Monday, July 1, 2024
Homeಸುದ್ದಿ'ಯಕ್ಷಗಾನ ಪ್ರಸಂಗಗಳಲ್ಲಿ ನಾರದ' - ನಾರದನ ಅಂತರಂಗವನ್ನು ಬಗೆದು ನೋಡಿದ ಹಾಸ್ಯಗಾರನ ಅತ್ಯಪೂರ್ವ ಹೊತ್ತಗೆ

‘ಯಕ್ಷಗಾನ ಪ್ರಸಂಗಗಳಲ್ಲಿ ನಾರದ’ – ನಾರದನ ಅಂತರಂಗವನ್ನು ಬಗೆದು ನೋಡಿದ ಹಾಸ್ಯಗಾರನ ಅತ್ಯಪೂರ್ವ ಹೊತ್ತಗೆ


ಪುರಾಣಗಳಲ್ಲಿ ಬರುವ ನಾರದನದು ಅತಿ ವಿಶಿಷ್ಟವೂ ಕೌತುಕವೂ ಆದ ವ್ಯಕ್ತಿತ್ವದ ಪಾತ್ರ. ನೋಟಕರಾಗಿ ನಾವು ಹಲವಾರು ಬಗೆಯಲ್ಲಿ ಅಥವಾ ದೃಷ್ಟಿಕೋನದಿಂದ ನಾರದನನ್ನು ಕಂಡಿದ್ದೇವೆ. ಆದರೆ ಪಾತ್ರಧಾರಿಯಾಗಿ ನಾರದನ ಪಾತ್ರಚಿತ್ರಣ ಹೇಗೆ. ಅದು ಅಷ್ಟು ಸುಲಭವಲ್ಲ.

ಪಾತ್ರಧಾರಿಯೊಬ್ಬ ನಾರದನ ಪಾತ್ರವನ್ನು ನಿರ್ವಹಿಸುವುದು ಒಂದು ದೊಡ್ಡ ಸವಾಲು. ಬೇರೆಯ ರಂಗ ಪ್ರಕಾರಗಳನ್ನು ಸ್ವಲ್ಪ ಬದಿಗಿರಿಸಿ ಯಕ್ಷಗಾನದ ಬಗ್ಗೆ ವಿಚಾರ ಮಾಡಿದಾಗ ನಮಗೆ ಇಲ್ಲಿ ನಾರದನ ಪಾತ್ರಕ್ಕೆ ಅತ್ಯಂತ ಗೌರವವನ್ನು ತಂದುಕೊಟ್ಟ ಕೆಲವೇ ಕೆಲವು ಕಲಾವಿದರನ್ನು ಕಾಣಸಿಗಬಹುದು.

ಯಕ್ಷಗಾನದಲ್ಲಿ ನಾರದ ಪಾತ್ರ ಸಾಮಾನ್ಯವಾಗಿ ಹಾಸ್ಯಗಾರರೇ ನಿರ್ವಹಿಸುವ ಪಾತ್ರ. ಆದುದರಿಂದಲೇ ನಾರದನ ಕ್ಯಾರೆಕ್ಟರ್ ಕೆಲವೊಮ್ಮೆ ನಗೆಪಾಟಲಿಗೀಡಾದದ್ದು ಸುಳ್ಳಲ್ಲ! ಆದರೆ ಯಕ್ಷಗಾನ ಹಾಸ್ಯ ಕಲಾವಿದರು ನಾರದನ ಪಾತ್ರವನ್ನು ನಿರ್ವಹಿಸುವಾಗ ತಮ್ಮ ಎಂದಿನ ಹಾಸ್ಯದ ಮೂಡಿನಿಂದ ಹೊರಬರಬೇಕಾದ ಅಗತ್ಯ ಈಗಿನ ದಿನಗಳಲ್ಲಿ ಖಂಡಿತವಾಗಿಯೂ ಇದೆ.

ನಾರದನೇನು? ಮತ್ತು ನಾರದನ ಉದ್ದೇಶವೇನು ಎಂಬುದನ್ನು ಮನನ ಮಾಡಿಕೊಂಡು ನಾರದನ ಪಾತ್ರವನ್ನು ರಂಗದಲ್ಲಿ ಚಿತ್ರಸುವ ಯಕ್ಷಗಾನ ಹಾಸ್ಯ ಕಲಾವಿದರು ಕೇವಲ ಬೆರಳೆಣಿಕೆಯಲ್ಲಿ ಕಾಣಸಿಗುತ್ತಾರೆ. ಅಂತಹವರಲ್ಲಿ ಕಟೀಲು ಮೇಳದ ಹಾಸ್ಯ ಕಲಾವಿದರಾದ ರವಿಶಂಕರ ವಳಕ್ಕುಂಜ ಅವರೂ ಒಬ್ಬರು.

ರವಿಶಂಕರ್ ವಳಕ್ಕುಂಜ ಅವರು ಪ್ರಸ್ತುತ ತೆಂಕುತಿಟ್ಟು ಯಕ್ಷಗಾನದ ಪ್ರಬುದ್ಧ, ಪ್ರಸಿದ್ಧ ಹಾಸ್ಯಗಾರರು. ನಾರದನ ಪಾತ್ರವೊಂದು ಕೆಲವರ ಕೈಯಲ್ಲಿ ಸಿಕ್ಕಿ ಅವಹೇಳನಕ್ಕೆ ಸಿಲುಕಿ ನಲುಗಿಹೋಗುತ್ತಿದ್ದ ಕಾಲಘಟ್ಟದಲ್ಲಿ ನಾರದ ಯಾರು ಮತ್ತು ನಾರದನ ಅಂತರಂಗವೇನು ಎಂಬುದನ್ನು ಪ್ರೇಕ್ಷಕರಿಗೆ ಮನನ ಮಾಡಿಕೊಟ್ಟು ನಾರದ ಪಾತ್ರವನ್ನು ನಿರ್ವಹಿಸಿದ ಕಲಾವಿದ. ಈ ದೃಷ್ಟಿಯಿಂದ ನೋಡಿದರೆ ರವಿಶಂಕರ್ ವಳಕ್ಕುಂಜ ಅವರು ಪ್ರಸ್ತುತ ಹಾಸ್ಯ ಕಲಾವಿದರ ನಡುವೆ ತಾನು ಪ್ರತ್ಯೇಕವಾಗಿಯೇ ನಿಲ್ಲುತ್ತಾರೆ.

ರವಿಶಂಕರ್ ವಳಕ್ಕುಂಜ ಅವರು ಲೇಖಕರಾಗಿ ಈಗಾಗಲೇ ಎಲ್ಲರಿಗೂ ಪರಿಚಿತರು ಮತ್ತು ಅವರು ಬರೆದ ಪುಸ್ತಕಗಳು ಯಕ್ಷಗಾನ ವಲಯದಲ್ಲಿ ಬಾರೀ ಜನಪ್ರಿಯತೆಯನ್ನು ಪಡೆದಿವೆ. “ಯಕ್ಷಗಾನ ಪ್ರಸಂಗಗಳಲ್ಲಿ ನಾರದ” ಎಂಬುದು ಇತ್ತೀಚೆಗೆ ಪ್ರಕಟವಾದ ಅವರ ಕೃತಿ. ಎಲ್ಲರೂ ಓದಲೇಬೇಕಾದ ಪುಸ್ತಕ. ಇದರಲ್ಲಿ ಅವರು ಒಟ್ಟು 111 ಯಕ್ಷಗಾನ ಪ್ರಸಂಗಗಳಲ್ಲಿ ಬರುವ ನಾರದನ ಪಾತ್ರದ ಪದ್ಯ ಮತ್ತು ಅದರ ಅರ್ಥವನ್ನು (ಸಂಭಾಷಣೆ) ಬರೆದಿದ್ದಾರೆ. ಯಕ್ಷಗಾನ ಅಭ್ಯಾಸಿಗಳಿಗಂತೂ ಈ ಪುಸ್ತಕ ಅತಿದೊಡ್ಡ ಸಾಹಿತ್ಯ ನಿಧಿ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ.

ಈ ಪುಸ್ತಕದಲ್ಲಿ ಒಟ್ಟು 224 ಪುಟಗಳಿವೆ. ಖ್ಯಾತ ಕಲಾವಿದ, ಸಾಹಿತಿ, ಶಿಕ್ಷಕ ಶ್ರೀ ರಾಧಾಕೃಷ್ಣ ಕಲ್ಚಾರ್ ಅವರ ಪ್ರಬುದ್ಧ ಬರಹದ ಮುನ್ನಡಿಯಿದೆ. ಕಟೀಲು ದೇವಳದ ಆನುವಂಶಿಕ ಅರ್ಚಕರಾದ
ಶ್ರೀ ಲಕ್ಷ್ಮೀನಾರಾಯಣ ಆಸ್ರಣ್ಣ, ಶ್ರೀ ಕಮಲಾದೇವೀಪ್ರಸಾದ ಆಸ್ರಣ್ಣ, ವಿದ್ವಾನ್ ಶ್ರೀಹರಿನಾರಾಯಣದಾಸ ಆಸ್ರಣ್ಣರ ಶುಭ ಸಂದೇಶಗಳಿವೆ.

ಲೇಖಕರ ಮಾತು ವಿಭಾಗದಲ್ಲಿ ಲೇಖಕ ರವಿಶಂಕರ್ ವಳಕ್ಕುಂಜ ಅವರು ನಾರದನ ಪಾತ್ರವನ್ನು ಹೇಗೆ ನಿರ್ವಹಿಸಬಹುದು ಎಂಬುದರ ಬಗ್ಗೆ ಟಿಪ್ಪಣಿಯನ್ನು ನೀಡಿದ್ದಾರೆ. ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ ಈ ಪುಸ್ತಕ ಮಾರಾಟಕ್ಕೆ ಲಭ್ಯವಿಲ್ಲ. ನಿಮಗೆ ಪುಸ್ತಕ ಬೇಕಾದರೆ ಲೇಖಕರನ್ನೇ ಸಂಪರ್ಕಿಸಬಹುದು.

ಕಲಾವಿದ, ಲೇಖಕರ ವಿಳಾಸ: ರವಿಶಂಕರ್ ವಳಕ್ಕುಂಜ,
ಮಲೆ ಮನೆ, ಅಂಚೆ ಮಾಡಾವು, ಕೆಯ್ಯೂರು ಗ್ರಾಮ,
ಪುತ್ತೂರು ತಾಲೂಕು, ದ.ಕ – 574210
ಮೊಬೈಲ್: 9164487083

ಬರಹದ ಲೇಖನಿ ; ಯಕ್ಷರಸಿಕ, ಪುತ್ತೂರು

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments