Saturday, November 23, 2024
Homeಯಕ್ಷಗಾನಪ್ರೇಕ್ಷಕನಿಗೆ ಏನನ್ನು ಕೊಡಬೇಕು ಎಂಬುದು ಕಲಾವಿದನಿಗೆ ಗೊತ್ತಿರಬೇಕು – ಕೊಂಡದಕುಳಿ

ಪ್ರೇಕ್ಷಕನಿಗೆ ಏನನ್ನು ಕೊಡಬೇಕು ಎಂಬುದು ಕಲಾವಿದನಿಗೆ ಗೊತ್ತಿರಬೇಕು – ಕೊಂಡದಕುಳಿ

ಯಕ್ಷಗಾನದ ಶ್ರೇಷ್ಠ ಕಲಾವಿದ ಕೊಂಡದಕುಳಿ ರಾಮಚಂದ್ರ ಹೆಗಡೆಯವರ ಅರವತ್ತರ ಅಭಿನಂದನಾ ಕಾರ್ಯಕ್ರಮ ಸದ್ಗುರು ಗೆಳೆಯರ ಬಳಗ, ಹೊನ್ನಾವರ ಇವರ ಆಯೋಜನೆಯಲ್ಲಿ ಕೊಂಡದಕುಳಿ ಸಮೀಪದ ಕೊಡಾಣಿಯಲ್ಲಿ ಸಂಪನ್ನಗೊಂಡಿತು. ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು ಸಮಾರಂಭವನ್ನು ಉದ್ಘಾಟಿಸಿದರು. ಶಾಸಕ ಸುನಿಲ್ ನಾಯಕ್ ಅಧ್ಯಕ್ಷತೆ ವಹಿಸಿದ್ದರು.

ಸೆಲ್ಕೋ ಸಿ.ಇ.ಒ ಮೋಹನ ಭಾಸ್ಕರ ಹೆಗಡೆ, ಯಕ್ಷಗಾನ ವಿದ್ವಾಂಸ ಡಾ. ಜಿ. ಎಲ್. ಹೆಗಡೆ ಹಾಗೂ ಊರ ಗಣ್ಯರು ಅಭ್ಯಾಗತರಾಗಿ ಭಾಗವಹಿಸಿದ್ದರು. ತೋಟಿಮನೆ ಗಣಪತಿ ಹೆಗಡೆ ಅಭಿನಂದನಾ ಭಾಷಣ ಮಾಡಿದರು. ಅತ್ಯಂತ ಆತ್ಮೀಯವಾಗಿ ಮೂಡಿಬಂದ ಈ ಕಾರ್ಯಕ್ರಮದಲ್ಲಿ ಕೊಂಡದಕುಳಿಯವರಿಗೆ ‘ಯಕ್ಷವಿಭೂಷಣ’ ಬಿರುದು ನೀಡಿ ಗೌರವಿಸಲಾಯಿತು.


ಔದಾರ್ಯ ಮೆರೆದ ಕೊಂಡದಕುಳಿ: ಸಮ್ಮಾನಕ್ಕೆ ಉತ್ತರವಾಗಿ ಅವರು, “ಕಲಾವಿದ ಒಬ್ಬ ತಪಸ್ವಿ, ಪ್ರೇಕ್ಷಕರಿಗೆ ಏನನ್ನು ಕೊಡಬೇಕೆಂಬುದು ಅವನಿಗೆ ಗೊತ್ತಿರಬೇಕು” ಎಂದು ಮಾರ್ಮಿಕವಾಗಿ ಹೇಳಿದರು.

ಊರ ಅಭಿಮಾನಿಗಳು ಅರವತ್ತರ ನೆನಪಿನಲ್ಲಿ ತನಗೆ ನಿಧಿ ಸಮರ್ಪಿಸಲು ಬಂದಾಗ ಇದು ನನಗಲ್ಲ ಯಕ್ಷಗಾನಕ್ಕೆ, ಕಲಾವಿದರಿಗೆ, ಕೆಲಸ ಮಾಡುವ ಸಂಘಟನೆಗೆ ಹಾಗೂ ಅನಾಥರಾಗಿ ವಿದ್ಯೆಯಿಂದ ವಂಚಿತರಾಗುವ ವಿದ್ಯಾರ್ಥಿಗಳಿಗೆ ಕೊಡಬೇಕೆಂಬ ಸೂಚನೆಯೊಂದಿಗೆ ಅರವತ್ತರ ಆಚರಣೆ ಉಳಿದವರಿಗೆ ಮಾದರಿಯಾಗುವಂತೆ ಮಾಡಿ ತೋರಿಸಿದರು.

ಈ ಸಂದರ್ಭದಲ್ಲಿ ಇಬ್ಬರು ಅನಾಥ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ತಲಾ ಅರವತ್ತು ಸಾವಿರ ರೂಪಾಯಿ ಮತ್ತು ಯಕ್ಷಗಾನ ಕಲೆ-ಕಲಾವಿದರಿಗೆ ಕೆಲಸ ಮಾಡುತ್ತಿರುವ ಯಕ್ಷಗಾನ ಕಲಾರಂಗ ಉಡುಪಿ ಮತ್ತು ಹಂಗಾರಕಟ್ಟೆ ಯಕ್ಷಗಾನ ಕೇಂದ್ರಕ್ಕೆ ತಲಾ ರೂಪಾಯಿ ಐವತ್ತು ಸಾವಿರ ಹಮ್ಮಿಣಿ ಸಮರ್ಪಿಸಿ ‘ಅರವತ್ತರ ಅರಳು’ ಸಮಾರಂಭವನ್ನು ಅರ್ಥಪೂರ್ಣಗೊಳಿಸಿದರು.

ಯಕ್ಷಗಾನ ಕಲಾರಂಗ ಕಲಾವಿದರ ಕ್ಷೇಮ ಚಿಂತನೆಯ ಕುರಿತು ಮಾಡುವ ಕೆಲಸವನ್ನು, ಹಂಗಾರ ಕಟ್ಟೆ ಯಕ್ಷಗಾನ ಕೇಂದ್ರ ಯಕ್ಷಗಾನ ಕಲಿಕೆಗೆ ಮಾಡುತ್ತಿರುವ ಕಾರ್ಯವನ್ನು ಶ್ಲಾಘಿಸಿದರು. ಕೊಂಡದಕುಳಿಯವರು ತಮ್ಮ ಐವತ್ತರ ಸಂಭ್ರಮದಲ್ಲಿ ಯಕ್ಷಗಾನ ಕಲಾರಂಗಕ್ಕೆ ರೂಪಾಯಿ ಐವತ್ತು ಸಾವಿರ ನೀಡಿದ್ದನ್ನು ಮುರಲಿ ಕಡೆಕಾರ್ ಸ್ಮರಿಸಿಕೊಂಡರು.

ಈ ವರೆಗೆ ರೂಪಾಯಿ ಇಪ್ಪತ್ತೈದು ಸಾವಿರ ನಗದು ಪುರಸ್ಕಾರದೊಂದಿಗೆ ತಮ್ಮ ಅಜ್ಜ ಕೊಂಡದಕುಳಿ ರಾಮ ಹೆಗಡೆ ನೆನಪಿನಲ್ಲಿ ಮೂವತ್ತೊಂದು ಕಲಾವಿದರಿಗೆ ಪ್ರಶಸ್ತಿ ನೀಡಿರುವುದು ಉಲ್ಲೇಖನೀಯ. ಕಾರ್ಯಕ್ರಮದ ಸಂಘಟಕ ಮಂಜುನಾಥ ಭಟ್ ವಂದನಾರ್ಪಣೆ ಸಲ್ಲಿಸಿದರು. ಕೊನೆಯಲ್ಲಿ ನಡೆದ ಯಕ್ಷಗಾನ ಪ್ರಸಂಗ ಚಂದ್ರಹಾಸ ಚರಿತ್ರೆಯಲ್ಲಿ ದುಷ್ಟಬುದ್ಧಿಯ ಪಾತ್ರ ನಿರ್ವಹಿಸಿ ಅಪಾರ ಸಂಖ್ಯೆಯಲ್ಲಿ ಸೇರಿದ ಕಲಾಭಿಮಾನಿಗಳಿಗೆ ಸಂತಸ ನೀಡಿದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments