ಯಕ್ಷಗಾನ ಕಲಾರಂಗ ಪ್ರಶಸ್ತಿ ಪ್ರದಾನ ಸಮಾರಂಭವು ಸಂಸ್ಥೆಯ ನೂತನ ಕಟ್ಟಡದ ಐವೈಸಿ ಸಭಾಂಗಣದಲ್ಲಿ 17.11.2024 ರಂದು ಅತ್ಯಂತ ಯಶಸ್ವಿಯಾಗಿ ಜರಗಿತು.
ಯಕ್ಷಗಾನ ಲೋಕ ಶಿಕ್ಷಣವನ್ನು ಕೊಡುವ ಶ್ರೇಷ್ಠವಾದ ಕಲಾಪ್ರಕಾರವೆಂದು ಪ್ರಶಸ್ತಿ ಪ್ರದಾನ ಮಾಡಿ ಪೇಜಾವರ ಮಠಾಧೀಶರಾದ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ತಮ್ಮ ಅನುಗ್ರಹ ಸಂದೇಶದಲ್ಲಿ ನುಡಿದರು.
ಶ್ರೀಕ್ಷೇತ್ರ ಧರ್ಮಸ್ಥಳದ ಶ್ರೀ ಹರ್ಷೇಂದ್ರ ಕುಮಾರ್ ಅವರು ಆರ್.ಎಲ್ ಭಟ್- ವಾರಿಜಾಕ್ಷಿ ಆರ್ ಭಟ್ ಗೌರವಾರ್ಥ ಅವರ ಸುಪುತ್ರ ಹರಿಪ್ರಸಾದ್ ಭಟ್ ಪ್ರಾಯೋಜಿಸಿದ ಬಣ್ಣದ ಕೋಣೆಯನ್ನು ಉದ್ಘಾಟಿಸಿದರು.

ಹಾಗೆಯೇ ಸಿಸಿಟಿವಿಯ ಉದ್ಘಾಟನೆಯನ್ನು ದಾನಿ ಎಂ. ಸಿ. ಕಲ್ಕೂರ ಅವರು ಮಾಡಿದರು. ಹರೀಶ್ ರಾಯಸ್ ಅವರು ತಮ್ಮ ತೀರ್ಥ ರೂಪರ ಹೆಸರಿನಲ್ಲಿ ಸ್ಥಾಪಿಸಿದ ಯಕ್ಷಗಾನ ಕಲಾರಂಗ ಪ್ರಶಸ್ತಿಯ ನಿಧಿಯನ್ನು ಹಸ್ತಾಂತರಿಸಿದರು. ಶಾಸಕ ಯಶ್‌ಪಾಲ್ ಸುವರ್ಣರ ಅಧ್ಯಕ್ಷತೆಯಲ್ಲಿ ಜರಗಿದ ಕಾರ್ಯಕ್ರಮದಲ್ಲಿ ದಾನಿ ಕೆ. ಸದಾಶಿವ ಭಟ್ ಅಭ್ಯಾಗತರಾಗಿ ಭಾಗವಹಿಸಿದ್ದರು.
ಕಲಾವಿದರಾದ ಎಚ್. ನಾರಾಯಣ ಶೆಟ್ಟಿ ಕೊಳ್ಕೆಬೈಲ್, ದೇವದಾಸ ರಾವ್ ಕೂಡ್ಲಿ, ಸುರೇಶ ಕುಪ್ಪೆ ಪದವು, ಪುರಂದರ ಹೆಗಡೆ ನಾಗರಕೊಡಿಗೆ, ಗುಂಡಿಬೈಲ್ ನಾರಾಯಣ ಭಟ್, ಸರಪಾಡಿ ಅಶೋಕ ಶೆಟ್ಟಿ, ಕಿಗ್ಗ ಹಿರಿಯಣ್ಣ ಆಚಾರ್ಯ, ಥಂಡಿಮನೆ ಶ್ರೀಪಾದ ಭಟ್, ಮೊಗೆಬೆಟ್ಟು ಹೆರಿಯ ನಾಯ್ಕ್, ತೊಡಿಕ್ಕಾನ ಕೆ. ಬಾಬು ಗೌಡ, ಹಾಲಾಡಿ ಕೃಷ್ಣ ಮರಕಾಲ, ಚಕ್ರಮೈದಾನ ಕೃಷ್ಣ ಪೂಜರಿ, ಹಾವಂಜೆ ಮಂಜುನಾಥ ರಾವ್, ಹೆರಂಜಾಲು ಗೋಪಾಲ್ ಗಾಣಿಗ,
ಚೇರ್ಕಾಡಿ ರಾಧಾಕೃಷ್ಣ ನಾಯಕ್, ಶೇಣಿ ಸುಬ್ರಹ್ಮಣ್ಯ ಭಟ್, ಸರಪಾಡಿ ಶಂಕರನಾರಾಯಣ, ಹೊಡಬಟ್ಟೆ ವೆಂಕಟ ರಾವ್, ಕಟೀಲು ರಮಾನಂದ ರಾವ್, ನರಸಿಂಹ ಮಡಿವಾಳ, ಎಲ್ಲೂರು ಕೆ. ಶ್ರೀನಿವಾಸ ಉಪಾಧ್ಯಾಯ, ಅಂಬಾಪ್ರಸಾದ ಪಾತಾಳ, ಗಜಾನನ ಸತ್ಯನಾರಾಯಣ ಭಂಡಾರಿ ಈ 23 ಕಲಾವಿದರನ್ನು ತಲಾ ರೂ. 20 ಸಾವಿರ ನಗದು ಸಹಿತ ಫಲಕ ನೀಡಿ ಸಂಮಾನಿಸಲಾಯಿತು.
ಯಶಸ್ವಿ ಕಲಾವೃಂದ (ರಿ.) ಕೊಮೆ, ತೆಕ್ಕಟ್ಟೆ ಸಂಸ್ಥೆಗೆ ಶ್ರೀ ವಿಶ್ವೇಶತೀರ್ಥ ಯಕ್ಷಗಾನ ಕಲಾರಂಗ ಪ್ರಶಸ್ತಿ ರೂ. 1,00,000/- ಮತ್ತು ಫಲಕವನ್ನು ನೀಡಿ ಗೌರವಿಸಲಾಯಿತು. ಸಂಸ್ಥೆಯ ಅಧ್ಯಕ್ಷರಾದ ಮಲ್ಯಾಡಿ ಸೀತಾರಾಮ ಶೆಟ್ಟಿಯವರು ಪ್ರಶಸ್ತಿ ಸ್ವೀಕರಿಸಿದರು. ಯಕ್ಷಗಾನ ಕಲಾರಂಗದ ನಿಕಟಪೂರ್ವ ಅಧ್ಯಕ್ಷರಾದ ಕೆ. ಗಣೇಶ್ ರಾವ್ ಅವರಿಗೆ ಬೆಳ್ಳಿಯ ಹರಿವಾಣದಲ್ಲಿ ಫಲವಸ್ತು ನೀಡಿ ‘ಯಕ್ಷ ಚೇತನ’ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.
ಇತ್ತೀಚಿಗೆ ನಿಧನರಾದ ಕಪ್ಪೆಕೆರೆ ಮಾಧವ ಹೆಗಡೆ, ಪೇತ್ರಿ ಮಾಧವ ನಾಯ್ಕ್, ಬಂಟ್ವಾಳ ಜಯರಾಮ ಆಚಾರ್ಯ ಇವರ ಕುಟುಂಬದವರಿಗೆ ತಲಾ 30,000/- ಸಾಂತ್ವನ ನಿಧಿಯನ್ನು ನೀಡಲಾಯಿತು. ಡಾ. ತಲ್ಲೂರು ಶಿವರಾಮ ಶೆಟ್ಟಿಯವರು ಯಕ್ಷಗಾನ ಕಲಾವಿದರ 75 ಮಕ್ಕಳಿಗೆ ರೂ. 6,59,000/- ಸಹಾಯಧನವನ್ನು ಸಾಂಕೇತಿಕವಾಗಿ ವಿತರಿಸಿದರು.
ವಾಸುದೇವ ಸಾಮಗರ 30 ಪ್ರಸಂಗಗಳ ಯಕ್ಷ ರಸಾಯನ ಪುಸ್ತಕವನ್ನು ಸ್ವಾಮೀಜಿಯವರು ಲೋಕಾರ್ಪಣೆ ಮಾಡಿದರು. ಈ ಸಂದರ್ಭದಲ್ಲಿ ಡಾ. ಪ್ರದೀಪ ವಿ. ಸಾಮಗ ಅವರಿಗೆ ಶಾಲು ಹೊದಿಸಿ ಗೌರವಿಸಲಾಯಿತು.
ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸಿದರು. ಉಪಾಧ್ಯಕ್ಷರಾದ ಎಸ್. ವಿ. ಭಟ್ ಮತ್ತು ವಿ. ಜಿ. ಶೆಟ್ಟಿಯವರು ಸ್ವಾಮೀಜಿಯವರಿಗೆ ಫಲ-ಪುಷ್ಪ ಸಮರ್ಪಿಸಿದರು. ಜೊತೆ ಕಾರ್ಯದರ್ಶಿ ನಾರಾಯಣ ಎಂ. ಹೆಗಡೆ ಸ್ಮರಣಿಕೆ ನೀಡಿ ಮತ್ತು ಗೌರವಾನ್ವಿತರ ಕುರಿತು ಪರಿಚಯಿಸಿದರು. ಎಚ್. ಎನ್. ಶ್ರಂಗೇಶ್ವರ ವಂದಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಸ್ತಾವನೆಯ ಮಾತುಗಳೊಂದಿಗೆ ಕಾರ್ಯಕ್ರಮ ನಿರೂಪಿಸಿದರು.
ಸಭೆಯ ಪೂರ್ವದಲ್ಲಿ ವಿದ್ಯಾಪ್ರಸಾದ್ ಅವರು ಸಂಯೋಜಿಸಿದ ತೆಂಕುತಿಟ್ಟು ಹಿಮ್ಮೇಳದ ನವರಸಾಯನ-ಯಕ್ಷಗಾಯನ ಪ್ರಸ್ತುತಗೊಂಡಿತು. ಬಳಿಕ ಸುಜಯೀಂದ್ರ ಹಂದೆಯವರ ಸಂಯೋಜನೆಯಲ್ಲಿ ಬಡಗುತಿಟ್ಟು ಯಕ್ಷಗಾನ ಬಭ್ರುವಾಹನ ಕಾಳಗ ಜರಗಿತು.