Saturday, January 18, 2025
Homeಸುದ್ದಿಮತ್ತೆ ಮಾರ್ದನಿಸಲಿದೆ ಕಟೀಲು ಮೇಳದ ಕಲಾವಿದರ ಗೆಜ್ಜೆಯ ಸದ್ದು! - ಕಟೀಲಿನ ಆರು ಮೇಳಗಳ ತಿರುಗಾಟ...

ಮತ್ತೆ ಮಾರ್ದನಿಸಲಿದೆ ಕಟೀಲು ಮೇಳದ ಕಲಾವಿದರ ಗೆಜ್ಜೆಯ ಸದ್ದು! – ಕಟೀಲಿನ ಆರು ಮೇಳಗಳ ತಿರುಗಾಟ ಇಂದಿನಿಂದ (25-11-2024) ಆರಂಭ

ಕಟೀಲು ಮೇಳಗಳ ತಿರುಗಾಟ ಇಂದು ಆರಂಭವಾಗಲಿದೆ.
ಅದೇಕೋ ಇಂದು ಈ ಸುದ್ದಿ ಅತಿ ಹೆಚ್ಚಾಗಿ ಜನರ ಬಾಯಿಯಲ್ಲಿ ನಲಿದಾಡುತ್ತಿದೆ. ಅಂತರ್ಜಾಲದ ತಾಣಗಳಲ್ಲಿ ಇದೇ ಮಾತು, ಚರ್ಚೆಗಳು.

“ಇವತ್ತು ಕಟೀಲು ಮೇಳಗಳ ಆಟ ಸುರುವಂತೆ” ಎಂದು ಮಾತಾಡಿಕೊಳ್ಳುವವರು ಅನೇಕರು. ಮಳೆಗಾಲದಿಂದ ಆರಂಭವಾಗಿ ಇಂದಿನ ವರೆಗೆ ಕೇವಲ ಅಲ್ಲಲ್ಲಿ ನಡೆದ ಯಕ್ಷಗಾನ ಪ್ರದರ್ಶನವನ್ನು ವೀಕ್ಷಿಸಿಯೋ ಅಥವಾ ನೇರ ಪ್ರಸಾರಗಳ ಮೂಲಕ ಯಕ್ಷಗಾನ ಪ್ರದರ್ಶನಗಳನ್ನು ವೀಕ್ಷಿಸುತ್ತಿದ್ದ ಜನರಿಗೆ ಇನ್ನು ತಮ್ಮ ತಮ್ಮ ಊರುಗಳಲ್ಲಿಯೋ ಅಥವಾ ಪಕ್ಕದ ಊರುಗಳಲ್ಲಿಯೋ ಪ್ರತ್ಯಕ್ಷವಾಗಿ ಪ್ರೇಕ್ಷಕರ ಸಾಲಿನಲ್ಲಿ ಕುಳಿತು ಆಟ ನೋಡುವ ಅವಕಾಶ ಇದೀಗ ಒದಗಿ ಬಂದಿದೆ.

ಸಾಂದರ್ಭಿಕ ಪ್ರಾತಿನಿಧಿಕ ಚಿತ್ರ
ಸಾಂದರ್ಭಿಕ ಪ್ರಾತಿನಿಧಿಕ ಚಿತ್ರ

ಹೌದು.. ಇಂದಿನಿಂದ ಅಂದರೆ 25-11-2024, ಸೋಮವಾರದಿಂದ ಕಟೀಲು ಕ್ಷೇತ್ರದ ಎಲ್ಲಾ ಆರು ಮೇಳಗಳ ತಿರುಗಾಟ ಆರಂಭವಾಗಲಿದೆ. ಇಂದು (25-11-2024) ಕಟೀಲು ಶ್ರೀ ಕ್ಷೇತ್ರದಲ್ಲಿ ನಡೆಯಲಿರುವ ಪಾಂಡವಾಶ್ವಮೇಧ ಎಂಬ ಯಕ್ಷಗಾನ ಪ್ರದರ್ಶನದೊಂದಿಗೆ ಕಟೀಲು ಮೇಳದ ಕಲಾವಿದರು ದಿಗ್ವಿಜಯಕ್ಕೆ ಹೊರಡಲಿದ್ದಾರೆ.

ಕಟೀಲು ಮೇಳಗಳ ಆಟವೆಂದರೆ ಜನರಿಗೆ ಒಂದು ರೀತಿಯ ಹಬ್ಬದ ಸಂಭ್ರಮ. ಅಲ್ಲಿ ಉತ್ಸವದ ವಾತಾವರಣವಿರುತ್ತದೆ. ತಮ್ಮೂರಿನ ಜಾತ್ರೆಯ ಹಾಗೆ. ಸ್ವತಃ ಕಟೀಲು ಶ್ರೀ ದುರ್ಗಾಪರಮೇಶ್ವರಿಯ ಸಾನ್ನಿಧ್ಯವೇ ತಮ್ಮ ಊರಿಗೆ ಆಗಮಿಸುತ್ತಿರುವ ಹಾಗೆ ಪುಳಕವನ್ನು ಅನುಭವಿಸುತ್ತಾರೆ.

ಸಮಾಜದ ಎಲ್ಲಾ ವರ್ಗದ ಭಕ್ತ, ಬಾಂಧವ ಮಹನೀಯರಿಗೂ, ಕಟೀಲಿನ ಶ್ರೀ ಕ್ಷೇತ್ರಕ್ಕೂ ಅವಿನಾಭಾವ ಸಂಬಂಧ ಬೆಳೆದು ಬಂದಿದೆ. ಆದುದರಿಂದ ಕಟೀಲು ಮೇಳದ ಆಟ ನಡೆಯುವ ಸ್ಥಳಕ್ಕೆ ಆ ಊರಿನ ಪ್ರತಿಯೊಬ್ಬ ಆಸ್ತಿಕ ಬಂಧುಗಳ ಮನೆಯ ಸದಸ್ಯರೂ ತಪ್ಪದೆ ಭೇಟಿ ನೀಡಿ ಕಟೀಲು ದೇವಿಯ ಪ್ರಸಾದ ಸ್ವೀಕರಿಸಿ ಸ್ವಲ್ಪ ಹೊತ್ತಾದರೂ ಯಕ್ಷಗಾನ ಪ್ರದರ್ಶನ ನೋಡಿ ಆಮೇಲೆ ಮನೆಗೆ ಹಿಂತಿರುಗುತ್ತಾರೆ.

ಅಂತೂ ಕಲಾಭಿಮಾನಿಗಳು ಸಂಭ್ರಮದಿಂದ ಕಾಯುತ್ತಿದ್ದ ದಿನಗಳು ಬಂದಾಗಿದೆ. ಧರ್ಮಸ್ಥಳ ಸಹಿತ ಇತರ ಕೆಲವು ಮೇಳಗಳು ಪ್ರದರ್ಶನಗಳನ್ನು ಈಗಾಗಲೇ ಆರಂಭಿಸಿವೆ. ಕಟೀಲು ಮೇಳಗಳು ತಿರುಗಾಟಕ್ಕೆ ಹೊರಟು ನಿಂತಿವೆ. ಕೆಲವು ದಿನಗಳಿಂದ ಕಾಯುತ್ತಿದ್ದ ಆಟದ ಸಂಭ್ರಮದ ವಾತಾವರಣದ ಆಸ್ವಾದನೆಗೆ ಸಮಯ ಒದಗಿ ಬಂದಿದೆ.

ಮಳೆಗಾಲದ ಭೋರ್ಗರೆತದ ನಡುವೆ ಭಾಗಶಃ ಮೌನವಾಗಿದ್ದ ಯಕ್ಷಗಾನ ಜಗತ್ತು ಮತ್ತೆ ಚೆಂಡೆಯ ಸದ್ದಿನ ಪುಳಕದೊಂದಿಗೆ ಎಚ್ಛೆತ್ತುಕೊಳ್ಳಲಿದೆ. ಮಣ್ಣಿನ ಮಕ್ಕಳ ಸಂಭ್ರಮದ ನಿಶೆಯ ಓಡಾಟದಿಂದ ಪುಳಕಿತವಾಗುತ್ತಿದ್ದ ಮೈದಾನಗಳು ಮತ್ತು ಗದ್ದೆಗಳಲ್ಲಿ ಮತ್ತೆ ಕಲೆಯ ಕಂಪು ಪಸರಿಸಲಿದೆ. ರಂಗಸ್ಥಳಗಳು ಕಲಾವಿದರ ಹುಮ್ಮಸ್ಸಿನಿಂದ ದೂಳೆಬ್ಬಿಸಲಿದೆ.

ಈ ಬಾರಿಯ ಯಕ್ಷಗಾನ ತಿರುಗಾಟ, ಪ್ರದರ್ಶನಗಳು ಉತ್ಸಾಹ, ಸಂಭ್ರಮಗಳಿಂದ ಎಲ್ಲ ಮೇಳಗಳಿಗೂ, ಎಲ್ಲ ಕಲಾವಿದರಿಗೂ, ಎಲ್ಲಾ ಜನರಿಗೂ ಸ್ಮರಣೀಯವಾಗಲಿ ಎಂದು ಆಶಿಸುತ್ತೇವೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments