

ಪುತ್ತೂರು: ಪಿ.ಯು.ಸಿ ನಂತರ ವಿದ್ಯಾರ್ಥಿಯೊಬ್ಬನಿಗೆ ದೊರಕಬಹುದಾದ ವಿದ್ಯಾಭ್ಯಾಸ ಹಾಗೂ ಉದ್ಯೋಗದ ಬಗ್ಗೆ ಸರಿಯಾದ ಹಾಗೂ ಸಮರ್ಪಕ ಮಾಹಿತಿಯನ್ನು ಹೆತ್ತವರು ಮತ್ತು ವಿದ್ಯಾರ್ಥಿಗಳು ಪಡೆದುಕೊಂಡಾಗ ಭವಿಷ್ಯದಲ್ಲಿ ಅತ್ಯುತ್ತಮ ಆಯ್ಕೆಯನ್ನು ಮಾಡಿಕೊಳ್ಳುವುದಕ್ಕೆ ಸಾಧ್ಯ. ಆ ನೆಲೆಯಲ್ಲಿ ಮಾಹಿತಿ ಕಾರ್ಯಾಗಾರಗಳು ಮಹತ್ವವನ್ನು ಪಡೆದುಕೊಳ್ಳುತ್ತವೆ ಎಂದು ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕೋಶಾಧಿಕಾರಿ ರಾಜಶ್ರೀ ಎಸ್. ನಟ್ಟೋಜ ಹೇಳಿದರು.
ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ನೆಲ್ಲಿಕಟ್ಟೆ ಹಾಗೂ ಬಪ್ಪಳಿಗೆಯ ಅಂಬಿಕಾ ಪದವಿ ಪೂರ್ವ ವಿದ್ಯಾಲಯಗಳ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡ ಉದ್ಯೋಗ ಹಾಗೂ ಶಿಕ್ಷಣ ಮಾಹಿತಿ – ಮಾರ್ಗದರ್ಶನ ಕಾರ್ಯಕ್ರಮದ ಉದ್ಘಾಟನೆ ಹಾಗೂ ಅಧ್ಯಕ್ಷತೆ ನಿರ್ವಹಿಸಿ ಶನಿವಾರ ಮಾತನಾಡಿದರು.
ಪ್ರತಿಭೆ, ಬುದ್ಧಿವಂತಿಕೆ, ಅಭಿರುಚಿಯನ್ನರಸಿ ಶಿಕ್ಷಣ ಹಾಗೂ ವೃತ್ತಿಯನ್ನು ಆಯ್ದುಕೊಂಡಾಗ ಗುರಿಮುಟ್ಟಿ ಉತ್ತಮ ಭವಿಷ್ಯ ರೂಪಿಸಲು ಸಾಧ್ಯ. ವ್ಯಕ್ತಿಯಿಂದ ವ್ಯಕ್ತಿಗೆ ಸಾಧ್ಯತೆಗಳು ಭಿನ್ನವಾಗಿರುತ್ತದೆ. ಪಿ.ಯು.ಸಿ ಆದ ಮೇಲೆ ಮುಂದೇನು? ಎನ್ನುವ ಪ್ರಶ್ನೆ ವಿದ್ಯಾರ್ಥಿಗಳನ್ನು, ಹೆತ್ತವರನ್ನು ಕಾಡುವಂತಹದ್ದು. ಭಾರತದಲ್ಲಿ ಧಾರಾಳ ಉದ್ಯೋಗಾವಕಾಶಗಳಿವೆ. ಹಾಗಾಗಿ ಉದ್ಯೋಗದ ಬಗ್ಗೆ ಹೆದರುವ ಅವಶ್ಯಕತೆಯಿಲ್ಲ. ಆದರೆ ನಮ್ಮ ಪ್ರತಿಭೆ ಹಾಗೂ ಗುಣಮಟ್ಟಕ್ಕನುಗುಣವಾದ ಉದ್ಯೋಗ ಅಥವ ಶಿಕ್ಷಣ ಯಾವುದೆಂಬುದನ್ನು ಗುರುತು ಮಾಡಿಕೊಳ್ಳಬೇಕಿದೆ ಎಂದರು.
ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ನಿಟ್ಟೆ ವಿಶ್ವವಿದ್ಯಾಲಯದ ಕೌನ್ಸಿಲರ್ ಕುಶಲತಾ ಮಾತನಾಡಿ ಮುಂದುವರಿಯುತ್ತಿರುವ ಭಾರತದಲ್ಲಿ ಪ್ರತಿಭಾವಂತ ಜನಸಂಪನ್ಮೂಲವಿದೆ. ಹಾಗಾಗಿ ಇಲ್ಲಿನ ಪ್ರತಿಭಾನ್ವಿತರಿಗೆ ದೇಶ, ವಿದೇಶಗಳಲ್ಲಿ ಅಪಾರ ಅವಕಾಶಗಳು ಪ್ರಾಪ್ತವಾಗುತ್ತಿವೆ. ಪಿಯು ಹಂತದಲ್ಲಿ ವಾಣಿಜ್ಯ ಶಾಸ್ತç ಅಭ್ಯಸಿಸಿದವರಿಗೆ ಸಿ.ಎ, ಸಿ.ಎಸ್, ಬಿ.ಕಾಂ, ಬಿ.ಬಿ.ಎಮ್, ಎಂ.ಬಿ.ಎ, ಎಂ.ಕಾಂ, ಬಿ.ಎಚ್.ಎಂ ಮುಂತಾದ ಅಧ್ಯಯನವನ್ನು ಕೈಗೊಳ್ಳಬಹುದು ಎಂದು ಹೇಳಿದರು.
ಮತ್ತೋರ್ವ ಸಂಪನ್ಮೂಲ ವ್ಯಕ್ತಿ ನಿಟ್ಟೆ ವಿಶ್ವವಿದ್ಯಾಲಯದ ಕೌನ್ಸಿಲರ್ ಮನೋರಂಜನಿ ಮಾತನಾಡಿ ವಿಜ್ಞಾನ ವಿಭಾಗದ ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಗಮನ ಹರಿಸಬೇಕು. ಎಮ್.ಬಿ.ಬಿ.ಎಸ್, ಬಿ.ಎ.ಎಂ.ಎಸ್, ಬಿ.ಡಿ.ಎಸ್, ಬಿ.ಎಚ್.ಎಂ.ಎಸ್, ಬಿ.ಇ, ಬಿ.ಟೆಕ್, ಬಿ.ಫಾರ್ಮ್, ನರ್ಸಿಂಗ್, ಔಷಧೀಯ ವಿಜ್ಞಾನ ಹೀಗೆ ನಾನಾ ವಿಧದ ವಿಜ್ಞಾನ ಸಂಬ0ಧಿ ಅಧ್ಯಯನ ಆಯ್ಕೆಗಳು ವಿದ್ಯಾರ್ಥಿಗಳ ಮುಂದಿವೆ ಎಂದು ನುಡಿದರು.
ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಸದಸ್ಯ ಸುರೇಶ ಶೆಟ್ಟಿ, ನೆಲ್ಲಿಕಟ್ಟೆಯ ಅಂಬಿಕಾ ಪ.ಪೂ. ವಿದ್ಯಾಲಯ ಪ್ರಾಚಾರ್ಯ ಸತ್ಯಜಿತ್ ಉಪಾದ್ಯಾಯ, ಬಪ್ಪಳಿಗೆಯ ಅಂಬಿಕಾ ವಸತಿಯುತ ಪದವಿಪೂರ್ವ ವಿದ್ಯಾಲಯದ ಪ್ರಾಚಾರ್ಯೆ ಸುಚಿತ್ರಾ ಪ್ರಭು, ವಿದ್ಯಾರ್ಥಿಗಳು, ಪೋಷಕರು ಹಾಗೂ ಉಪನ್ಯಾಸಕರು ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ಸುಧಾ ಕೋಟೆ ಪ್ರಾರ್ಥಿಸಿ, ಉಪನ್ಯಾಸಕಿ ಗೀತಾ ಕಾರ್ಯಕ್ರಮ ನಿರೂಪಿಸಿದರು.