ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ ಸಮಿತಿ ಆಯೋಜಿಸುತ್ತಿರುವ ‘ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ-12’ ಕಾರ್ಯಕ್ರಮ ಇದೆ ಬರುವ ಡಿಸೆಂಬರ್ 4 ಶನಿವಾರ ಮತ್ತು 5ರ ಆದಿತ್ಯವಾರದಂದು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಗುಣವಂತೆಯಲ್ಲಿರುವ ‘ಯಕ್ಷಾಂಗಣ’ದಲ್ಲಿ ನಡೆಯಲಿದೆ ಎಂದು ಇಡಗುಂಜಿ ಮೇಳದ ನಿರ್ದೇಶಕರಾದ ಶ್ರೀ ಕೆರೆಮನೆ ಶಿವಾನಂದ ಹೆಗಡೆಯವರು ಹೇಳಿದ್ದಾರೆ.
ಈ ಎರಡು ದಿನಗಳ ನಾಟ್ಯೋತ್ಸವದಲ್ಲಿ ಕೆರೆಮನೆ ಶಿವರಾಮ ಹೆಗಡೆ ಮತ್ತು ಕೆರೆಮನೆ ಗಜಾನನ ಹೆಗಡೆ ಪ್ರಶಸ್ತಿ ಪ್ರದಾನ, ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ ಸಮ್ಮಾನ ಮತ್ತು ವಿಚಾರ ಸಂಕಿರಣ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಉದ್ಘಾಟನಾ ಸಮಾರಂಭ ದಿನಾಂಕ 04.12.2021ರ ಶನಿವಾರ ಸಂಜೆ ಘಂಟೆ 5ರಿಂದ ನಡೆಯಲಿದೆ. ಎಡನೀರು ಮಠದ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಮಹಾಸ್ವಾಮಿಗಳ ದಿವ್ಯ ಉಪಸ್ಥಿತಿಯಲ್ಲಿ ನಡೆಯಲಿರುವ ಸಮಾರಂಭದ ಉದ್ಘಾಟನೆಯನ್ನು ಬಿಜೆಪಿ ರಾಜ್ಯಾಧ್ಯಕ್ಷರೂ ದಕ್ಷಿಣ ಕನ್ನಡ ಸಂಸತ್ ಸದಸ್ಯರೂ ಆದ ಶ್ರೀ ನಳಿನ್ ಕುಮಾರ್ ಕಟೀಲು ಅವರು ನೆರವೇರಿಸಲಿರುವರು. ಸಮಾರಂಭದ ಅಧ್ಯಕ್ಷತೆಯನ್ನು ವಿಧಾನ ಸಭಾ ಸದಸ್ಯರಾದ ಶ್ರೀ ಸುನಿಲ್ ನಾಯ್ಕ ಅವರು ವಹಿಸಲಿದ್ದಾರೆ.
ಈ ಸಂದರ್ಭದಲ್ಲಿ ಹಿರಿಯ ರಂಗಭೂಮಿ ಕಲಾವಿದೆಯಾದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಡಾ. ಬಿ.ಜಯಶ್ರೀ ಅವರಿಗೆ “ಕೆರೆಮನೆ ಶಿವರಾಮ ಹೆಗಡೆ ರಾಷ್ಟ್ರೀಯ ಪ್ರಶಸ್ತಿ – 2020” ಪ್ರದಾನ ಮಾಡಲಾಗುವುದು. ಬಳಿಕ “ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ ಸಮ್ಮಾನ” ಕಾರ್ಯಕ್ರಮದಲ್ಲಿ, ಡಾ. ಪಾದೇಕಲ್ಲು ವಿಷ್ಣು ಭಟ್, ಶ್ರೀ ದಯಾನಂದ ಬಳೇಗಾರ್, ಶ್ರೀ ಸೂರ್ಯನಾರಾಯಣ ಪಂಜಾಜೆ, ಶ್ರೀ ಗುಂಡಿಬೈಲು ಸುಬ್ರಾಯ ಭಟ್ (ಮರಣೋತ್ತರ) ಸನ್ಮಾನಿತರಾಗಲಿರುವರು.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಮೊದಲಿಗೆ ಸಾಗರದ ಶ್ರೀ ಕಣ್ಣೇಶ್ವರ ಜಾನಪದ ಕಲಾಸಂಘದವರಿಂದ ಡೊಳ್ಳುಕುಣಿತ ಕಾರ್ಯಕ್ರಮ ನಡೆಯಲಿದೆ. ಬಳಿಕ ಬೆಂಗಳೂರಿನ ನಾಟ್ಯ ನಿನಾದ ಅಕಾಡೆಮಿಯ ಶ್ರೀಮತಿ ಧರಣಿ ಟಿ. ಕಶ್ಯಪ ತಂಡದವರಿಂದ ‘ಮಂಡೋದರಿ ಕಲ್ಯಾಣ’ ಎಂಬ ಕೂಚಿಪುಡಿ ನೃತ್ಯನಾಟಕ ನಡೆಯಲಿದೆ. ನಂತರ ಬೆಂಗಳೂರಿನ ಸ್ಪಂದನ ತಂಡದವರಿಂದ ‘ಲಕ್ಷಾಪತಿ ರಾಜನ ಕತೆ’ ಎಂಬ ನಾಟಕ ಪ್ರದರ್ಶನಗೊಳ್ಳಲಿದೆ.
ಎರಡನೇ ದಿನದ ಪೂರ್ವ ಸ್ಮರಣೆ ಗೋಷ್ಠಿಯಲ್ಲಿ ಪ್ರೊ| ಎಂ. ಎ. ಹೆಗಡೆ, ಶಿರಸಿ ಇವರ ಸಂಸ್ಮರಣ ಕಾರ್ಯಕ್ರಮ ನಡೆಯಲಿದೆ. ಡಾ. ಎಂ. ಪ್ರಭಾಕರ ಜೋಶಿ ಅಧ್ಯಕ್ಷತೆ ವಹಿಸುವ ಈ ಸಂಸ್ಮರಣಾ ಸಮಾರಂಭದ ಉಪನ್ಯಾಸಕರಾಗಿ ವಿದ್ವಾನ್ ಶ್ರೀ ಉಮಾಕಾಂತ್ ಭಟ್ ಕೆರೆಕೈ ಮತ್ತು ಶ್ರೀ ದಿವಾಕರ ಹೆಗಡೆ ಅವರು ಭಾಗವಹಿಸಲಿದ್ದಾರೆ.
ಎರಡನೇ ದಿನ, ದಿನಾಂಕ 05.12.2021ರ ಆದಿತ್ಯವಾರದಂದು ಸಂಜೆ 5 ಘಂಟೆಗೆ ಆರಂಭವಾಗಲಿರುವ ಸಮಾರಂಭದ ಅಧ್ಯಕ್ಷತೆಯನ್ನು ಕರ್ನಾಟಕ ವಿಧಾನಸಭೆಯ ಸಭಾಪತಿಗಳಾದ ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿಯವರು ವಹಿಸಲಿದ್ದಾರೆ ಉ.ಕ ಉಸ್ತುವಾರಿ ಹಾಗೂ ಕಾರ್ಮಿಕ ಸಚಿವರಾದ ಶ್ರೀ ಶಿವರಾಮ ಹೆಬ್ಬಾರ್ ಅವರು ಪ್ರಶಸ್ತಿ ಪ್ರದಾನ ಹಾಗೂ ಸಮಾರೋಪ ಭಾಷಣವನ್ನು ಮಾಡಲಿದ್ದಾರೆ.
ಈ ಸಂದರ್ಭದಲ್ಲಿ ಶ್ರೀ ಶ್ರೀ ಸುಬ್ರಾಯ ಭಾಗವತ ಕಪ್ಪೆಕರೆ ಅವರಿಗೆ “ಕೆರೆಮನೆ ಗಜಾನನ ಹೆಗಡೆ ಪ್ರಶಸ್ತಿ-2020” ಪ್ರದಾನ ಮಾಡಲಾಗುವುದು. ಬಳಿಕ “ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ ಸಮ್ಮಾನ” ಕಾರ್ಯಕ್ರಮದಲ್ಲಿ, ಶ್ರೀ ಎಲ್.ಆರ್ ಭಟ್ಟ, ತೆಪ್ಪ ಶಿರಸಿ, ಶ್ರೀ ರಾಜೀವ ಶೆಟ್ಟಿ ಹೊಸಂಗಡಿ, ಶ್ರೀ ಸುಮುಖಾನಂದ ಜಲವಳ್ಳಿ, ಶ್ರೀ ಕೃಷ್ಣ ಭಂಡಾರಿ ಗುಣವಂತೆ, ಶ್ರೀ ಮಂಜುನಾಥ ಭಂಡಾರಿ ಕರ್ಕಿ ಇವರನ್ನು ಸನ್ಮಾನಿಸಲಾಗುವುದು.
ಸಂಜೆ 6.30ರ ನಂತರ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಶ್ರೀಮತಿ ಜ್ಯೋತಿ ಹೆಗಡೆ ಶಿರಸಿ ಇವರಿಂದ ರುದ್ರವೀಣೆ ವಾದನ ನಡೆಯಲಿದೆ, ಶ್ರೀ ಗುರುಮೂರ್ತಿ ವೈದ್ಯ ಬೆಂಗಳೂರು ಇವರಿಂದ ಪಖಾವಾಜ್ ನಲ್ಲಿ ಸಹಕರಿಸಲಿದ್ದಾರೆ. ಬಳಿಕ ಶ್ರೀ ಕರಿವೆಲ್ಲೂರ್ ರತ್ನಕುಮಾರ್ ಮತ್ತು ತಂಡದವರಿಂದ ‘ಓಟ್ಟಂ ತುಳ್ಳಾಲ್ ಮತ್ತು ಶೀತಂಕನ್ ತುಳ್ಳಾಲ್’ ನೃತ್ಯ ಕಾರ್ಯಕ್ರಮ ನಡೆಯಲಿದೆ. ಆಮೇಲೆ ಉಡುಪಿಯ ನೃತ್ಯನಿಕೇತನ ಕೊಡವೂರು, ಇದರ ಕಲಾವಿದರಿಂದ ‘ನಾರಸಿಂಹ’ ಎಂಬ ನೃತ್ಯರೂಪಕ ಕಾರ್ಯಕ್ರಮ ನಡೆಯಲಿದೆ.
- ಕಾಸರಗೋಡು ಮಹಿಳಾ ಪೊಲೀಸ್ ಅಧಿಕಾರಿಯನ್ನು ಕಡಿದು ಕೊಂದ ಆಕೆಯ ಪತಿ
- ನವವಿವಾಹಿತೆ ಆತ್ಮಹತ್ಯೆ – ಆಕೆ ಬರೆದಿಟ್ಟ ಡೆತ್ ನೋಟಿನಲ್ಲಿ ಏನಿದೆ?
- ತಾನು ಮದುವೆಯಾಗುವ ಹುಡುಗಿಗೆ ಮೂರು ಷರತ್ತುಗಳನ್ನು ವಿಧಿಸಿದ್ದ ಎ.ಆರ್. ರೆಹಮಾನ್: ಮದುವೆಯ ಮೂವತ್ತನೆಯ ವಾರ್ಷಿಕೋತ್ಸವ (ಗ್ರ್ಯಾಂಡ್ ಥರ್ಟಿ) ತಲುಪುವ ಭರವಸೆ ಹುಸಿಯಾಯಿತು ಎಂದ ಸಂಗೀತ ನಿರ್ದೇಶಕ
- ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ರಕ್ಷಕ-ಶಿಕ್ಷಕ ಸಂಘದ ಪದಾಧಿಕಾರಿಗಳ ಆಯ್ಕೆ
- ಎಲೆಕ್ಟ್ರಿಕ್ ಸ್ಕೂಟರ್ ಶೋರೂಮ್ ಬೆಂಕಿಗೆ ಆಹುತಿ – 20 ವರ್ಷದ ಯುವತಿ ಬೆಂಕಿಗೆ ಸಿಲುಕಿ ಸಾವು