Thursday, November 21, 2024
Homeಸುದ್ದಿಅಂಬಿಕಾ ಪದವಿಪೂರ್ವ ವಿದ್ಯಾಲಯದಲ್ಲಿ ತರಗತಿಗಳ ಪ್ರಾರಂಭೋತ್ಸವ ಕಾರ್ಯಕ್ರಮ - ಮಕ್ಕಳಿಗೆ ಉತ್ತಮ ಶಿಕ್ಷಣ ಒದಗಿಸುವುದು ಹೆತ್ತವರ...

ಅಂಬಿಕಾ ಪದವಿಪೂರ್ವ ವಿದ್ಯಾಲಯದಲ್ಲಿ ತರಗತಿಗಳ ಪ್ರಾರಂಭೋತ್ಸವ ಕಾರ್ಯಕ್ರಮ – ಮಕ್ಕಳಿಗೆ ಉತ್ತಮ ಶಿಕ್ಷಣ ಒದಗಿಸುವುದು ಹೆತ್ತವರ ಜವಾಬ್ದಾರಿ : ಡಾ.ಎಚ್.ಮಾಧವ ಭಟ್

ಪುತ್ತೂರು: ನಿಸರ್ಗದಲ್ಲಿ ಸಹಜವಾಗಿ ಬದುಕಿ ಬಾಳುವ ಕಲೆಯನ್ನು ಪ್ರಾಣಿ ಪಕ್ಷಿಗಳು ತಮ್ಮ ಮರಿಗಳಿಗೆ ಕಲಿಸುತ್ತವೆ. ಇದು ಪ್ರಕೃತಿ ನಿಯಮ. ಹಾಗೆಯೇ ಮನುಷ್ಯರೂ ಮಕ್ಕಳು ತಮಗೆ ಒದಗಿಸಿದ ಆನಂದವನ್ನು ಮರೆಯದೆ ಅವರ ಭವಿಷ್ಯಕ್ಕಾಗಿ ಒಳ್ಳೆಯ ಶಿಕ್ಷಣ ಸಂಸ್ಥೆಗಳ ಹುಡುಕಾಟ ನಡೆಸುತ್ತೇವೆ ಇದು ಪ್ರಜ್ಞಾವಂತ ಹೆತ್ತವರ ಜವಾಬ್ದಾರಿಯೂ ಹೌದು ಎಂದು ಆಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಸದಸ್ಯ, ವಿಶ್ರಾಂತ ಪ್ರಾಚಾರ್ಯ ಡಾ. ಎಚ್. ಮಾಧವ ಭಟ್ ಹೇಳಿದರು.


ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಎರಡು ಅಂಬಿಕಾ ಪದವಿಪೂರ್ವ ವಿದ್ಯಾಲಯಗಳ ಪುನರಾರಂಭದ ಸಂದರ್ಭದಲ್ಲಿ ನೂತನ ಶೈಕ್ಷಣಿಕ ವರ್ಷದ ಪ್ರಥಮ ಪಿಯು ತರಗತಿಗಳ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.


ವಿದ್ಯಾ ಸಂಸ್ಥೆಗಳಲ್ಲಿ ಪಠ್ಯದ ಜತೆಗೆ ಸಂಸ್ಕಾರವನ್ನು ಆಧರಿಸಿದ ಕಾರ್ಯಕ್ರಮಗಳು, ಸರಸ್ವತಿ ಪೂಜೆ, ಯೋಗ, ಭಗವದ್ಗೀತೆ, ಮುಂತಾದವುಗಳನ್ನು ಕಲಿಸುವ ಪರಿಪಾಠ ಅಗತ್ಯ. ಈ ವಿಚಾರಗಳು ವಿದ್ಯಾರ್ಥಿಗಳಲ್ಲಿ ಏಕಾಗ್ರತೆ ಮೂಡಿಸುವುದಕ್ಕೂ ಸಹಕಾರಿ. ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಯೊಂದಿಗೆ ಅವರನ್ನು ಸತ್ಪ್ರಜೆಯಾಗಿ ರೂಪಿಸುವಲ್ಲಿ ಹೆತ್ತವರ, ಪೋಷಕರ, ಗುರುಗಳ, ಆಡಳಿತ ಮಂಡಳಿಯ ಸಹಕಾರ ಅಗತ್ಯ. ಆದ್ದರಿಂದ ಕೇವಲ ಅಂಕಗಳಿಗಾಗಿ ಒತ್ತಡ ಹೇರಬಾರದು ಎಂದು ತಿಳಿಸಿದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಮಾತನಾಡಿ ದೇಶದ ಅವಾಂತರ, ಅವ್ಯವಸ್ಥೆಯನ್ನು ಸರಿಪಡಿಸುವ ಶಕ್ತಿ ಶಿಕ್ಷಣ ಸಂಸ್ಥೆಗಳಿಗಿವೆ. ಧರ್ಮ ಜಾಗೃತಿ, ದೇಶ ಪ್ರೇಮ, ನೈತಿಕತೆ ಮುಂತಾದವುಗಳಲ್ಲಿ ಅಂಬಿಕಾ ಛಾಪನ್ನೊತ್ತಿದೆ. ಶೈಕ್ಷಣಿಕವಾಗಿಯೂ ತುಂಬಾ ಮುಂದಿದೆ. ಪೋಷಕ ಬಂಧುಗಳು ಸಂಸ್ಥೆಯ ಜತೆಗೆ ನಿರಂತರ ಸಂಪರ್ಕವಿಟ್ಟುಕೊಳ್ಳಬೇಕು ಎಂದು ನುಡಿದರು.


ಬಪ್ಪಳಿಗೆಯ ಅಂಬಿಕಾ ಪದವಿಪೂರ್ವ ವಿದ್ಯಾಲಯ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ದಿನೇಶಕುಮಾರ್ ವೈ.ಎ ಮಾತನಾಡಿ ಪೋಷಕರು ಸಂಸ್ಥೆಗೆ ಕೊಂಡಿಯಾಗಿ ನಡೆದುಕೊಂಡಾಗ ಯಶಸ್ಸು ನಿಶ್ಚಿತ ಎಂದರು. ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕೋಶಾಧಿಕಾರಿ ರಾಜಶ್ರೀ ಎಸ್ ನಟ್ಟೋಜ ಮಾತನಾಡಿ ನೀಟ್. ಜೆಇಇ, ಸಿಇಟಿ, ಎನ್‌ಡಿಎ ಮುಂತಾದ ವಿವಿಧ ಪ್ರವೇಶ ಪರೀಕ್ಷೆಗಳ ಬಗ್ಗೆ, ಕಾಲೇಜಿನ ನಿಯಮಾವಳಿಗಳ ಬಗ್ಗೆ ಮಾಹಿತಿ ನೀಡಿದರು.


ಅಂಬಿಕಾ ಸಿ.ಬಿ.ಎಸ್.ಇ ವಿದ್ಯಾಲಯದ ಹತ್ತನೇ ತರಗತಿ ಹಾಗೂ ದ್ವಿತೀಯ ಪಿ.ಯು.ಸಿ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು ಎನ್‌ಡಿಎ, ಜೆಇಇ ಪ್ರವೇಶ ಪರೀಕ್ಷೆಯ ಸಾಧಕರನ್ನು ಸನ್ಮಾನಿಸಲಾಯಿತು.

ಮಕ್ಕಳಿಂದ ಹೆತ್ತವರ ಹಾಗೂ ಪೋಷಕರ ಪಾದ ಪೂಜೆಯ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಿ ಸನಾತನ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಕಾರ್ಯವನ್ನು ನಡೆಸಲಾಯಿತು. ಸಂಸ್ಕಾರವನ್ನು ಅರ್ಥೈಸುವ, ಭರವಸೆಯ ಸಂಕಲ್ಪ ಮೂಡಿಸುವ ಈ ಕಾರ್ಯಕ್ರಮದ ಮಹತ್ವವನ್ನು ವಾಗ್ಮಿ ಶ್ರೀ ಕೃಷ್ಣ ಉಪಾಧ್ಯಾಯರು ತಿಳಿಸಿದರು.


ಈ ಸಂದರ್ಭದಲ್ಲಿ ಶ್ರೀಕೃಷ್ಣ ಉಪಾಧ್ಯಾಯರ ಸತ್ಯಾನ್ವೇಷಣೆ ಎಂಬ ವೀಡಿಯೋವನ್ನು ಸುಬ್ರಹ್ಮಣ್ಯ ನಟ್ಟೋಜರು ಬಿಡುಗಡೆಗೊಳಿಸಿದರು. ಅಂಬಿಕಾ ಪದವಿಪೂರ್ವ ವಿದ್ಯಾಲಯ ನೆಲ್ಲಿಕಟ್ಟೆಯ ಶಿಕ್ಷಕ – ರಕ್ಷಕ ಸಂಘದ ಅಧ್ಯಕ್ಷ ಶ್ರೀಕಾಂತ ಶೆಣೈ, ಆಡಳಿತ ಮಂಡಳಿ ಸದಸ್ಯ ಸುರೇಶ ಶೆಟ್ಟಿ, ಅಂಬಿಕಾ ಸಿ.ಬಿ.ಎಸ್.ಇ ವಿದ್ಯಾಲಯದ ಪ್ರಾಚಾರ್ಯೆ ಮಾಲತಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಉಪನ್ಯಾಸಕರಾದ ಕೇಶವ ಕಿಶೋರ್, ತಿಲೋಶ್, ಶೈನಿ.ಕೆ.ಜೆ, ಅಕ್ಷತಾ.ಆರ್ ಸಾಧಕರ ಹೆಸರನ್ನು ವಾಚಿಸಿದರು. ವಿದ್ಯಾರ್ಥಿನಿಯರಾದ ಶ್ರಾವ್ಯ ಮತ್ತು ಹರ್ಷಿತಾ ಪ್ರಾರ್ಥಿಸಿದರು. ಉಪನ್ಯಾಸಕರಾದ ವಿಷ್ಣು ಪ್ರದೀಪ, ಗೀತಾ.ಸಿ.ಕೆ ಹಾಗೂ ಸತೀಶ್ ಇರ್ದೆ ಕಾರ್ಯಕ್ರಮ ನಿರೂಪಿಸಿದರು.

ಬಪ್ಪಳಿಗೆ ಅಂಬಿಕಾ ಪದವಿಪೂರ್ವ ವಿದ್ಯಾಲಯದ ಪ್ರಾಚಾರ್ಯೆ ಸುಚಿತ್ರಾ ಪ್ರಭು ಸ್ವಾಗತಿಸಿದರು. ನೆಲ್ಲಿಕಟ್ಟೆ ಅಂಬಿಕಾ ಪದವಿಪೂರ್ವ ವಿದ್ಯಾಲಯದ ಪ್ರಾಚಾರ್ಯ ಸತ್ಯಜಿತ್ ಉಪಾಧ್ಯಾಯ ವಂದಿಸಿದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments