Friday, November 22, 2024
Homeಯಕ್ಷಗಾನಶಿಕ್ಷಕರ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಮ್ಮೇಳನದ ಅಧ್ಯಕ್ಷರಾಗಿ ದಿವಾಕರ ಆಚಾರ್ಯ ಗೇರುಕಟ್ಟೆ

ಶಿಕ್ಷಕರ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಮ್ಮೇಳನದ ಅಧ್ಯಕ್ಷರಾಗಿ ದಿವಾಕರ ಆಚಾರ್ಯ ಗೇರುಕಟ್ಟೆ

ಪುತ್ತೂರು, ಕಡಬ ತಾಲೂಕು ಶಿಕ್ಷಕರ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಮ್ಮೇಳನದ ಅಧ್ಯಕ್ಷರಾಗಿ ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ, ಯಕ್ಷಗಾನ ಕಲಾವಿದ ದಿವಾಕರ ಆಚಾರ್ಯ ಗೇರುಕಟ್ಟೆ.

ದಿವಾಕರ ಆಚಾರ್ಯ ಅವರ ವ್ಯಕ್ತಿ ಪರಿಚಯ:

ಬೆಳ್ತ0ಗಡಿ ತಾಲೂಕು ಗೇರುಕಟ್ಟೆಯ ಸ್ವರ್ಣಶಿಲ್ಪಿ ಕೆ. ಮೋನಪ್ಪ ಆಚಾರ್ಯ – ವಾರಿಜ ದಂಪತಿಯರ ತೃತೀಯ ಪುತ್ರನಾಗಿ 1961ರಲ್ಲಿ ಜನನ. ಪ್ರಾಥಮಿಕ ಶಿಕ್ಷಣವನ್ನು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಗೇರುಕಟ್ಟೆ, ಪ್ರೌಢ ಶಿಕ್ಷಣವನ್ನು ಧರ್ಮಸ್ಥಳದ ಶ್ರೀ ಮಂಜುನಾಥೇಶ್ವರ ಪ್ರೌಢಶಾಲೆ, ಬಿ.ಎಸ್ಸಿ., ಪದವಿಯನ್ನು ಉಜಿರೆ ಯಸ್.ಡಿ.ಯಂ ಕಾಲೇಜ್ ಹಾಗೂ ಬಿ.ಇಡಿ ತರಬೇತಿಯನ್ನು ಮಂಗಳೂರಿನ ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯದಲ್ಲಿ ಪಡೆದಿರುತ್ತಾರೆ. ಮೈಸೂರು ಹಿಂದಿ ಪ್ರಚಾರ ಪರಿಷತ್ತು ಬೆಂಗಳೂರು ಇವರು ನಡೆಸುವ “ಹಿಂದಿರತ್ನ” ಪರೀಕ್ಷೆಯಲ್ಲಿ ರಾಜ್ಯದಲ್ಲಿ 4ನೇ ರ‍್ಯಾಂಕ್ ಪಡೆದಿರುತ್ತಾರೆ.

ಶಿಕ್ಷಕರಾಗಿ: 1982ರಲ್ಲಿ ಉಡುಪಿಯ ಬೆಳ್ಳಂಪಳ್ಳಿ ಶ್ರೀ ವಿಶ್ವಕರ್ಮ ಪ್ರೌಢಶಾಲೆಯಲ್ಲಿ ಗೌರವ ಶಿಕ್ಷಕರಾಗಿ 2 ವರ್ಷ ಸೇವೆ ಸಲ್ಲಿಸಿ, ಬಳಿಕ 1985ರ ಸೆಪ್ಟಂಬರ್ 5 ರಂದು ಬೆಳ್ತಂಗಡಿ ತಾಲೂಕಿನ ಪುತ್ತಿಲದ ಸರಕಾರಿ ಪ್ರೌಢಶಾಲೆಗೆ ಸರಕಾರಿ ಸೇವೆಗೆ ನೇಮಕವಾದರು. 5 ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿ 1991ರಲ್ಲಿ ಉಪ್ಪಿನಂಗಡಿ ಸರಕಾರಿ ಪದವಿಪೂರ್ವ ಕಾಲೇಜಿಗೆ ವರ್ಗಾವಣೆಗೊಂಡರು. ಈ ಸಂಸ್ಥೆಯಲ್ಲಿ ವಿಜ್ಞಾನ-ಗಣಿತ ಶಿಕ್ಷಕರಾಗಿ 18 ವರ್ಷ ಹಾಗೂ 2008 ರಿಂದ ಉಪ ಪ್ರಾಂಶುಪಾಲರಾಗಿ ಒಟ್ಟು 30 ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಒಟ್ಟು 38 ವರ್ಷಗಳ ಕಾಲ ಶಿಕ್ಷಕರಾಗಿ ಮತ್ತು ಆಡಳಿತಗಾರರಾಗಿ ದುಡಿದ ಅನುಭವದೊಂದಿಗೆ ದಿನಾಂಕ 31.10.2021ರಂದು ವಯೋ ನಿವೃತ್ತಿಯನ್ನು ಹೊಂದಿರುತ್ತಾರೆ.

