ಶ್ರೀ ಕ್ಷೇತ್ರ ಧರ್ಮಸ್ಥಳದ ಲಲಿತ ಕಲಾ ಕೇಂದ್ರದಲ್ಲಿ ಗುರುಗಳಾದ ತೆಂಕುತಿಟ್ಟಿನ ಹಿರಿಯ ಭಾಗವತ ಶ್ರೀ ಬಿ. ಗೋಪಾಲಕೃಷ್ಣ ಕುರುಪ್‌ರಿಂದ ಭಾಗವತಿಕೆಯನ್ನು ಅಭ್ಯಾಸ ಮಾಡಿ ಎಳೆವಯಸ್ಸಿನಲ್ಲಿಯೇ ಸಾಂಪ್ರದಾಯಿಕ ಶೈಲಿಯ ಭಾಗವತರಾಗಿ ಗುರುತಿಸಿಕೊಂಡವರು ಪದ್ಮನಾಭ ಕುಲಾಲ್.
ಶ್ರೀ ಕಟೀಲು ಮೇಳದಲ್ಲಿ ಬಣ್ಣದ ವೇಷಧಾರಿಯಾಗಿದ್ದ ದಿ| ಕುಂಞಣ್ಣ ಶೆಟ್ಟಿಯವರ ಮೂಲಕ ನೇಪಥ್ಯ ಕಲಾವಿದರಾಗಿ ಶ್ರೀ ಕಟೀಲು ಮೇಳದಲ್ಲಿ 4 ವರ್ಷಗಳ ತಿರುಗಾಟ. ನಂತರ ಭಾಗವತಿಕೆ ಅಭ್ಯಾಸ ಮಾಡಿ ಸಂಗೀತಗಾರರಾಗಿ ಮತ್ತೆ ಕಟೀಲು ಮೇಳದಲ್ಲಿ 5-6 ವರ್ಷಗಳ ತಿರುಗಾಟ. ಇರಾ ಗೋಪಾಲಕೃಷ್ಣ, ಬಲಿಪ ನಾರಾಯಣ, ಕುರಿಯ ಗಣಪತಿ ಶಾಸ್ತ್ರಿ ಭಾಗವತರಿಂದ ಮಾರ್ಗದರ್ಶನ. ಈ ಅವಧಿಯಲ್ಲಿ ಉಪ್ಪಿನಂಗಡಿಯ ಶ್ರೀ ಕಾಳಿಕಾಂಬ ಯಕ್ಷಗಾನ ಸಂಘದ ನಿಗದಿತ ತಾಳಮದ್ದಳೆ ಕೂಟಗಳಲ್ಲಿ ಭಾಗವಹಿಸುವ ಮೂಲಕ ತನ್ನ ಅನುಭವವನ್ನು ವೃದ್ಧಿಸಿಕೊಂಡರು.
ಮೇಳದ ತಿರುಗಾಟಕ್ಕೆ ವಿರಾಮ ಹಾಡಿದ ಇವರು 1999ರಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯ ನಿರ್ವಾಹಕನಾಗಿ ಕೆದಂಬಾಡಿ, ಉಪ್ಪಿನಂಗಡಿಯಲ್ಲಿ ಹಾಗೂ ಮೇಲ್ವಿಚಾರಕರಾಗಿ ಭಡ್ತಿ ಹೊಂದಿ ಉ.ಕ ಜಿಲ್ಲೆಯ ಹೊನ್ನಾವರದಲ್ಲಿ 10 ವರ್ಷಗಳ ಕಾರ್ಯ ನಿರ್ವಹಿಸಿದ್ದಾರೆ. 2015ರಿಂದ ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಳದ ಕಚೇರಿ ಸಹಾಯಕರಾಗಿ ಕಾರ್ಯ ನಿರ್ವಹಿಸುತ್ತಿರುವ ಕುಲಾಲರು ಶ್ರೀಕಾಳಿಕಾಂಬ ಯಕ್ಷಗಾನ ಸಂಘದ ತಾಳಮದ್ದಳೆ-ಯಕ್ಷಗಾನ ಪ್ರದರ್ಶನದಲ್ಲಿ ಭಾಗವತರಾಗಿ ಕಳೆದ ಮೂರು ದಶಕಗಳಿಂದ ತೊಡಗಿಸಿಕೊಂಡವರು. ಜೊತೆಗೆ ಅನೇಕ ಹವ್ಯಾಸಿ ಸಂಘ ಸಂಸ್ಥೆಗಳ ಯಕ್ಷಗಾನ ಕಾರ್ಯಕ್ರಮಗಳಲ್ಲಿ ಭಾಗವತರಾಗಿ ಜನ ಮನ್ನಣೆ ಪಡೆದವರು.
ಉಚ್ಚ ಸ್ಥಾಯಿಯ ಇವರ ಹಾಡುಗಾರಿಕೆಯಲ್ಲಿ ಮಟ್ಟುಗಳ ಅನುಸರಣೆ ಮತ್ತು ಸಾಹಿತ್ಯ ಶುದ್ಧಿಯಿದೆ. ಕರುಣಾ ರಸದ ಹಾಡುಗಳು ಅತ್ಯಂತ ಮನೋಜ್ಞವಾಗಿದ್ದು ಕೇಳುಗರಲ್ಲಿ ವಿಶಿಷ್ಟ ಅನುಭವವನ್ನು ನೀಡುತ್ತದೆ.
ಯಕ್ಷಗಾನ ಕ್ಷೇತ್ರವನ್ನು ಪ್ರವೇಶಿಸಿದ ಆರಂಭಿಕ ವರ್ಷಗಳಲ್ಲಿಯೇ ಮೈಸೂರು ವಿಭಾಗ ಮಟ್ಟದ ಹವ್ಯಾಸಿ ಯಕ್ಷಗಾನ ಸ್ಪರ್ಧೆಯಲ್ಲಿ ಪ್ರಥಮ, ಉಜಿರೆಯಲ್ಲಿ ಜರಗಿದ ಯಕ್ಷಗಾನ ಪೂರ್ವರಂಗ ಸ್ಪರ್ಧೆಯಲ್ಲಿ ದ್ವಿತೀಯ, ಮೂಡಬಿದ್ರೆ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಯಕ್ಷಗಾನ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದಿರುವುದು ಇವರ ಭಾಗವತಿಕೆಯ ಹಿರಿಮೆಗೆ ಸಾಕ್ಷಿಯಾಗಿದೆ. ಹವ್ಯಾಸಿ ಭಾಗವತರಾಗಿ 428 ತಾಳಮದ್ದಳೆ 169 ಯಕ್ಷಗಾನ ಬಯಲಾಟಗಳಲ್ಲಿ ಭಾಗವಹಿಸಿ ತನ್ನ ಕಲಾ ಪ್ರೌಢಿಮೆಯನ್ನು ಮೆರೆದಿದ್ದಾರೆ.
ಶ್ರೀ ಕಾಳಿಕಾಂಬ ಯಕ್ಷಗಾನ ಸಂಘದ ಅಧ್ಯಕ್ಷರಾಗಿದ್ದ ದಿ| ಪಿ ಹರಿಶ್ಚಂದ್ರ ಆಚಾರ್ಯ ಇವರ ಸಂಸ್ಮರಣಾ ಕಾರ್ಯಕ್ರಮದಲ್ಲಿ ಅರ್ಥದಾರಿಯಾಗಿ ಭಾಗವಹಿಸಿದ್ದ ಡಾ ಎಂ. ಪ್ರಭಾಕರ ಜೋಶಿಯವರು ಸುಧನ್ವ ಮೋಕ್ಷದ ಇವರ ಹಾಡುಗಾರಿಕೆಯನ್ನು ಕೇಳಿ ಪ್ರತಿಭೆಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಹಿರಿಯ ಕಲಾವಿದ ಶ್ರೀ ಲಕ್ಷ್ಮೀಶ ಅಮ್ಮಣ್ಣಾಯರ ಹಿಮ್ಮೇಳವು ಇವರಿಗೆ ಉತ್ತೇಜನವನ್ನು ನೀಡಿತ್ತು.
ಬೆಳ್ತಂಗಡಿ ತಾಲೂಕು ಇಳಂತಿಲ ಗ್ರಾಮದ ಎನ್ಮಾಡಿಯ ಶ್ರೀಕಾಂತಪ್ಪ ಕುಂಬಾರ-ಶ್ರೀಮತಿ ಅಪ್ಪಿ ಅವರ ಸುಪುತ್ರನಾಗಿ 1970 ರಲ್ಲಿ ಜನಿಸಿದ ಇವರು ಪ್ರೌಢ ಶಿಕ್ಷಣವನ್ನು ಪೂರೈಸಿ ಬದುಕಿನ ಭದ್ರತೆಗಾಗಿ ಯಕ್ಷಗಾನ ಮತ್ತು ಇತರ ವೃತ್ತಿಗಳನ್ನು ಅವಲಂಭಿಸಿ ಬೆಳೆದು ಬಂದ ವಿನಯಶೀಲ ವ್ಯಕ್ತಿ ಮತ್ತು ಕಲಾವಿದರಾಗಿದ್ದಾರೆ.
ನಾಳ ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಸಂಘ ಗೇರುಕಟ್ಟೆ, ಶ್ರೀ ದುರ್ಗಾಂಬಾ ಕಲಾಸಂಗಮ ಆಲಂಕಾರು, ಬೆಳ್ತಂಗಡಿ ತಾಲೂಕು ಕುಲಾಲರ ಸಂಘ, ಯುವವಾಹಿನಿ ಕಾಯರ್ತಡ್ಕ, ಬಂದಾರು ಶ್ರೀ ರಾಮ ಯುವ ಸಂಘ ಇವರನ್ನು ಸನ್ಮಾನಿಸಿದೆ. ಕನ್ನಡ ಬಳಗ ಇಳಂತಿಲ ಮತ್ತು ಬೆಳ್ತಂಗಡಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ಅಂಡೆತಡ್ಕ ಪ್ರಾಥಮಿಕ ಶಾಲಾ ವಠಾರದಲ್ಲಿ ಇತ್ತೀಚೆಗೆ ಆಯೋಜಿಸಿದ ಕನ್ನಡ ಹಬ್ಬ ಸಮಾರಂಭದಲ್ಲಿ ಯಕ್ಷಗಾನ ರಸಋಷಿ ಅರ್ಕುಳ ಸುಬ್ರಾಯ ಆಚಾರ್ಯ ಪ್ರತಿಷ್ಠಾನದ ವತಿಯಿಂದ ಶ್ರೀ ಪದ್ಮನಾಭ ಕುಲಾಲ್ ಇವರನ್ನು ಸನ್ಮಾನಿಸಲಾಯಿತು.
ಕನ್ನಡ ಸಂಗಮದ ಅಧ್ಯಕ್ಷ ಸುಬ್ರಹ್ಮಣ್ಯ ರಾವ್ ಬನ್ನೆಂಗಳ ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು. ದಿವಾಕರ ಆಚಾರ್ಯ ಅಭಿನಂದನಾ ನುಡಿಗಳನ್ನಾಡಿದರು.
ಲೇಖನ: ದಿವಾಕರ ಆಚಾರ್ಯ, ಗೇರುಕಟ್ಟೆ – 574217
(ದೂ: 9449076275)