Saturday, January 18, 2025
Homeಸುದ್ದಿಸುರೇಶ್ ರಾವ್ ಬಾರ್ಕೂರು ಅವರಿಗೆ ಕಾಳಿಂಗ ನಾವಡ ಪ್ರಶಸ್ತಿ -2023

ಸುರೇಶ್ ರಾವ್ ಬಾರ್ಕೂರು ಅವರಿಗೆ ಕಾಳಿಂಗ ನಾವಡ ಪ್ರಶಸ್ತಿ -2023

ಯಕ್ಷಗಾನ ಕಲೆಯ ಆಸಕ್ತಿಯ ವೀಕ್ಷಣೆಗೆ, ಹವ್ಯಾಸವಾಗಿರಿಸಿ ಕಲಿತು ಕುಣಿಯುವುದಕ್ಕೆ ಅಥವಾ ಅದನ್ನೇ ಬದುಕಿನ ದಾರಿಯಾಗಿಸಿಕೊಳ್ಳುವವರಿಗೆ ಕಲಾಕದಂಬ ಆರ್ಟ್ ಸೆಂಟರ್ ಒಂದು ಉತ್ತಮ ತಾಣವೆನಿಸಿದೆ. ಡಾ| ರಾಧಾಕೃಷ್ಣ ಉರಾಳ ಕೆ. ಅವರ ಕಲ್ಪನೆ ಪರಿಶ್ರಮದ ಫಲವಾಗಿ 2009ರಲ್ಲಿ ಬೆಂಗಳೂರಿನಲ್ಲಿ ಆರಂಭಗೊಂಡ ಈ ಕಲಾಸಂಸ್ಥೆ ಯಕ್ಷಗಾನ, ನಾಟಕ, ನೃತ್ಯ, ವಾದ್ಯ ಸಂಗೀತ, ಜಾನಪದ, ಸಿನೆಮಾ ಹೀಗೆ ಎಲ್ಲಾ ರಂಗದಲ್ಲೂ ತನ್ನ ಛಾಪು ಬೀರಿದೆ. ಭಾರತೀಯ ರಂಗ ಕಲೆಗಳ ಪ್ರದರ್ಶನ, ಪರಿಚಯ, ತರಭೇತಿ, ಪರಿಣತಿ, ಶಾಲಾ ಮಕ್ಕಳಿಗೆ ಕಲಾ ಶಿಕ್ಷಣದ ಆಶಯಗಳನ್ನಿರಿಸಿಕೊಂಡು ಸಾಧನೆಯ ಹಾದಿಯಲಿ ಮುನ್ನಡೆದಿದೆ.


ಯಕ್ಷಗಾನ ಭಾಗವತಿಕೆಯ ಸ್ಥಾನಕ್ಕೆ ತಾರಾ ಮೆರುಗು ತಂದುಕೊಟ್ಟ ‘ಕಾಳಿಂಗ ನಾವಡ’ಯಕ್ಷಗಾನ ಪ್ರಪಂಚ ಮರೆಯದ ಹೆಸರು. ನಾರ್ಣಪ್ಪ ಉಪ್ಪೂರರ ಶಿಷ್ಯರಾಗಿ ಮೂವತ್ತೆರಡನೇ ವಯಸ್ಸಿಗೇ ಪ್ರಶಂಸೆಯ ಗಿರಿಯೇರಿ, ಮೆರೆದು ಮರೆಯಾದವರು. ಕುಳಿತು ಕಲಿಸಿ ಶಿಷ್ಯರನ್ನು ಸಿದ್ಧಮಾಡದಿದ್ದರೂ ಇಂದಿಗೂ ತಮ್ಮ ಗಾನ ಮೋಡಿಯಿಂದ ಲಕ್ಷಾಂತರ ಪ್ರೇಕ್ಷಕರನ್ನು, ನೂರಾರು ಮಂದಿ ಗಾನಾಸಕ್ತರನ್ನು ಭಾಗವತಿಕೆಗೆ ಪ್ರೇರೇಪಿಸುತ್ತಿರುವ ಶಕ್ತಿ.

ತಂದೆ ರಾಮಚಂದ್ರ ನಾವಡ, ತಮ್ಮ ವಿಶ್ವನಾಥ ನಾವಡ ಕೂಡಾ ಭಾಗವತಿಕೆಗೆ ಹೆಸರಾಗಿದ್ದು, ಗುಂಡ್ಮಿ ಎಂದರೆ ನಾವಡರ ಮನೆ ಎಂಬ ನೆನಪು ಯಕ್ಷಕಲಾಸಕ್ತರ ಮನ ಮನದಲ್ಲಿ ಈಗಲೂ ಮರೆಯಲಾಗದ ನಾದಲಹರಿಯ ತರಂಗವನ್ನಿರಿಸಿದೆ.
ಈ ಯಕ್ಷಲೋಕದ ಗಾನದೇವತೆಯ ನೆನಪಿನಲ್ಲಿ ನಮ್ಮ ಕಲಾಕದಂಬ ಆರ್ಟ್ ಸೆಂಟರ್ ಪ್ರತೀ ವರ್ಷ ಯಕ್ಷಗಾನದ ಸಾಧಕರೊಬ್ಬರಿಗೆ ಕಾಳಿಂಗ ನಾವಡ ಪ್ರಶಸ್ತಿ ನೀಡುತ್ತಿದೆ. ಹತ್ತು ಸಾವಿರ ನಗದು, ಬೆಳ್ಳಿ ತಟ್ಟೆ, ಪ್ರಶಸ್ತಿ ಪತ್ರ, ನೆನಪಿನ ಕಾಣಿಕೆಯನ್ನು ಕಾಳಿಂಗ ನಾವಡ ಪ್ರಶಸ್ತಿ ಒಳಗೊಂಡಿರುತ್ತದೆ.