ವಿಜ್ಞಾನ ಕೇಂದ್ರದ ಕಾರ್ಯನಿರ್ವಾಹಕರಾಗಿ: 1999ರಲ್ಲಿ ಶಿಕ್ಷಣ ಇಲಾಖೆಯಿಂದ ಸ್ಥಾಪನೆಗೊಂಡ ಪುತ್ತೂರು ವಿಧಾನಸಭಾ ಕ್ಷೇತ್ರದ ವಿಜ್ಞಾನ ಕೇಂದ್ರದ ಕಾರ್ಯನಿರ್ವಾಹಕರಾಗಿ ವಿದ್ಯಾರ್ಥಿಗಳಿಗೆ, ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರಿಗೆ ಮತ್ತು ಸಮುದಾಯಕ್ಕೆ ವೈಜ್ಞಾನಿಕ ಜಾಗೃತಿಯ ಕಾರ್ಯಕ್ರಮವನ್ನು ತಾಲೂಕಿನಾದ್ಯಂತ ಸಂಘಟಿಸಿದ್ದಾರೆ. ಕಾರ್ಯಕ್ರಮಗಳ ಅನುಷ್ಠಾನದಲ್ಲ್ಲಿ ದ.ಕ. ಜಿಲ್ಲೆಯ 9 ವಿಜ್ಞಾನ ಕೇಂದ್ರಗಳಲ್ಲಿ ಉಪ್ಪಿನಂಗಡಿಯ ವಿಜ್ಞಾನ ಕೇಂದ್ರವು ಸತತವಾಗಿ 5 ಬಾರಿ “ಉತ್ತಮ ವಿಜ್ಞಾನಕೇಂದ್ರ” ಎಂದು ಪ್ರಶಸ್ತಿ ಪಡೆದುಕೊಂಡಿದೆ. 1998ರಲ್ಲಿ ವಿಜ್ಞಾನ ಸಂಘದ ಸಂಚಾಲಕರಾಗಿದ್ದಾಗ ಸಂಸ್ಥೆಯ ವಿಜ್ಞಾನ ಸಂಘವು ದ.ಕ. ಜಿಲ್ಲೆಯ “ಉತ್ತಮ ವಿಜ್ಞಾನ ಸಂಘ”ವೆ0ಬ ಪ್ರಶಸ್ತಿಯನ್ನು ಪಡೆದಿರುತ್ತದೆ.

ಬರಹಗಾರರಾಗಿ: ಪರಿಸರ ಜಾಗೃತಿಗಾಗಿ ವೃಕ್ಷ ಸಂರಕ್ಷಣಾ ಕಿರುನಾಟಕ, ವಿಜ್ಞಾನ ಸಂಬ0ಧಿ ಭಾಷಣಗಳು ಆಕಾಶವಾಣಿಯಲ್ಲಿ ಪ್ರಸಾರವಾಗಿದೆ. ಕಲೆ-ಸಾಹಿತ್ಯ-ವಿಜ್ಞಾನ-ಸಿನಿಮಾ ಸಂಬ0ಧಿಸಿ ಇವರ ಲೇಖನಗಳು ನಾಡಿನ ದಿನಪತ್ರಿಕೆ-ವಾರಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಹಂಪಿ ವಿಶ್ವ ವಿದ್ಯಾನಿಲಯದ ವಿಜ್ಞಾನ ಸಂಗಾತಿ, ಡಿ.ಯಸ್.ಇ.ಆರ್.ಟಿ ಬೆಂಗಳೂರು ಪ್ರಕಟಿಸುತ್ತಿರುವ ವಿಜ್ಞಾನ ವಾಣಿಯಲ್ಲಿ ಇವರ ವೈಜ್ಞಾನಿಕ ಲೇಖನಗಳು ಪ್ರಕಟವಾಗಿದೆ. ಬೆಂಗಳೂರಿನ ರಾಷ್ಟಿಯ ವೈಮಾಂತರಿಕ್ಷ ಪ್ರಯೋಗ ಶಾಲೆ ಪ್ರಕಟಿಸುವ “ಕಣಾದ” ವಿಜ್ಞಾನ ಸಂಚಿಕೆಗಾಗಿ ಇವರು ಬರೆದ “ದೂರಸಂವೇದಿ ಉಪಗ್ರಹಗಳು ಮತ್ತು ಅನ್ವಯಗಳು” (2006) “ಮನುಕುಲಕ್ಕೆ ಮಾರಕ ಸೀಸದ ನಂಜು” (2007) ಪ್ರಬಂಧಗಳಿಗೆ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಸ್ಮಾರಕ ಪ್ರಶಸ್ತಿ ಲಭಿಸಿದೆ. ದೇವರ ಕಾಡುಗಳ ಮಹತ್ವದ ಬಗ್ಗೆ ಬರೆದ “ಪವಿತ್ರ ವನಗಳು” ಮತ್ತು ಪ್ರಾಕೃತಿಕ ವಿಕೋಪಗಳ ನಿರ್ವಹಣೆ” ಲೇಖನಗಳು ವಿಶೇಷ ಪುರಸ್ಕಾರಕ್ಕೆ ಪಾತ್ರವಾಗಿದೆ. ಮುಂಗಾರು ಮತ್ತು ಕನ್ನಡ ಪ್ರಭ ಪತ್ರಿಕೆಗಳಲ್ಲಿ “ಹವ್ಯಾಸಿ ಪತ್ರಕರ್ತ”ರಾಗಿ ಕಾರ್ಯನಿರ್ವಹಿಸಿದ್ದಾರೆ.

ಸಂಪನ್ಮೂಲ ವ್ಯಕ್ತಿಯಾಗಿ: ಪ್ರಾಥಮಿಕ-ಪ್ರೌಢಶಾಲಾ ಶಿಕ್ಷಕರಿಗೆ ವಿಜ್ಞಾನ ಮತ್ತು ಗಣಿತ ವಿಷಯಗಳ ತರಬೇತಿಯಲ್ಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ, ಉಪಗ್ರಹ ಆಧಾರಿತ ತರಬೇತಿಯಲ್ಲಿ ಜಿಲ್ಲಾ ಮಾರ್ಗದರ್ಶಕರಾಗಿ, ಇಕೋಕ್ಲಬಗಳ ಮಾಸ್ಟರ್ ಟ್ರೆನರ್ ಆಗಿ, ಪ್ರೌಢ ಶಾಲಾ ಗಣಿತ ಚೈತನ್ಯ ತರಬೇತಿ ಸಂಚಿಕೆ ಮತ್ತು ವಿಜ್ಞಾನ ಕೇಂದ್ರಗಳ ನಿರ್ವಾಹಕರ ಕೈಪಿಡಿ ರಾಜ್ಯ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡಿದ್ದಾರೆ. ಭಾರತ ಸರಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆಯ ವತಿಯಿಂದ ಹೈದರಾಬಾದಿನಲ್ಲಿ 10 ದಿನ ಮತ್ತು ನವದೆಹಲಿಯಲ್ಲಿ 25 ದಿನಗಳ ಕಾಲ ಜರಗಿದ ಓರಿಯೆಂಟೇಷನ್ ಕಾರ್ಯಕ್ರಮದಲ್ಲಿ ಭಾಗವಹಿಸಿ ರೂ 40 ಸಾವಿರ ಮೌಲ್ಯದ ಶ್ರವ್ಯ-ದೃಶ್ಯ ಸಾಧನಗಳನ್ನು ಸಂಸ್ಥೆಗೆ ಒದಗಿಸಿದ್ದಾರೆ. ಕರ್ನಾಟಕ ಸರಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಅನುದಾನ ರೂ 3,00,000/- ಮೌಲ್ಯದ ಉಪಕರಣಗಳನ್ನು ಖರೀದಿಸಿ ಪ್ರಯೋಗ ಶಾಲೆಯ ಉನ್ನತೀಕರಣವನ್ನು ಮಾಡಿರುತ್ತಾರೆ.

