Friday, November 22, 2024
Homeಸುದ್ದಿನಿಟ್ಟೂರು ಪ್ರೌಢ ಶಾಲೆಯಲ್ಲಿ ಹೆಗ್ಗುಂಜೆ ರಾಜೀವ ಶೆಟ್ಟಿ ಸಭಾಂಗಣ ಉದ್ಘಾಟನೆ

ನಿಟ್ಟೂರು ಪ್ರೌಢ ಶಾಲೆಯಲ್ಲಿ ಹೆಗ್ಗುಂಜೆ ರಾಜೀವ ಶೆಟ್ಟಿ ಸಭಾಂಗಣ ಉದ್ಘಾಟನೆ

ಉಡುಪಿ :- ಉಡುಪಿ ನಿಟ್ಟೂರು ಪ್ರೌಢಶಾಲೆಯಲ್ಲಿ 01, ಆಗಸ್ಟ್ 2022ರಂದು ಹೆಗ್ಗುಂಜೆ ರಾಜೀವ ಶೆಟ್ಟಿ ಸಭಾಂಗಣ ಮತ್ತು ವೇದಿಕೆಯ ಉದ್ಘಾಟನಾ ಸಮಾರಂಭ ಜರಗಿತು.

ಜ್ಯೋತಿ ಬೆಳಗಿಸುವುದರೊಂದಿಗೆ ಕಾರ್ಯಕ್ರಮವನ್ನು ಉದ್ಘಾಟಿಸಿದ ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ನ ಅಧ್ಯಕ್ಷರು, ದಾನಿಗಳು ಎಚ್.ಎಸ್. ಶೆಟ್ಟಿ ಎಂದೇ ಜನಪ್ರಿಯರಾದ ಹಾಲಾಡಿ ಶ್ರೀನಿವಾಸ ಶೆಟ್ಟಿಯವರು ಶಾಲೆಯ ಅಭಿವೃದ್ಧಿಗೆ  ಒಂದು ಕೋಟಿ ಮೊತ್ತದ ಚೆಕ್‌ನ್ನು ಹಸ್ತಾಂತರಿಸಿ, ಕನ್ನಡ ಮಾಧ್ಯಮ ಶಾಲೆಗಳನ್ನು ಉಳಿಸಿ ಬೆಳೆಸುವುದು ಪ್ರತಿಯೊಬ್ಬರ ಕರ್ತವ್ಯ, ದೇಶವನ್ನು ಮುನ್ನಡೆಸುವ ಅನೇಕ ಮಹಾನಾಯಕರು ಹುಟ್ಟಿದ್ದು ಗ್ರಾಮೀಣ ಪ್ರದೇಶದಲ್ಲಿ  ಓದಿದ್ದು ತಮ್ಮ ಮಾತೃ ಭಾಷೆಯ ಶಾಲೆಗಳಲ್ಲಿ ಕನ್ನಡ ಮಾಧ್ಯಮ ಶಾಲೆಗಳು ವಿದ್ಯಾರ್ಥಿಗಳಲ್ಲಿ ಅದಮ್ಯ, ಆತ್ಮವಿಶ್ವಾಸವನ್ನು ತುಂಬುವ, ಸಂಪ್ರದಾಯ ಮತ್ತು ಸಂಸ್ಕೃತಿಯ ಸೊಗಡನ್ನು ಮೈಗೂಡಿಸುವ ಕೇಂದ್ರಗಳಾಗಿವೆ.

ಹಲವು ಕ್ಷೇತ್ರಗಳಲ್ಲಿ ದಾಖಲೆಗಳನ್ನು ನಿರ್ಮಿಸಿರುವ ನಿಟ್ಟೂರು ವಿದ್ಯಾಸಂಸ್ಥೆಗೆ ಧನಸಹಾಯ ಮಾಡುತ್ತಿರುವುದು ನನಗೆ ಅತೀವ ಸಂತಸ ತಂದಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕರ್ನಾಟಕ ಸರಕಾರದ ಇಂಧನ ಹಾಗೂ ಕನ್ನಡ ಮತು ಸಂಸ್ಕೃತಿ ಸಚಿವರಾದ ಶ್ರೀ ವಿ. ಸುನಿಲ್ ಕುಮಾರ್  ಸರಕಾರಿ ಮತು ಅನುದಾನಿತ ಶಾಲೆಗಳ ಏಳಿಗೆಗಾಗಿ ಸರಕಾರ ಹಲವು ಯೋಜನೆಗಳನ್ನು ಹಮ್ಮಿಕೊಂಡಿದ್ದು,  ಈ ಹಿನ್ನಲೆಯಲ್ಲಿ ಎಚ್.ಎಸ್. ಶೆಟ್ಟಿಯವರಂತಹ ಮಹಾದಾನಿಗಳ ನೆರವು ಶ್ಲಾಘನೀಯ, ಈ ಧನಸಹಾಯ ಪಡೆದ ಜಿಲ್ಲೆಯ ಮಾದರಿ ವಿದ್ಯಾಸಂಸ್ಥೆಯಾದ ನಿಟ್ಟೂರು ಪ್ರೌಢಶಾಲೆ  ಭವಿಷ್ಯ ಉಜ್ವಲವಾಗಲಿ ಎಂದರು.

