ತಾಳಮದ್ದಲೆ ಪುರಾಣ ಕತೆಯನ್ನು ಜನಸಾಮಾನ್ಯರಿಗೆ ತಲಪಿಸುವ ಅಪೂರ್ವ ಮಾಧ್ಯಮ – ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ.
ಯಕ್ಷಗಾನ ನಮ್ಮ ನಾಡಿನ ಪರಿಪೂರ್ಣ ಕಲಾಪ್ರಕಾರ. ತಾಳಮದ್ದಲೆ ಏಕಕಾಲದಲ್ಲಿ ಪುರಾಣದ ಕತೆಯನ್ನು ಜನ ಸಾಮಾನ್ಯರಿಗೆ ತಲಪಿಸುತ್ತಾ, ವ್ಯಾಖ್ಯಾನಿಸುತ್ತಾ, ಮುರಿದು ಕಟ್ಟುತ್ತಾ ಬಂದಿದೆ. ಅನೇಕ ವಿದ್ವಾಂಸರು ಇದನ್ನು ಶತಮಾನಗಳಿಂದ ಮಾಡುತ್ತಾ ಬಂದಿದ್ದಾರೆ. ಪ್ರಸ್ತುತ ಸಂಘರ್ಷದ ಸಂದರ್ಭದಲ್ಲಿ ಇದರ ಕೊಡುಗೆ ಅತ್ಯಂತ ಮಹತ್ವದ್ದು ಎಂದು ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅಭಿಪ್ರಾಯ ಪಟ್ಟರು.


ಅವರು ಉಡುಪಿಯ ಯಕ್ಷಗಾನ ಕಲಾರಂಗವು ಜೂನ್ 23, 2024 ಭಾನುವಾರದಂದು ಸಂಸ್ಥೆಯ ಐವೈಸಿ ಸಭಾಭವನದಲ್ಲಿ ಆಯೋಜಿಸಿದ್ದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅನುಗ್ರಹ ಸಂದೇಶ ನೀಡುತ್ತಿದ್ದರು.
ತಲಾ 20,000/- ನಗದು ಮತ್ತು ಪ್ರಶಸ್ತಿ ಪತ್ರಗಳನ್ನೊಳಗೊಂಡಿರುವ ಮಟ್ಟಿ ಮುರಲೀಧರ ರಾವ್ ಸ್ಮರಣಾರ್ಥ ‘ಯಕ್ಷಗಾನ ಕಲಾರಂಗ ಪ್ರಶಸ್ತಿ’ಯನ್ನು ಜಬ್ಬಾರ್ ಸಮೊ ಅವರಿಗೂ, ಪೆರ್ಲ ಕೃಷ್ಣ ಭಟ್ ಸ್ಮರಣಾರ್ಥ ‘ಯಕ್ಷಗಾನ ಕಲಾರಂಗ ಪ್ರಶಸ್ತಿ’ಯನ್ನು ಸೇರಾಜೆ ಸೀತಾರಾಮ ಭಟ್ ಅವರಿಗೂ ಪ್ರದಾನ ಮಾಡಲಾಯಿತು.
ಶಾರದಾ ವಿದ್ಯಾ ಸಂಸ್ಥೆಗಳ ಸಂಸ್ಥಾಪಕರಾದ ಡಾ. ಎಂ. ಬಿ. ಪುರಾಣ ಕರು ಅಧ್ಯಕ್ಷತೆ ವಹಿಸಿದ್ದರು. ವಿದ್ವಾನ್ ಪಂಜ ಭಾಸ್ಕರ ಭಟ್, ಡಾ. ಆದರ್ಶ ಹೆಬ್ಬಾರ್, ಶ್ರೀಮತಿ ರಜನಿ ಹೆಬ್ಬಾರ್ ಅಭ್ಯಾಗತರಾಗಿ ಭಾಗವಹಿಸಿದ್ದರು.
ವೇದಿಕೆಯಲ್ಲಿ ಸಂಸ್ಥೆಯ ಉಪಾಧ್ಯಕ್ಷರುಗಳಾದ ಎಸ್. ವಿ. ಭಟ್, ಪಿ. ಕಿಶನ್ ಹೆಗ್ಡೆ, ವಿ. ಜಿ. ಶೆಟ್ಟಿ ಉಪಸ್ಥಿತರಿದ್ದರು. ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸಿದರು, ನಾರಾಯಣ ಎಂ. ಹೆಗಡೆ ಪ್ರಶಸ್ತಿ ಪುರಸ್ಕೃತರನ್ನು ಪರಿಚಯಿಸಿದರು. ಎಚ್. ಎನ್. ಶೃಂಗೇಶ್ವರ ವಂದಿಸಿದರು.
ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಾಸ್ತಾವಿಕ ಮಾತುಗಳೊಂದಿಗೆ ಕಾರ್ಯಕ್ರಮ ನಿರೂಪಿಸಿದರು. ಪ್ರಶಸ್ತಿ ಪ್ರದಾನದ ಅನಂತರ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ‘ಸೀತಾಪಹಾರ’ ತಾಳಮದ್ದಲೆ ಪ್ರಸ್ತುತಗೊಂಡಿತು.