ಉಡುಪಿ : ವೃತ್ತಿನಿರತ ಯಕ್ಷಗಾನ ಕಲಾವಿದರ ಕ್ಷೇಮಾಭಿವೃದ್ಧಿಗಾಗಿ 25 ವರ್ಷಗಳ ಹಿಂದೆ ಸ್ಥಾಪಿಸಲ್ಪಟ್ಟ ಯಕ್ಷಗಾನ ಕಲಾರಂಗದ ಅಂಗಸಂಸ್ಥೆಯಾದ ಯಕ್ಷನಿಧಿಯ ವಾರ್ಷಿಕ ಮಹಾಸಭೆ ಮೇ 31, 2024 ಶುಕ್ರವಾರದಂದು ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಜರಗಲಿದೆ.

ಪೂರ್ವಾಹ್ನ 10.00 ಗಂಟೆಗೆ ಪರ್ಯಾಯ ಪುತ್ತಿಗೆ ಮಠದ ದಿವಾನರಾದ ಶ್ರೀ ನಾಗರಾಜ ಆಚಾರ್ಯರು ಸಮಾವೇಶವನ್ನು ಉದ್ಘಾಟಿಸಲಿದ್ದು, ಅಭ್ಯಾಗತರಾಗಿ ಭಾಗವತ ಶ್ರೀ ಕಲ್ಮನೆ ನಂಜಪ್ಪ ಅವರು ಭಾಗವಹಿಸಲಿದ್ದಾರೆ.
ಅಪರಾಹ್ನ 2.30 ಗಂಟೆಗೆ ಪರ್ಯಾಯ ಮಠಾಧೀಶರುಗಳಾದ ಶ್ರೀ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಹಾಗೂ ಶ್ರೀ ಶ್ರೀ ಸುಶೀಂದ್ರತೀರ್ಥ ಶ್ರೀಪಾದರುಗಳ ದಿವ್ಯೋಪಸ್ಥಿತಿಯಲ್ಲಿ, ನಾಡೋಜ ಡಾ. ಜಿ. ಶಂಕರ್ ಅಧ್ಯಕ್ಷತೆಯಲ್ಲಿ ಸಭಾಕಲಾಪ ನಡೆಯಲಿದೆ.
ಮುಖ್ಯ ಅಭ್ಯಾಗತರಾಗಿ ಶಾಸಕರುಗಳಾದ ಯಶಪಾಲ್ ಸುವರ್ಣ, ಗುರ್ಮೆ ಸುರೇಶ್ ಶೆಟ್ಟಿ, ಕಿರಣ್ ಕುಮಾರ್ ಕೊಡ್ಗಿ, ಮಾಜಿ ಸಚಿವರಾದ ಪ್ರಮೋದ್ ಮಧ್ವರಾಜ್, ಸಾಮಾಜಿಕ ಧುರೀಣರಾದ ಆನಂದ ಸಿ. ಕುಂದರ್, ಪಿ. ಪುರುಷೋತ್ತಮ ಶೆಟ್ಟಿ, ಕೃಷ್ಣಪ್ರಸಾದ್ ಅಡ್ಯಂತಾಯ, ಬೆಳ್ವೆ ಗಣೇಶ್ ಕಿಣಿ , ಕುಯಿಲಾಡಿ ಸುರೇಶ್ ನಾಯಕ್, ಸಿಎ ಗಣೇಶ್ ಕಾಂಚನ್, ಹರಿಯಪ್ಪ ಕೋಟ್ಯಾನ್, ಹಾಗೂ ಆನಂದ ಪಿ. ಸುವರ್ಣ ಭಾಗವಹಿಸಲಿದ್ದಾರೆ.
ಈ ಸಂದರ್ಭದಲ್ಲಿ ಗೃಹನಿರ್ಮಾಣ ಉಡುಗೊರೆ, ವೈದ್ಯಕೀಯ ನೆರವು, ಸಾಂತ್ವನ ನಿಧಿ ಹಾಗೂ ಉಡುಗೊರೆಯನ್ನು ಕಲಾವಿದರಿಗೆ ವಿತರಿಸಲಾಗುವುದು. ಪೂವಾಹ್ನ 9.00 ರಿಂದ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ತಜ್ಞವೈದ್ಯರಿಂದ ಕಲಾವಿದರ ಆರೋಗ್ಯ ತಪಾಸಣೆ ನಡೆಯಲಿದೆ.
ಪೂರ್ವಾಹ್ನ 10.30ಕ್ಕೆ ತುಮಕೂರು ಜಿಲ್ಲೆಯ ಶ್ರೀ ಕಲ್ಲೇಶ್ವರ ಸ್ವಾಮಿ ಯಕ್ಷಗಾನ ಮಂಡಳಿಯ ಕಲಾವಿದರಿಂದ ಮೂಡಲಪಾಯ ಯಕ್ಷಗಾನ ‘ಶ್ರೀದೇವಿ ಮಹಾತ್ಮೈ’ ಯಕ್ಷಗಾನ ಪ್ರಸ್ತುತಗೊಳ್ಳಲಿದೆ.
ಅಪರಾಹ್ನ 12.00 ಗಂಟೆಗೆ ಯೂಟ್ಯೂಬ್ ದಾಖಲೀಕರಣ / ನೇರ ಪ್ರಸಾರ ಒಳಿತು – ಕೆಡುಕುಗಳ ಬಗ್ಗೆ ಕಲಾವಿದರಿಂದ ಸಂವಾದ ಜರಗಲಿದೆ ಎಂದು ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.