ಶುಕ್ರವಾರ ಬೆಳಗ್ಗೆ ದೆಹಲಿಯ ರಂಗಪುರಿ ಪ್ರದೇಶದಲ್ಲಿ 50 ವರ್ಷದ ವ್ಯಕ್ತಿ ಮತ್ತು ಅವರ ನಾಲ್ವರು ಅಂಗವಿಕಲ ಹೆಣ್ಣುಮಕ್ಕಳು ಅವರ ಬಾಡಿಗೆ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ.
ಶವಗಳ ಬಳಿ ವಿಷಕಾರಿ ವಸ್ತುವಿನ ಪೌಚ್‌ಗಳು ಪತ್ತೆಯಾಗಿವೆ ಮತ್ತು ಕೋಣೆಯ ಡಸ್ಟ್‌ಬಿನ್‌ನಲ್ಲಿ ಜ್ಯೂಸ್‌ನ ಟೆಟ್ರಾ ಪ್ಯಾಕ್‌ಗಳು ಮತ್ತು ನೀರಿನ ಬಾಟಲಿಗಳು ಪತ್ತೆಯಾಗಿವೆ.
ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಪ್ರಾಥಮಿಕ ತನಿಖೆಯಿಂದ ಆತ್ಮಹತ್ಯೆ ಎಂದು ಕಂಡುಬಂದರೂ, ಘಟನೆಗೆ ಕಾರಣವಾದ ಸಂದರ್ಭಗಳನ್ನು ಪೊಲೀಸರು ತನಿಖೆ ಮಾಡುತ್ತಿದ್ದಾರೆ.
ಮೃತರನ್ನು ತಂದೆ ಹೀರಾ ಲಾಲ್ ಮತ್ತು ಅವರ ಪುತ್ರಿಯರಾದ ನೀತು (18), ನಿಶಿ (15), ನೀರು (10), ಮತ್ತು ನಿಧಿ (8) ಎಂದು ಗುರುತಿಸಲಾಗಿದೆ.
ಪೊಲೀಸರ ಪ್ರಕಾರ, ಕಾರ್ಪೆಂಟರ್ ಆಗಿರುವ ಹೀರಾ ಲಾಲ್, ಒಂದು ವರ್ಷದ ಹಿಂದೆ ತನ್ನ ಹೆಂಡತಿಯ ಮರಣದ ನಂತರ ತನ್ನ ಹೆಣ್ಣುಮಕ್ಕಳೊಂದಿಗೆ ವಾಸಿಸುತ್ತಿದ್ದ. ನಾಲ್ವರೂ ಹೆಣ್ಣುಮಕ್ಕಳಿಗೆ ಅಂಗವೈಕಲ್ಯ: ನೀತುಗೆ ದೃಷ್ಟಿದೋಷ, ನಿಶಿಗೆ ನಡೆಯಲು ತೊಂದರೆ, ಇತರ ಹೆಣ್ಣುಮಕ್ಕಳ ವಿಕಲಾಂಗತೆ ಇನ್ನೂ ತನಿಖೆ ಹಂತದಲ್ಲಿದೆ.
ಸೆಪ್ಟಂಬರ್ 24 ರಂದು ಹೀರಾ ಲಾಲ್ ಮನೆಗೆ ಪ್ರವೇಶಿಸಿದ್ದನ್ನು ಸಿಸಿಟಿವಿ ದೃಶ್ಯಾವಳಿಗಳು ತೋರಿಸಿವೆ. ಅದರ ನಂತರ, ಯಾರೂ ಒಳಗೆ ಪ್ರವೇಶಿಸುವುದು ಅಥವಾ ಹೊರಹೋಗುವುದು ಕಂಡುಬಂದಿಲ್ಲ.
ಶುಕ್ರವಾರ ಪೊಲೀಸರು ಸ್ಥಳಕ್ಕೆ ಆಗಮಿಸಿದಾಗ ಬಾಗಿಲು ಒಳಗಿನಿಂದ ಲಾಕ್ ಆಗಿರುವುದು ಕಂಡು ಬಂತು. ದೆಹಲಿ ಅಗ್ನಿಶಾಮಕ ಸೇವೆಗೆ ಕರೆ ಮಾಡಿ ಬಾಗಿಲು ಒಡೆದು ಒಳಗಡೆ ಐವರ ಶವಗಳು ಪತ್ತೆಯಾಗಿವೆ.
ಬಾಲಕಿಯರ ಶವ ಮಲಗುವ ಕೋಣೆಯಲ್ಲಿದ್ದರೆ, ಅವರ ತಂದೆಯ ಶವ ಬೇರೆ ಕೋಣೆಯಲ್ಲಿತ್ತು. ಐವರಿಗೂ ಬಾಯಲ್ಲಿ ನೊರೆ ಬರುತ್ತಿತ್ತು.