Friday, November 22, 2024
Homeಯಕ್ಷಗಾನಭಾಗವತ ಕಾಟುಕುಕ್ಕೆ ಕೊರಗಪ್ಪ ನಾಯ್ಕ ನಿಧನ

ಭಾಗವತ ಕಾಟುಕುಕ್ಕೆ ಕೊರಗಪ್ಪ ನಾಯ್ಕ ನಿಧನ

ಕಟೀಲು ಮೇಳದಲ್ಲಿ ದೀರ್ಘಕಾಲ ಭಾಗವತರಾಗಿ ಸೇವೆ ಸಲ್ಲಿಸಿದ್ದ ಕಾಟುಕುಕ್ಕೆ ಕೊರಗಪ್ಪ ನಾಯ್ಕರು ಮೇ 18, 2022 ರಂದು ದೀರ್ಘಕಾಲದ ಅಸೌಖ್ಯದಿಂದ ನಿಧನರಾದರು. ಅವರಿಗೆ 80 ವರ್ಷ ವಯಸ್ಸಾಗಿತ್ತು.


ಹಿರಿಯ ಬಲಿಪ ನಾರಾಯಣ ಭಾಗವತರ ಸಾಮೀಪ್ಯದಲ್ಲಿ ಯಕ್ಷಗಾನದತ್ತ ಆಕರ್ಷಿತರಾದ ಕೊರಗಪ್ಪ ನಾಯ್ಕರು ಭಾಗವತಿಕೆಯಲ್ಲಿಯೂ ಬಲಿಪ ಮಾರ್ಗದ ಪಥಿಕರು. ಕಟೀಲು- ಒಂದೇ ಮೇಳವಾಗಿದ್ದಾಗ ಸಂಗೀತಗಾರರಾಗಿ ಸೇರಿದ ಕೊರಗಪ್ಪ ನಾಯ್ಕರು ದೀರ್ಘಕಾಲ ಇರಾ ಗೋಪಾಲಕೃಷ್ಣ ಕುಂಡೆಚ್ಚ ಭಾಗವತರಿಗೆ ಸಹಾಯಕ ಭಾಗವತರಾಗಿ ಸೇವೆಸಲ್ಲಿಸಿದವರು.

ಮುಖ್ಯ ಮದ್ದಲೆಗಾರರಾಗಿದ್ದ ನಿಡ್ಲೆ ನರಸಿಂಹ ಭಟ್ಟರು, ಅಡೂರು ಕೃಷ್ಣ ಮದ್ಲೆಗಾರರು, ಅಡೂರು ಸುಂದರ ರಾಯರಂಥವರ ಜೊತೆಗೆ ಒಡನಾಡಿದ್ದರು. 70-90 ರ ದಶಕಗಳಲ್ಲಿ ಕಟೀಲಿನ ರಂಗ ಘನತೆಯನ್ನು ಒಂದಡಿ ಏರಿಸಿದ ಪ್ರತಿಭಾಶಾಲಿಗಳಾದ ಕದ್ರಿ ವಿಷ್ಣು, ಕುಂಬಳೆ ಕುಟ್ಯಪ್ಪು, ಪಡ್ರೆ ಚಂದು, ಕುಂಞಿಕಣ್ಣ ಮಣಿಯಾಣಿ, ಪುತ್ತೂರು ಕೃಷ್ಣ ಭಟ್ಟ, ಸಂಪಾಜೆ ಶೀನಪ್ಪ ರೈ, ಮುಂದಿಲ ಕೃಷ್ಣ ಭಟ್ಟ, ಕೋಡಿ ಕುಷ್ಟ , ಅಜಾರು ಉಮೇಶ ಶೆಟ್ಟಿ, ಮುಂಡ್ಕೂರು ಕುಟ್ಟಿ ಶೆಟ್ಟಿ ಮೊದಲಾದವರನ್ನು ಕುಣಿಸಿದ ಅನುಭವ ಅವರಿಗಿತ್ತು.

ಸೇವಾವಧಿಯ ಕೊನೆಯ ವರ್ಷಗಳಲ್ಲಿ ಕುಬಣೂರು ಶ್ರೀಧರ ರಾಯರಿಗೆ ಸಹಾಯಕ ಭಾಗವತರಾಗಿದ್ದರು. ಮದ್ದಲೆ ವಾದನವನ್ನೂ ಅರಿತಿದ್ದ ಕೊರಗಪ್ಪ ನಾಯ್ಕರದ್ದು ರಂಗಸ್ಥಳವನ್ನು ತುಂಬುವ ಕಂಠ. ನಾಟ, ಕಾಂಬೋಧಿ, ಭೈರವಿ, ಕಲ್ಯಾಣಿ, ಶಂಕರಾಭರಣ ರಾಗಗಳಂತೂ ಲೌಕಿಕ ರಂಗದಲ್ಲಿ ಪೌರಾಣಿಕ ಪ್ರಪಂಚವನ್ನು ಕಟ್ಟಿಕೊಡುತ್ತಿದ್ದವು.

ವೀರರಸದ ಪದಗಳಲ್ಲಿ ವೇಷಗಳಲ್ಲಿ ಆವೇಶ ಹುಟ್ಟಿಸುತ್ತಿದ್ದರು. ತಮ್ಮದು ಪೂರ್ವಾರ್ಧದ ಭಾಗವತಿಕೆಯಾದುದರಿಂದ ಅವಶ್ಯವಿದ್ದರಷ್ಟೇ ಮೋಹನ, ಆರಭಿ, ರೇಗುಪ್ತಿಯಂಥ ರಾಗಗಳನ್ನು ಬಳಸುತ್ತಿದ್ದರು, ‘ಪೂರ್ಣ’ ಪ್ರದರ್ಶನದ ಕಾಲ ಖಂಡದ ಔಚಿತ್ಯವರಿತ ವಿನಯಶೀಲರು ಅವರಾಗಿದ್ದರು.

‘ಶ್ರೀಲಲಿತೋಪಾಖ್ಯಾನ’ದ ಅವರ ಹಾಡುಗಳ ಧ್ವನಿ ಯಕ್ಷರಸಿಕರ ಕಿವಿಗಳಲ್ಲಿ ಇಂದಿಗೂ ಅನುರಣಿಸುತ್ತಿರಬಹುದು. ‘ದೇವಿಮಹಾತ್ಮೆ’ಯಲ್ಲಿ ಆರಂಭದ ಶ್ರೀದೇವಿಯ ಪ್ರಸನ್ನ ದೃಶ್ಯವನ್ನು ದೀರ್ಘವಾಗದಂತೆ ತ್ವರಿತದಲ್ಲಿ ಮುಗಿಸಿಬಿಡುವ ಕೌಶಲ ಅವರಲ್ಲಿತ್ತು. ‘ಕುಮಾರವಿಜಯ’, ‘ಕಿರಾತಾರ್ಜುನ’, ‘ಇಂದ್ರಕೀಲಕ’, ‘ಬ್ರಹ್ಮಕಪಾಲ’ ಗಳಂಥ ಪ್ರಸಂಗಗಳ ಪ್ರದರ್ಶನದಲ್ಲಿ ಆ ಕಾಲದ ಪ್ರಸಿದ್ಧ ಹಿರಿಯ ಭಾಗವತರ ತೂಕವನ್ನು ಮೆರೆಯುತ್ತಿದ್ದರು.


ಬಾಕಿಮಾರು ಗದ್ದೆಯ ಬರಿನೆಲದಲ್ಲಿ ಹೊಟ್ಟು ಹಾಕಿದ ರಂಗಸ್ಥಳವನ್ನು ಕಣ್ಣೆದುರು ತರಿಸುತ್ತಿದ್ದ ಕೊರಗಪ್ಪ ನಾಯ್ಕರ ಧ್ವನಿ ಮೌನವಾದದ್ದು ಯಕ್ಷಗಾನ ರಂಗಕ್ಕೆ ಬಲು ದೊಡ್ಡ ನಷ್ಟವೇ. ಅವರು ಪತ್ನಿ, ಇಬ್ಬರು ಪುತ್ರಿಯರು ಮತ್ತು ಓರ್ವ ಪುತ್ರನನ್ನು ಅಗಲಿದ್ದಾರೆ.

2018ರಲ್ಲಿ ಪಟ್ಲ ಫೌಂಡೇಶನ್ ಅವರಿಗೆ ಮನೆನಿರ್ಮಿಸಿಕೊಟ್ಟಿತ್ತು. ಉಡುಪಿಯ ಯಕ್ಷಗಾನ ಕಲಾರಂಗವು ವಾರ್ಷಿಕ ಪ್ರಶಸ್ತಿ ನೀಡಿ ಗೌರವಿಸಿತ್ತು. ಡಾ. ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ನ ಗೌರವಕ್ಕೂ ಕೊರಗಪ್ಪ ನಾಯ್ಕರು ಪಾತ್ರರಾಗಿದ್ದರು, ಅವರ ನಿಧನಕ್ಕೆ ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ಸಂತಾಪ ವ್ಯಕ್ತಪಡಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments