ಇತಿಹಾಸ ಪ್ರಸಿದ್ಧ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಇಂದಿನಿಂದ (ಡಿಸೆಂಬರ್ 8) ಡಿಸೆಂಬರ್ 24ರ ವರೆಗೆ ಸರ್ಪಸಂಸ್ಕಾರ ಸೇವೆ ಇರುವುದಿಲ್ಲ ಎಂದು ದೇವಸ್ಥಾನದ ಪ್ರಕಟಣೆ ತಿಳಿಸಿದೆ.
ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರೋತ್ಸವ – ಚಂಪಾಷಷ್ಠಿ ಮಹೋತ್ಸವ 10-12-2023ರಿಂದ 24-12-2023ರ ವರೆಗೆ ನಡೆಯಲಿದೆ. ಪೂರ್ವಶಿಷ್ಟ ಸಂಪ್ರದಾಯ ಪ್ರಕಾರ ದ್ವಾದಶಿಯ ದಿನವಾದ ಆದಿತ್ಯವಾರ 10-12-2023ರಿಂದ 24-12-2023ರ ದ್ವಾದಶಿಯ ವರೆಗೆ ಜಾತ್ರಾ ಮಹೋತ್ಸವ ನಡೆಯಲಿದೆ.

ಈ ಕಾರಣದಿಂದ ದೇವಸ್ಥಾನದಲ್ಲಿ ಸರ್ಪಸಂಸ್ಕಾರ ಸೇವೆ ನಡೆಯುವುದಿಲ್ಲ. ಸರ್ಪಸಂಸ್ಕಾರ ಸೇವೆಯು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಪ್ರಧಾನ ಸೇವೆಗಳಲ್ಲಿ ಒಂದಾಗಿದೆ. ಉಳಿದಂತೆ ಹೆಚ್ಚಿನೆಲ್ಲಾ ಸೇವೆಗಳು ಯಥಾಪ್ರಕಾರ ನಡೆಯಲಿವೆ.
ಆದರೆ ಚೌತಿ, ಪಂಚಮಿ, ಷಷ್ಠಿ ಮತ್ತು ಲಕ್ಷದೀಪೋತ್ಸವದ ದಿನಗಳಲ್ಲಿ ಕೆಲವೊಂದು ಸೇವೆಗಳು ನಡೆಯುವುದಿಲ್ಲ ಎಂದು ದೇವಸ್ಥಾನದ ಪ್ರಕಟಣೆ ತಿಳಿಸಿದೆ. ಈ ದಿನಗಳಲ್ಲಿ ಅಂದರೆ ಡಿಸೆಂಬರ್ 12,16,17 ರಂದು ರಾತ್ರಿ ಪ್ರಾರ್ಥನೆ ಸೇವೆ ಇರುವುದಿಲ್ಲ ಮತ್ತು ಚಂಪಾಷಷ್ಠಿ ದಿನವಾದ ಡಿಸೆಂಬರ್ 18ರಂದು ಮಧ್ಯಾಹ್ನದ ಪ್ರಾರ್ಥನೆ ಸೇವೆ ಮತ್ತು ಆಶ್ಲೇಷ ಬಲಿ, ನಾಗಪ್ರತಿಷ್ಠೆ ಪೂಜಾ ಸೇವೆಗಳು ಇರುವುದಿಲ್ಲ ಎಂದು ದೇವಸ್ಥಾನದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಡಿಸೆಂಬರ್ 12,16,18 ಮತ್ತು ಡಿಸೆಂಬರ್ 24 (ಕೊಪ್ಪರಿಗೆ ಇಳಿಯುವ ದಿನ) ದೇವರ ಮಹಾಭಿಷೇಕ ಸೇವೆ ಇರುವುದಿಲ್ಲ ಮತ್ತು 10-12-2023ರಿಂದ 24-12-2023ರ ವರೆಗೆ ಸಾಯಂಕಾಲದ ಆಶ್ಲೇಷ ಬಲಿ ಸೇವೆಯು ನಡೆಯುವುದಿಲ್ಲ.
ಡಿಸೆಂಬರ್ 9ರಂದು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಮೂಲಮೃತ್ತಿಕಾ ಪ್ರಸಾದ ತೆಗೆಯುವ ಪುಣ್ಯಕಾರ್ಯಕ್ರಮ ಇರುವುದರಿಂದ ಆದಿನ ಅಂದರೆ ನಾಳೆ ಬೆಳಗ್ಗಿನಿಂದ ಮಧ್ಯಾಹ್ನ 2 ಘಂಟೆಯವರೆಗೆ ದೇವರ ದರ್ಶನ ಮತ್ತು ಇತರ ಸೇವೆಗಳಿಗೆ ಅವಕಾಶ ಇರುವುದಿಲ್ಲ ಎಂದು ದೇವಸ್ಥಾನದ ಪ್ರಕಟಣೆ ತಿಳಿಸಿದೆ.
2 ಘಂಟೆಯ ನಂತರ ಕೆಲವೊಂದು ಸೇವೆಗಳನ್ನು ನಡೆಸಲು ಅವಕಾಶವಿದೆ. ಭಕ್ತಾದಿಗಳ ಸಹಕಾರವನ್ನು ಆಡಳಿತ ಮಂಡಳಿಯು ಕೋರಿದೆ.