Thursday, November 21, 2024
Homeಯಕ್ಷಗಾನಯಕ್ಷಾಂಗಣ ರಾಜ್ಯೋತ್ಸವ ಪುರಸ್ಕಾರಕ್ಕೆ ಕಲಾಪೋಷಕ ಶ್ರೀಪತಿ ಭಟ್, ಗೌರವ ಪ್ರಶಸ್ತಿಗೆ ‘ಯಕ್ಷ ಶಾಂತಲಾ’ ಪಾತಾಳ ವೆಂಕಟರಮಣ...

ಯಕ್ಷಾಂಗಣ ರಾಜ್ಯೋತ್ಸವ ಪುರಸ್ಕಾರಕ್ಕೆ ಕಲಾಪೋಷಕ ಶ್ರೀಪತಿ ಭಟ್, ಗೌರವ ಪ್ರಶಸ್ತಿಗೆ ‘ಯಕ್ಷ ಶಾಂತಲಾ’ ಪಾತಾಳ ವೆಂಕಟರಮಣ ಭಟ್‌ ಆಯ್ಕೆ

`ಯಕ್ಷಾಂಗಣ ಮಂಗಳೂರು’ ಯಕ್ಷಗಾನ ಚಿಂತನ-ಮಂಥನ  ಮತ್ತು ಪ್ರದರ್ಶನ ವೇದಿಕೆಯು ವರ್ಷಂಪ್ರತಿ ಕೊಡಮಾಡುವ ಯಕ್ಷಾಂಗಣ ರಾಜ್ಯೋತ್ಸವ ಪುರಸ್ಕಾರಕ್ಕೆ ಮೂಡಬಿದಿರೆಯ ಉದ್ಯಮಿ, ಕಲಾಪೋಷಕ ಶ್ರೀಪತಿ ಭಟ್‌ ಆಯ್ಕೆಯಾಗಿದ್ದಾರೆ. ಹಿರಿಯ ಯಕ್ಷಗಾನ ಕಲಾವಿದರಿಗೆ ನೀಡುವ ಗೌರವ ಪ್ರಶಸ್ತಿಯು `ಯಕ್ಷ ಶಾಂತಲಾ’ ಬಿರುದಾಂಕಿತ ಹಿರಿಯ ಸ್ತ್ರೀವೇಷಧಾರಿ ಪಾತಾಳ ವೆಂಕಟರಮಣ ಭಟ್ಟರಿಗೆ ಲಭಿಸಲಿದೆ.


ಶ್ರೀಪತಿ ಭಟ್ ಮೂಡಬಿದ್ರೆ :
ಕರಿಂಜೆ ಕಲ್ಲಬೆಟ್ಟು ದಿ| ರಾಮಚಂದ್ರ ಭಟ್ ಮತ್ತು ಮಹಾಲಕ್ಷ್ಮಿ ದಂಪತಿಗೆ ಮೇ 12, 1947ರಲ್ಲಿ ಜನಿಸಿದ ಶ್ರೀಪತಿ ಭಟ್ ಬಡತನದ ಕಾರಣ 7ನೇ ತರಗತಿಗೆ ತಮ್ಮ ವಿದ್ಯಾಭ್ಯಾಸವನ್ನು ಕೊನೆಗೊಳಿಸಿದರು. ಹೊಟೇಲ್ ಮಾಣಿಯಾಗಿ, ಬಸ್ ಏಜೆಂಟರಾಗಿ ದುಡಿದ ಅವರು 1969ರಲ್ಲಿ ವನಜಾಕ್ಷಿಯವರನ್ನು ತಿರುಪತಿ ಕ್ಷೇತ್ರದಲ್ಲಿ ಕೈಹಿಡಿದರು. ಬಳಿಕ ಜೀವನದಲ್ಲಿ ತಿರುವು ಪಡೆದು 1971ರಲ್ಲಿ ಮೂಡಬಿದಿರೆಯ ಗಾಂಧಿನಗರದಲ್ಲಿ ಶ್ರೀ ಧನಲಕ್ಷ್ಮಿ ಕ್ಯಾಶ್ಯೂ ಸಂಸ್ಥೆಯನ್ನುತೆರೆದು ನೂರಾರು ಮಂದಿಗೆ ಉದ್ಯೋಗದಾತರಾದರು. 1992ರಲ್ಲಿ ಹುಟ್ಟೂರು ಕಲ್ಲಬೆಟ್ಟುವಿನಲ್ಲಿ ಜಯಲಕ್ಷ್ಮಿ ಕ್ಯಾಶ್ಯೂ ಇಂಡಸ್ಟ್ರೀಸ್ ಸಹಿತ ಮೂಡಬಿದಿರೆ ಪರಿಸರದ ಕೊಡ್ಯಡ್ಕ, ವೇಣೂರು, ಬೆಳುವಾಯಿ ಮತ್ತು ಎಡಪದವು ಹೀಗೆ ಒಟ್ಟು ಐದು ಕಡೆಗಳಲ್ಲಿ ಗೋಡಂಬಿ ಸಂಸ್ಕರಣಾ ಘಟಕದ ಸಹ ಸಂಸ್ಥೆಗಳನ್ನು ಸ್ಥಾಪಿಸಿ 3000ಕ್ಕಿಂತಲೂ ಹೆಚ್ಚು ಮಂದಿಗೆ ಉದ್ಯೋಗ ಕಲ್ಪಿಸಿದರು.


ಕೊಡುಗೈ ದಾನಿಯಾಗಿ ಯಕ್ಷಗಾನ, ಧಾರ್ಮಿಕ, ಸಾಹಿತ್ಯ, ಶೈಕ್ಷಣಿಕ ಚಟುವಟಿಕೆಗಳಿಗೆ ನಿರಂತರ ಪ್ರೋತ್ಸಾಹ ನೀಡುತ್ತಿರುವ ಶ್ರೀಪತಿ ಭಟ್ಟರು ತಮ್ಮ ಪತ್ನಿಯ ನಿಧನಾ ನಂತರ 2012ರಲ್ಲಿ ವನಜಾಕ್ಷಿ ಚಾರಿಟೇಬಲ್ ಟ್ರಸ್ಟ್ ಸ್ಥಾಪಿಸಿ ವಿವಿಧ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಿಗೆ ನೆರವು ನೀಡುತ್ತಿದ್ದಾರೆ.ಬಡ ವಿದ್ಯಾರ್ಥಿಗಳ ದತ್ತು ಸ್ವೀಕಾರ, ಮಹಿಳಾ ಯಕ್ಷಗಾನ ಕಲಾವಿದರಿಗೆ ಸನ್ಮಾನ, ಸೇವಾ ಸಂಸ್ಥೆಗಳಿಗೆ ನೆರವು ಇತ್ಯಾದಿ ಸಮಾಜಮುಖೀ ಕೆಲಸಗಳಲ್ಲಿ ತೊಡಗಿರುವ ಅವರಿಗೆ ಅಂತರಾಷ್ಟ್ರೀಯ `ಆರ್ಯಭಟ ಪ್ರಶಸ್ತಿ’ ಲಭಿಸಿದೆ.


ಪಾತಾಳ ವೆಂಕಟ್ರಮಣ ಭಟ್ :
ಪುತ್ತೂರುತಾಲೂಕು ಬೈಪದವು ದಿ| ರಾಮಣ್ಣ ಭಟ್ ಮತ್ತು ಹೇಮಾವತಿ ದಂಪತಿಗೆ 1933ರಲ್ಲಿ ಜನಿಸಿದ ಪಾತಾಳ ವೆಂಕಟ್ರಮಣ ಭಟ್ಟರಿಗೆ ಪ್ರಸ್ತುತ 88ರ ಇಳಿವಯಸ್ಸು. ಪ್ರಾಥಮಿಕ ಹಂತದಲ್ಲೇ ಶಿಕ್ಷಣಕ್ಕೆ ತಿಲಾಂಜಲಿ ನೀಡಿ 1953ರಲ್ಲಿ ಕಾಂಚನ ಲಕ್ಷ್ಮೀನಾರಾಯಣ ಯಕ್ಷಗಾನ ನಾಟಕ ಮಂಡಳಿಯಲ್ಲಿ ಗುರುಕುಲ ಮಾದರಿಯ ಯಕ್ಷಗಾನ ಮೂಲ ಪಾಠ ಕಲಿತ ಅವರಿಗೆ ಕಾಂಚನ ಕೃಷ್ಣ ಅಯ್ಯರ್, ಮಾಣಂಗಾಯಿ ಕೃಷ್ಣ ಭಟ್ ಮತ್ತು ಪೆರುವೊಡಿ ನಾರಾಯಣ ಭಟ್ಟರು ಗುರುಗಳಾಗಿದ್ದರು. ಮುಂದೆ ಬಡಗುತಿಟ್ಟಿನ ನೃತ್ಯ ಶೈಲಿಯನ್ನು ಕಲಿತ ವೆಂಕಟ್ರಮಣ ಭಟ್ಟರು ಸೌಕೂರು ಮೇಳದಲ್ಲಿ ತಿರುಗಾಟ ಮಾಡಿದರು. 1957ರಿಂದ ಮೂಲ್ಕಿ ಮತ್ತು ಸುರತ್ಕಲ್ ಮೇಳಗಳಲ್ಲಿ ಸ್ತ್ರೀವೇಷಧಾರಿಯಾಗಿ ಮುನ್ನಡೆದು 1964ರಿಂದ ಧರ್ಮಸ್ಥಳ ಮೇಳದಲ್ಲಿ ಸೇವೆಗೈದು 1981ರಲ್ಲಿ ರಂಗದಿಂದ ನಿವೃತ್ತರಾದರು.


ಯಕ್ಷಗಾನದ ಸ್ತ್ರೀವೇಷದ ಬಗ್ಗೆ ಭಿನ್ನಕಲ್ಪನೆ ಹೊಂದಿದ್ದ ಪಾತಾಳ ವೆಂಕಟ್ರಮಣ ಭಟ್ಟರು ಬೇಲೂರು ಶಿಲಾಬಾಲಿಕೆಯರ ಅಂಗಭಂಗಿ, ಆಭರಣ– ಅಲಂಕಾರಗಳನ್ನು ಅಭ್ಯಸಿಸಿ ಅದಕ್ಕೊಪ್ಪುವ ಮರದ ವೇಷ ಭೂಷಣಗಳನ್ನು ತಜ್ಞರಿಂದ ಮಾಡಿಸಿ ರಂಗದಲ್ಲಿ ಬಳಸಿದರು. ಮಾಸ್ಟರ್ ವಿಠಲ್‌ರಿಂದ ಭರತನಾಟ್ಯ, ವಿಟ್ಲ ಬಾಬುರಾಯರಿಂದ ಬಣ್ಣಗಾರಿಕೆಯನ್ನುಕಲಿತರು. ಪ್ರಾಚೀನ ದಶರೂಪಕಗಳು ಮತ್ತು ಡಿವಿಜಿಯವರ ಅಂತಃಪುರ ಗೀತೆಗಳನ್ನು ಓದಿ ವೈವಿಧ್ಯಮಯ ರಂಗಸಾಧ್ಯತೆಗಳನ್ನು ತಿಳಿದು ಪ್ರಯೋಗಿಸಿದರು. ರಂಭೆ, ಊರ್ವಶಿ, ಮೇನಕೆ, ಮೋಹಿನಿ, ಮಾಯಾ ಶೂರ್ಪನಖಿ, ಗುಣಸುಂದರಿ, ಅಂಬೆ, ಕೈಕೆ, ಮಾಯಾ ಅಜಮುಖಿ, ಪೂತನಿ, ಶ್ರೀದೇವಿ, ದ್ರೌಪದಿ, ದಿತಿ, ಮಾಲಿನಿ, ಗೌರಿ, ಅಮ್ಮುದೇವಿ, ಪುಲ್ಲಪೆರ್ಗಡ್ತಿ– ಇತ್ಯಾದಿ ಪಾತ್ರಗಳನ್ನು ಉತ್ಕೃಷ್ಟ ರೀತಿಯಲ್ಲಿ ನಿರ್ವಹಿಸಿದರು.


ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಸೇರಿದಂತೆ ನೂರಾರು ಗೌರವ - ಸಂಮಾನಗಳಿಗೆ ಪಾತ್ರರಾಗಿರುವ ಪಾತಾಳ ವೆಂಕಟ್ರಮಣ ಭಟ್ಟರಿಗೆಅಭಿಮಾನಿಗಳು `ಪಾತಾಳ-2013’ ಗುರುವಂದನಾ ಕಾರ್ಯಕ್ರಮದೊಂದಿಗೆ `ಯಕ್ಷ ಶಾಂತಲಾ’ ಗ್ರಂಥ ಸಮರ್ಪಣೆ ಮಾಡಿದ್ದಾರೆ. ಅಲ್ಲಿಂದೀಚೆಗೆ ವಿವಿಧ ಕಲಾವಿದರಿಗೆ ಪಾತಾಳ ಪ್ರಶಸ್ತಿಯನ್ನು ನೀಡಲಾಗಿದೆ. ಇಳಿ ವಯಸ್ಸಿನಲ್ಲಿಯೂ ವೃತಾನುಷ್ಠಾನಗಳಿಂದ ಸ್ವಚ್ಛ ಮಾನಸರಾಗಿ ಕಲೆ-ಕಲಾವಿದರಿಗಾಗಿ ನಿರಂತರ ತುಡಿಯುತ್ತಿರುವ ಪಾತಾಳ ಇತ್ತೀಚೆಗೆ (ಅಕ್ಟೋಬರ2021) ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ 30 ಮಂದಿ ಹಿರಿಯ ಕಲಾವಿದರಿಗೆ ತಲಾ ರೂ. 10,000/- ನಗದು ಪುರಸ್ಕಾರದೊಂದಿಗೆ ಸನ್ಮಾನಿಸಿರುವುದು ಕಲಾ ಕ್ಷೇತ್ರದ ಶ್ರೇಷ್ಠ ಉಪಕ್ರಮವಾಗಿ ದಾಖಲಾಗಿದೆ.


(ಯಕ್ಷಾಂಗಣ ಮಂಗಳೂರು ಆಶ್ರಯದಲ್ಲಿ ದಶಂಬರ 18 ಮತ್ತು 19, 2021ರಂದು ಮಂಗಳೂರಿನಲ್ಲಿ ಜರಗುವ ಒಂಭತ್ತನೇ ವರ್ಷದ ಕನ್ನಡ ನುಡಿಹಬ್ಬ `ಯಕ್ಷಗಾನ ತಾಳಮದ್ದಳೆ ಪರ್ವ– 2021’ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಜರಗಲಿದೆ ಎಂದು ಯಕ್ಷಾಂಗಣದ ಕಾರ್ಯಾಧ್ಯಕ್ಷ ಪ್ರೊ| ಭಾಸ್ಕರರೈ ಕುಕ್ಕುವಳ್ಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.)

ಬರಹ : ಭಾಸ್ಕರ ರೈ ಕುಕ್ಕುವಳ್ಳಿ
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments