ಯಾವುದೇ ಕಲೆ ಮಾರಾಟದ ಸರಕಾಗಬಾರದು. ಹೃದಯ, ಹೃದಯಗಳ ನಡುವಿನ ಮನೋ ವ್ಯಾಪಾರವಾಗಬೇಕು. ನಮ್ಮ ಯಕ್ಷಗಾನ ನಮ್ಮ ಮನಸ್ಸನ್ನು ಅರಳಿಸಬೇಕೆ ವಿನಹ ಕೆರಳಿಸಬಾರದು. ಶಿಬಿರದಲ್ಲಿ ಭಾಗವಹಿಸಿದ ಎಲ್ಲಾ ಶಿಬಿರಾರ್ಥಿಗಳೇ ಈ ಕಲೆಯನ್ನು ನೀವುಗಳು ಮುಂದೆ ಹವ್ಯಾಸಿಯಾಗಿ ಬಳಸಿಕೊಳ್ಳಿ ಹಾಗೂ ಒಳ್ಳೆಯ ಪ್ರೇಕ್ಷಕರಾಗಿ, ಬದಲಾಗಿ ವೃತ್ತಿಯಾಗಿ ತೆಗೆದುಕೊಳ್ಳಬೇಡಿ ಎಂದು ಸಾಲಿಗ್ರಾಮ ಮೇಳದ ಪ್ರದಾನ ಚಂಡೆವಾದಕರಾದ ಕೋಟ ಶಿವಾನಂದರು ಹೇಳಿದರು.

ಅವರು 06-05-2023ರಂದು ಬೆಂಗಳೂರಿನ ಯಕ್ಷಾಂಗಣ ಟ್ರಸ್ಟ್ ನಡೆಸುತ್ತಿರುವ ಯಕ್ಷಗಾನ ನೃತ್ಯ ಮತ್ತು ತಾಳಾಭ್ಯಾಸದೊಂದಿಗೆ ಪದಾಭ್ಯಾಸ ಎಂಬ ವಿಷಯದ ಬಗ್ಗೆ ಕೋಟದ ಹಂದೆ ಶ್ರೀ ವಿಷ್ಣುಮೂರ್ತಿ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ನಡೆಸುತ್ತಿರುವ ಬೇಸಿಗೆ ಶಿಬಿರದ ಸಮಾರೋಪದಲ್ಲಿ ಭಾಗವಹಿಸಿ ಮಾತನಾಡಿದರು.

ನಿವೃತ್ತ ಎಲ್.ಐ.ಸಿ. ಅಧಿಕಾರಿಯಾದ ಹಂದಟ್ಟು ಗಣಪಯ್ಯ ಭಟ್‌ರು ಮಾತನಾಡಿ ನಮ್ಮ ಕಾಲದಲ್ಲಿ ಯಕ್ಷಗಾನ ಕಲಿಕೆಗೆ ಕಲಾ ಶಾಲೆಗಳು ಇರಲಿಲ್ಲ, ಚೌಕಿ ಹಾಗೂ ರಂಗಸ್ಥಳಗಳೇ ಕಲಾವಿದರಿಗೆ ಅಭ್ಯಾಸ ಶಾಲೆಯಾಗಿತ್ತು. ಹಿರಿಯ ಕಲಾವಿದರೇ ಕಿರಿಯ ಕಲಾವಿದರಿಗೆ ಮಾರ್ಗದರ್ಶಕರಾಗಿದ್ದರು. ಈಗ ಕಾಲ ಬದಲಾಗಿದೆ. ಸಾಕಷ್ಟು ತರಬೇತಿ ಶಾಲೆಗಳಿವೆ.
ನಿಜವಾದ ಕಲಾಸಕ್ತರಿಗೆ ಕಲಿಯಲಿಕ್ಕೆ ಒಳ್ಳೆಯ ಅವಕಾಶಗಳಿವೆ. ಈ ನಿಟ್ಟಿನಲ್ಲಿ ಅನುಭವಿ ಗುರುಗಳಿಂದ ಕೂಡಿದ ಈ ಶಿಬಿರ ಅರ್ಥಪೂರ್ಣವಾಗಿದೆ. ಸಿಕ್ಕಿದ 7 ದಿವಸ ಚೆನ್ನಾಗಿ ಉಪಯೋಗಿಸಿಕೊಂಡಿದ್ದೀರಿ. ಅದರಲ್ಲೂ 120-130 ಕಿ.ಮೀ ದೂರದ ಕವಲಕ್ಕಿಯಿಂದ ಪ್ರತಿದಿನ ಸಮಯಕ್ಕೆ ಸರಿಯಾಗಿ ಶಿಬಿರಕ್ಕೆ ಬರುವ ಕೃಷ್ಣ ಭಟ್ ಎಂಬ ವಿದ್ಯಾರ್ಥಿಯ ಯಕ್ಷಗಾನ ಕಲಿಕೆಯ ಆಸಕ್ತಿಗೆ ಆಶ್ಚರ್ಯಪಡಬೇಕು ಎಂದರು.
ಹಾಗೆ ವೇದಿಕೆಯಲ್ಲಿ ಹಂದೆ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಅಮರ ಹಂದೆ, ಯಕ್ಷಗಾನ ಗುರುಗಳಾದ ಕೋಟ ಸುದರ್ಶನ ಉರಾಳ ಹಾಗೂ ವೇಷ ಕಟ್ಟಿಕೊಂಡ ಶಿಬಿರಾರ್ಥಿ ಕೃಷ್ಣ ಭಟ್‌ರು ಉಪಸ್ಥಿತರಿದ್ದರು.
ಈ ನಡುವೆ ಶಿಬಿರಾರ್ಥಿಗಳಿಗೆ ಸರ್ಟಿಫಕೇಟ್‌ನ್ನು ನೀಡಲಾಯಿತು. ಕಾರ್ಯಕ್ರಮವನ್ನು ಸುಹಾಸ ಕರಬ ನಿರ್ವಹಿಸಿದರು. ಸುದೀಪ ಉರಾಳ ವಂದಿಸಿದರು.
ಈ ಏಳು ದಿನದ ಬೆಂಗಳೂರಿನ ಯಕ್ಷಾಂಗಣ ಟ್ರಸ್ಟ್ನವರ ಶಿಬಿರದಲ್ಲಿ ನೃತ್ಯ, ತಾಳಾಭ್ಯಾಸದೊಂದಿಗೆ ಪದಾಭ್ಯಾಸ ಹಾಗೂ ಯಕ್ಷಗಾನದ ಮೇಕಪ್, ವೇಷಭೂಷಣದ ಪರಿಚಯಿಸಿ, ವೇಷ ಕಟ್ಟಿ ತೋರಿಸಲಾಯಿತು.
ಈ ಶಿಬಿರಕ್ಕೆ ಶ್ರೀ ವಿಶ್ವವಿನಾಯಕ ವಿವಿದ್ದೋದ್ಧೇಶ ಸಹಕಾರ ಸಂಘ ಕೋಟ, ಕಾಮಧೇನು ವಿವಿದ್ದೋದ್ಧೇಶ ಸಹಕಾರ ಸಂಘ ಹಂದಟ್ಟು, ಹಂದಟ್ಟು ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘ, ಸಾಲಿಗ್ರಾಮ ಮಕ್ಕಳ ಮೇಳ, ಯಶಸ್ವಿ ಕಲಾವೃಂದ ತೆಕ್ಕಟ್ಟೆ, ರಂಗ ಸಂಪದ ಕೋಟ ಇವರುಗಳು ಸಹಕಾರ ನೀಡಿದರು.


ಕೋಟ ಸುದರ್ಶನ ಉರಾಳ
ಮೊ: 9448547237