
ಯಕ್ಷಗಾನ ಕಲಾರಂಗದ 2021ನೇ ಸಾಲಿನ ಪ್ರಶಸ್ತಿ ಪ್ರದಾನ ಸಮಾರಂಭ ನವಂಬರ್ 28, ಭಾನುವಾರ ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಅಪರಾಹ್ನ 3 ಗಂಟೆಗೆ ಜರಗಲಿದೆ. ಅದಮಾರು ಮಠಾಧೀಶರಾದ ಶ್ರೀ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಹಾಗೂ ಪೇಜಾವರ ಮಠಾಧೀಶರಾದ ಶ್ರೀ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಅನುಗ್ರಹ ಸಂದೇಶ ನೀಡಲಿರುವರು.
ಕನ್ನಡ ಮತ್ತು ಸಂಸ್ಕೃತಿ ಸಚಿವರಾದ ಶ್ರೀ ಸುನಿಲ್ ಕುಮಾರ್ ಪ್ರಶಸ್ತಿ ಪ್ರದಾನ ಮಾಡಲಿದ್ದು, ಉಡುಪಿ ಶಾಸಕ ಕೆ. ರಘುಪತಿ ಭಟ್ ಅಧ್ಯಕ್ಷತೆ ವಹಿಸಲಿರುವರು. ಡಾ. ಎಂ. ಮೋಹನ ಆಳ್ವ ಹಾಗೂ ಚಂದ್ರಶೇಖರ ದಾಮ್ಲೆ ಅಭ್ಯಾಗತರಾಗಿ ಪಾಲುಗೊಳ್ಳಲಿರುವರು. 17 ಮಂದಿ ಹಿರಿಯ ಕಲಾವಿದರಿಗೆ ತಲಾ 20,000 ಮೊತ್ತವನ್ನೊಳಗೊಂಡ ಪ್ರಶಸ್ತಿ, 50 ಸಾವಿರ ಮೊತ್ತದ ಶ್ರೀ ವಿಶ್ವೇಶ ಪ್ರಶಸ್ತಿ ಆಳ್ವಾಸ್ ಕಾಲೇಜಿನ ಧೀಂಕಿಟ ಯಕ್ಷಗಾನ ಅಧ್ಯಯನ ಕೇಂದ್ರಕ್ಕೆ, ಯಕ್ಷಚೇತನ ಪ್ರಶಸ್ತಿ ಸಂಸ್ಥೆಯ ಹಿರಿಯ ಕಾರ್ಯಕರ್ತರಾದ, ಕೋಶಾಧಿಕಾರಿ ಮನೋಹರ ಕೆ. ಇವರಿಗೆ ಪ್ರದಾನ ಮಾಡಲಾಗುವುದು.
ಸಮಾರಂಭದ ಪೂರ್ವದಲ್ಲಿ ಅಪರಾಹ್ನ 1.30 ರಿಂದ ಆಳ್ವಾಸ್ ವಿದ್ಯಾರ್ಥಿಗಳಿಂದ ಸಾಯುಜ್ಯ ಸಂಗ್ರಾಮ ಯಕ್ಷಗಾನ ಪ್ರದರ್ಶನಗೊಳ್ಳಲಿದೆ ಎಂಬುದಾಗಿ ಅಧ್ಯಕ್ಷ ಎಂ. ಗಂಗಾಧರ ರಾವ್ ಹಾಗೂ ಕಾರ್ಯದರ್ಶಿ ಮುರಲಿ ಕಡೆಕಾರ್ ತಿಳಿಸಿದ್ದಾರೆ.