Friday, September 20, 2024
Homeಯಕ್ಷಗಾನಪುರಾಣ, ತುಳು ಪ್ರಸಂಗಗಳ ಅನುಭವಿ ಶ್ರೀ ಗುಡ್ಡಪ್ಪ ಸುವರ್ಣ ಪಂಜ

ಪುರಾಣ, ತುಳು ಪ್ರಸಂಗಗಳ ಅನುಭವಿ ಶ್ರೀ ಗುಡ್ಡಪ್ಪ ಸುವರ್ಣ ಪಂಜ

ಶ್ರೀ ಗುಡ್ಡಪ್ಪ ಸುವರ್ಣ ಪಂಜ ಇವರು ತೆಂಕುತಿಟ್ಟಿನ ಹಿರಿಯ ಅನುಭವಿ ಕಲಾವಿದರು. ಪುರಾಣ ಮತ್ತು ತುಳು ಪ್ರಸಂಗಗಳಲ್ಲಿ ಪಾತ್ರಗಳನ್ನು ನಿರ್ವಹಿಸಿ ಕಲಾಭಿಮಾನಿಗಳ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಇವರು ಲೇಖಕರೂ ಆಗಿ ಸಾಹಿತ್ಯಸೇವೆಯನ್ನು ಕಲಾಸೇವೆಯ ಜತೆ ಮಾಡಿಕೊಂಡು ಬಂದವರು. ಹಲವು ಭಕ್ತಿ ಗೀತೆಗಳನ್ನೂ ಹದಿನೈದು ಪ್ರಸಂಗಗಳನ್ನೂ ರಚಿಸಿರುತ್ತಾರೆ. ಅಲ್ಲದೆ ಸುಮಾರು ಇಪ್ಪತ್ತೈದು ಪ್ರಸಂಗಗಳಿಗೆ ಪದ್ಯ ರಚನೆಯನ್ನೂ ಮಾಡಿರುತ್ತಾರೆ.

ಕಳೆದ ನಲುವತ್ತು ವರ್ಷಗಳಿಂದ ಯಕ್ಷಗಾನ ಕಲಾವಿದರಾಗಿ ಕಲಾ ಮಾತೆಯ ಸೇವೆಯನ್ನು ಮಾಡುತ್ತಿದ್ದಾರೆ. ಹಿರಿಯ ಅನುಭವಿ ಕಲಾವಿದ ಶ್ರೀ ಗುಡ್ಡಪ್ಪ ಸುವರ್ಣರ ಹುಟ್ಟೂರು ಸುಳ್ಯ ತಾಲೂಕಿನ ಪಂಜ. ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದ ಸಮೀಪದ ಊರು ಪಂಜ. 1967 ಜನವರಿ 27ರಂದು ಶ್ರೀ ಚೋಮಣ್ಣ ಪೂಜಾರಿ ಮತ್ತು ಶ್ರೀಮತಿ ವಾಸಮ್ಮ ದಂಪತಿಗಳ ಪುತ್ರನಾಗಿ ಜನನ. ಗುಡ್ಡಪ್ಪ ಸುವರ್ಣರ ತಾಯಿಯ ತಂದೆ ಶ್ರೀ ಮಂಜಪ್ಪ ಪೂಜಾರಿ ಅವರು ಯಕ್ಷಗಾನ ಕಲಾವಿದರಾಗಿದ್ದರು.

ಶ್ರೀ ಗುಡ್ಡಪ್ಪ ಸುವರ್ಣರಿಗೆ ಬಾಲ್ಯದಲ್ಲೇ ಯಕ್ಷಗಾನ ಆಸಕ್ತಿ ಇತ್ತು. ಪ್ರದರ್ಶನಗಳನ್ನು ಬಿಡದೆ ನೋಡಿ ಆನಂದಿಸುತ್ತಿದ್ದರು. ಓದಿದ್ದು ಐದನೇ ತರಗತಿ ವರೆಗೆ. ಪಂಜ ಸಮೀಪದ ಪಂಬೆತ್ತಾಡಿ ಶಾಲೆಯಲ್ಲಿ. ಕಲಾವಿದನಾಗಬೇಕೆಂಬ ಆಸೆಯಿಂದ ಯಕ್ಷಗಾನ ನಾಟ್ಯ ಕಲಿಯಲು ತೀರ್ಮಾನಿಸಿದ್ದರು. ಕಲ್ಮಡ್ಕ ಸಂಗಮ ಕಲಾ ಸಂಘದ ರೂವಾರಿಗಳಾದ ಕೆರೆಕೋಡಿ ಪಂಡಿತ ಗಣಪತಿ ಭಟ್ಟರ ಪ್ರೋತ್ಸಾಹದಲ್ಲಿ ತೆಂಕುತಿಟ್ಟಿನ ನಾಟ್ಯಾಚಾರ್ಯ ಕರ್ಗಲ್ಲು ಶ್ರೀ ವಿಶ್ವೇಶ್ವರ ಭಟ್ಟರಿಂದ ನಾಟ್ಯಾಭ್ಯಾಸ.

ಬಳಿಕ ಸಂಗಮ ಕಲಾ ಸಂಘದ ಪ್ರದರ್ಶನಗಳಲ್ಲಿ ಭಾಗಿಯಾಗಿದ್ದರು. ಕಾರ್ತವೀರ್ಯಾರ್ಜುನ ಕಾಳಗದ ಭಾರ್ಗವನಾಗಿ ರಂಗ ಪ್ರವೇಶ. ಸುದರ್ಶನ ವಿಜಯ ಪ್ರಸಂಗದ ಸುದರ್ಶನ ಶ್ರೀ ಗುಡ್ಡಪ್ಪ ಸುವರ್ಣರು ನಿರ್ವಹಿಸಿದ ಎರಡನೇ ವೇಷ. ಪ್ರೋತ್ಸಾಹ ನೀಡಿ ಬೆಳೆಯಲು ಅವಕಾಶ ನೀಡಿದ ಕೆರೆಕೋಡಿ ಪಂಡಿತ ಶ್ರೀ ಗಣಪತಿ ಭಟ್ಟರು ನನ್ನ ಪಾಲಿಗೆ ದೇವರೆಂದು ಗುಡ್ಡಪ್ಪ ಸುವರ್ಣರು ಅವರನ್ನು ಗೌರವಿಸುತ್ತಾರೆ. ನಾಟ್ಯ ಕಲಿಸಿ ವೇಷ ಮಾಡಲು ಅವಕಾಶ ನೀಡಿ ಆಶೀರ್ವದಿಸಿದ ಗುರು ಶ್ರೀ ಕರ್ಗಲ್ಲು ವಿಶ್ವೇಶ್ವರ ಭಟ್ಟರ ಮೇಲೆ ಪ್ರೀತಿ, ಗೌರವ ಶ್ರೀ ಗುಡ್ಡಪ್ಪ ಸುವರ್ಣರಿಗೆ. 

ಪಂಜ ಶ್ರೀ ಗುಡ್ಡಪ್ಪ ಸುವರ್ಣರು ಮೊದಲು ವ್ಯವಸಾಯ ಮಾಡಿದ್ದು ಶ್ರೀ ಕೆ.ಟಿ ಗುಜರನ್ ಸಂಚಾಲಕತ್ವದ ತಲಕಳ ಮೇಳದಲ್ಲಿ. ಬಾಲ ಕಲಾವಿದನಾಗಿ ಸೇರ್ಪಡೆ. ಪುಂಡುವೇಷಧಾರಿಯಾಗಿ ಪುರಾಣ ಮತ್ತು ತುಳು ಪ್ರಸಂಗಗಳಲ್ಲಿ ಪಾತ್ರ ನಿರ್ವಹಣೆ. ಹತ್ತು ವರ್ಷಗಳ ಕಾಲ ತಲಕಳ ಮೇಳದಲ್ಲಿ ತಿರುಗಾಟ. ಬಳಿಕ ನಾಲ್ಕು ವರ್ಷ ಕರ್ನೂರು ಶ್ರೀ ಕೊರಗಪ್ಪ ರೈಗಳ ನಾಯಕತ್ವದ ಕದ್ರಿ ಮೇಳದಲ್ಲಿ ಪುಂಡುವೇಷದ ಜತೆ ಕಿರೀಟ ವೇಷಧಾರಿಯಾಗಿ ಕಲಾಸೇವೆ.

ಮತ್ತೆ ಶ್ರೀ ದಿವಾಕರ ಹೆಗ್ಡೆ ಪುತ್ತೂರು ಇವರ ನೇತೃತ್ವದ ಕೊಲ್ಲೂರು ಮೇಳದಲ್ಲಿ ಎರಡು ವರ್ಷ ಕಲಾಸೇವೆ. ನಂತರ ಮಂಗಳೂರು ಅಡ್ಯಾರು ಮಹಾಲಿಂಗೇಶ್ವರ ಮೇಳದಲ್ಲಿ ಒಂದು ವರ್ಷ ತಿರುಗಾಟ. ಇದರ ಸಂಚಾಲಕರಾಗಿದ್ದವರು ಕರ್ನೂರು ರಾಮಯ್ಯ ರೈಗಳು. ಬಳಿಕ ಎರಡು ವರ್ಷ ಶ್ರೀ ರಾಧಾಕೃಷ್ಣ ನಾವಡರ ನೇತೃತ್ವದ ಮಧೂರು ಮೇಳದಲ್ಲಿ ವ್ಯವಸಾಯ. ಬಳಿಕ ಕಲ್ಲಾಡಿ ದೇವಿಪ್ರಸಾದ ಶೆಟ್ಟರ ಸಂಚಾಲಕತ್ವದ ಕರ್ನಾಟಕ ಮೇಳದಲ್ಲಿ ಮೂರು ವರ್ಷ ಕಲಾಸೇವೆ.

ಬಳಿಕ ತಿರುಗಾಟವನ್ನು ನಿಲ್ಲಿಸಿ ಶ್ರೀ ಗುಡ್ಡಪ್ಪ ಸುವರ್ಣರು ಬೆಂಗಳೂರಿಗೆ ತೆರಳಿದ್ದರು. ಪ್ರಸಿದ್ಧ ಗಾಯಕರಾದ ಶ್ರೀ ಶಶಿಧರ ಕೋಟೆ ಅವರಿಂದ ಅಭ್ಯಾಸ. ಅವರೊಂದಿಗೆ ಮತ್ತು ಸುರೇಖಾ ಸುಬ್ರಹ್ಮಣ್ಯ ಅವರ ಜತೆ ಹಾಡಿ ಅನುಭವವನ್ನೂ ಗಳಿಸಿಕೊಂಡಿದ್ದರು. ಬೆಂಗಳೂರಿನಿಂದ ಊರಿಗೆ ಮರಳಿದ ಶ್ರೀ ಗುಡ್ಡಪ್ಪ ಸುವರ್ಣರು ಶ್ರೀ ಶ್ರೀ ನಿರಂಜನ ಸ್ವಾಮೀಜಿಯವರ ಆಶೀರ್ವಾದದಿಂದ ಐದು ವರ್ಷ ಸುಂಕದಕಟ್ಟೆ ಮೇಳದಲ್ಲಿ ವ್ಯವಸಾಯ ಮಾಡಿದ್ದರು.

ಕಳೆದ ಹನ್ನೆರಡು ವರ್ಷಗಳಿಂದ ಶ್ರೀ ವಿನೋದ ಕುಮಾರ್ ಬಜಪೆ ಅವರ ನೇತೃತ್ವದ ಬಪ್ಪನಾಡು ಮೇಳದಲ್ಲಿ ವ್ಯವಸಾಯ ಮಾಡುತ್ತಿದ್ದಾರೆ. ತಿರುಗಾಟದಲ್ಲಿ ಹೆಚ್ಚಿನ ಎಲ್ಲಾ ಪುಂಡು ವೇಷಗಳನ್ನೂ ನಿರ್ವಹಿಸಿ ಕಲಾಭಿಮಾನಿಗಳಿಂದ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಪುರಾಣ ಮತ್ತು ತುಳು ಪ್ರಸಂಗಗಳ ಪುಂಡುವೇಷಕ್ಕೆ ಸಂಬಂಧಿಸಿದ ಎಲ್ಲಾ ಪಾತ್ರಗಳನ್ನೂ ನಿರ್ವಹಿಸಿದ ಅನುಭವಿ ಇವರು.

ಕೋಟಿ ಚೆನ್ನಯ ಪ್ರಸಂಗದ ಚೆನ್ನಯ, ಬನತ್ತ ಬಂಗಾರ್ ಪ್ರಸಂಗದ ಕಂಧರ ಮೊದಲಾದ ಪಾತ್ರಗಳು ಇವರಿಗೆ ಪ್ರಸಿದ್ಧಿ ಮತ್ತು ತೃಪ್ತಿಯನ್ನು ತಂದುಕೊಟ್ಟವು. ಕಲಾಸೇವೆಯ ಜತೆ ಭಕ್ತಿಗೀತೆ, ಯಕ್ಷಗಾನ ಪ್ರಸಂಗ ಮತ್ತು ಪದ್ಯಗಳ ರಚನೆಯಲ್ಲೂ ತೊಡಗಿಸಿಕೊಂಡ ಸಾಹಸಿ ಶ್ರೀ ಗುಡ್ಡಪ್ಪ ಸುವರ್ಣರು.

ಇವರು ಸಂಸಾರಿಕವಾಗಿಯೂ ವೃತ್ತಿ ಬದುಕಿನಲ್ಲೂ ತೃಪ್ತರು. ಶ್ರೀ ಗುಡ್ಡಪ್ಪ ಸುವರ್ಣರ ಪತ್ನಿ ಶ್ರೀಮತಿ ಗುಲಾಬಿ. ಇವರಿಗೆ ಮೂವರು ಪುತ್ರಿಯರು. ಹಿರಿಯ ಪುತ್ರಿ ಶ್ರೀಮತಿ ರಚನಾ. ಇವರು ಗೃಹಣಿ. ಇವರ ಪತಿ ಶ್ರೀ ಹರೀಶ್ ಕೃಷಿಕರು. ಹರೀಶ್, ರಚನಾ ದಂಪತಿಗಳ ಪುತ್ರಿ ಕು| ತನ್ವಿ. ಶ್ರೀ ಗುಡ್ಡಪ್ಪ ಸುವರ್ಣರ ದ್ವಿತೀಯ ಪುತ್ರಿ ಕು| ರಕ್ಷಿತಾ. ಈಕೆ ಪದವೀಧರೆ. ತೃತೀಯ ಪುತ್ರಿ ಕು|ರಶ್ಮಿ. ಈಕೆ ದ್ವಿತೀಯ ಪಿ.ಯು.ಸಿ ವಿದ್ಯಾರ್ಥಿನಿ.

ಪಂಜ ಶ್ರೀ ಗುಡ್ಡಪ್ಪ ಸುವರ್ಣರು ಯಕ್ಷಗಾನ ವೇಷಭೂಷಣ ತಯಾರಿಕಾ ಕಲೆಯನ್ನೂ ಬಲ್ಲವರು. ಕಲ್ಮಡ್ಕ ಸಂಗಮ ಕಲಾಸಂಘದಲ್ಲಿ ಸಕ್ರಿಯರಾಗಿರುವಾಗಲೇ ಈ ವಿಚಾರದಲ್ಲಿ ಆಸಕ್ತಿಯನ್ನು ಬೆಳೆಸಿಕೊಂಡಿದ್ದರು. ಸಂಘದ ನೇತಾರ ಕಲ್ಮಡ್ಕ ಶ್ರೀ ಮಹಾಬಲ ಭಟ್ಟರ ಸಹಕಾರ, ಪ್ರೋತ್ಸಾಹವೂ ಈ ವಿಚಾರದಲ್ಲಿ ದೊರಕಿತ್ತು. ಪ್ರಸ್ತುತ ಕಲ್ಲಾಡಿ ದೇವಿಪ್ರಸಾದ ಶೆಟ್ಟರ ಪ್ರೋತ್ಸಾಹದಲ್ಲಿ ಕಟೀಲು ಮೇಳಗಳ ವೇಷಭೂಷಣಗಳನ್ನು ತಯಾರಿಸುವಲ್ಲಿ ತೊಡಗಿಸಿಕೊಂಡಿದ್ದಾರೆ. ಪಂಜ ಶ್ರೀ ಗುಡ್ಡಪ್ಪ ಸುವರ್ಣರಿಗೆ ಇನ್ನಷ್ಟು ಕಲಾಸೇವೆಯನ್ನು ಮಾಡುವ ಅವಕಾಶವು ಸಿಗಲಿ. ಶ್ರೀ ದೇವರು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ. ಮಕ್ಕಳಿಗೆ ಉಜ್ವಲವಾದ ಭವಿಷ್ಯವು ಸಿದ್ಧಿಸಲಿ ಎಂಬ ಹಾರೈಕೆಗಳು. 

ಲೇಖಕ: ರವಿಶಂಕರ್ ವಳಕ್ಕುಂಜ 
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments