Friday, November 22, 2024
Homeಯಕ್ಷಗಾನಸಾಧು ಸಜ್ಜನಿಕೆಯ ಮೇರು ಪ್ರತಿಭೆ ಬಲಿಪ ಪ್ರಸಾದ ಭಾಗವತರು: ಒಂದು ನುಡಿನಮನ

ಸಾಧು ಸಜ್ಜನಿಕೆಯ ಮೇರು ಪ್ರತಿಭೆ ಬಲಿಪ ಪ್ರಸಾದ ಭಾಗವತರು: ಒಂದು ನುಡಿನಮನ

ಬಲಿಪ ಪರಂಪರೆಯ ಸಮರ್ಥ ಉತ್ತರಾಧಿಕಾರಿ ಬಲಿಪ ಪ್ರಸಾದ ಭಟ್ಟರು ವ್ಯಕ್ತಿಯಾಗಿ ಮತ್ತು ಕಲಾವಿದರಾಗಿ ಅಪ್ಪಟ ಅಪರಂಜಿ. ಅವರದು ಸಾಧು – ಸಜ್ಜನಿಕೆಯ ಮೇರು ವ್ಯಕ್ತಿತ್ವ. ನಿನ್ನೆ (ಎ.11) ರಾತ್ರಿ ಹತ್ತರ ಹೊತ್ತು ಬೊಂಡಾಲ ಸಚ್ಚಿದಾನಂದ ಶೆಟ್ಟರೊಂದಿಗೆ ನೂಯಿಯ ಬಲಿಪ ಭವನದಲ್ಲಿ ಅವರ ಅಂತಿಮ ದರ್ಶನ ಮಾಡಿದಾಗ ಕರುಳು ಹಿಂಡಿ ಬಂತು. ಇನ್ನೂ ನಲವತ್ತಾರರ ಕಿರು ಹರೆಯದಲ್ಲಿ ಅನಾರೋಗ್ಯದಿಂದ ಹೈರಾಣಾಗಿದ್ದ ಆ ಪುಟ್ಟ ದೇಹ ಉಸಿರು ನಿಂತು ಮಲಗಿತ್ತು. ಬಂಧುಗಳು, ಅಭಿಮಾನಿಗಳೆಲ್ಲ ಮೌನ ದು:ಖಿಗಳಾಗಿ ಅಲ್ಲಲ್ಲಿ ನಿಂತಿದ್ದರು. ಪ್ರಸಾದ ಭಾಗವತರ ಪಾರ್ಥಿವ ಶರೀರಕ್ಕೆ ನಮಿಸಿ ಭಾರವಾದ ಮನಸ್ಸಿನಿಂದ ಹಿಂದಕ್ಕೆ ಬರಬೇಕಾಯ್ತು.

ಅದೆಷ್ಟು ವರ್ಷದಿಂದ ಈ ಅಪ್ಪ – ಮಗನ ಭಾಗವತಿಕೆಯ ಆಟ – ಕೂಟಗಳಲ್ಲಿ ಸ್ವತ: ಪಾತ್ರವಹಿಸಿ ಸಂಭ್ರಮಿಸಿದ್ದೆವೋ ತಿಳಿಯದು. ಆ ಪರಂಪರೆಯೇ ನಿಲುಗಡೆಗೆ ಬಂತಲ್ಲ ಎಂದು ವೇದನೆಯಾಗುತ್ತದೆ. 

ಸಜ್ಜನಿಕೆಯ ಸಾಕಾರ ಪ್ರಸಾದ ಬಲಿಪರು: ಮೂಡಬಿದಿರೆ ಸಮೀಪ ಮಾರೂರಿನ ನೂಯಿ ಮನೆಯಲ್ಲಿ ಯಕ್ಷರಂಗದ ಹಿರಿಯ ಸಾಧಕ ಬಲಿಪ ನಾರಾಯಣ ಭಾಗವತ ಮತ್ತು ವಿಜಯಲಕ್ಷ್ಮಿ ದಂಪತಿಗೆ 1976 ಏಪ್ರಿಲ್ 14 ರಂದು ಜನಿಸಿದ ಬಲಿಪ ಪ್ರಸಾದ ಭಟ್ ಅವರಿಗೆ ಭಾಗವತಿಕೆಯಲ್ಲಿ ತಂದೆಯೇ ಗುರು. ತಮ್ಮ 17ನೇ ವರ್ಷ ಪ್ರಾಯದಲ್ಲಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯನ್ನು ಸೇರಿದ (1994 ) ಅವರು ಕಳೆದ ಮೂರು ದಶಕಗಳಿಂದ ಭಾಗವತರಾಗಿ ಪ್ರತಿಷ್ಠಿತ ಬಲಿಪ ಪರಂಪರೆಯ ಸಾಂಪ್ರದಾಯಿಕ ಶೈಲಿಗೆ ಸಾಕ್ಷಿಯಾದರು.         

ಪೌರಾಣಿಕ ಪ್ರಸಂಗಗಳ ಹಾಡುಗಾರಿಕೆಯಲ್ಲಿ ಅಪಾರ ಸಿದ್ಧಿ ಪಡೆದ ಪ್ರಸಾದ ಬಲಿಪರು ಕಟೀಲು ಮೇಳವಲ್ಲದೆ ದೇಶ-ವಿದೇಶಗಳ ಹಲವಾರು ಯಕ್ಷಗಾನ ಪ್ರದರ್ಶನಗಳಲ್ಲಿ ತಮ್ಮ ವಿಶಿಷ್ಟ ಸ್ವರ ಗಾಂಭೀರ್ಯದಿಂದ ಜನಮನ ಗೆದ್ದಿದ್ದಾರೆ. ಅಜಾತಶತ್ರುವಾಗಿ ತಮ್ಮ ನಯ-ವಿನಯಗಳಿಂದ ಎಲ್ಲರ ಪ್ರೀತಿಪಾತ್ರರಾದ ಅವರು ಕಲಾಭಿಮಾನಿಗಳಿಂದ ಹಲವು ಮಾನ-ಸಮ್ಮಾನಗಳನ್ನು ಪಡೆದಿದ್ದಾರೆ.

ಕದ್ರಿ ಶ್ರೀ, ಯಕ್ಷ ಕೀರ್ತಿ, ಯಕ್ಷ ಸಿರಿ, ಯಕ್ಷ ತರಂಗಿಣಿ ಸೇರಿದಂತೆ ವಿವಿಧ ಪ್ರಶಸ್ತಿ-ಗೌರವಗಳಿಗೆ ಭಾಜನರಾಗಿರುವ ಅವರು ಪತ್ನಿ ದುರ್ಗಾದೇವಿ, ಮಕ್ಕಳಾದ ಅಪರ್ಣ ಹಾಗೂ ಅವನಿ ಅವರನ್ನೊಳಗೊಂಡ ಚೊಕ್ಕ ಸಂಸಾರ ಹೊಂದಿದ್ದರು. ಇನ್ನೂ ವರ್ಷ ತುಂಬದ ಮೂರನೆಯ ಹೆಣ್ಣು ಮಗುವೊಂದು ಹುಟ್ಟಿನಲ್ಲೇ ತಬ್ಬಲಿಯಾದುದು ಎಂತಹ ವಿಪರ್ಯಾಸ. ಎಪ್ರಿಲ್ 11, 2022 ಸೋಮವಾರ ಸಂಜೆ ಕಲಾವಿದರಿಗೆ ರತ್ನ ಪ್ರಾಯರಾಗಿದ್ದ ಪ್ರಸಾದರು ಇಹಲೋಕದ ಯಾತ್ರೆ ಮುಗಿಸಿ ಬಿಟ್ಟರು.


ಕೊನೆಯ ಸಮ್ಮಾನ:   ಫೆಬ್ರವರಿ 18, 2022 ರಂದು ಬೊಂಡಾಲ ಸಚ್ಚಿದಾನಂದ ಶೆಟ್ಟರು ನೀಡಿದ ‘ಬೊಂಡಾಲ ಪ್ರಶಸ್ತಿ’ ಯು ಪ್ರಾಯಶಃ ಪ್ರಸಾದ ಬಲಿಪರಿಗೆ ಸಂದ ಕೊನೆಯ ಸನ್ಮಾನವಿರಬೇಕು. ಕಟೀಲಿನ ಅನಂತ ಆಸ್ರಣ್ಣರು, ಮಾಜಿ ಸಚಿವ ರಮಾನಾಥ ರೈ , ವಿದ್ವಾಂಸ ಪ್ರಭಾಕರ ಜೋಶಿಯವರೊಂದಿಗೆ ನಾನೂ ಇದ್ದು, ಜೀವಂತ ಪ್ರಸಾದರೊಂದಿಗೆ ಮಾತನಾಡಿದ್ದು ಅಂದೇ ಕೊನೆಯದ್ದೆಂದು ಊಹಿಸಿಯೇ ಇರಲಿಲ್ಲ.      

ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯಲ್ಲಿ ನಾನು ಮತ್ತು ಎಂ.ಎಲ್.ಸಾಮಗರು ಸದಸ್ಯರಾಗಿದ್ದಾಗ ಬಲಿಪರಿಗೆ ಅಕಾಡೆಮಿ ಪ್ರಶಸ್ತಿ ಬಂದಿತ್ತು ,(2003). ಅವರನ್ನು ಕರೆದುಕೊಂಡು ಬರುವ ಜವಾಬ್ದಾರಿಯನ್ನು ಇದೇ ಪ್ರಸಾದರಿಗೆ ವಹಿಸಿದ್ದೆ.

ಕಾರವಾರದಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಒಂದು ತಾಳಮದ್ದಳೆಯೂ ಇತ್ತು. ಬಲಿಪದ್ವಯರ ಹಿಮ್ಮೇಳದಲ್ಲಿ ನನ್ನ – ಸಾಮಗರ ಸುಧನ್ವಾರ್ಜುನ ಅರ್ಥಗಾರಿಕೆ. ಆ ಎರಡು ದಿನ ಅವರ ಸೌಜನ್ಯ ಹಾಗೂ ಕಲಾನೈಪುಣ್ಯಕ್ಕೆ ಅಕಾಡೆಮಿ ಸದಸ್ಯರೆಲ್ಲಾ ಸೋತು ಹೋಗಿದ್ದರು. ಹೇಳುತ್ತಾ ಹೋದರೆ ಇಂತಹ ಪ್ರಕರಣಗಳು ಹಲವು.       

ಪ್ರಸಾದರ ನಿಷ್ಕಪಟ ಚೇತನಕ್ಕೆ ಭಗವಂತ ಸಾಯುಜ್ಯ ನೀಡಲಿ ಎಂದು ಯಕ್ಷಾಂಗಣ ಮಂಗಳೂರು, ಬೊಂಡಾಲ ಚ್ಯಾರಿಟೇಬಲ್ ಟ್ರಸ್ಟ್ ಮತ್ತು ಕರ್ನಾಟಕ ಯಕ್ಷಭಾರತಿ ಪುತ್ತೂರು ವತಿಯಿಂದ ನಮ್ಮ ಪ್ರಾರ್ಥನೆ.       

ಭಾಸ್ಕರ ರೈ ಕುಕ್ಕುವಳ್ಳಿ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments