Saturday, January 18, 2025
Homeಸುದ್ದಿಎಳವೆಯಲ್ಲಿ ಸ್ಪಷ್ಟ ಮಾರ್ಗದರ್ಶನ ಇಲ್ಲದಿರುವುದೇ ಹಿಂದೂ ಧರ್ಮಕ್ಕೆ ಸವಾಲು : ಶೃತಿ ಭಟ್ - ಅಂಬಿಕಾ...

ಎಳವೆಯಲ್ಲಿ ಸ್ಪಷ್ಟ ಮಾರ್ಗದರ್ಶನ ಇಲ್ಲದಿರುವುದೇ ಹಿಂದೂ ಧರ್ಮಕ್ಕೆ ಸವಾಲು : ಶೃತಿ ಭಟ್ – ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳಲ್ಲಿ ವಿಶೇಷ ಉಪನ್ಯಾಸ ಕಾರ್ಯಕ್ರಮ

ಪುತ್ತೂರು: ಧರ್ಮದ ಬಗೆಗೆ ಎಳವೆಯಿಂದ ಸರಿಯಾದ ಮಾರ್ಗದರ್ಶನ ಇರದಿರುವುದೇ ಹಿಂದೂ ಧರ್ಮ ಇಂದು ಎದುರಿಸುತ್ತಿರುವ ಸಮಸ್ಯೆಗಳಿಗೆ ಮೂಲವೆನಿಸಿದೆ. ಯಾವಾಗ ಸನಾತನ ಧರ್ಮದ ಉತ್ಕೃಷ್ಟತೆ ಎಳೆಯ ವಯಸ್ಸಿನಿಂದಲೇ ಅರ್ಥವಾಗುತ್ತದೋ ಆಗ ಮತಾಂತರದಂತಹ ವಿಕೃತತೆಗೆ ಅವಕಾಶವಾಗುವುದಿಲ್ಲ. ಸನಾತನ ಹಿಂದೂ ಧರ್ಮದ ಮೇರು ಸಂಗತಿಗಳನ್ನು ಪ್ರತಿಯೊಬ್ಬರೂ ಅರಿತುಕೊಳ್ಳಬೇಕಾದ ಅಗತ್ಯವಿದೆ ಎಂದು ತಿರುವನಂತಪುರಂನ ಆರ್ಷ ವಿದ್ಯಾ ಸಮಾಜದ ಸ್ವಯಂಸೇವಕಿ ಶೃತಿ ಭಟ್ ಹೇಳಿದರು.


ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಆಶ್ರಯದಲ್ಲಿ ಬಪ್ಪಳಿಗೆಯಲ್ಲಿನ ಶ್ರೀ ಶಂಕರ ಸಭಾಭವನದಲ್ಲಿ ಆಯೋಜಿಸಲಾದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಶನಿವಾರ ಮಾತನಾಡಿದರು.

ಹಿಂದೂ ಧರ್ಮದ ವಿಚಾರಗಳನ್ನು ಅನೇಕ ಕಥೆಗಳ ಮೂಲಕ ಅರ್ಥ ಮಾಡಿಸುವ ಸಂಪ್ರದಾಯ ನಮ್ಮಲ್ಲಿದೆ. ಆದರೆ ಆ ಕಥೆಗಳೆಲ್ಲ ಪೊಳ್ಳು ಎಂದು ವಾದಿಸುವ ಜನರ ಮುಂದೆ ಧರ್ಮದ ನಿಜವಾದ ಸತ್ವವನ್ನು ಅನಾವರಣಗೊಳಿಸುವ ಶಕ್ತಿ ಹಿಂದೂ ಯುವಕ ಯುವತಿಯರಲ್ಲಿರುವುದಿಲ್ಲ. ಕೇವಲ ಕಥೆಯಲ್ಲಿ ಹೇಳಿದ್ದಷ್ಟೇ ಧರ್ಮ ಎಂದು ಅವರು ಬಾವಿಸಿಕೊಳ್ಳುತ್ತಾರೆ ಹಾಗೂ ಆ ಕಥೆಯ ಆಧಾರದ ಮೇಲೆ ಅನ್ಯರು ಕೇಳುವ ಪ್ರಶ್ನೆಗಳಿಗೆ ಉತ್ತರಿಸಲಾಗದೆ ಗೊಂದಲಕ್ಕೊಳಗಾಗುತ್ತಾರೆ. ಕಥೆ ಕೇವಲ ಮೇಲ್ನೋಟದ ಸಂಗತಿ ಮಾತ್ರ. ನಿಜವಾದ ಸತ್ವ ಧರ್ಮದ ಆಳಕ್ಕಿಳಿದಾಗ ಮಾತ್ರ ಅರ್ಥವಾಗುತ್ತದೆ. ಆ ಕೆಲಸ ಜರೂರಾಗಿ ಆಗಬೇಕಿದೆ ಎಂದರು.


ಇಂದು ಪ್ರೀತಿ ಪ್ರೇಮದ ಹೆಸರಿನಲ್ಲಿ ಮತಾಂತರ ನಡೆಯುತ್ತಿದೆ. ಹೆಣ್ಣನ್ನು ಭೋಗದ ವಸ್ತುವನ್ನಾಗಿ, ಬೆಳೆ ಪಡೆಯುವ ಕ್ಷೇತ್ರವಾಗಿ ಮಾತ್ರ ಕಾಣುವ ಮಂದಿಯ ಕೈಗೆ ಸಿಕ್ಕು ಹಿಂದೂ ಯುವತಿಯರು ತಮ್ಮ ಮಾನ ಪ್ರಾಣಗಳನ್ನು ಕಳೆದುಕೊಳ್ಳುತ್ತಿದ್ದಾರೆ. ನಮ್ಮ ಸುತ್ತಮುತ್ತ ಮತಾಂತರದ ಕೆಲಸ ಸದ್ದಿಲ್ಲದೆ ನಡೆಯುತ್ತಿರುತ್ತವೆ. ಆರ್ಷ ವಿದ್ಯಾ ಸಮಾಜದ ಮೂಲಕ ಸುಮಾರು ಏಳು ಸಾವಿರಕ್ಕೂ ಮಿಕ್ಕಿ ಮತಾಂತರಗೊಂಡು ದೌರ್ಜನ್ಯಕ್ಕೊಳಗಾದ ಹಿಂದೂ ಯುವತಿಯರನ್ನು ಮತ್ತೆ ಮಾತೃಧರ್ಮಕ್ಕೆ ಕರೆರತರಲಾಗಿದೆ ಎಂದು ನುಡಿದರು.


ಚಿಂತನೆಯ ಕಾರಣಕ್ಕೆ ಮತಾಂತರ ಹೊಂದಿದವರನ್ನು ಮರಳಿ ಮಾತೃಧರ್ಮಕ್ಕೆ ತರುವುದು ಸುಲಭ. ಆದರೆ ಪ್ರೀತಿಯ ಬಲೆಗೆ ಬಿದ್ದವರನ್ನು ಕರೆತರುವುದು ಸುಲಭವಲ್ಲ. ಅವರು ಸತ್ಯದ ಅರಿವನ್ನು ಹೊಂದುವ ಹೊತ್ತಿಗೆ ತಮ್ಮೆಲ್ಲವನ್ನೂ ಕಳೆದುಕೊಂಡಿರುತ್ತಾರೆ. ಪ್ರತಿಯೊಬ್ಬ ಹೆಣ್ಣ ಮಕ್ಕಳೂ ತಮ್ಮ ಹೆತ್ತವರ ಸ್ಥಿತಿಯನ್ನು ಆಲೋಚನೆ ಮಾಡಬೇಕು. ತನ್ನಿಂದಾಗಿ ಅವರು ಪಡುವ ಯಾತನೆ, ಅವಮಾನಗಳನ್ನು ಊಹಿಸಿಕೊಳ್ಳಬೇಕು ಎಂದು ಕರೆನೀಡಿದರು.


ಪ್ರಸ್ತಾವನೆಗೈದು ಸ್ವಾಗತಿಸಿದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಮಾತನಾಡಿ ಕೇವಲ ಹುಡುಗಿಯರಷ್ಟೇ ಅಲ್ಲ, ಹುಡುಗರೂ ಧರ್ಮ ಜಾಗೃತಿಯನ್ನು ಬೆಳೆಸಿಕೊಳ್ಳಬೇಕು. ಹಿಂದೂ ಹೆಣ್ಣುಮಕ್ಕಳಿಗಾಗುವ ಅನ್ಯಾಯ ತಮ್ಮ ಸೋದರಿಯರ ಮೇಲಾಗುತ್ತಿರುವ ದೌರ್ಜನ್ಯ ಎಂದು ಪರಿಭಾವಿಸಬೇಕು. ಮತಾಂತರವನ್ನು ತಡೆಯುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಜಾಗೃತೆ ವಹಿಸಿಕೊಳ್ಳಬೇಕು ಎಂದು ನುಡಿದರು.


ಈ ಸಂದರ್ಭದಲ್ಲಿ ಶೃತಿ ಭಟ್ ಅವರನ್ನು ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ವತಿಯಿಂದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕೋಶಾಧಿಕಾರಿ ರಾಜಶ್ರೀ ಎಸ್ ನಟ್ಟೋಜ, ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆಯ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷೆ ಸೀಮಾ ನಾಗರಾಜ್, ಯೋಗಶಿಕ್ಷಕಿ ಶರಾವತಿ ರವಿನಾರಾಯಣ ಸನ್ಮಾನಿಸಿ ಅಬಿನಂದಿಸಿದರು. ಕನ್ನಡ ಶಿಕ್ಷಕಿ ದಿವ್ಯಾ ವಂದಿಸಿದರು. ಕನ್ನಡ ಉಪನ್ಯಾಸಕ ಸತೀಶ್ ಇರ್ದೆ ಕಾರ್ಯಕ್ರಮ ನಿರ್ವಹಿಸಿದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments