ಕೊಣಾಜೆ: ಯಕ್ಷಗಾನ ಸಂಪ್ರದಾಯ ಬದ್ದವಾಗಿ ಮುನ್ನಡೆಯಬೇಕಾದರೆ ಯಕ್ಷಗಾನ ಪರಂಪರೆಯ ಜ್ಞಾನ, ಅರಿವನ್ನು ಸಮರ್ಥವಾಗಿ ಮುಂದಿನ ತಲೆಮಾರಿಗೆ ತಲುಪಿಸುವವರು, ವಿವರಿಸುವವರೂ ಮುಖ್ಯವಾಗುತ್ತಾರೆ. ಯಕ್ಷಗಾನದಲ್ಲಿ ಅನುಭವದಿಂದಲೇ ಬಹುತೇಕ ಶಿಕ್ಷಣ ಸಿಗುತ್ತದೆ. ನಮ್ಮಲ್ಲಿನ ಬಹುತೇಕ ಕಲಾವಿದರು ರಂಗದಲ್ಲಿ ಮತ್ತು ಹಿರಿಯ ಕಲಾವಿದರ ಮಾರ್ಗದರ್ಶನದಿಂದಲೇ ರೂಪುಗೊಂಡವರು ಎಂದು ಯಕ್ಷಗಾನ ರಂಗದ ಹಿರಿಯ ಹಿಮ್ಮೇಳ ಕಲಾವಿದರು ಹಾಗೂ ಯಕ್ಷಗಾನ ಗುರುಗಳಾದ ಮಾಂಬಾಡಿ ಸುಬ್ರಹ್ಮಣ್ಯ ಭಟ್ ಅವರು ಹೇಳಿದರು.
ಅವರು ಮಂಗಳೂರು ವಿಶ್ವವಿದ್ಯಾಲಯದ ಡಾ.ಪಿ.ದಯಾನಂದ ಪೈ ಮತ್ತು ಶ್ರೀ ಪಿ.ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರ ಇದರ ವತಿಯಿಂದ ಮಂಗಳವಾರ ನಡೆದ ಕಲಾವಿದರ ಯಕ್ಷಪಯಣದ ಸ್ವಗತ ಯಕ್ಷಾಯಣ- ದಾಖಲೀಕರಣ ಸರಣಿ – 5 ರ ಕಾರ್ಯಕ್ರಮದಲ್ಲಿ ತಮ್ಮ ಯಕ್ಷ ಪಯಣದ ಅನುಭವ ಕಥನವನ್ನು ಹಂಚಿಕೊಂಡರು.
ಮಂಗಳೂರು ವಿಶ್ವವಿದ್ಯಾನಿಲಯದ ಯಕ್ಷಗಾನ ಅಧ್ಯಯನ ಕೇಂದ್ರವು ಈ ನಿಟ್ಡಿನಲ್ಲಿ ಹಿರಿಯ ಕಲಾವಿದರ ಅನುಭವ ಕಥನವನ್ನು ದಾಖಲಿಸುವ ಕಾರ್ಯ ಶ್ಲಾಘನೀಯ ಹಾಗೂ ಇದರಿಂದ ಮುಂದಿನ ಯುವ ಪೀಳಿಗೆಗೆ ಅನುಕೂಲವಾಗಲಿದೆ.
ಹಿಮ್ಮೇಳ ಕಲಿಯುವವರಿಗೆ ಯಕ್ಷಗಾನದ ಆಸಕ್ತಿಯ ಜೊತೆಗೆ ಹಿಮ್ಮೇಳ ಮುಮ್ಮೇಳ ಹಾಗೂ ಯಕ್ಷಗಾನದ ಸೂಕ್ಷ್ಮತೆಗಳ ಅರಿವು ಅಗತ್ಯ. ಹಿಂದಿನ ಕಾಲದಲ್ಲಿ ಚೆಂಡೆ ಮದ್ದಳೆಗೆ ವಿಶೇಷ ತರಗತಿಗಳು ಇರಲಿಲ್ಲ. ನೋಡಿಕೊಂಡು, ಹಿರಿಯರಲ್ಲಿ ಕೇಳಿಕೊಂಡು ಕಲಿತವವರೇ ಹೆಚ್ಚು. ಇಂದು ಯಕ್ಷಗಾನ ಹಿಮ್ಮೇಳ ಅಭ್ಯಾಸ ಮಾಡಲು ಅನೇಕ ಅವಕಾಶಗಳಿವೆ ಎಂದರು.
ಮಾಂಬಾಡಿ ಮನೆತನ ಹಾಗೂ ಯಕ್ಷಗಾನ ಅವಿನಾಭಾವ ಸಂಬಂಧ ಇದೆ. ಯಕ್ಷಗಾನಕ್ಕೆ ಕಾಲಿಡಲು ತಂದೆ ಮಾಂಬಾಡಿ ನಾರಾಯಣ ಭಾಗವತರೇ ನನಗೆ ಪ್ರೇರಣೆಯಾಗಿದ್ದರು. ನಾನು ಎಳವೆಯಲ್ಲಿ ನೋಡಿದ ಪಡ್ರೆ ಚಂದ್ರು ನಾಟ್ಯ, ಕುರಿಯ ವಿಠಲ ಶಾಸ್ತ್ರಿಗಳ ಅಭಿನಯ, ಕುಂಬಳೆ ಕುಟ್ಯಪ್ಪು ಮಹಿಷಾಸುರ, ಅಳಿಕೆ ರಾಮಯ್ಯ ರೈ ಹಾಗೂ ಪಡ್ರೆ ಚಂದ್ರು ಲವ ಕುಶ ಮೊದಲಾದ ಪಾತ್ರಗಳನ್ನು ಇಂದಿಗೂ ಮರೆಯಲಸಾಧ್ಯ ಎಂದರು.
ಯಕ್ಷಗಾನ ಅಧ್ಯಯನ ಕೇಂದ್ರದ ನಿರ್ದೆಶಕರಾದ ಡಾ.ಧನಂಜಯ ಕುಂಬ್ಳೆ ಅವರು ಮಾತನಾಡಿ ಮಾಂಬಾಡಿಯರು ಹಿಮ್ಮೇಳ ಕಲಾವಿದರಾಗಿ, ಮೇಳದ ವ್ಯವಸಾಯಿಯಾಗಿ, ಪರಂಪರೆನಿಷ್ಠ ಯಕ್ಷಗುರುಗಳಾಗಿ ಅಪಾರ ಅನುಭವ ಹೊಂದಿದವರು. ಕಟೀಲು, ಧರ್ಮಸ್ಥಳ, ಕೂಡ್ಲು, ಕರ್ನಾಟಕ, ಕದ್ರಿ ಮೊದಲಾದ ಮೇಳಗಳಲ್ಲಿ 20 ವರ್ಷಗಳ ತಿರುಗಾಟ ನಡೆಸಿದ್ದಾರೆ. ತೆಂಕುತಿಟ್ಟು ಯಕ್ಷಗಾನದ ಗುರುಗಳಾಗಿ ಮೂರು ಸಾವಿರಕ್ಕೂ ಅಧಿಕ ಶಿಷ್ಯಬಳಗವನ್ನು ರೂಪಿಸಿದವರು. ಮಾಂಬಾಡಿ ಮನೆತನ ಯಕ್ಷಗಾನಕ್ಕೆ ಕೊಟ್ಟ ಕೊಡುಗೆ ಅಪಾರ ಎಂದರು.
ಇದೇ ಸಂದರ್ಭದಲ್ಲಿ ಯಕ್ಷಪಯಣದ ಅನುಭವವನ್ನು ಹಂಚಿಕೊಂಡ ಮಾಂಬಾಡಿ ಸುಬ್ರಹ್ಮಣ್ಯ ಭಟ್ ಅವರನ್ನು ಯಕ್ಷಗಾನ ಅಧ್ಯಯನ ಕೇಂದ್ರದ ವತಿಯಿಂದ ಗೌರವಿಸಲಾಯಿತು.
ಯಕ್ಷಗಾನ ಅಧ್ಯಯನ ಕೇಂದ್ರದ ನಿಕಟಪೂರ್ವ ನಿರ್ದೆಶಕರಾದ ಪ್ರೊ.ಶ್ರೀಪತಿ ಕಲ್ಲೂರಾಯ, ಯಕ್ಷಗಾನ ಅಧ್ಯಯನ ಕೇಂದ್ರದ ಸಂಶೋಧನಾ ಅಧಿಕಾರಿ ಡಾ.ಸತೀಶ್ ಕೊಣಾಜೆ, ಯಕ್ಷಗಾನ ಕಲಾವಿದ ಪೂರ್ಣೇಶ್ ಆಚಾರ್ಯ, ಎಸ್ ವಿಪಿ ಕನ್ನಡ ಅಧ್ಯಯನ ಸಂಸ್ಥೆಯ ಚಂದ್ರಶೇಖರ್ ಎಂ.ಬಿ, ವಿವಿಯ ಇತರ ಪೀಠಗಳ ಪ್ರಸಾದ್, ಕಿರಣ್ , ಯತೀಶ್ ಕುಡುಪು , ದಿಲೀಪ್ , ಯಕ್ಷಮಂಗಳ ವಿದ್ಯಾರ್ಥಿ ಅಭಿರಾಮ್ ಮೊದಲಾದವರು ಉಪಸ್ಥಿತರಿದ್ದರು.
- 10th Standard, Social – Economics Chapter 31 – ‘PUBLIC FINANCE AND BUDGET’ – Solutions
- 10th Standard, English Poem 8 – ‘Mending Wall’ – Solutions
- 10th Standard Social Science, Chapter 19 – ‘INDIA AFTER INDEPENDENCE’ – Solutions
- 9th Standard – English – UNIT 8 PROSE – ‘THE STORY-TELLER’ – Solutions
- 9th Social Science – Chapter 26 – ‘Community’ – Solutions