ಶಿಕ್ಷಕರಾಗಿ ಪಡೆದ ಪುರಸ್ಕಾರ-ಪ್ರಶಸ್ತಿಗಳು: ಚಿತ್ರದುರ್ಗದ ಪುಟಾಣಿ ವಿಜ್ಞಾನ ಪತ್ರಿಕಾ ಬಳಗದಿಂದ ಜಿಲ್ಲಾ ಮತ್ತು ರಾಜ್ಯ ಮಟ್ಟದ “ಉತ್ತಮ ವಿಜ್ಞಾನ ಸಂಘಟಕ” ಪ್ರಶಸ್ತಿ ಹಾಗೂ 2000ರಲ್ಲಿ ಜರಗಿದ ರಾಜ್ಯಮಟ್ಟದ ಪ್ರಥಮ ವಿಜ್ಞಾನ ಸಮಾವೇಶದಲ್ಲಿ “ವಿಜ್ಞಾನ ಮಿತ್ರ” ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಪ್ರೌಢ ಶಾಲಾ ಶಿಕ್ಷಕರ ವಿಜ್ಞಾನ ವಿಚಾರ ಗೋಷ್ಠಿ ಸ್ಪರ್ಧೆಗಳಲ್ಲಿ ಬಹುಮಾನಿತರಾಗಿದ್ದಾರೆ. ಇವರ ಶೈಕ್ಷಣಿಕ-ಸಾಮಾಜಿಕ-ಸಾಂಸ್ಕೃತಿಕ ಕ್ಷೇತ್ರಗಳ ಸಾಧನೆಗಳನ್ನು ಗುರುತಿಸಿ ದ.ಕ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯು 2008ರಲ್ಲಿ “ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ”, 2009ರಲ್ಲಿ ಕರ್ನಾಟಕ ರಾಜ್ಯ ಸರ್ಕಾರವು “ಉತ್ತಮ ಶಿಕ್ಷಕ ರಾಜ್ಯ ಪ್ರಶಸ್ತಿ”, 2010ರಲ್ಲಿ ಭಾರತದ ಮಾನ್ಯ ರಾಷ್ಟ್ರಪತಿಗಳಾದ ಶ್ರೀಮತಿ ಪ್ರತಿಭಾ ಪಾಟೀಲ್ ಅವರು ದೆಹಲಿಯ ವಿಜ್ಞಾನ ಭವನದಲ್ಲಿ ನಡೆದ ಶಿಕ್ಷಕರ ದಿನಾಚರಣೆ ಸಂದರ್ಭದಲ್ಲಿ “ಉತ್ತಮ ಶಿಕ್ಷಕ ರಾಷ್ಟ್ರ ಪ್ರಶಸ್ತಿ” ಪ್ರಧಾನಿಸಿ ಗೌರವಿಸಿದ್ದಾರೆ. ಉತ್ತಮ ಶಿಕ್ಷಕ ಜಿಲ್ಲಾ ಪ್ರಶಸ್ತಿ, ರಾಜ್ಯ ಪ್ರಶಸ್ತಿ ಮತ್ತು ರಾಷ್ಟ್ರ ಪ್ರಶಸ್ತಿಯನ್ನು ಸತತವಾಗಿ ಪಡೆದ ಅವಿಭಜಿತ ದ.ಕ. ಜಿಲ್ಲೆಯ ಮೊದಲಿಗರಾಗಿದ್ದಾರೆ.

ಮಂಗಳೂರಿನ ಶ್ರೀನಿವಾಸ ಶಿಕ್ಷಣ ಸಮೂಹ ಸಂಸ್ಥೆಗಳ ರಜತಮಹೋತ್ಸವ ಸಂದರ್ಭದಲ್ಲಿ ಎ. ಶ್ಯಾಮರಾವ್ ಫೌಂಡೇಶನ್‌ನ “ಅತ್ಯುತ್ತಮ ಶಿಕ್ಷಕ” ಪ್ರಶಸ್ತಿಯನ್ನು ನಗದು ಪುರಸ್ಕಾರದೊಂದಿಗೆ ಪಡೆದಿರುತ್ತಾರೆ. ಈ ಪ್ರಶಸ್ತಿ ಪಡೆದ ಸರ್ಕಾರಿ ಶಿಕ್ಷಣ ಸಂಸ್ಥೆಯ ಮೊದಲ ಶಿಕ್ಷಕರೆಂಬ ಕೀರ್ತಿಯು ಇವರದ್ದಾಗಿದೆ. ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಡಾ| ಡಿ.ವೀರೇಂದ್ರ ಹೆಗ್ಗಡೆಯವರು, ರಾಮಕುಂಜದಲ್ಲಿ ಪೇಜಾವರ ಶ್ರೀ ವಿಶ್ವೇಶ್ವರ ತೀರ್ಥ ಸ್ವಾಮೀಜಿಯವರು, ಅವಿಭಜಿತ ದ.ಕ. ಜಿಲ್ಲೆ, ಶೃಂಗೇರಿ, ಬೆಂಗಳೂರು, ಹುಬ್ಬಳ್ಳಿ ಹಾಗೂ ಕೊಯಮುತ್ತೂರಿನಲ್ಲಿ ಸನ್ಮಾನಗಳು ಸಂದಿವೆ.

ಯಕ್ಷಗಾನ ಕಲಾವಿದರಾಗಿ: ಯಕ್ಷಗಾನದ ಹವ್ಯಾಸಿ ಕಲಾವಿದರಾದ ತಂದೆ ಮತ್ತು ಹಿರಿಯ ಸಹೋದರನ ಪ್ರೇರಣೆಯಿಂದ ಯಕ್ಷಗಾನದ ಆಸಕ್ತಿ. ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಪ್ರೌಢಶಿಕ್ಷಣ ಪಡೆಯುತ್ತಿರುವಾಗ 9ನೇ ತರಗತಿಯಲ್ಲಿರುವಾಗ “ಪಂಚವಟಿ” ತಾಳಮದ್ದಳೆಯಲ್ಲಿ ಮತ್ತು ಶಾಲಾ ವಾರ್ಷಿಕೋತ್ಸವದಲ್ಲಿ “ವೃಷಕೇತು” ಪಾತ್ರದ ಮೂಲಕ ರಂಗ ಪ್ರವೇಶ.
1985 ರಲ್ಲಿ ಪ್ರೌಢ ಶಾಲಾ ಶಿಕ್ಷಕನಾಗಿ ಸೇವೆಗೆ ಸೇರಿದಾಗ ಭಾಸ್ಕರ ಬಾರ್ಯರೊಂದಿಗೆ ವಿವಿಧೆಡೆಗಳಲ್ಲಿ ನಡೆಯುವ ತಾಳಮದ್ದಳೆಗಳಲ್ಲಿ ಅರ್ಥಧಾರಿಯಾಗಿ ಭಾಗವಹಿಸುವಿಕೆ. ಕ್ರಮೇಣ ತಾಳಮದ್ದಳೆಯ ಪ್ರಸಿದ್ಧ ಅರ್ಥದಾರಿಗಳ ಜೊತೆ ಪಾತ್ರ ನಿರ್ವಹಿಸಿದ ಅನುಭವ ಇವರಿಗಿದೆ.

