ಎಸ್. ಎನ್. ಪಂಜಾಜೆ ಎಂದೇ ಪ್ರಸಿಸದ್ಧರಾಗಿದ್ದ ಪಂಜಾಜೆ ಸೂರ್ಯನಾರಾಯಣ ಭಟ್ (71) ಇಂದು (22-05-2023) ಇಹಲೋಕ ಯಾತ್ರೆ ಮುಗಿಸಿದರು.

ತಾವೇ ಸ್ಥಾಪಿಸಿದ ಕರ್ನಾಟಕ ಸಾಂಸ್ಕೃತಿಕ ಕಲಾ ಪ್ರತಿಷ್ಠಾನ (ರಿ.) ಬೆಂಗಳೂರು ಮೂಲಕ 15 ಯಕ್ಷಗಾನ ಸಾಹಿತ್ಯ ಸಮ್ಮೇಳನ ನಡೆಸಿದ್ದರು.

ನಾಡಿನ ರಾಜಧಾನಿಯಲ್ಲಿದ್ದು ಯಕ್ಷಗಾನದ ಕಲಿಕೆ, ಪ್ರಸಾರ, ಪ್ರದರ್ಶನ ಮತ್ತು ಚಿಂತನೆಗೆ ಸಂಬಂಧಿಸಿ ಅವರು ಮಾಡಿದ ಕೆಲಸ ದಾಖಲಾರ್ಹವಾದುದು. ಕರ್ನಾಟಕದ ಯಕ್ಷಗಾನ ಪ್ರದೇಶಗಳಲ್ಲದೆ, ಅನ್ಯಾನ್ಯ ಜಿಲ್ಲೆಗಳಲ್ಲಿ, ಮುಂಬೈಯಲ್ಲಿ ಸಮ್ಮೇಳನವನ್ನು ವಿಶಿಷ್ಟವಾಗಿ ನಡೆಸಿದ ಖ್ಯಾತಿಗೆ ಭಾಜನರಾಗಿದ್ದಾರೆ.
ಪ್ರತೀ ಸಮ್ಮೇಳನದಲ್ಲೂ ಯಕ್ಷಗಾನ ಹಿರಿಯ ಸಾಧಕರಿಗೆ ಸಮ್ಮೇಳನಾಧ್ಯಕ್ಷ ಪಟ್ಟ ನೀಡಿ, ಹಲವರನ್ನು ಗೌರವಿಸುತ್ತಾ ಸಂತೋಷ ಪಟ್ಟಿದ್ದರು. ಹತ್ತು ವರ್ಷದ ಹಿಂದೆ ಬೆಂಗಳೂರಿನಲ್ಲಿ ನಡೆದ ಯಕ್ಷಗಾನ ಸಮ್ಮೇಳನದಲ್ಲಿ ನಮ್ಮ ಸಂಸ್ಥೆ ಯಕ್ಷಗಾನ ಕಲಾರಂಗಕ್ಕೆ ಪ್ರಶಸ್ತಿ ನೀಡಿ ಗೌರವಿಸಿದ್ದರು.
ಉಡುಪಿಯಲ್ಲಿ ಜರಗಿದ ಪ್ರಥಮ ಕರ್ನಾಟಕ ಯಕ್ಷಗಾನ ಸಮ್ಮೇಳನದಲ್ಲಿ ಅವರನ್ನು ಸಮ್ಮೇಳನದ ಪ್ರಶಸ್ತಿ ನೀಡಿ ಪುರಸ್ಕರಿಸಿದ ನೆನಪು ಹಸಿರಾಗಿದೆ. ಅವರು ಪತ್ನಿ, ಪುತ್ರ ಮತ್ತು ಅಸಂಖ್ಯಾತ ಯಕ್ಷಗಾನ ಪ್ರೇಮಿಗಳನ್ನು ಅಗಲಿದ್ದಾರೆ.
ಇವರ ನಿಧನಕ್ಕೆ ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.