ನಿಟ್ಟೂರು ಎಜುಕೇಶನಲ್ ಸೊಸೈಟಿಯ ಅಧ್ಯಕ್ಷರಾದ ಕೆ. ರಘುಪತಿ ಭಟ್ ಪ್ರಸ್ತಾವಿಕ ಮಾತುಗಳಾನ್ನಾಡುತ್ತಾ ದಾನಿ ಮತ್ತು ವಿದ್ಯಾಭಿಮಾನಿಗಳಾದ ಶ್ರೀ ಎಚ್.ಎಸ್. ಶೆಟ್ಟಿ ಯವರ ಕೊಡುಗೆಯನ್ನು ಸ್ಮರಿಸುತ್ತಾ ಶಾಲೆಯ ಇತಿಹಾಸದಲ್ಲಿ ಈ ದಿನ ಅವಿಸ್ಮರಣೀಯವಾಗಿದ್ದು, ಶಾಲೆಯ ಸರ್ವತೋಮುಖ ಅಭಿವೃದ್ಧಿಗೆ ಈ ಧನಸಹಾಯ  ಪೂರಕವಾಗಲಿದೆ ಎನ್ನುತ್ತಾ ಅವರಿಗೆ ಕೃತಜ್ಞತೆ ಸಲ್ಲಿಸಿದರು.  

ಈ ಸಂದರ್ಭದಲ್ಲಿ ಶ್ರೀ ಎಚ್.ಎಸ್. ಶೆಟ್ಟಿಯವರನ್ನು ಬೆಳ್ಳಿಯ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.

ಮುಖ್ಯ ಅಭ್ಯಾಗತರಾಗಿ ಬೆಂಗಳೂರಿನ ವಿಜ್ಞಾನಿಗಳು ಮತ್ತು ಉದ್ಯಮ ತಜ್ಞರಾದ ಡಾ| ರಾಜಾ ವಿಜಯಕುಮಾರ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಮಟ್ಟಾರು ರತ್ನಾಕರ ಹೆಗ್ಡೆ, ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಸೊಸೈಟಿಯ ಉಪಾಧ್ಯಕ್ಷರಾದ ಎಚ್.ನಾಗರಾಜ ಶೆಟ್ಟಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿಶಾಲಾ ಹಳೆ ವಿದ್ಯಾರ್ಥಿಗಳ ನೆರವಿನೊಂದಿಗೆ ಗ್ಯಾಸ್ ಸಂಪರ್ಕವಿಲ್ಲದ 12 ವಿದ್ಯಾರ್ಥಿಗಳಿಗೆ ಉಚಿತವಾಗಿ ಎಲ್.ಪಿ.ಜಿ ಸಂಪರ್ಕ ಕಲ್ಪಿಸಲಾಯಿತು. ಶಾಲಾ ಆಡಳಿತ ಮಂಡಳಿಯ ಉಪಾಧ್ಯಕ್ಷರಾದ ಶ್ರೀ ಎಸ್.ವಿ. ಭಟ್‌ ಸ್ವಾಗತಿಸಿದರು. ಆಡಳಿತ ಮಂಡಳಿಯ ಕಾರ್ಯದರ್ಶಿ ಮುರಲಿ ಕಡೆಕಾರ್‌ ಕಾರ್ಯಕ್ರಮ ನಿರೂಪಿಸಿದರು.

ಮುಖ್ಯ ಶಿಕ್ಷಕಿ ಶ್ರೀಮತಿ ಅನಸೂಯ ಧನ್ಯವಾದ ಸಮರ್ಪಿಸಿದರು.ಕಾರ್ಯಕ್ರಮದ ಪೂರ್ವದಲ್ಲಿ ಗುರು ಬನ್ನಂಜೆ ಸಂಜೀವ ಸುವರ್ಣರ ನಿರ್ದೇಶನದ ಜಟಾಯು ಮೋಕ್ಷ ಯಕ್ಷರೂಪಕ ಪ್ರದರ್ಶನಗೊಂಡಿತು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments