ಪುತ್ತೂರು, ಮೇ 30: ವಿದ್ಯಾರ್ಥಿಗಳ ಬೆಳವಣಿಗೆಯಲ್ಲಿ ಹೆತ್ತವರು ಮತ್ತು ಶಿಕ್ಷಕರ ಪಾತ್ರ ಹಿರಿದು. ತಮ್ಮ ಮಕ್ಕಳೊಡನೆ ಸೂಕ್ಷ್ಮ ಬಾಂಧವ್ಯವನ್ನು ಬೆಳೆಸಿಕೊಂಡು ಅವರ ಸಂವೇದನೆಗೆ ಸ್ಪಂದಿಸಬೇಕು. ಈ ಮೂಲಕ ಸ್ವತಂತ್ರ ವ್ಯಕ್ತಿತ್ವವನ್ನು ಬೆಳೆಸಲು ಸಹಾಯ ಮಾಡಬೇಕು. ಭವಿಷ್ಯದಗುರಿಯು ಪ್ರಾಮಾಣಿಕವಾಗಿದ್ದು ಸ್ಪರ್ಧಾತ್ಮಕ ಮನೋಭಾವವನ್ನು ಬೆಳೆಸಿಕೊಂಡರೆ ಯಶಸ್ಸು ಸಾಧ್ಯ ಎಂದು ವಿವೇಕಾನಂದ ಪದವಿಪೂರ್ವ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ರವೀಂದ್ರ ಪಿ ಹೇಳಿದರು.

ಅವರು ವಿವೇಕಾನಂದ ಪ.ಪೂ ಕಾಲೇಜಿನಲ್ಲಿ ನಡೆದ ಪ್ರಥಮ ಪಿ.ಯು.ಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳ ಪೋಷಕರ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ವಿವೇಕಾನಂದ ವಿದ್ಯಾಸಂಸ್ಥೆಯು ಸಮಾಜಕ್ಕೆ ಒಳಿತನ್ನು ಮಾಡುವ ಸಂಸ್ಥೆ. ಶಿಕ್ಷಣದ ನಿಜವಾದ ಉದ್ದೇಶವನ್ನು ಅರ್ಥಗೊಳಿಸಲು ಮತ್ತು ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಈ ಸಂಸ್ಥೆಯು ಪೂರಕವಾಗಿದೆ. ನೈತಿಕ ವಿಚಾರಗಳನ್ನು ಮೈಗೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ವಿದ್ಯಾರ್ಥಿಗಳಲ್ಲಿ ಆದರ್ಶ, ಸಂಸ್ಕಾರ ಮತ್ತು ರಾಷ್ಟ್ರಭಕ್ತಿಯನ್ನು ಪ್ರೇರೇಪಿಸುವ ಮೂಲಕ ವಿದ್ಯಾರ್ಥಿಗಳ ಉನ್ನತಿಗೆ ಸಹಾಯ ಮಾಡುತ್ತದೆ.

ವಿದ್ಯಾರ್ಥಿಗಳು ಜೀವನ ಮೌಲ್ಯಗಳನ್ನು ರೂಪಿಸಿಕೊಂಡು ಸತ್ಪ್ರಜೆಗಳಾಗಿ ಬಾಳಬೇಕು. ಸಾಧನೆಯ ಹಾದಿಯಲ್ಲಿ ಸಾಗಬೇಕು. ಸ್ವಂತಿಕೆ-ಸ್ವಾಭಿಮಾನಗಳನ್ನು ಮೆರೆಯಬೇಕು. ಯಾವುದೇ ಆಕರ್ಷಣೆಗಳಿಗೆ ಒಳಗಾಗದೆ ವಿದ್ಯಾರ್ಥಿಗಳು ನೈತಿಕತೆ, ಆದರ್ಶ ಮತ್ತು ಸಾಧನೆಗಳ ಮೂಲಕ ಪಕ್ವಗೊಳ್ಳಬೇಕು ಎಂದರು.
ಉಪನ್ಯಾಸಕಿ ಸ್ನೇಹಾ ಅತಿಥಿಗಳನ್ನು ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಾಲೇಜಿನ ಪ್ರಾಂಶುಪಾಲ ಮಹೇಶ ನಿಟಿಲಾಪುರ ಕಾಲೇಜಿನ ನೀತಿ ನಿಯಮಾವಳಿಗಳ ಸ್ಥೂಲ ಪರಿಚಯವನ್ನು ವಿದ್ಯಾರ್ಥಿಗಳಿಗೆ ನೀಡಿದರು. ಸ್ಪರ್ಧಾತ್ಮಕ ಪರೀಕ್ಷೆಗೆ ಅಗತ್ಯವಿರುವ ಕೋಚಿಂಗ್ ವ್ಯವಸ್ಥೆಯ ಬಗ್ಗೆ ಮಾಹಿತಿಯನ್ನು ಕೋಚಿಂಗ್ ತರಬೇತಿ ಸಂಯೋಜಕ ಭೀಮ ಭಾರದ್ವಾಜ್ ತಿಳಿಸಿದರು.
ಸಿಪ್ಸ್ನಿತ್ಯ ತಂತ್ರಜ್ಞಾನದ ಬಗ್ಗೆ ಮಾಹಿತಿಯನ್ನು ಉಪನ್ಯಾಸಕ ಶ್ರೀವತ್ಸ ನೀಡಿದರು. ಕಾಲೇಜಿನ ವಸತಿ ನಿಲಯದ ನಿಯಮಗಳ ಬಗ್ಗೆ ಮುಖ್ಯ ನಿಲಯಪಾಲಕ ಚೇತನ್ ಮಾಹಿತಿಯನ್ನು ಒದಗಿಸಿಕೊಟ್ಟರು. ಕಾರ್ಯಕ್ರಮದಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಾದ ದೀಪ್ತಿ ಪ್ರಭು, ಪಲ್ಲವಿ ಭಟ್ ಮತ್ತು ಶ್ರುತಿ ಪ್ರಾರ್ಥಿಸಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಆಡಳಿತ ಮಂಡಳಿಯ ಸಂಚಾಲಕ ಎಂ. ಗೋಪಾಲಕೃಷ್ಣ ಭಟ್, ಸದಸ್ಯೆ ವತ್ಸಲಾರಾಜ್ಞಿ, ಸದಸ್ಯ ಕೆ.ಎನ್ ಸುಬ್ರಹ್ಮಣ್ಯ ಉಪಸ್ಥಿತರಿದ್ದರು. ಉಪನ್ಯಾಸಕಿ ಹರ್ಷಿತಾ ಪಿ ಕಾರ್ಯಕ್ರಮವನ್ನು ನಿರೂಪಿಸಿ ಶ್ರುತಿ ಎ ವಂದಿಸಿದರು.