‘ಬೈಕ್ ಬೇಕು, ಕೊಡಿಸಿ’ ಎಂದು ಮಗ ಅಂದದ್ದಕ್ಕೆ ತಂದೆ ನಿರಾಕರಿಸಿದ ಕಾರಣ ಮುನಿಸಿಕೊಂಡ ಮಗ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ದಾವಣಗೆರೆಯ ನ್ಯಾಮತಿ ಪಟ್ಟಣದಲ್ಲಿ ನಡೆದ ದಾರುಣ ಘಟನೆಯಲ್ಲಿ ತಂದೆ ಬೈಕ್ ಕೊಡಿಸಲಿಲ್ಲ ಎಂದು ಮಗ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ತಂದೆಗೆ ಹಣದ ಅಡಚಣೆಯಿತ್ತು. ಹಾಗಾಗಿ ಮಗ ಕೇಳಿದ ಬೈಕ್ ಕೊಡಿಸಲು ಸಾಧ್ಯವಾಗಲಿಲ್ಲ. ಆತ್ಮಹತ್ಯೆಗೆ ಮಾಡಿಕೊಂಡ ಯುವಕ ವಿಕಾಸ್.ಆರ್ (20) ಹಲವು ದಿನಗಳಿಂದ ಬೈಕ್ ಕೊಡಿಸುವಂತೆ ತನ್ನ ತಂದೆಯ ಬಳಿ ಕೇಳಿದ್ದರೂ ಅವನ ಆಸೆ ಪೂರೈಸಲು ತಂದೆಗೆ ಸಾಧ್ಯವಾಗಿರಲಿಲ್ಲ.
ಇದರಿಂದ ತಂದೆಯ ಮೇಲೆ ಕೋಪಗೊಂಡ ವಿಕಾಸ್ ಮನೆಯಲ್ಲಿ ಮಾತು, ಊಟ ಬಿಟ್ಟಿದ್ದ. ಕಳೆದ ಒಂದು ವಾರದಿಂದ ಮನೆ ಬಿಟ್ಟು ಸಂಬಂಧಿಕರ ಮನೆಯಲ್ಲಿ ವಾಸಿಸುತ್ತಿದ್ದ ಆತ ಅಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.
ಸಂಬಂಧಿಕರು ತಕ್ಷಣ ಆಸ್ಪತ್ರೆಗೆ ಸೇರಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಆತ ಸಾವಿಗೀಡಾಗಿದ್ದಾನೆ ಎಂದು ತಿಳಿದುಬಂದಿದೆ.