ಕಲೆಯ ಬೆಳವಣಿಗೆಯಲ್ಲಿ ಕಲಾವಿದರಷ್ಟೇ ಪ್ರೇಕ್ಷಕರೂ ಮುಖ್ಯ’
ಸೋದೆ ಶ್ರೀಗಳು
‘ಯಕ್ಷಗಾನ ಕೇವಲ ಮನೋರಂಜನೆಗಾಗಿ ಇರುವ ಕಲೆಯಲ್ಲ. ಅದರಿಂದ ವ್ಯಕ್ತಿತ್ವದ ವಿಕಸನವಾಗುತ್ತದೆ, ನಾವು ಆರಾಧಿಸುವ ದೇವರ ಕಥನಗಳನ್ನು ಅರಿಯುವ ಅವಕಾಶವಾಗುತ್ತದೆ, ಯಕ್ಷಗಾನ ವೀಕ್ಷಿಸುವ ಸಾಮಾಜಿಕರಲ್ಲಿ ಸಂಸ್ಕಾರ ವೃದ್ಧಿಯಾಗುತ್ತದೆ. ಇಂಥ ಯಕ್ಷಗಾನಗಳನ್ನು ಸಂಘಟಿಸಿ, ಯಕ್ಷಗಾನ ಕಲಾವಿದರನ್ನು ಸಂಮಾನಿಸುವುದು ಪುಣ್ಯಪ್ರದವಾದ ಕಾರ್ಯವಾಗಿದೆ.

ಯಕ್ಷಗಾನದ ಬೆಳವಣಿಗೆಯಲ್ಲಿ ಪ್ರೇಕ್ಷಕರು ಕಲಾವಿದರಷ್ಟೇ ಮುಖ್ಯ’ ಎಂದು ಶ್ರೀಸೋದೆ ವಾದಿರಾಜ ಮಠಾಧೀಶ ಶ್ರೀಶ್ರೀವಿಶ್ವವಲ್ಲಭ ತೀರ್ಥ ಶ್ರೀಪಾದರು ಹೇಳಿದರು. ಅವರು, 7 ಅಕ್ಟೋಬರ್ 2023 ರಂದು ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ಜರಗಿದ ‘ಸರ್ಪಂಗಳ ಯಕ್ಷೋತ್ಸವ’ ಕಾರ್ಯಕ್ರಮದಲ್ಲಿ ದಿವ್ಯ ಸಾನ್ನಿಧ್ಯವಹಿಸಿ ಮಾತನಾಡುತ್ತಿದ್ದರು.
ಹಿರಿಯ ಸ್ತ್ರೀವೇಷಧಾರಿ ಅಂಬಾಪ್ರಸಾದ್ ಪಾತಾಳ ಅವರಿಗೆ ಸರ್ಪಂಗಳ ಸುಬ್ರಹ್ಮಣ್ಯ ಭಟ್ ಯಕ್ಷಗಾನ ಕಲಾಸಾಧಕ ಪ್ರಶಸ್ತಿಯನ್ನು ಮತ್ತು ಚತುರ ಚಕ್ರತಾಳ ವಾದಕ ಬೆಳ್ತಂಗಡಿ ಕೃಷ್ಣ ಶೆಟ್ಟಿ ಅವರಿಗೆ ಸರ್ಪಂಗಳ ಯಕ್ಷಗಾನ ಕಲಾಸೇವಾ ಪುರಸ್ಕಾರವನ್ನು ಪ್ರದಾನ ಮಾಡಲಾಯಿತು. ಸಂಮಾನ ಸ್ವೀಕರಿಸಿ ಮಾತನಾಡಿದ ಅಂಬಾಪ್ರಸಾದ ಪಾತಾಳ ಅವರು ಪ್ರಶಸ್ತಿಯನ್ನು ನೀಡಿದ ಸರ್ಪಂಗಳ ಕುಟುಂಬಕ್ಕೆ ಮತ್ತು ಯಕ್ಷಗಾನ ಕಲಾರಂಗ ಸಂಸ್ಥೆಗೆ ಕೃತಜ್ಞತೆ ಹೇಳಿದರು.


ಕೀರ್ತಿಶೇಷರಾಗಿರುವ ಸರ್ಪಂಗಳ ಸುಬ್ರಹ್ಮಣ್ಯ ಭಟ್ಟರನ್ನು ನೆನಪಿಸಿಕೊಂಡ ಯಕ್ಷಗಾನ ಕಲಾರಂಗದ ಕಾರ್ಯದರ್ಶಿ ಮುರಲಿ ಕಡೆಕಾರ್ ಅವರು, ‘ಸರ್ಪಂಗಳ ಸುಬ್ರಹ್ಮಣ್ಯ ಭಟ್ಟರು ಯಕ್ಷಗಾನವೂ ಸೇರಿದಂತೆ ಎಲ್ಲ ಕಲೆಗಳನ್ನು ಸದ್ದಿಲ್ಲದೆ ಪ್ರೋತ್ಸಾಹಿಸುತ್ತ ಬಂದವರು.
ಅವರು ಮಾಡಿದ ಸತ್ಕಾರ್ಯಗಳಿಂದಾಗಿ ಅವರ ನೆನಪು ಈಗಲೂ ನಮ್ಮ ನಡುವೆ ಜೀವಂತವಾಗಿದೆ. ಅವರ ಪತ್ನಿ ಮತ್ತು ಮಕ್ಕಳು ಕಳೆದ ಹನ್ನೆರಡು ವರ್ಷಗಳಿಂದ ಆಯೋಜಿಸುತ್ತ ಬಂದಿರುವ ಸರ್ಪಂಗಳ ಯಕ್ಷೋತ್ಸವ-2023ವು ಅವರ ನಿಜವಾಗಿ ಆತ್ಮಸಂತೃಪ್ತಿ ಉಂಟುಮಾಡುತ್ತಿರಬೇಕು’ ಎಂದರು.
ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್, ಸರ್ಪಂಗಳ ಯಕ್ಷೋತ್ಸವದ ಆಯೋಜಕರಾದ ನಳಿನಿ ಸುಬ್ರಹ್ಮಣ್ಯ ಭಟ್, ಡಾ. ಶೈಲಜಾ ಎಸ್., ಡಾ. ನರೇಂದ್ರ ಶೆಣೈ, ಅನಿರುದ್ಧ, ಆವಂತಿಕಾ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ತೆಂಕು ತಿಟ್ಟಿನ ಪ್ರಸಿದ್ಧ ಕಲಾವಿದರಿಂದ “ಸಹಸ್ರಕರ” ಯಕ್ಷಗಾನ ಸೊಗಸಾಗಿ ಪ್ರಸ್ತುತಗೊಂಡಿತು.