ಉಡುಪಿಯ ಯಕ್ಷಗಾನ ಕಲಾರಂಗ ಎರಡು ದಶಕಗಳಿಂದ ನಡೆಸಿಕೊಂಡು ಬಂದಿರುವ ತಾಳಮದ್ದಲೆ ಸಪ್ತಾಹ ಮೇ 23, 2022 ಸೋಮವಾರದಂದು ಸಂಜೆ 5.00 ಗಂಟೆಗೆ ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಉದ್ಘಾಟನೆಗೊಳ್ಳಲಿದೆ.
ಪರ್ಯಾಯ ಶ್ರೀ ಕೃಷ್ಣಾಪುರ ಮಠಾಧೀಶರಾದ ಶ್ರೀ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರು ಜ್ಯೋತಿ ಬೆಳಗಿಸಿ ಉದ್ಘಾಟಿಸುವ ಕಾರ್ಯಕ್ರಮದಲ್ಲಿ ಮುಖ್ಯ ಅಭ್ಯಾಗತರಾಗಿ ವಿದ್ವಾನ್ ಕೆ. ಪಿ. ಶ್ರೀನಿವಾಸ ತಂತ್ರಿ, ಶ್ರೀ ಪಿ. ನಿತ್ಯಾನಂದ ರಾವ್, ಶ್ರೀ ಸಂಕಬೈಲು ಸತೀಶ ಅಡಪ, ಶ್ರೀ ಕರುಣಾಕರ್ ಸಾಲಿಯಾನ್ ಭಾಗವಹಿಸಲಿದ್ದಾರೆ.

ಉತ್ತರ ರಾಮಾಯಣ ಶೀರ್ಷಿಕೆಯಲ್ಲಿ ಪ್ರತಿನಿತ್ಯ ಸಂಜೆ 5.30 ರಿಂದ 8.30ರ ವರೆಗೆ ಅನುಕ್ರಮವಾಗಿ ಅಗ್ನಿ ಪರೀಕ್ಷೆ, ಶ್ರೀರಾಮ ನಿಜಪಟ್ಟಾಭಿಷೇಕ, ಸೀತಾ ಪರಿತ್ಯಾಗ, ಲವಣಾಸುರ ಕಾಳಗ, ವೀರಮಣಿ ಕಾಳಗ, ಲವ-ಕುಶ ಕಾಳಗ, ಶ್ರೀರಾಮ ನಿರ್ಯಾಣ ನಡೆಯಲಿದೆ.
29-05-2022 ಭಾನುವಾರ ತಾಳಮದ್ದಲೆ ಅಪರಾಹ್ನ 2.00 ಗಂಟೆಗೆ ಆರಂಭವಾಗುತ್ತದೆ ಎಂದು ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.