ಶ್ರೀ ಗಜಾನನ ಯಕ್ಷಗಾನ ವೇಷಭೂಷಣ ಸಂಸ್ಥೆಯ ಸಂಸ್ಥಾಪಕ, ಬಡಗುತಿಟ್ಟಿನ ಹಿರಿಯ ಪ್ರಸಾದನ ತಜ್ಞ ಹಂದಾಡಿ ಬಾಲಕೃಷ್ಣ ನಾಯಕ್ (76 ವರ್ಷ) ಇಂದು (04-07-2024) ಮಣ ಪಾಲದ ಕೆ.ಎಂ.ಸಿ ಆಸ್ಪತ್ರೆಯಲ್ಲಿ ಅಲ್ಪಕಾಲದ ಅಸೌಖ್ಯದಿಂದ ನಿಧನ ಹೊಂದಿದರು.
ಎಚ್. ಸುಬ್ಬಣ್ಣ ಭಟ್ ಮತ್ತು ಇಂದು ನಾಯಕ್ ಇವರ ಜೊತೆಯಲ್ಲಿ ಬಡಗುತಿಟ್ಟಿನ ವೇಷಭೂಷಣಗಳನ್ನು ವಿವಿಧ ಸಂಘ ಸಂಸ್ಥೆಗಳಿಗೆ ಒದಗಿಸುತ್ತಾ, ಬಳಿಕ ಸ್ವಂತ ಸಂಸ್ಥೆಯನ್ನು ಸ್ಥಾಪಿಸಿದರು.
ತಮ್ಮ ಅಪೂರ್ವ ಕಲಾಪ್ರತಿಭೆ ಹಾಗೂ ಸರಳ ಸಜ್ಜನಿಕೆಯಿಂದ ಎಲ್ಲ ಸಂಘ ಸಂಸ್ಥೆಗಳಿಗೂ ಅನಿವಾರ್ಯ ಎಂಬಂತೆ ಬಾಳಿದ ಧೀಮಂತರು. ಬಡಗುತಿಟ್ಟಿನ ಕಿರೀಟ ಹಾಗೂ ವೇಷಭೂಷಣಗಳ ತಯಾರಿಕೆಯಲ್ಲಿ ಸಿದ್ಧಹಸ್ತರಾಗಿದ್ದರು. ದೇಶವಿದೇಶಗಳಲ್ಲಿ ನೂರಾರು ಮಂದಿಗೆ ಬಡಗುತಿಟ್ಟಿನ ಪಾರಂಪರಿಕ ವೇಷಭೂಷಣ ಸಿದ್ಧಪಡಿಸಿಕೊಟ್ಟ ಕೀರ್ತಿ ಬಾಲಕೃಷ್ಣ ನಾಯಕ್‌ರದ್ದು.
ತನ್ನ ಮೂವರು ಪುತ್ರರೂ ಈ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವುದು ಈ ಕುಟುಂಬದ ವಿಶೇಷತೆಯಾಗಿದೆ. ಇವರ ಕಲಾ ಪ್ರತಿಭೆಯನ್ನು ಗುರುತಿಸಿ ಕರ್ನಾಟಕ ಯಕ್ಷಗಾನ ಅಕಾಡೆಮಿ, ಯಕ್ಷಗಾನ ಕಲಾರಂಗ ಹಾಗೂ ಕಳೆದ ವರ್ಷ ಉಡುಪಿಯಲ್ಲಿ ಜರಗಿದ ಪ್ರಥಮ ಯಕ್ಷಗಾನ ಸಮ್ಮೇಳನದಲ್ಲಿ ಗೌರವಿಸಲಾಗಿತ್ತು.
ಉಡುಪಿಯ ಯಕ್ಷಶಿಕ್ಷಣ ಅಭಿಯಾನ ಯಶಸ್ವಿಯಾಗುವಲ್ಲಿ ಬಾಲಕೃಷ್ಣ ನಾಯಕ್‌ರ ಕೊಡುಗೆ ಮಹತ್ತರವಾದುದು. ಮೃತರು ಪತ್ನಿ, ಮೂವರು ಪುತ್ರರು ಹಾಗೂ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.
ಯಕ್ಷಶಿಕ್ಷಣ ಟ್ರಸ್ಟ್ ನ ಅಧ್ಯಕ್ಷರೂ, ಉಡುಪಿಯ ಶಾಸಕರೂ ಆದ ಯಶಪಾಲ್ ಸುವರ್ಣ, ಸ್ಥಾಪಕ ಟ್ರಸ್ಟಿ ಕೆ.ರಘುಪತಿ ಭಟ್ ಹಾಗೂ ಕಾರ್ಯದರ್ಶಿ ಮುರಲಿ ಕಡೆಕಾರ್, ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್ ಹಾಗೂ ಬ್ರಹ್ಮಾವರದ ಅಜಪುರ ಯಕ್ಷಗಾನ ಮಂಡಳಿಯ ಅಧ್ಯಕ್ಷ ಪದ್ಮನಾಭ ಗಾಣಿಗ ಹಾಗೂ ಸದಸ್ಯರು ತೀರ್ವ ಸಂತಾಪ ಸೂಚಿಸಿದ್ದಾರೆ.
ಮೃತರ ಅಂತ್ಯ ಸಂಸ್ಕಾರ ನಾಳೆ (05-07-2024) ಪೂರ್ವಾಹ್ನ 10.00 ಗಂಟೆಗೆ ಬ್ರಹ್ಮಾವರದಲ್ಲಿ ಜರಗಲಿದೆ.
- ಕಾಸರಗೋಡು ಮಹಿಳಾ ಪೊಲೀಸ್ ಅಧಿಕಾರಿಯನ್ನು ಕಡಿದು ಕೊಂದ ಆಕೆಯ ಪತಿ
- ನವವಿವಾಹಿತೆ ಆತ್ಮಹತ್ಯೆ – ಆಕೆ ಬರೆದಿಟ್ಟ ಡೆತ್ ನೋಟಿನಲ್ಲಿ ಏನಿದೆ?
- ತಾನು ಮದುವೆಯಾಗುವ ಹುಡುಗಿಗೆ ಮೂರು ಷರತ್ತುಗಳನ್ನು ವಿಧಿಸಿದ್ದ ಎ.ಆರ್. ರೆಹಮಾನ್: ಮದುವೆಯ ಮೂವತ್ತನೆಯ ವಾರ್ಷಿಕೋತ್ಸವ (ಗ್ರ್ಯಾಂಡ್ ಥರ್ಟಿ) ತಲುಪುವ ಭರವಸೆ ಹುಸಿಯಾಯಿತು ಎಂದ ಸಂಗೀತ ನಿರ್ದೇಶಕ
- ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ರಕ್ಷಕ-ಶಿಕ್ಷಕ ಸಂಘದ ಪದಾಧಿಕಾರಿಗಳ ಆಯ್ಕೆ
- ಎಲೆಕ್ಟ್ರಿಕ್ ಸ್ಕೂಟರ್ ಶೋರೂಮ್ ಬೆಂಕಿಗೆ ಆಹುತಿ – 20 ವರ್ಷದ ಯುವತಿ ಬೆಂಕಿಗೆ ಸಿಲುಕಿ ಸಾವು