ಉಡುಪಿ : ಯಕ್ಷಗಾನ ಕಲಾರಂಗ (ರಿ.) ಉಡುಪಿ, ವೃತ್ತಿ ಕಲಾವಿದರ ಕ್ಷೇಮ ಚಿಂತನೆಗೆ ರೂಪಿಸಿದ ಅಂಗಸಂಸ್ಥೆ ಯಕ್ಷನಿಧಿಯ ಮೂಲಕ ಹಲವು ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದೆ. ಪ್ರತೀವರ್ಷ ಕಲಾವಿದರ ಸಮಾವೇಶವನ್ನು ನಡೆಸಿಕೊಂಡು ಬಂದಿದೆ.

ಯಕ್ಷನಿಧಿಯ 25ನೇ ವರ್ಷದ ಸಮಾವೇಶ ಜೂನ್ 1, 2023 ಗುರುವಾರ ದಿನಪೂರ್ತಿ ಕಾರ್ಯಕ್ರಮವಾಗಿ ಉಡುಪಿ ಪೂರ್ಣಪ್ರಜ್ಞ ಸಭಾಂಗಣದಲ್ಲಿ ಜರಗಲಿದೆ. ಪೂರ್ವಾಹ್ನ 10.00 ಘಂಟೆಗೆ ಕರ್ನಾಟಕ ಯಕ್ಷಗಾನ ಅಕಾಡೆಮಿಯ ಮಾಜಿ ಅಧ್ಯಕ್ಷ ಡಾ. ಜಿ.ಎಲ್. ಹೆಗಡೆಯವರ ಆಧ್ಯಕ್ಷತೆಯಲ್ಲಿ ಖ್ಯಾತ ನೃತ್ಯ ಕಲಾವಿದೆ ವಿದುಷಿ ಮಧು ನಟರಾಜ್ ಸಮಾವೇಶವನ್ನು ಉದ್ಘಾಟಿಸಲಿರುವರು.

ಅಪರಾಹ್ನ 2.30 ಗಂಟೆಗೆ ನಾಡೋಜ ಡಾ. ಜಿ. ಶಂಕರ್ ಅಧ್ಯಕ್ಷತೆಯಲ್ಲಿ ಜರಗಲಿರುವ ಸಮಾವೇಶ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅಭ್ಯಾಗತರಾಗಿ ಉಡುಪಿ ಶಾಸಕರಾದ ಯಶಪಾಲ್ ಸುವರ್ಣ, ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಉದ್ಯಮಿ ಆನಂದ ಸಿ. ಕುಂದರ್, ಮಾಜಿ ಶಾಸಕ ಕೆ. ರಘುಪತಿ ಭಟ್, ಉದ್ಯಮಿ ಪಿ. ಪುರುಷೋತ್ತಮ ಶೆಟ್ಟಿ, ಕೆನರಾ ಬಸ್ಸು ಮಾಲಕರ ಸಂಘದ ಕಾರ್ಯದರ್ಶಿ ಕುಯಿಲಾಡಿ ಸುರೇಶ್ ನಾಯಕ್, ಮೊಗವೀರ ಮಹಾಸಭಾ ಉಚ್ಚಿಲ ಇದರ ಅಧ್ಯಕ್ಷರಾದ ಜಯ ಕೋಟ್ಯಾನ್ ಭಾಗವಹಿಸಲಿದ್ದಾರೆ.
ಈ ಸಂದರ್ಭದಲ್ಲಿ ಅಶಕ್ತ ಕಲಾವಿದರಿಗೆ ಗೃಹನಿರ್ಮಾಣ ನೆರವು, ವೈದ್ಯಕೀಯ ನೆರವು ನೀಡಲಿದ್ದೇವೆ. ಪೂವಾಹ್ನ 8.30 ರಿಂದ 10.00ರ ವರೆಗೆ ಕಲಾವಿದರ ಆರೋಗ್ಯ ತಪಾಸಣೆ ನಡೆಸಲಾಗುವುದು.
ಪೂರ್ವಾಹ್ನ 10.30 ಗಂಟೆಗೆ ವಿದುಷಿ ಮಧು ನಟರಾಜ್ ಮತ್ತು ಬಳಗದವರಿಂದ ನೃತ್ಯ ಪ್ರಾತ್ಯಕ್ಷಿಕೆ ಜರಗಲಿದೆ.
ಅಪರಾಹ್ನ 12.00ಗಂಟೆಗೆ ಕಲಾವಿದರಿಂದ ‘ಸಮಯಮಿತಿ ಯಕ್ಷಗಾನ ಸುಖ-ಕಷ್ಟ’ ಎಂಬ ವಿಷಯದ ಕುರಿತು ಕಲಾವಿದರು ಅನುಭವ ಹಂಚಿಕೊಳ್ಳಲಿದ್ದಾರೆ ಎಂದು ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
