್ದುಕೊಂಡೇ ವಗೆನಾಡು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸ್ವಯಂಸೇವಕರಲ್ಲಿ ತಾನೂ ಒಬ್ಬನಾಗಿ ದುಡಿದಿದ್ದರು. ತೋರಣ ಅಲಂಕಾರ, ಆಸನ ವ್ಯವಸ್ಥೆ, ಬಾಯಾರಿಕೆ ನೀಡುವುದು, ಉಪಾಹಾರ, ಭೋಜನ ಬಡಿಸುವುದು, ಪಾತ್ರೆ ತೊಳೆಯುವುದು ಮೊದಲಾದ ಕೆಲಸಗಳನ್ನು ಅರ್ಪಣಾ ಭಾವದಿಂದ ಮಾಡಿ ಧನ್ಯರಾದರು.
ಇವರ ಸೇವೆಯಿಂದ ಶ್ರೀ ಸುಬ್ರಹ್ಮಣ್ಯನು ಪ್ರಸನ್ನನಾಗಿದ್ದ. ಮಾನಸಿಕ ನೋವು ನಿವಾರಣೆಯಾಗಿ ಉತ್ಸಾಹವು ಮೂಡಿತ್ತು. ಸಿಂಹ ಮಾಸದ ಕಾರ್ಯಕ್ರಮಗಳು ಮುಗಿದು ಊರಿಗೆ ಮರಳಲು ಬೇಕಾದಷ್ಟು ಹಣ ಇವರ ಬಳಿ ಇರಲಿಲ್ಲ. ಪಟ್ಲ ಮನೆಯವರು ಎಲ್ಲಾ ಸ್ವಯಂಸೇವಕರನ್ನೂ ಕರೆದು ಸಂಭಾವನೆ ನೀಡುತ್ತಿದ್ದರು. ಇವರನ್ನೂ ಕರೆದು ಕೈಗೆ ಕವರ್ ಒಂದನ್ನು ಕೊಟ್ಟಿದ್ದರು. “ಅದರೊಳಗೆ ಎರಡು ಸಾವಿರ ರೊಪಾಯಿಗಳಿತ್ತು. ಇದು ನನ್ನ ಬದುಕಿನ ಬವಣೆಯನ್ನು ದೂರ ಮಾಡಿತ್ತು. ಶ್ರೀ ಸುಬ್ರಹ್ಮಣ್ಯನ ದಯೆಯೂ ನನಗೆ ದೊರಕಿತ್ತು.
ಬೇಡವೆಂದು ಹೇಳಿದರೂ ಒತ್ತಾಯದಿಂದ ಕವರ್ ನೀಡಿದರು. ಇದು ದೇವರ ಪ್ರಸಾದ. ಬೇಡ ಎನ್ನಬಾರದು ಎಂದು ಹೇಳಿ ನೀಡಿದ್ದರು. ನಾನು ಬದುಕನ್ನೂ ಯಕ್ಷಗಾನವನ್ನೂ ಪ್ರೀತಿಸುವಂತಾಗಿತ್ತು. ಒಂದು ರೀತಿಯಲ್ಲಿ ನನಗೆ ಪುನರ್ಜನ್ಮ. ಬದುಕಿನಲ್ಲಿ ಈ ಬದಲಾವಣೆ ಆದುದು ಪಟ್ಲ ಸತೀಶ್ ಶೆಟ್ಟರಿಂದ” ಇದು ಸುಕುಮಾರ್ ಜೈನ್ ಅವರ ಮನದಾಳದ ಮಾತುಗಳು. ಬಹುಷಃ ಈ ಕಾರಣಕ್ಕಾಗಿಯೇ ತಮ್ಮ ದ್ವಿಚಕ್ರ ವಾಹನಕ್ಕೆ ಯಕ್ಷಧ್ರುವ ಎಂಬ ಹೆಸರಿರಿಸಿದ್ದರು.
ಶ್ರೀ ಸುಕುಮಾರ್ ಜೈನ್ ಅವರಿಗೆ ಕಟೀಲು ಮೇಳಗಳ ಪ್ರದರ್ಶನಗಳನ್ನು ನೋಡಿದ ನಂತರ ಪ್ರದರ್ಶನಗಳನ್ನು ಚಿತ್ರೀಕರಿಸಬೇಕೆಂಬ ಆಸೆ ಹುಟ್ಟಿಕೊಂಡಿತ್ತು. ಆಗ ಫೇಸ್ ಬುಕ್ ಲೈವ್ ಕಾರ್ಯಕ್ರಮವೂ ಆರಂಭವಾಗಿತ್ತು. ಪ್ರದರ್ಶನದ ಒಂದೊಂದು ತುಣುಕುಗಳನ್ನು ಚಿತ್ರೀಕರಿಸಿ ಫೇಸ್ ಬುಕ್ ಗೆ ಹಾಕುತ್ತಿದ್ದರು. ಈ ವಿಚಾರದಲ್ಲಿ ಶ್ರೀ ಅಶ್ವಿತ್ ಶೆಟ್ಟಿ ತುಳುನಾಡು ಮತ್ತು ಶ್ರೀ ರಾಜೇಂದ್ರ ಪ್ರಸಾದ್ ಎಕ್ಕಾರು ಇವರ ಮಾರ್ಗದರ್ಶನ ದೊರಕಿತ್ತು. ಚಿತ್ರೀಕರಣದ ವಿಚಾರದಲ್ಲಿ ಶ್ರೀ ಕೀರ್ತನ್ ದೇವಾಡಿಗ ಮಂಗಳೂರು ಮತ್ತು ಬಜಗೋಳಿ ಶ್ರೀ ಚಂದ್ರಹಾಸ ಶೆಟ್ಟಿ ಅವರ ಸಲಹೆಯೂ ದೊರಕಿತ್ತು.
ಮೊಬೈಲ್ ನಲ್ಲಿ ಪ್ರದರ್ಶನವನ್ನು ಚಿತ್ರೀಕರಿಸಿ ಫೇಸ್ ಬುಕ್ ಗೆ ಪೋಸ್ಟಿಂಗ್ ಮಾಡುವ ಸತ್ಕಾರ್ಯವನ್ನು ಸುಕುಮಾರ್ ಜೈನ್ ಅವರು ತೊಡಗಿ ಮುಂದುವರಿಯುತ್ತಾ ಸಾಗಿದರು. ಹೋಟೆಲ್ ಸಿಬಂದಿಯೂ ಒಡನಾಡಿಯೂ ಆದ ಶ್ರೀ ಸುಕೇಶ್ ಅವರ ಸಲಹೆಯಂತೆ ಫೇಸ್ ಬುಕ್ ನಲ್ಲಿ ತಮ್ಮ ಹೆಸರಿನ ಜತೆ ಯಕ್ಷಧ್ರುವ ಎಂದು ಸೇರಿಸಿಕೊಂಡರು. ಇವರು ಎಲ್ಲಾ ಮೇಳಗಳ ಪ್ರದರ್ಶನಗಳನ್ನೂ ಮೊಬೈಲಿನಲ್ಲಿ ಚಿತ್ರೀಕರಿಸಿ ಫೇಸ್ ಬುಕ್ ನಲ್ಲಿ ನೇರಪ್ರಸಾರ ಮಾಡುತ್ತಾರೆ. ಕಟೀಲು, ಧರ್ಮಸ್ಥಳ. ಪಾವಂಜೆ, ಹನುಮಗಿರಿ, ಮಡಾಮಕ್ಕಿ, ಕಮಲಶಿಲೆ, ಬಪ್ಪನಾಡು, ಸುಂಕದಕಟ್ಟೆ, ಸಸಿಹಿತ್ಲು ಮೊದಲಾದ ಮೇಳಗಳ ಮತ್ತು ಇತರ ಸಂಘ ಸಂಸ್ಥೆಗಳು ಆಯೋಜಿಸಿದ ಆಟ, ತಾಳಮದ್ದಲೆಗಳನ್ನು ಇವರು ನೇರ ಪ್ರಸಾರ ಮಾಡಿರುತ್ತಾರೆ. ಗಾನವೈಭವ, ನಾಟ್ಯವೈಭವ ಕಾರ್ಯಕ್ರಮಗಳನ್ನೂ ನೇರ ಪ್ರಸಾರ ಮಾಡಿರುತ್ತಾರೆ.
2022 ಜೂನ್ ನಲ್ಲಿ ಹೊಸ ಪರಿಕಲ್ಪನೆಯೊಂದಿಗೆ “ಯಕ್ಷಧ್ರುವ ನ್ಯೂಸ್” ಎಂಬ ಹೊಸ ಸಂಸ್ಥೆಯೊಂದನ್ನು ಆರಂಭಿಸಿದ್ದಾರೆ. ನೇರ ಪ್ರಸಾರ ಮಾಡುವಲ್ಲಿ ಎಲ್ಲಾ ಮೇಳಗಳ ಆಡಳಿತ ಮಂಡಳಿ ಮತ್ತು ಕಲಾವಿದರುಗಳು ಸಹಕರಿಸಿದ್ದಾರೆ. ಅವರಿಗೆ ನಾನು ಕೃತಜ್ಞನಾಗಿ ವಂದಿಸುತ್ತೇನೆ ಎಂದು ಯಾವಾಗಲೂ ಶ್ರೀ ಸುಕುಮಾರ್ ಜೈನ್ ಅವರು ಹೇಳುತ್ತಿರುತ್ತಾರೆ. ಇವರ ತಮ್ಮ ಶ್ರೀ ಸುಕೇಶ್ ಜೈನ್ ಅವರು ಪಾಕತಜ್ಞರಾಗಿ ಕೆಲಸ ಮಾಡುತ್ತಿದ್ದಾರೆ. ಯಕ್ಷಧ್ರುವ ಶ್ರೀ ಸುಕುಮಾರ್ ಜೈನ್ ಅವರ ಈ ಸತ್ಕಾರ್ಯವು ನಿರಂತರವಾಗಿ ನಡೆಯಲಿ. ಕಲಾಮಾತೆಯ ಅನುಗ್ರಹವು ಇವರಿಗೆ ಸದಾ ಇರಲಿ ಎಂಬ ಹಾರೈಕೆಗಳು.
ಲೇಖಕ: ಶ್ರೀ ರವಿಶಂಕರ್ ವಳಕ್ಕುಂಜ
- ಮಕ್ಕಳನ್ನು ಕೊಂದ ನಂತರ ಆತ್ಮಹತ್ಯೆಗೆ ಯತ್ನಿಸಿದ ತಾಯಿ
- ಕಾಸರಗೋಡು ಮಹಿಳಾ ಪೊಲೀಸ್ ಅಧಿಕಾರಿಯನ್ನು ಕಡಿದು ಕೊಂದ ಆಕೆಯ ಪತಿ
- ನವವಿವಾಹಿತೆ ಆತ್ಮಹತ್ಯೆ – ಆಕೆ ಬರೆದಿಟ್ಟ ಡೆತ್ ನೋಟಿನಲ್ಲಿ ಏನಿದೆ?
- ತಾನು ಮದುವೆಯಾಗುವ ಹುಡುಗಿಗೆ ಮೂರು ಷರತ್ತುಗಳನ್ನು ವಿಧಿಸಿದ್ದ ಎ.ಆರ್. ರೆಹಮಾನ್: ಮದುವೆಯ ಮೂವತ್ತನೆಯ ವಾರ್ಷಿಕೋತ್ಸವ (ಗ್ರ್ಯಾಂಡ್ ಥರ್ಟಿ) ತಲುಪುವ ಭರವಸೆ ಹುಸಿಯಾಯಿತು ಎಂದ ಸಂಗೀತ ನಿರ್ದೇಶಕ
- ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ರಕ್ಷಕ-ಶಿಕ್ಷಕ ಸಂಘದ ಪದಾಧಿಕಾರಿಗಳ ಆಯ್ಕೆ