ಗುಂಡ್ಮಿ ಸದಾನಂದ ಐತಾಳ್, ಸುಬ್ರಹ್ಮಣ್ಯ ಧಾರೇಶ್ವರ್, ಕೆಪ್ಪೆಕೆರೆ ಸುಬ್ರಾಯ ಹೆಗಡೆ, ಎಳ್ಳಾರೆ ವೆಂಕಟ್ರಾಯ ನಾಯಕ್, ನೆಬ್ಬೂರು ನಾರಾಯಣ ಹೆಗಡೆ,ಕರ್ಕಿ ಪ್ರಭಾಕರ ಭಂಡಾರಿ, ಕೆ.ಪಿ ಹೆಗ್ಡೆ, ಟಿ ಜಯಂತ್ ಕುಮಾರ್, ಮಂದಾರ್ತಿ ರಾಮಕೃಷ್ಣ, ಶ್ರೀಧರ ಹೆಬ್ಬಾರ್, ಗೋವಿಂದ ಉರಾಳ,ಶಂಕರ ಭಾಗವತ ಯಲ್ಲಾಪುರ ಹಾಗೂ ಬಿದ್ಕಲ್‌ಕಟ್ಟೆ ಕೃಷ್ಣಯ್ಯ ಆಚಾರ್ಯ ಅವರು ಈಗಾಗಲೇ ಕಾಳಿಂಗ ನಾವಡ ಪ್ರಶಸ್ತಿಗೆ ಬಾಜನರಾಗಿದ್ದಾರೆ.

ಶ್ರೀ ಗುಂಡ್ಮಿ ಕಾಳಿಂಗ ನಾವಡ


ಈ ಸಾಲಿನ “ಕಾಳಿಂಗ ನಾವಡ ಪ್ರಶಸ್ತಿ” ಯನ್ನು ಸುಮಾರು 25 ವರ್ಷಗಳಿಂದ ಹೂವಿನ ಕೋಲಿನ ಸಂಪ್ರದಾಯವನ್ನು ನಡೆಸಿಕೊಂಡು ಬರುತ್ತಿರುವ ಹಲವಾರು ಯಕ್ಷಗಾನ ಮೇಳಗಳಲ್ಲಿ ತಮ್ಮ ಭಾಗವತಿಕೆಯ ಮೂಲಕಖ್ಯಾತ ಭಾಗವತರು ಎನಿಸಿಕೊಂಡಿರುವ ಹಾಗೂ ಪ್ರಸಂಗಕರ್ತರು ಆದ ಸುರೇಶ್ ರಾವ್ ಬಾರ್ಕೂರು ಅವರಿಗೆ ಉಡುಪಿ ಜಿಲ್ಲೆಯ ಕೋಟ ಹಂದಟ್ಟು ಗ್ರಾಮದ ಉರಾಳ ಕೇರಿಯ ವೇದಿಕೆಯಲ್ಲಿ 25-12-2023 ರ ಸಂಜೆ 6 ಘಂಟೆಗೆ ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ನೀಡಲಾಗುವುದು.


ಈ ಒಂದು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ವೇದ ಬ್ರಹ್ಮಶ್ರೀ ಕೆ ಅನಂತ ಪದ್ಮನಾಭ ಐತಾಳ್, ಕಾಳಿಂಗ ನಾವಡರ ಸಹೋದರ ಗಣಪಯ್ಯ ನಾವಡ, ಹಿರಿಯ ಯಕ್ಷಗಾನ ಕಲಾವಿದರಾದ ಗೋವಿಂದ ಉರಾಳ, ಹಾಗೂ ಹಂಗಾರಕಟ್ಟೆ ಯಕ್ಷಗಾನ ಕಲಾ ಕೇಂದ್ರದ ಕಾರ್ಯದರ್ಶಿ ರಾಜಶೇಖರ ಹೆಬ್ಬಾರ್ ಕಲಾಕದಂಬ ಆರ್ಟ್ ಸೆಂಟರ್ ನ ನಿರ್ದೇಶಕರಾದ ಡಾ. ರಾಧಾಕೃಷ್ಣ ಉರಾಳರು ಉಪಸ್ಥಿತರಿರಲಿದ್ದಾರೆ.


ಪ್ರಶಸ್ತಿ ಪ್ರದಾನದ ನಂತರ ಅತಿಥಿ ಕಲಾವಿದರಿಂದ “ಶರಸೇತು ಬಂಧನ ತಾಳಮದ್ದಲೆ” ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಕೋಟ ಸುದರ್ಶನ ಉರಾಳ್ ಮೊ: 9448547237

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments