ಯಕ್ಷಗಾನ ಎಂಬ ಶ್ರೇಷ್ಠ ಕಲೆಯಲ್ಲಿ ಕಲಾವಿದನಾಗಬೇಕು ಎಂಬ ಆಸೆಯುಳ್ಳವರಿಗೆ ಅವರವರ ಅಭಿರುಚಿಗೆ ತಕ್ಕಂತೆ ಆಯ್ಕೆಗೆ ಅವಕಾಶಗಳಿವೆ. ಹಿಮ್ಮೇಳ ಕಲಾವಿದನಾಗಬೇಕೆಂಬ ಬಯಕೆಯುಳ್ಳವರಿಗೆ ಭಾಗವತನಾಗಿ, ಮದ್ದಳೆಗಾರನಾಗಿ ಕಲಾಸೇವೆಯನ್ನು ಮಾಡಬಹುದು. ಮುಮ್ಮೇಳ ಕಲಾವಿದನಾಗಿ ಕಲಾಸೇವೆಯನ್ನು ಮಾಡಬೇಕೆಂಬ ಆಸೆಯಿದ್ದವರಿಗೆ ಹಾಸ್ಯಗಾರನಾಗಿ, ಬಣ್ಣದ ವೇಷಧಾರಿಯಾಗಿ, ಕಿರೀಟ ವೇಷಧಾರಿಯಾಗಿ, ಪುಂಡು ವೇಷಧಾರಿಯಾಗಿ, ಸ್ತ್ರೀ ಪಾತ್ರಧಾರಿಯಾಗಿ ಕಾಣಿಸಿಕೊಂಡು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾಗಬಹುದು.
ಪ್ರಸ್ತುತ ಪುಂಡು ವೇಷಧಾರಿಯಾಗಿ ಕಾಣಿಸಿಕೊಂಡು ಅನೇಕ ಪ್ರತಿಭಾನ್ವಿತರು ಕಲಾಭಿಮಾನಿಗಳ ಪ್ರೀತಿಯನ್ನು ಗಳಿಸಿಕೊಂಡಿದ್ದಾರೆ. ಅಂತಹಾ ಕಲಾವಿದರ ಸಾಲಿನಲ್ಲಿ ಗುರುತಿಸಲ್ಪಡುವವರು ಶ್ರೀ ಆನಂದ ಕೊಕ್ಕಡ. ಇವರು ಕಟೀಲು ಶ್ರೀ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿಯ ಕಲಾವಿದರು. ನಗುಮೊಗದ ಸಹೃದಯೀ ಕಲಾವಿದ.
ಕಟೀಲು ಮೇಳದ ಪುಂಡುವೇಷಧಾರಿ ಶ್ರೀ ಆನಂದ ಪೂಜಾರಿ ಅವರ ಹುಟ್ಟೂರು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕೊಕ್ಕಡ ಗ್ರಾಮದ ತೋಟದಮೂಲೆ. ಶ್ರೀ ಕೊರಗಪ್ಪ ಪೂಜಾರಿ ಮತ್ತು ಚೆನ್ನಮ್ಮ ದಂಪತಿಗಳ ಪುತ್ರನಾಗಿ ಜನನ. ವಿದ್ಯಾಭ್ಯಾಸ ಎಸ್ ಎಸ್ ಎಲ್ ಸಿ ವರೆಗೆ. ಕೊಕ್ಕಡದ ಸರಕಾರೀ ಹಿರಿಯ ಪ್ರಾಥಮಿಕ ಶಾಲೆ ಮತ್ತು ಕೊಕ್ಕಡ ಸರಕಾರೀ ಪ್ರೌಢಶಾಲೆಯಲ್ಲಿ ವಿದ್ಯಾರ್ಜನೆ. ತೆಂಕುತಿಟ್ಟಿನ ಹಾಸ್ಯಗಾರರಾದ ಶ್ರೀ ಉಜಿರೆ ನಾರಾಯಣ ಅವರು ಆನಂದ ಕೊಕ್ಕಡ ಬಂಧುಗಳು.
ಆನಂದ ಅವರ ತಂದೆ ತಾಯಂದಿರೂ ಯಕ್ಷಗಾನ ಕಲಾಸಕ್ತರಾಗಿದ್ದರು. ಪ್ರದರ್ಶನಗಳನ್ನು ನೋಡುವ ಹವ್ಯಾಸವಿದ್ದವರು. ಶ್ರೀ ಆನಂದ ಅವರು ಶಾಲಾ ವಿದ್ಯಾರ್ಥಿಯಾಗಿದ್ದಾಗ ಮಾತಾ ಪಿತೃಗಳ ಜೊತೆ ಹೋಗಿ ಯಕ್ಷಗಾನ ಪ್ರದರ್ಶನಗಳನ್ನು ನೋಡುತ್ತಿದ್ದರು. ಹೀಗಾಗಿ ತಾನೂ ಕಲಾವಿದನಾಗಬೇಕೆಂಬ ಬಯಕೆಯು ಚಿಗುರೊಡೆದಿತ್ತು. ಇವರ ಕನಸು ನನಸಾಗುವುದಕ್ಕೆ ಕಲಾಮಾತೆಯ ಅನುಗ್ರಹದಿಂದ ಅವಕಾಶವೂ ದೊರೆತಿತ್ತು.
ಹತ್ತನೇ ತರಗತಿಯಲ್ಲಿ ಓದುತ್ತಿರುವಾಗ ಶಾಲಾ ವಾರ್ಷಿಕೋತ್ಸವಕ್ಕೆ ಯಕ್ಷಗಾನ ಪ್ರದರ್ಶನವನ್ನು ನಡೆಸಬೇಕೆಂದು ಶಾಲಾ ಆಡಳಿತ ಮಂಡಳಿಯು ನಿರ್ಣಯಿಸಿತ್ತು. ವಿದ್ಯಾರ್ಥಿಗಳಿಗೆ ತರಬೇತಿಯನ್ನು ನೀಡಲು ಶಾಲಾ ಅಧ್ಯಾಪಕರು ಖ್ಯಾತ ಕಲಾವಿದ ಅರಸಿನಮಕ್ಕಿ ಶ್ರೀ ಪರಮೇಶ್ವರ ಆಚಾರ್ಯರನ್ನು ಕರೆಸಿಕೊಂಡಿತ್ತು. ಕಟೀಲು ಮೇಳದ ಕಲಾವಿದ ಶ್ರೀ ಜನಾರ್ದನ ಕೊಕ್ಕಡ ಅವರೂ ಶ್ರೀ ಆನಂದ ಕೊಕ್ಕಡ ಅವರೂ ಶಾಲೆಯಲ್ಲಿ ಸಹಪಾಠಿಗಳು. ಇಬ್ಬರೂ ಜತೆಯಾಗಿ ಶ್ರೀ ಪರಮೇಶ್ವರ ಆಚಾರ್ಯರಿಂದ ಯಕ್ಷಗಾನ ಹೆಜ್ಜೆಗಾರಿಕೆಯನ್ನು ಕಲಿತರು.
ಶಾಲಾ ಪ್ರದರ್ಶನದಲ್ಲಿ ಶ್ರೀ ಆನಂದ ಅವರು ಅಭಿಮನ್ಯು ಕಾಳಗ ಪ್ರಸಂಗದಲ್ಲಿ ಅಭಿಮನ್ಯುವಿನ ಸಾರಥಿಯಾಗಿ ರಂಗ ಪ್ರವೇಶ ಮಾಡಿದರು. ಅದೇ ವರ್ಷ ಶಾಲೆ ಬಿಟ್ಟು ಮೇಳಕ್ಕೆ ಸೇರುವುದೆಂಬ ನಿರ್ಣಯವನ್ನು ಮಾಡಿದ್ದರು. ಈ ಇಬ್ಬರಲ್ಲೂ ಯಕ್ಷಗಾನಾಸಕ್ತಿ ಅಷ್ಟು ಆಳವಾಗಿತ್ತು. ಅದಕ್ಕಾಗಿ ತಯಾರಿಯನ್ನು ನಡೆಸಿದರು. ಮಳೆಗಾಲದಲ್ಲಿ ಶ್ರೀ ಪರಮೇಶ್ವರ ಆಚಾರ್ಯರಿಂದ ಪೂರ್ವರಂಗದ ಎಲ್ಲಾ ಪಾತ್ರಗಳನ್ನು ನಿರ್ವಹಿಸುವ ಬಗೆಗೆ ತರಬೇತಿಯನ್ನು ಹೊಂದಿಯೇ ಮೇಳದ ತಿರುಗಾಟವನ್ನು ಆರಂಭಿಸಿದ್ದರು.
ಶ್ರೀ ಆನಂದ ಕೊಕ್ಕಡ ಅವರ ತಿರುಗಾಟ ಕಟೀಲು ನಾಲ್ಕನೇ ಮೇಳದಲ್ಲಿ. ಕುಬಣೂರು ಶ್ರೀಧರ ರಾಯರ ಭಾಗವತಿಕೆ. ಪ್ರಾರಂಭದಲ್ಲಿ ಬಾಲಗೋಪಾಲನಾಗಿ ರಂಗಪ್ರವೇಶ. ಅಲ್ಲದೆ ಪ್ರಸಂಗಗಳಲ್ಲಿ ತಮ್ಮ ಪಾಲಿಗೆ ಬಂದ ವೇಷಗಳನ್ನು ಮಾಡುತ್ತಿದ್ದರು. ಸದಾ ಕಲಿಕಾಸಕ್ತರಾಗಿ ಕ್ಷಿಪ್ರ ಬೆಳವಣಿಗೆಯನ್ನು ಹೊಂದಿದ ಕಲಾವಿದರಿವರು. ಹದಿನೆಂಟು ವರ್ಷಗಳ ಕಾಲ ಕಟೀಲಿನ ನಾಲ್ಕನೇ ಮೇಳದಲ್ಲಿ ವ್ಯವಸಾಯ.
ಶ್ರೀ ವಿಷ್ಣು ಶರ್ಮ, ರವಿಶಂಕರ್ ವಳಕ್ಕುಂಜ, ಪುಂಡಿಕಾಯಿ ಗೋಪಾಲಕೃಷ್ಣ ಭಟ್, ತೊಡಿಕಾನ ವಿಶ್ವನಾಥ ಗೌಡ, ಗಿರೀಶ್ ಕಾವು ಇವರ ಸಹಕಾರವೂ ದೊರೆತಿತ್ತು. ಈ ಸಮಯದಲ್ಲಿ ಎರಡನೇ ಸ್ತ್ರೀವೇಷ ಮತ್ತು ಪುಂಡುವೇಷಧಾರಿಯಾಗಿ ಬೆಳೆದಿದ್ದರು. ಅನಿವಾರ್ಯ ಸಂದರ್ಭಗಳಲ್ಲಿ 1ನೇ ಪುಂಡುವೇಷ ಮತ್ತು ಸ್ತ್ರೀ ಪಾತ್ರಗಳನ್ನೂ ನಿರ್ವಹಿಸಿದ್ದರು. ಹದಿನೆಂಟು ವರ್ಷಗಳ ಕಾಲ ಕಟೀಲು ನಾಲ್ಕನೇ ಮೇಳದಲ್ಲಿ ವ್ಯವಸಾಯ. ಬಳಿಕ ಒಂದನೇ ಪುಂಡುವೇಷಧಾರಿಯಾಗಿ ಭಡ್ತಿ ದೊರೆತಿತ್ತು.
ಕಟೀಲು 5ನೇ ಮೇಳದಲ್ಲಿ 1 ವರ್ಷ, ಬಳಿಕ 6ನೇ ಮೇಳದಲ್ಲಿ 2 ವರ್ಷ, ಬಳಿಕ ಮರಳಿ 4ನೇ ಮೇಳದಲ್ಲಿ 1 ವರ್ಷ, ಮರಳಿ 6ನೇ ಮೇಳದಲ್ಲಿ ವ್ಯವಸಾಯ ಮಾಡಿದ್ದರು. ಆನಂದ ಕೊಕ್ಕಡ ಒಟ್ಟು ಇಪ್ಪತ್ತಮೂರು ತಿರುಗಾಟದ ಅನುಭವವನ್ನು ಹೊಂದಿರುತ್ತಾರೆ. ಹಿತ ಮಿತವಾದ ಕುಣಿತ ಮತ್ತು ಮಾತುಗಾರಿಕೆಯಿಂದ ವೇಷಗಳನ್ನು ಯಶಸ್ವಿಯಾಗಿ ನಿರ್ವಹಿಸುವ ಕಲಾವಿದರಿವರು.
ನಗುಮೊಗದ ಸಹೃದಯೀ ಕಲಾವಿದ ಶ್ರೀ ಆನಂದ ಕೊಕ್ಕಡ ಅವರ ಪತ್ನಿ ಶ್ರೀಮತಿ ಅಶ್ವಿನಿ ಗೃಹಣಿ. ಅಶ್ವಿನಿ, ಆನಂದ ಕೊಕ್ಕಡ ದಂಪತಿಗಳಿಗೆ ಇಬ್ಬರು ಪುತ್ರಿಯರು. ಕು| ಆದ್ಯ ಮತ್ತು ಕು| ಆರಾಧ್ಯ ಇಬ್ಬರೂ ನಾಲ್ಕನೇ ತರಗತಿಯಲ್ಲಿ ಓದುತ್ತಿದ್ದಾರೆ. ಮಕ್ಕಳಿಗೆ ಉಜ್ವಲವಾದ ಭವಿಷ್ಯವು ಸಿದ್ಧಿಸಲಿ. ಶ್ರೀ ಆನಂದ ಕೊಕ್ಕಡ ಅವರಿಗೆ ಸುದೀರ್ಘ ಕಾಲ ಕಲಾಸೇವೆಯನ್ನು ಮಾಡುವ ಭಾಗ್ಯವು ದೊರೆಯಲಿ. ಶ್ರೀ ದೇವರ ಅನುಗ್ರಹವು ಸದಾ ಇರಲಿ.
ಲೇಖಕ: ಶ್ರೀ ರವಿಶಂಕರ್ ವಳಕ್ಕುಂಜ
- ಮೊಘಲರು ಹರಿಹರ್ ಮಂದಿರವನ್ನು ಕೆಡವಿ ಶಾಹಿ ಜಾಮಾ ಮಸೀದಿಯನ್ನು ನಿರ್ಮಿಸಿದರೆಂದು ಆರೋಪಿಸಿ ನ್ಯಾಯಾಲಯಕ್ಕೆ ದೂರು: ಸಮೀಕ್ಷೆಗೆ ಬಂದ ಅಧಿಕಾರಿಗಳ ಮತ್ತು ಪೊಲೀಸರ ಮೇಲೆ ಕಲ್ಲು ತೂರಾಟ – ಪೊಲೀಸರ ಅಶ್ರುವಾಯು ದಾಳಿಯಲ್ಲಿ ಮೂವರ ಸಾವು
- ಮಲಯಾಳಂ ಸಿನಿಮಾ ಸೆಟ್ಗಳು ಸೇಫ್ ಅಲ್ಲ ಎಂದು ಹೇಳಿದ ನಟಿ ಸುಹಾಸಿನಿ ಮಣಿರತ್ನಂ
- ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರೋತ್ಸವ – ಚಂಪಾಷಷ್ಠಿ ಮಹೋತ್ಸವ 27-11-2024ರಿಂದ 12-12-2024ರ ವರೆಗೆ
- ಮಕ್ಕಳನ್ನು ಕೊಂದ ನಂತರ ಆತ್ಮಹತ್ಯೆಗೆ ಯತ್ನಿಸಿದ ತಾಯಿ
- ಕಾಸರಗೋಡು ಮಹಿಳಾ ಪೊಲೀಸ್ ಅಧಿಕಾರಿಯನ್ನು ಕಡಿದು ಕೊಂದ ಆಕೆಯ ಪತಿ