ಉಡುಪಿ : ಯಕ್ಷಗಾನ ಕಲಾರಂಗ ಕಳೆದ 24 ವರ್ಷಗಳಿಂದ ಆಯೋಜಿಸುತ್ತಾ ಬಂದ ತಾಳಮದ್ದಲೆ ಸಪ್ತಾಹ ‘ಉತ್ತರ ರಾಮಾಯಣ’ ಇಂದು (23-05-2022) ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಉದ್ಘಾಟನೆಗೊಂಡಿತು.
ಪರ್ಯಾಯ ಶ್ರೀಕೃಷ್ಣಾಪುರ ಮಠಾಧೀಶರಾದ ಶ್ರೀ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರು ಜ್ಯೋತಿ ಬೆಳಗಿಸಿ ಉದ್ಘಾಟಿಸಿ, ತಾಳಮದ್ದಲೆ ನಮ್ಮ ಪುರಾಣಲೋಕವನ್ನು ಅನಾವರಣಗೊಳಿಸುವ ವಿಶಿಷ್ಟ ಕಲಾಪ್ರಕಾರ. ಅರ್ಥಧಾರಿಗಳು ಮೂಲ ಕೃತಿಗೆ ಚ್ಯುತಿ ಬಾರದಂತೆ ವಿಷಯ ಪ್ರತಿಪಾದಿಸಿ ಜನಮಾನಸಕ್ಕೆ ನಮ್ಮ ಪುರಾಣ ಸಂಪತ್ತನ್ನು ತಲುಪಿಸಬೇಕೆಂದು ತಮ್ಮ ಅನುಗ್ರಹ ಸಂದೇಶದಲ್ಲಿ ನುಡಿದರು.
ಜ್ಯೋತಿಷ್ಯವಿದ್ವಾನ್ ಕೆ. ಪಿ. ಶ್ರೀನಿವಾಸ ತಂತ್ರಿ, ಮಣಿಕೃಷ್ಣ ಸ್ವಾಮಿ ಅಕಾಡೆಮಿಯ ಪಿ. ನಿತ್ಯಾನಂದ ರಾವ್, ಮಂಜೇಶ್ವರದ ಕಲಾ ಸಂಘಟಕ ಸಂಕಬೈಲು ಸತೀಶ ಅಡಪ ಅಭ್ಯಾಗತರಾಗಿ ಆಗಮಿಸಿ ಶುಭಕೋರಿದರು.
ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸಿದರು, ಕಾರ್ಯದರ್ಶಿ ಮುರಲಿ ಕಡೆಕಾರ್ ನಿರ್ವಹಣೆಗೈದ ಕಾರ್ಯಕ್ರಮದ ಕೊನೆಗೆ ಎ. ನಟರಾಜ ಉಪಾಧ್ಯ ಧನ್ಯವಾದ ಸಮರ್ಪಿಸಿದರು. ಬಳಿಕ ಪ್ರಸಿದ್ಧ ಅರ್ಥಧಾರಿಗಳಿಂದ ‘ಅಗ್ನಿಪರೀಕ್ಷೆ’ ತಾಳಮದ್ದಲೆ ಸಂಪನ್ನಗೊ0ಡಿತು.