ಮಂಗಳೂರಿನ ಕಾಲೇಜು ಉಪನ್ಯಾಸಕಿಯೋರ್ವರು ಅಲರ್ಜಿಗೆ ಸಂಬಂಧಿಸಿದ ಅನಾಫಿಲ್ಯಾಕ್ಸಿಸ್ ರಿಯಾಕ್ಷನ್ ನಿಂದ ಮಂಗಳೂರಿನಲ್ಲಿ ಮೃತಪಟ್ಟಿದ್ದು, ಸಾವಿನ ನಂತರವೂ ಜನರು ತನ್ನನ್ನು ನೆನಪಿನಲ್ಲಿಡುವಂತಹಾ ಮಹತ್ಕಾರ್ಯವನ್ನು ಮಾಡಿದ್ದಾರೆ.
ಅವರು ತನ್ನ ಎಲ್ಲಾ ಅಂಗಾಂಗಗಳನ್ನು ದಾನ ಮಾಡುವ ಅಪೂರ್ವವೂ ಪ್ರಶಂಸನೀಯವೂ ಆದ ನಿರ್ಧಾರವನ್ನು ಕೈಗೊಂಡರು.
ಮೃತ ಯುವತಿ ನಗರದ ಸಂತ ಅಲೋಶಿಯಸ್ ಕಾಲೇಜಿನ ಉಪನ್ಯಾಸಕಿ, ಬಜಪೆ ನಿವಾಸಿ ಗ್ಲೋರಿಯಾ ರೋಡ್ರಿಗಸ್(23) ಎಂಬಾಕೆಯೇ ಈ ಯುವತಿ. ಗ್ಲೋರಿಯಾ ಅವರು ತಂದೆ, ತಾಯಿ, ಸಹೋದರನನ್ನು ಅಗಲಿದ್ದಾರೆ.
ವರ್ಷದ ಹಿಂದೆಯೇ ಗ್ಲೋರಿಯಾಳಿಗೆ ಫುಡ್ ಅಲರ್ಜಿ(ಅನಾಫಿಲ್ಯಾಕ್ಟಿಕ್ ರಿಯಾಕ್ಷನ್) ಆಗಿತ್ತು ಎಂದು ಆಕೆಯ ಮನೆಯವರು ಹೇಳಿದ್ದಾರೆ. ಈ ಮೊದಲು ಫುಡ್ ಅಲರ್ಜಿ ಉಂಟಾಗಿ ಆಮೇಲೆ ಅವರು ಚೇತರಿಸಿಕೊಂಡಿದ್ದರು.
ಕಳೆದ ಶುಕ್ರವಾರ ಮಧ್ಯಾಹ್ನ ಊಟ ಸೇವಿಸಿದ ಬಳಿಕ ಫುಡ್ ಅಲರ್ಜಿ ಕಾರಣ ಕಾಲೇಜಿನಲ್ಲಿ ಕುಸಿದುಬಿದ್ದು ತೀವ್ರ ಅಸ್ವಸ್ಥರಾಗಿದ್ದ ಗ್ಲೋರಿಯಾಳನ್ನು ಕೂಡಲೇ ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆಗೆ ಸೇರಿಸಲಾಯಿತು. ಗ್ಲೋರಿಯಾ ಅವರ ಮೆದುಳು ನಿಷ್ಕ್ರಿಯವಾಗಿರುವುದಾಗಿ ವೈದ್ಯರ ತಂಡ ಈ ಸಮಯದಲ್ಲಿ ತಿಳಿಸಿದೆ.
ಕೂಡಲೇ ಆಕೆಯ ಮನೆಯವರು ಅಂಗಾಂಗ ದಾನ ಮಾಡಲು ನಿರ್ಧರಿಸಿದರು. ಅದರಂತೆ ಗ್ಲೋರಿಯಾಳ ಅಂಗಾಂಗಗಳನ್ನು ದಾನ ಮಾಡಲಾಯಿತು. ಗ್ಲೋರಿಯಾ ಅವರ ಅಂಗಾಂಗಗಳನ್ನು ಐದು ನಿರ್ಗತಿಕ ರೋಗಿಗಳಿಗೆ ದಾನ ಮಾಡಲಾಗಿದೆ. ಈ ಮೂಲಕ ಅವರು ಸಾವಿನಲ್ಲೂ ಇತರರಿಗೆ ಮಾದರಿಯಾದರು.
ಗ್ಲೋರಿಯಾ ಅವರ ಕಣ್ಣು, ಹೃದಯ, ಚರ್ಮ, ಯಕೃತ್, ಎರಡು ಕಿಡ್ನಿ, ಶ್ವಾಸಕೋಶವನ್ನು ದಾನ ಮಾಡಲಾಗಿದ್ದು, ಹೃದಯವನ್ನು ಬೆಂಗಳೂರಿನ ನಾರಾಯಣ ಹೃದಯಾಲಯಕ್ಕೆ ರವಾನಿಸಲಾಗಿದೆ.
ಶ್ವಾಸಕೋಶವನ್ನು ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಗೆ, ಯಕೃತ್(ಲಿವರ್) ಮಂಗಳೂರಿನ ಎಜೆ ಆಸ್ಪತ್ರೆಗೆ, ಕಿಡ್ನಿಯನ್ನು ಕೆಎಂಸಿ ಆಸ್ಪತ್ರೆ ಮಣಿಪಾಲ ಹಾಗೂ ಚರ್ಮ ಹಾಗೂ ಕಣ್ಣುಗಳನ್ನು ಫಾದರ್ ಮುಲ್ಲರ್ ಆಸ್ಪತ್ರೆಗೆ ದಾನ ಮಾಡಲಾಗಿದೆ.
ಒಂದು ವರ್ಷದ ಹಿಂದಷ್ಟೇ ಅಲೋಶಿಯಸ್ ಕಾಲೇಜಿನಲ್ಲಿಯೇ ಸ್ನಾತಕೋತ್ತರ ಪದವಿ ಪೂರೈಸಿದ ಗ್ಲೋರಿಯಾ ರೋಡ್ರಿಗಸ್ ಬಜಪೆ ಪಡು ಪೆರಾರ ನಿವಾಸಿ ಗ್ರೇಶನ್ ಅಲೆಕ್ಸ್ ರೋಡ್ರಿಗಸ್ ಮತ್ತು ಗ್ರೆಟ್ಟಾ ಫ್ಲೇವಿಯಾ ದಂಪತಿಯ ಪುತ್ರಿ. ಆಕೆ ಶಿಕ್ಷಣ ಪೂರೈಸಿದ ನಂತರ ಅಲೋಶಿಯಸ್ ಕಾಲೇಜಿನಲ್ಲಿಯೇ ಉಪನ್ಯಾಸಕಿಯಾಗಿ ಕೆಲಸಕ್ಕೆ ಸೇರಿದ್ದರು.