ನವದೆಹಲಿ: ಶಬರಿಮಲೆ ದೇಗುಲದಲ್ಲಿ ಭಕ್ತರಿಗೆ ಮಾರಾಟ ಮಾಡುವ ‘ಅರವಣ ಪಾಯಸಂ’ ಗುಣಮಟ್ಟವನ್ನು ಪರಿಶೀಲಿಸುವಂತೆ ಸುಪ್ರೀಂ ಕೋರ್ಟ್ ಸೋಮವಾರ ಆದೇಶಿಸಿದೆ.

ಈ ಹಿಂದೆ, ‘ಅರವಣ’ದಲ್ಲಿ ಕೀಟನಾಶಕ ಮಿಶ್ರಿತ ಏಲಕ್ಕಿಯ ಕುರುಹುಗಳು ಕಂಡುಬಂದ ನಂತರ ಕೇರಳ ಹೈಕೋರ್ಟ್ ಟ್ರಾವಂಕೂರ್ ದೇವಸ್ವಂ ಬೋರ್ಡ್ (ಟಿಡಿಬಿ) ವಿತರಣೆಯನ್ನು ನಿಲ್ಲಿಸುವಂತೆ ಆದೇಶಿಸಿತ್ತು.

ಈ ಅರವಣವನ್ನು ಮನುಷ್ಯರು ಸೇವಿಸಬಹುದೇ ಎಂದು ನೋಡುವಂತೆಯೂ ಸುಪ್ರೀಂಕೋರ್ಟ್ ಸೂಚಿಸಿದೆ. ತಿರುವಾಂಕೂರು ದೇವಸ್ವಂ ಮಂಡಳಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎ ಎಸ್ ಬೋಪಣ್ಣ ಮತ್ತು ಸಿ ಟಿ ರವಿಕುಮಾರ್ ಅವರನ್ನೊಳಗೊಂಡ ಪೀಠ ಈ ಆದೇಶ ನೀಡಿದೆ.
ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ನಿಯಮಗಳ ಪ್ರಕಾರ ತಪಾಸಣೆ ನಡೆಸಬೇಕು. ಆಹಾರ ಸುರಕ್ಷತಾ ಪ್ರಾಧಿಕಾರದಿಂದ ಪರಿಶೀಲನೆ ನಡೆಸಿ ವರದಿಯನ್ನು ಸುಪ್ರೀಂ ಕೋರ್ಟ್‌ಗೆ ರವಾನಿಸಬೇಕು ಎಂದು ನ್ಯಾಯಾಲಯ ಸೂಚಿಸಿದೆ.
ಏಲಕ್ಕಿಯಲ್ಲಿ ಕೀಟನಾಶಕ ಅಂಶ ಪತ್ತೆಯಾದ ಹಿನ್ನೆಲೆಯಲ್ಲಿ ಕೇರಳ ಹೈಕೋರ್ಟ್ ಆರು ಲಕ್ಷಕ್ಕೂ ಹೆಚ್ಚು ಟಿನ್ ಅರವಣ ಮಾರಾಟಕ್ಕೆ ತಡೆ ನೀಡಿದೆ. ಈ ಅರವಣದ ಮೇಲೆ ತಪಾಸಣೆ ನಡೆಸಲು ಅನುಮತಿ ಕೋರಿ ಮಂಡಳಿಯು ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು.
ಮಂಡಳಿ ಪರವಾಗಿ ಹಿರಿಯ ವಕೀಲ ವಿ.ಗಿರಿ, ವಕೀಲರಾದ ಪಿ.ಎಸ್.ಸುಧೀರ್ ಮತ್ತು ಬಿಜು ಜಿ ಹಾಜರಾಗಿದ್ದರು. ಇನ್ನು ಮುಂದೆ ಈ ಅರವಣವನ್ನು ಭಕ್ತರಿಗೆ ಮಾರಾಟ ಮಾಡಲು ಯೋಜಿಸುವುದಿಲ್ಲ ಎಂದು ಮಂಡಳಿಯು ನ್ಯಾಯಾಲಯಕ್ಕೆ ತಿಳಿಸಿದೆ.
ಭಕ್ತಾದಿಗಳಿಗೆ ಪ್ರಸಾದ ನೀಡುವುದನ್ನು ಹೇಗೆ ವ್ಯಾಪಾರ ಎಂದು ಪರಿಗಣಿಸಬಹುದು ಎಂದು ನ್ಯಾಯಮೂರ್ತಿ ಸಿ ಟಿ ರವಿಕುಮಾರ್ ವಿಚಾರಣೆ ವೇಳೆ ಪ್ರಶ್ನಿಸಿದರು. ಅದರ ಬೆನ್ನಲ್ಲೇ ಸುಪ್ರೀಂ ಕೋರ್ಟ್ ಹೈಕೋರ್ಟ್ ತೀರ್ಪಿಗೆ ತಡೆ ನೀಡಿತ್ತು