

ಖ್ಯಾತ ಯಕ್ಷಗಾನ ಭಾಗವತ ಶ್ರೀ ದಿನೇಶ ಅಮ್ಮಣ್ಣಾಯ ಅವರು ‘ಯಕ್ಷಾಂಜನೇಯ ಪ್ರಶಸ್ತಿ’ಗೆ ಭಾಜನರಾಗಿದ್ದಾರೆ.
ಪುತ್ತೂರಿನ ಬೊಳುವಾರಿನ ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ ಕೊಡಮಾಡುವ ‘ಯಕ್ಷಾಂಜನೇಯ ಪ್ರಶಸ್ತಿ’ಗೆ ಈ ಬಾರಿ ತೆಂಕುತಿಟ್ಟಿನ ಹಿರಿಯ ಖ್ಯಾತ ಭಾಗವತರಾದ ಶ್ರೀ ದಿನೇಶ ಅಮ್ಮಣ್ಣಾಯ ಅವರನ್ನು ಆಯ್ಕೆ ಮಾಡಲಾಗಿದೆ.
ಡಿಸೆಂಬರ್ 25ರಂದು ನಡೆಯಲಿರುವ ‘ಶ್ರೀ ಆಂಜನೇಯ 49’ ವಾರ್ಷಿಕ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ತಂದೆ ಶ್ರೀ ನಾರಾಯಣ ಅಮ್ಮಣ್ಣಾಯ, ತಾಯಿ ಕಾವೇರಿ ಅಮ್ಮ ದಂಪತಿಗಳ ಸುಪುತ್ರನಾಗಿ ಅಮ್ಮಣ್ಣಾಯರು ಹುಟ್ಟಿದ್ದು 1959ರಲ್ಲಿ. ವಿದ್ಯಾಭ್ಯಾಸ ಎಸ್.ಎಸ್.ಎಲ್.ಸಿ. ತನಕ. ಇವರು ಎರಡನೇ ತರಗತಿಯಲ್ಲಿರುವಾಗಲೇ ತನ್ನ ಸೋದರಮಾವನ ಮಗ ಈಗಿನ ಖ್ಯಾತ ಮದ್ದಳೆಗಾರರಾದ ಶ್ರೀ ಹರಿನಾರಾಯಣ ಬೈಪಡಿತ್ತಾಯರಿಂದ ಮದ್ದಳೆವಾದನದ ಅಭ್ಯಾಸ ಆರಂಭಿಸುತ್ತಾರೆ.
ಇವರ ಚಿಕ್ಕಪ್ಪ ವಿಷ್ಣು ಅಮ್ಮಣ್ಣಾಯರಿಂದ (ಲಕ್ಷ್ಮೀಶ ಅಮ್ಮಣ್ಣಾಯರ ತಂದೆ) ಭಾಗವತಿಕೆಯ ಮೂಲಪಾಠವನ್ನು ಅಭ್ಯಸಿಸಿದರು. ಇವರು ಸಂಗೀತವನ್ನು ಅಭ್ಯಾಸ ಮಾಡಿದ್ದು ಇವರ ಅಕ್ಕ (ಚಿಕ್ಕಪ್ಪನ ಮಗಳು) ರಾಜೀವಿ ಅವರಿಂದ. ರಾಜೀವಿ ಅವರು ಕಾಂಚನದಲ್ಲಿ ಕಲಿತು ಸಂಗೀತದಲ್ಲಿ ವಿದ್ವಾನ್ ಪದವಿ ಪಡೆದವರು.
ಯಕ್ಷಗಾನ ಕ್ಷೇತ್ರದಲ್ಲಿ ಭಾಗವತರಾಗಿ ಅಥವಾ ಕಲಾವಿದರಾಗಿ ದಿನೇಶ ಅಮ್ಮಣ್ಣಾಯರು ಕರ್ನಾಟಕ ಮೇಳ 21 ವರ್ಷ, ಪುತ್ತೂರು ಮೇಳ 1 ವರ್ಷ, ಕದ್ರಿ ಮೇಳ 4 ವರ್ಷ ಆಮೇಲೆ ಮೇಳ ಬಿಟ್ಟು ಕುಂಟಾರು ಮೇಳದಲ್ಲಿ ಅತಿಥಿ ಕಲಾವಿದರಾಗಿ 3 ವರ್ಷ ಪೂರೈಸಿ ಎಡನೀರು ಮೇಳದಲ್ಲಿ 15 ವರ್ಷ ಸೇವೆ ಸಲ್ಲಿಸಿದ್ದಾರೆ. ಪತ್ನಿ ಶ್ರೀಮತಿ ಸುಧಾ ಮತ್ತು ಮಕ್ಕಳಾದ ಅಕ್ಷತಾ ಮತ್ತು ಅನಿತಾ (ಈರ್ವರೂ ವಿವಾಹಿತರು) ಜೊತೆಗೆ ಸಂತೃಪ್ತ ಕುಟುಂಬ.
ಸುಮಾರು 50ಕ್ಕೂ ಹೆಚ್ಚು ಸನ್ಮಾನ ಮತ್ತು ಪ್ರಶಸ್ತಿಗಳಿಗೆ ಭಾಜನರಾದ ಅಮ್ಮಣ್ಣಾಯರನ್ನು ಎಲ್ಲರೂ ತಿಳಿದಿರುವಂತೆ ‘ಗಾನಕೋಗಿಲೆ’, ‘ಮಧುರಗಾನದ ಐಸಿರಿ’, ‘ಯಕ್ಷಸಂಗೀತ ಕಲಾ ಕೌಸ್ತುಭ’ ಎಂಬ ಬಿರುದುಗಳು ಅರಸಿಕೊಂಡು ಬಂದಿವೆ.