ಪಾಲಕ್ಕಾಡ್: ಇಲ್ಲಿನ ಅಂಬಟ್ಟುಪಾಳ್ಯಂ ಬಾಲಕರ ಎಚ್‌ಎಸ್‌ಎಸ್ ಬಳಿ ಸೋಮವಾರ ನಸುಕಿನ ವೇಳೆ ನಿಯಂತ್ರಣ ತಪ್ಪಿದ ಕಾರೊಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯೊಬ್ಬರು ದಾರುಣ ಅಂತ್ಯ ಕಂಡಿದ್ದಾರೆ. ಮೃತ – ಮಣಿಕಂಠನ್ (43) – ಅಪಘಾತದಲ್ಲಿ ಶಿರಚ್ಛೇದಿತವಾಗಿದ್ದು, ಮೂರೂವರೆ ಗಂಟೆಗಳ ಸುದೀರ್ಘ ಹುಡುಕಾಟದ ನಂತರ ಅವರ ತಲೆ ಪತ್ತೆಯಾಗಿದೆ.
ಮಣಿಕಂಠನ್ ಜೀವನೋಪಾಯಕ್ಕಾಗಿ ಮೀನು ಮಾರಾಟ ಮಾಡುತ್ತಿದ್ದರು. ಅವರು ದಿನದ ವ್ಯಾಪಾರಕ್ಕಾಗಿ ಪುತ್ತುನಗರದಿಂದ ಚಿತ್ತೂರಿಗೆ ತೆರಳುತ್ತಿದ್ದಾಗ ವೇಗವಾಗಿ ಬಂದ ಕಾರು ನಿಯಂತ್ರಣ ತಪ್ಪಿ ಅವರ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸುಮಾರು 35 ಮೀಟರ್ ದೂರಕ್ಕೆ ಎಸೆಯಲ್ಪಟ್ಟು ಬೆಂಕಿ ಹೊತ್ತಿಕೊಂಡು ಸಂಪೂರ್ಣ ಜಖಂಗೊಂಡಿದೆ.
ಮುಂಜಾನೆ 3.30ರ ಸುಮಾರಿಗೆ ಈ ಘಟನೆ ನಡೆದಿದೆ.
ವರದಿಗಳ ಪ್ರಕಾರ, ಅಪಘಾತದಲ್ಲಿ ಮಣಿಕಂಠನ್ ಅವರ ದೇಹವು ತುಂಡಾಗಿದೆ. ಕಾರನ್ನು ವಿಳಯೋಡಿ ಖಾಸಗಿ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳು ಚಲಾಯಿಸುತ್ತಿದ್ದರು.
ಮಣಿಕಂಠನ್ ಅವರು ಪತ್ನಿ ಓಮನ ಮತ್ತು ಮಕ್ಕಳಾದ ಮನು ಮತ್ತು ಬಿನು ಅವರನ್ನು ಅಗಲಿದ್ದಾರೆ.