ಡಾ. ಅಮೃತಸೋಮೇಶ್ವರರು ಇಂದು (06.01.2024) ನಿಧನರಾದರು.
ಅವಿಭಜಿತ ದಕ್ಷಿಣಕನ್ನಡದ ಸುಮಾರು ಆರುದಶಕಗಳ ಸಾಂಸ್ಕೃತಿಕ ಚರಿತ್ರೆಯಲ್ಲಿ ಪ್ರಥಮ ಪಂಕ್ತಿಯ ಹೆಸರು ಅಮೃತಸೋಮೇಶ್ವರರದ್ದು. ಕವಿತೆ, ಪ್ರಬಂಧ, ನಾಟಕ, ಕತೆಗಳು, ಸಂಶೋಧನೆ ಹಲವು ವಿಭಾಗಗಳಲ್ಲಿ ಕೃಷಿ ನಡೆಸಿದವರು.
ಹೊಸತಲೆಮಾರನ್ನು ಗಾಢವಾಗಿ ಪ್ರಭಾವಿಸಿ, ತಮ್ಮ ಸುತ್ತಮುತ್ತಲಿನ ಸಮಾಜವನ್ನು ಕ್ರಿಯಾಶೀಲವಾಗಿ, ಚಿಂತನಶೀಲವಾಗಿ ಸಿದ್ಧಗೊಳಿಸಿದವರು. ಯಕ್ಷಗಾನ ಪ್ರಸಂಗ ರಚನೆ, ಕಾರ್ಯಾಗಾರಗಳ ಆಯೋಜನೆಯ ಮೂಲಕ ಅವರು ನೀಡಿದ ಕೊಡುಗೆ ಸದಾ ಸ್ಮರಣೀಯ.
ಯಕ್ಷಗಾನ ಕೃತಿಗಳಲ್ಲಿ ನವಚಿಂತನೆಯನ್ನು ಗುಪ್ತಗಾಮಿನಿಯಾಗಿಸಿದವರು. ತುಳುಪ್ರಸಂಗಗಳಿಗೆ ಕನ್ನಡಕ್ಕಿಂತ ಕಡಿಮೆ ಇಲ್ಲದ ಘನತೆಯನ್ನು ನೀಡಿದವರು. ತಲ್ಲೂರು ಕನಕಾ-ಅಣ್ಣಯ್ಯ ಶೆಟ್ಟಿ ಸ್ಮರಣೆಯಲ್ಲಿ ಯಕ್ಷಗಾನ ಕಲಾರಂಗ ನೀಡುವ ವಿದ್ವತ್ ಪ್ರಶಸ್ತಿಗೆ ಭಾಜನರಾಗಿದ್ದರು.
ಇವರ ಬದುಕು-ಸಾಧನೆಯ ಕುರಿತು ಯಕ್ಷಗಾನ ಕಲಾರಂಗವು ವಿಚಾರಗೋಷ್ಠಿಯನ್ನು ಆಯೋಜಿಸಿತ್ತು. ಸಂಸ್ಥೆಯು ಕಲೆ, ಕಲಾವಿದರು, ವಿದ್ಯಾರ್ಥಿಗಳಿಗಾಗಿ ಮಾಡುವ ಕೆಲಸ ಕಾರ್ಯಗಳ ಬಗ್ಗೆ ಅಪಾರ ಆದರಾಭಿಮಾನವನ್ನು ಹೊಂದಿದ್ದ ಇವರು ಕಾರ್ಯಕರ್ತರನ್ನು ಪ್ರೋತ್ಸಾಹಿಸುತ್ತಿದ್ದರು.
ಇವರ ನಿಧನಕ್ಕೆ ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕರ್ ತೀವ್ರ ಸಂತಾಪ ಸೂಚಿಸಿದ್ದಾರೆ.