ಕಳೆದ 4 ದಶಕಗಳಿಂದ ಯಕ್ಷಕೂಟ (ರಿ) ನಾಳ, ಉಪ್ಪಿನಂಗಡಿ ಶ್ರೀ ಕಾಳಿಕಾಂಬಾ ಯಕ್ಷಗಾನ ಕಲಾ ಸಂಘ, ನಾಳ ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಸಂಘ ಗೇರುಕಟ್ಟೆ, ಯಕ್ಷಸಂಗಮ ಉಪ್ಪಿನಂಗಡಿ, ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ ಬೊಳುವಾರು ಇದರ ತಾಳಮದ್ದಳೆ ಮತ್ತು ಬಯಲಾಟಗಳಲ್ಲಿ ಭಾಗವಹಿಸಿದ್ದಾರೆ. ಮಂಗಳೂರು ಆಕಾಶವಾಣಿಯ ರೇಡಿಯೋ ತಾಳಮದ್ದಳೆಯಲ್ಲಿ ಪಾಲ್ಗೊಂಡಿದ್ದಾರೆ.

ಯಕ್ಷಗಾನ ಸಂಘಟಕರಾಗಿ: 1999 ರಲ್ಲಿ ಉಪ್ಪಿನಂಗಡಿಯಲ್ಲಿ ಶ್ರೀಕಾಳಿಕಾಂಬಾ ಯಕ್ಷಗಾನ ಸಂಘದ ರಜತ ವರ್ಷದ ಸಂಚಾಲಕನಾಗಿ 28 ಮನೆ-ಮನೆ ತಾಳಮದ್ದಳೆಯನ್ನು ಸಂಘಟಿಸಿ ಯಶಸ್ವಿಯಾದದ್ದು ಇವರಿಗೆ ಮರೆಯಲಾರದ ಸವಿನೆನಪು. ಉಪ್ಪಿನಂಗಡಿ ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ಶೇಣಿ, ಸಾಮಗ, ಮೂಡಂಬೈಲು, ಪೆರ್ಲ ತೆಕ್ಕಟ್ಟೆ, ಜೋಶಿ ಭಾಗವಹಿಸುವಿಕೆಯಲ್ಲಿ ಶರಸೇತುಬಂಧ ಮತ್ತು ಭೀಷ್ಮಾರ್ಜುನ ತಾಳಮದ್ದಳೆ ಸಂಘಟಿಸಿದ್ದಾರೆ. ಸಂಸ್ಥೆಯ ವಿದ್ಯಾರ್ಥಿಗಳಿಗೆ ತಾಳಮದ್ದಳೆಯ ಮತ್ತು ನಾಟ್ಯ ತರಬೇತಿಯ ವ್ಯವಸ್ಥೆ ಕಲ್ಪಿಸಿ ಶಿಕ್ಷಕರು ಕೂಡಾ ಪ್ರದರ್ಶನದಲ್ಲಿ ಭಾಗವಹಿಸುವಂತೆ ಮಾಡಿದ್ದಾರೆ.
ಉಪ್ಪಿನಂಗಡಿ ಶ್ರೀ ಕಾಳಿಕಾಂಬಾ ಯಕ್ಷಗಾನ ಸಂಘದ ರಜತ ವರ್ಷಾಚರಣೆಯ ಸ್ಮರಣ ಸಂಚಿಕೆ “ಕಾಯಕ”ದಲ್ಲಿ ಸಂಘದ ಚಟುವಟಿಕೆಗಳ ದಾಖಲೀಕರಣದ ಕಾರ್ಯ ಮಾಡಿದ್ದಾರೆ. ಬಂಟ್ವಾಳ ಶ್ರೀ ತಿರುಮಲ ವೆಂಕಟರಮಣ ದೇವಳದಲ್ಲಿ ಪ್ರತಿವರ್ಷ ನಡೆಯುವ ಶಾವಣ ಮಾಸದ ತಾಳಮದ್ದಳೆಯಲ್ಲಿ ಉಪ್ಪಿನಂಗಡಿಯ ಶ್ರೀ ಕಾಳಿಕಾಂಬಾ ಯಕ್ಷಗಾನ ಸಂಘದ ನಿರಂತರ ಪಾಲ್ಗೊಳ್ಳುವಿಕೆಯಲ್ಲಿ ಇವರ ಶ್ರಮವಿದೆ.

ಪ್ರೊ. ಅಮೃತ ಸೋಮೇಶ್ವರ ವಿರಚಿತ “ಘೋರಮಾರಕ” ತಾಳಮದ್ದಳೆಯನ್ನು ಉಪ್ಪಿನಂಗಡಿ, ಗೇರುಕಟ್ಟೆ, ಕಕ್ಕೆಪದವು ಮೊದಲಾದ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳಿಂದ ಪ್ರದರ್ಶಿಸಿ ಜನಜಾಗೃತಿ ಮೂಡಿಸಿದ್ದಾರೆ. ಅತಿಥಿ ಕಲಾವಿದರ ಮತ್ತು ಸಹೋದ್ಯೋಗಿಗಳಿಂದ ‘ಮಾರಿಷ ಕಲ್ಯಾಣ’ ಪರಿಸರ ಸಂರಕ್ಷಣೆಯ ಸಂದೇಶದ ತಾಳಮದ್ದಳೆಯ ಹಲವು ಪ್ರಯೋಗಗಳನ್ನು ನಡೆಸಿದ್ದಾರೆ.

ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಮಂಗಳೂರಿನ ಪುರಭವನದಲ್ಲಿ ಆಯೋಜಿಸಿದ ಯಕ್ಷಗಾನ ಸಂಭ್ರಮದಲ್ಲಿ ಶಿಕ್ಷಕರಾದ ರಾಮಕೃಷ್ಣ ಪಡುಮಲೆ ನೇತೃತ್ವದಲ್ಲಿ ಮೀನಾಕ್ಷಿ ಕಲ್ಯಾಣ ಪ್ರಸಂಗ ಪ್ರದರ್ಶನ ನೀಡಿ ಪುರಸ್ಕಾರವನ್ನು ಪಡೆದಿರುವುದು ಸರ್ಕಾರಿ ಶಾಲೆಗೆ ಒಂದು ಹೆಮ್ಮೆಯ ಸಂಗತಿಯಾಗಿದೆ. ಬೆಂಗಳೂರಿನ ಮಲ್ಲೇಶ್ವರಂ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗಾಗಿ ಕರ್ಣಾರ್ಜುನ ತಾಳಮದ್ದಳೆಯನ್ನು ಅತಿಥಿ ಕಲಾವಿದರು ಮತ್ತು ಶಿಕ್ಷಕರಿಂದ ಏರ್ಪಡಿಸಿದ್ದಾರೆ.

ತಾಳಮದ್ದಳೆಯ ಮೇರು ಕಲಾವಿದ ದಿ| ಅರ್ಕುಳ ಸುಬ್ರಾಯ ಆಚಾರ್ಯ ಪ್ರತಿಷ್ಠಾನವನ್ನು ಸ್ಥಾಪಿಸಿ ಸುಮಾರು 40 ಯಕ್ಷಗಾನ ಕಲಾವಿದರನ್ನು ಸನ್ಮಾನಿಸಿದ್ದಾರೆ. ನಾಲ್ವರು ಕಲಾವಿದರಿಗೆ ನಿಧಿ ಸಹಿತ ಅರ್ಕುಳ ಪ್ರಶಸ್ತಿ ಪ್ರದಾನಿಸಲಾಗಿದೆ. ಸೌಹಾರ್ದ ಯಕ್ಷಗಾನ ಸಮಿತಿ ಉಪ್ಪಿನಂಗಡಿ, ಬಾರ್ಯ ಪ್ರತಿಷ್ಠಾನ ಪುತ್ತೂರು ಇದರ ಸಂಚಾಲಕರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ. ಪ್ರಸ್ತುತ ಉಪ್ಪಿನಂಗಡಿ ಶ್ರೀಕಾಳಿಕಾಂಬಾ ಯಕ್ಷಗಾನ ಸಂಘದ ಅಧ್ಯಕ್ಷ, ಯಕ್ಷಭಾರತಿ (ರಿ) ಕನ್ಯಾಡಿ, ಧರ್ಮಸ್ಥಳ ಇದರ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ.

ಕಲಾ ಪೋಷಣೆಗೆ ಸಂದ ಗೌರವಗಳು: ಕುರಿಯ ವಿಠಲ ಶಾಸ್ತ್ರಿ ಪ್ರತಿಷ್ಠಾನ ಉಜಿರೆ, ಶ್ರೀಕಾಳಿಕಾಂಬ ಯಕ್ಷಗಾನ ಕಲಾ ಸೇವಾ ಸಂಘ ಉಪ್ಪಿನಂಗಡಿ, ಯಕ್ಷಕೂಟ ನಾಳ, ಯಕ್ಷ ಭಾರತಿ ಕನ್ಯಾಡಿ, ಶೇಣಿ ಚಾರಿಟೇಬಲ್ ಟ್ರಸ್ಟ್ ಸುರತ್ಕಲ್ ಇವರಿಂದ ಶೇಣಿ ಜನ್ಮ ಶತಮಾನೋತ್ಸವ ಸಂಸ್ಮರಣೆಯ ಕಾರ್ಯಕ್ರಮದಲ್ಲಿ “ಉತ್ತಮ ಯಕ್ಷಗಾನ ಸಂಘಟಕ ಪ್ರಶಸ್ತಿ” ಇವರಿಗೆ ಪ್ರಾಪ್ತವಾಗಿದೆ.


ಯಕ್ಷಗಾನದ ಮೇರು ಕಲಾವಿದ ಎನ್.ಎಸ್. ಕಿಲ್ಲೆ ಪ್ರತಿಷ್ಠಾನವು ಅವರ ಜನ್ಮ ಶತಮಾನೋತ್ಸವದ ನಿಮಿತ್ತ ಆಯೋಜಿಸಿದ ತಾಳಮದ್ದಳೆ ಸ್ಪರ್ಧೆಯಲ್ಲಿ “ಮಾಗಧ ವಧೆ” ಪ್ರಸಂಗ ಪ್ರಸ್ತುತಪಡಿಸಿದ ಶ್ರೀಕಾಳಿಕಾಂಬ ತಂಡಕ್ಕೆ ದ್ವಿತೀಯ ಬಹುಮಾನ ಪ್ರಾಪ್ತವಾಗಿದೆ. ಕಾಣಿಯೂರು ಮಠದ ಶ್ರೀಗಳವರ ಚಾತುರ್ಮಾಸ್ಯದ ಸಂದರ್ಭದಲ್ಲಿ ಜರುಗಿದ ತಾಳಮದ್ದಳೆ ಸ್ಪರ್ಧೆಯಲ್ಲಿ ಮಾಗಧ ವಧೆ ಪ್ರಸಂಗದ “ಶ್ರೀಕೃಷ್ಣನ” ಪಾತ್ರ ನಿರ್ವಹಣೆಗೆ “ಉತ್ತಮ ಅರ್ಥಧಾರಿ” ಪ್ರಶಸ್ತಿ ಲಭಿಸಿದೆ.

ಸ್ವಯಂ ಸೇವಾ ಸಂಸ್ಥೆಗಳೊ0ದಿಗೆ: ಸಂಜೀವಿನಿ ಪರಿಸರ ಜಾಗೃತಿ ಸಮಿತಿ ಇಳಂತಿಲ, ಕನ್ನಡ ಬಳಗ ಇಳಂತಿಲ, ಹಿರಿಯ ವಿದ್ಯಾರ್ಥಿ ಸಂಘ ಗೇರುಕಟ್ಟೆ, ನಾಳ ಶ್ರೀ ದುರ್ಗಾಪರಮೇಶ್ವರಿ ದೇವಳದ ಅಭಿವೃದ್ಧಿ ಸಮಿತಿಯ ಪ್ರಧಾನ ಕಾರ್ಯದರ್ಶಿ, ಬೆಳ್ತಂಗಡಿ ತಾಲೂಕು ವಿಶ್ವಕರ್ಮಾಭ್ಯುದಯ ಸಭಾ (ರಿ) ಇದರ ಕಾರ್ಯದರ್ಶಿಯಾಗಿ ಸಮಾಜಿಕ ಸೇವಾ ಕಾರ್ಯಗಳಲ್ಲಿ ಭಾಗಿಯಾಗಿದ್ದಾರೆ. ಉಪ್ಪಿನಂಗಡಿ ರೋಟರಿ ಕ್ಲಬ್‌ನ 2018-19ರ ಅಧ್ಯಕ್ಷರಾಗಿ ಕರ್ತವ್ಯ ನಿರ್ವಹಿಸಿದ್ದು ರೋಟರಿ ಜಿಲ್ಲೆ 3181 ರಲ್ಲಿ ಬಹಳ ಸಮಯದ ನಂತರ ಉತ್ತಮ ಸೇವಾ ಚಟುವಟಿಕೆಗಳಿಗೆ 7 ಪ್ರಶಸ್ತಿ ಪಡೆದಿರುತ್ತಾರೆ. ಪುತ್ತೂರು ವಲಯದ ಪ್ರೌಢಶಾಲಾ ಮುಖ್ಯಶಿಕ್ಷಕರ ಸಂಘದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. ಪ್ರಸ್ತುತ ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನ (ರಿ) ಮೆಲ್ಕಾರ್ ಬಂಟ್ವಾಳ ಇದರ ಪ್ರಧಾನ ಕಾರ್ಯದರ್ಶಿಯಾಗಿ ನಿಯೋಜಿತರಾಗಿದ್ದಾರೆ.

64 ವರ್ಷಗಳ ಇತಿಹಾಸವಿರುವ ಉಪ್ಪಿನಂಗಡಿ ಸ.ಪ.ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಮೂಲಭೂತ ಸೌಕರ್ಯಗಳನ್ನು ಮಾನ್ಯ ಶಾಸಕರು, ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಸದಸ್ಯರು, ಉಪ್ಪಿನಂಗಡಿ ಗ್ರಾಮ ಪಂಚಾಯತ್, ಹಿರಿಯ ವಿದ್ಯಾರ್ಥಿಗಳು ಮತ್ತು ದಾನಿಗಳ ನೆರವಿನಿಂದ ಒದಗಿಸಿದ್ದಾರೆ. ಪ್ರಸ್ತುತ ಪ್ರೌಢಶಾಲಾ ವಿಭಾಗಕ್ಕೆ 2020-21 ಸಾಲಿನ ಅನುದಾನದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಪುತ್ತೂರು ಶಾಸಕರಾದ ಶ್ರೀ ಸಂಜೀವ ಮಠಂದೂರು ಅವರ ಅನುದಾನದಿಂದ ರೂಪಾಯಿ ಒಂದು ಕೋಟಿಗಿಂತಲೂ ಹೆಚ್ಚಿನ ಅನುದಾನದಲ್ಲಿ 6 ಕೊಠಡಿಗಳ ಕಾಮಗಾರಿ ನಡೆಯುತ್ತಿದ್ದು ನರೇಗಾ ಜಂಟಿ ಯೋಜನೆಯಲ್ಲಿ ರೂ 3.20 ಲಕ್ಷ ವೆಚ್ಚದಲ್ಲಿ ಶಾಲಾ ಜಮೀನಿನ ಆವರಣ ಗೋಡೆಯ ನಿರ್ಮಾಣವಾಗಿದೆ.

ಶಿಕ್ಷಕ ವೃತ್ತಿಗೆ ಸೇರುವಂತೆ ಪ್ರೇರಣೆ ನೀಡಿದ ಹಿರಿಯ ಸಹೋದರ ಉಮೇಶ ಅಚಾರ್ಯ, ಗುರುಗಳು, ಸಹಕಾರ ನೀಡಿದ ಜನಪ್ರತಿನಿಧಿಗಳು, ಇಲಾಖಾಧಿಕಾರಿಗಳು, ಎಸ್.ಡಿ.ಎಂ.ಸಿ, ಹಿರಿಯ ವಿದ್ಯಾರ್ಥಿಗಳು ಮತ್ತು ಶಿಕ್ಷಕ ವೃಂದದ ಸಹಕಾರವನ್ನು ಸದಾ ನೆನಪಿಸುತ್ತಾರೆ.

ಪತ್ನಿ ಶ್ರೀಮತಿ ಭಾರತಿ ಎಂ.ಎಲ್ ಬೆಳ್ತಂಗಡಿ ತಾಲೂಕಿನ ಅಳದಂಗಡಿ ಸ.ಪ.ಪೂರ್ವ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿದ್ದಾರೆ. ಸೇವಾ ಸಂಘಟನೆಗಳಲ್ಲಿ ತೊಡಗಿಸಿಕೊಂಡು ಮಕ್ಕಳಿಗೆ ಶಿಕ್ಷಣ ಹಾಗೂ ಉದ್ಯೋಗ ಪಡೆಯುವಲ್ಲಿ ಮಾರ್ಗದರ್ಶನ ಮಾಡುತ್ತಿದ್ದಾರೆ. ಮಹಿಳಾ ತಾಳಮದ್ದಳೆ ಕಾರ್ಯಕ್ರಮದಲ್ಲಿ ಅರ್ಥಧಾರಿಯಾಗಿ ಭಾಗವಹಿಸಿದ್ದಾರೆ. ಅವಳಿ ಮಕ್ಕಳಾದ ಸ್ವಾತಿ ಮುಂಬೈಯ ಆಕ್ಸೆಂಚರ್ ಕಂಪನಿಯಲ್ಲಿ ಸಾಫ್ಟ್ವೇರ್ ಇಂಜೀನಿಯರಾಗಿ ಮತ್ತು ಸನತ್ ಮಣಿಪಾಲದ ಎಮ್.ಐ.ಟಿಯಲ್ಲಿ ಎಂ.ಟೆಕ್ ಪದವಿ ಪೂರೈಸಿರುತ್ತಾರೆ.

ನಿರೂಪಣೆ: ಶ್ರೀಮತಿ ಪುಷ್ಪಲತಾ ಎಂ, ಉಪ್ಪಿನಂಗಡಿ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments