ಉಡುಪಿಯ ಯಕ್ಷಗಾನ ಕಲಾರಂಗವು ಯಕ್ಷಗಾನ ಸಂಘಟನೆ-ಕಲಾವಿದರು ಮತ್ತು ಯಕ್ಷಗಾನ ವಿದ್ವಾಂಸರನ್ನು ಗೌರವಿಸುವ ನಿಟ್ಟಿನಲ್ಲಿ ಪ್ರತಿ ವರ್ಷ ಇಪ್ಪತ್ತು ಪ್ರಶಸ್ತಿಗಳನ್ನು ಪ್ರದಾನ ಮಾಡುತ್ತಾ ಬಂದಿದೆ.
ಈ ವರ್ಷದ ಯಕ್ಷಗಾನ ವಿದ್ವಾಂಸರಿಗೆ ನೀಡುವ ತಲ್ಲೂರು ಕನಕಾ-ಅಣ್ಣಯ್ಯ ಶೆಟ್ಟಿ ನೆನಪಿನ ‘ಯಕ್ಷಗಾನ ಕಲಾರಂಗ ಪ್ರಶಸ್ತಿ’ಗೆ ಯಕ್ಷಗಾನ ಕಲಾವಿದ, ಅರ್ಥಧಾರಿ, ಪ್ರಸಂಗಕರ್ತ, ಪತ್ರಿಕಾ ಸಂಪಾದಕ, ಲೇಖಕ, ಯಕ್ಷಗುರು ಹೀಗೆ ಕಲೆ-ಸಾಹಿತ್ಯ ಸಂಬ0ಧಿ ಬಹು ಆಯಾಮಗಳಲ್ಲಿ ಸಾಧನೆ ಮಾಡಿದ ತಾರಾನಾಥ ವರ್ಕಾಡಿಯವರನ್ನು ಸಂಸ್ಥೆ ಆಯ್ಕೆ ಮಾಡಿದೆ.
ಪ್ರಶಸ್ತಿ ಪ್ರದಾನ ಸಮಾರಂಭ ಮೇ 22, 2022 ಭಾನುವಾರ ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಕಲಾಕಾರ್ಯಕ್ರಮದೊಂದಿಗೆ ಸಂಪನ್ನಗೊಳ್ಳಲಿದೆ.
ಪರ್ಯಾಯ ಶ್ರೀಕೃಷ್ಣಾಪುರ ಮಠಾಧೀಶರಾದ ಶ್ರೀ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರ ದಿವ್ಯ ಉಪಸ್ಥಿತಿಯಲ್ಲಿ ಅತಿಥಿಗಣ್ಯರ ಸಮಕ್ಷ ಜರಗಲಿದೆ.
ಡಾ. ತಲ್ಲೂರು ಶಿವರಾಮ ಶೆಟ್ಟರ ನೇತೃತ್ವದ ತಲ್ಲೂರು ಫ್ಯಾಮಿಲಿ ಟ್ರಸ್ಟ್ (ರಿ.) ಉಡುಪಿ ಪ್ರಾಯೋಜಕತ್ವದ ಈ ಪ್ರಶಸ್ತಿಯು ರೂ. 40,000/- ನಗದು ಪುರಸ್ಕಾರ ಒಳಗೊಂಡಿರುತ್ತದೆ ಎಂಬುದಾಗಿ ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.