ಪುತ್ತೂರು ಸಮೀಪದ ಪೋಳ್ಯ ಎಂಬಲ್ಲಿ ಇಂದು ಮಧ್ಯಾಹ್ನ ನಡೆದ ಅಪಘಾತದಲ್ಲಿ ಶಿಕ್ಷಕಿಯೋರ್ವರು ಮೃತಪಟ್ಟ ದಾರುಣ ಘಟನೆ ನಡೆದಿದೆ.
ಟಿಪ್ಪರ್ ಹಾಗೂ ಬೈಕ್ ಮಧ್ಯೆ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ದ್ವಿಚಕ್ರ ವಾಹನದ ಹಿಂಬದಿಯಲ್ಲಿ ಕುಳಿತು ಪ್ರಯಾಣಿಸುತ್ತಿದ್ದ ಮಾಣಿ ಸಮೀಪದ ಗಡಿಯಾರದ ಶಾಲಾ ಶಿಕ್ಷಕಿ ಮೃತಪಟ್ಟಿದ್ದಾರೆ.
ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದ ಮಿತ್ತೂರು ಸಮೀಪದ ಸುರೇಶ್ ಕುಲಾಲ್ ಅವರ ಪತ್ನಿ ಅನಿತಾ (35) ಎಂಬವರು ಮೃತ ನತದೃಷ್ಟ ಯುವತಿ.
ಇವರು ಮಾಣಿ ಸಮೀಪದ ಗಡಿಯಾರದ ವಿಸ್ಡಮ್ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದರು ಎಂದು ತಿಳಿದುಬಂದಿದೆ.
ಪುತ್ತೂರಿನಿಂದ ಹಿಂದಿರುಗುತ್ತಿದ್ದ ವೇಳೆ ಕಬಕ ಸಮೀಪದ ಪೋಳ್ಯ ಎಂಬಲ್ಲಿ ದಿಢೀರನೆ ಬಂದ ಟಿಪ್ಪರ್ ಇವರು ಸಂಚರಿಸುತ್ತಿದ್ದ ಬೈಕ್ ಗೆ ಢಿಕ್ಕಿ ಹೊಡೆದಿದೆ.
ಢಿಕ್ಲಿಯ ರಭಸಕ್ಕೆ ಅನಿತಾ ಹಾಗೂ ಅವರ ಮಗು ರಸ್ತೆಗೆಸೆಯಲ್ಪಟ್ಟು ತೀವ್ರವಾಗಿ ಗಾಯಗೊಂಡರು. ಕೂಡಲೇ ಅವರನ್ನು ಪುತ್ತೂರಿನ ಮಹಾವೀರ ಆಸ್ಪತ್ರೆಗೆ ಕರೆತರಲಾಯಿತು. ಆದರೆ ಅದಕ್ಕೆ ಮೊದಲೇ ಅನಿತಾ ಮೃತಪಟ್ಟಿದ್ದರು.
ಮಗು ಅಪಾಯದಿಂದ ಪಾರಾಗಿದೆ. ಪತಿ ಸುರೇಶ್ ಕುಲಾಲ್ ಅವರು ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.
ಪುತ್ತೂರು ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.