ಕರಾವಳಿಯ ಗಂಡು ಮೆಟ್ಟಿನಕಲೆ ಎಂದೇ ಪ್ರಸಿದ್ಧವಾದ ಯಕ್ಷಗಾನ ಇಂದು ಯಾವುದೇ ವಯೋಮಾನದವರು ಕಲಿಯುವ ಕಲೆ. ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಿಗೆ ಆಧ್ಯತೆ ಕೊಡುತ್ತಾ ಬಂದಿರುವ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ “ಯಕ್ಷಪ್ರದೀಪ” ಎಂಬ ತಂಡವಿದ್ದು, ಯುಕೆಜಿಯಿಂದ ಪದವಿಪೂರ್ವ ಕಾಲೇಜಿನಲ್ಲಿ ಶಿಕ್ಷಣ ಪಡೆಯುತ್ತಿರುವ ಸುಮಾರು 70ಕ್ಕೂ ಅಧಿಕ ವಿದ್ಯಾರ್ಥಿಗಳು ಯಕ್ಷಗಾನ ಅಭ್ಯಾಸ ಮಾಡುತ್ತಿದ್ದಾರೆ.


ಕಲಿತ ವಿದ್ಯೆಗೆ ಸೂಕ್ತ ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ಪುತ್ತೂರು ಮಹಾತೋಭಾರ ಶ್ರೀ ಮಹಾಲಿಂಗೇಶ್ವರ ದೇವರ ಪೇಟೆ ಸವಾರಿ, ಕಟ್ಟೆಪೂಜೆ ಸಂದರ್ಭ ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ಶಾಲಾ ಆವರಣದಲ್ಲಿ ಯಕ್ಷಗಾನ ರಂಗಪ್ರವೇಶ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಶಾಲಾ ಆಡಳಿತ ಮಂಡಳಿ ಅಧ್ಯಕ್ಷರಾದ ಡಾ.ಶಿವಪ್ರಕಾಶ್.ಎಂ ದೀಪ ಬೆಳಗಿಸಿ ಚಾಲನೆ ನೀಡಿದರು.
ಯಕ್ಷಗುರು ಶ್ರೀ ಬಾಲಕೃಷ್ಣ ಪೂಜಾರಿ ಉಡ್ಡಂಗಳ ಇವರ ನಿರ್ದೇಶನದಲ್ಲಿ ಹಾಗೂ ಶಾಲಾ ಸಂಸ್ಕೃತ ಅಧ್ಯಾಪಕ ಶ್ರೀ ವೆಂಕಟೇಶ್ ಪ್ರಸಾದ್ ಇವರ ಮಾರ್ಗದರ್ಶನದಲ್ಲಿ 64 ಪುಟಾಣಿಗಳು ಕಾಲಿಗೆ ಗೆಜ್ಜೆ ಕಟ್ಟಿ ಕುಣಿಯುತ್ತಾ “ರಾಜಾ ದಿಲೀಪ, ಏಕಾದಶೀ ಮಹಾತ್ಮೆ, ರಾಜಾ ವೈಖಾನಸ” ಎಂಬ ಪುಣ್ಯ ಕಥಾಭಾಗಗಳ ಯಕ್ಷಗಾನ ಪ್ರದರ್ಶನ ನಡೆಯಿತು.
ಯಕ್ಷಗಾನದ ಬಳಿಕ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕರಿಂದ ಸುಮಾರು ಎರಡೂವರೆ ಗಂಟೆಗಳ ಭಜನಾ ಕಾರ್ಯಕ್ರಮ ನೆರವೇರಿತು.
ದೇವರ ಕಟ್ಟೆ ಪೂಜೆಯ ಸಂದರ್ಭದಲ್ಲಿ ಮಾತೃ ಸಂಸ್ಥೆ ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು(ರಿ.) ಇದರ ಕಾರ್ಯದರ್ಶಿ ಡಾ.ಕೆ.ಎಂ.ಕೃಷ್ಣ ಭಟ್ ಹಾಗೂ ಕೋಶಾಧಿಕಾರಿ ಶ್ರೀ ಅಚ್ಯುತ ನಾಯಕ್, ಶಾಲಾ ಆಡಳಿತ ಮಂಡಳಿ ಸಂಚಾಲಕ ಶ್ರೀ ರವಿನಾರಾಯಣ.ಎಂ ಮತ್ತು ಆಡಳಿತ ಮಂಡಳಿಯ ಸದಸ್ಯರು, ಶಾಲಾ ಪೋಷಕ ವೃಂದ, ಶಾಲಾ ಶಿಕ್ಷಕ-ಶಿಕ್ಷಕೇತರ ವೃಂದದವರು ಉಪಸ್ಥಿತರಿದ್ದರು.

